Homeಚಳವಳಿತ್ರಿಪುರಾ ಹಿಂಸಾಚಾರದ ಸತ್ಯಶೋಧನೆ ನಡೆಸಿದ ವಕೀಲರ ಮೇಲೆ ಯುಎಪಿಎ ಪ್ರಕರಣ!

ತ್ರಿಪುರಾ ಹಿಂಸಾಚಾರದ ಸತ್ಯಶೋಧನೆ ನಡೆಸಿದ ವಕೀಲರ ಮೇಲೆ ಯುಎಪಿಎ ಪ್ರಕರಣ!

ಕೂಡಲೇ ಯುಎಪಿಎ ಪ್ರಕರಣ ಕೈಬಿಡುವಂತೆ ಆಗ್ರಹಿಸಿ ನವೆಂಬರ್ 05 ರಂದು ತ್ರಿಪುರ ರಾಜ್ಯದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

- Advertisement -
- Advertisement -

ತ್ರಿಪುರಾದಲ್ಲಿ ನಡೆದ ಕೋಮುಗಲಭೆ ಕುರಿತು ಸತ್ಯಶೋಧನೆ ನಡೆಸಿದ ತಂಡದ ಭಾಗವಾಗಿದ್ದ ಇಬ್ಬರು ವಕೀಲರ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಲೀಫ್‌ಲೆಟ್‌ ವರದಿ ಮಾಡಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಅಡ್ವೊಕೇಟ್‌ ಅನ್ಸರ್‌ ಇಂದೋರಿ ಮತ್ತು ನಾಗರೀಕ ಹಕ್ಕುಗಳ ಸಂಘಟನೆಯಾದ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌ (ಪಿಯುಸಿಎಲ್‌, ದೆಹಲಿ)ನ ವಕೀಲರಾದ ಮುಖೇಶ್‌ ಅವರಿಗೆ ತ್ರಿಪುರಾ ಪೊಲೀಸರು ನೋಟಿಸ್‌ ಕಳುಹಿಸಿದ್ದಾರೆ. ಆ ನೋಟಿಸ್‌ನಲ್ಲಿ‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಕಲ್ಪಿತ ಮತ್ತು ಸುಳ್ಳು ಹೇಳಿಕೆಗಳು/ ಕಾಮೆಂಟ್‌ಗಳನ್ನು ತಕ್ಷಣವೇ ಅಳಿಸುವಂತೆ’ ಹೇಳಿದ್ದು, ನವೆಂಬರ್‌ 10ರೊಳಗೆ ಪಶ್ಚಿಮ ಅಗರ್ತಲಾ ಪೊಲೀಸ್‌ ಠಾಣೆಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ಗಳು ತಿಳಿಸಿವೆ.

ಯುಎಪಿಎ ಹೊರತಾಗಿ, ಸೆಕ್ಷನ್‌ 153 ಎ ಮತ್ತು ಬಿ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 469 (ಮಾಹಿತಿಗೆ ಹಾನಿ ಮಾಡುವ ಉದ್ದೇಶಕ್ಕಾಗಿ ನಕಲು ಮಾಡುವುದು), 120 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಹಾಗೂ ಐಪಿಸಿಯ 120 ಬಿ (ಕ್ರಿಮಿನಲ್‌ ಪಿತೂರಿಗಾಗಿ ಶಿಕ್ಷೆ) ಇವೆಲ್ಲದರಡಿಯಲ್ಲಿ ನೋಟಿಸ್‌ ನೀಡಲಾಗಿದೆ.

ಈ ಕುರಿತು ಮಾತನಾಡಿದ ವಕೀಲರಾದ ಮುಖೇಶ್‌, ‘ವಾಸ್ತವತೆಯನ್ನು ತಿಳಿಯಲು ತ್ರಿಪುರಾಕ್ಕೆ ಹೋದ ಸತ್ಯಶೋಧನಾ ತಂಡದ  ಭಾಗವಾಗಿದ್ದೇನೆ. ಸಾಮಾಜಿಕವಾಗಿ ನಾನು ನೋಡಿದ್ದನ್ನು ಹಂಚಿಕೊಂಡಿದ್ದೇನೆ’ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ವಕೀಲ ಎಹ್ತೇಶಾಮ್ ಹಶ್ಮಿ, ವಕೀಲ ಅಮಿತ್ ಶ್ರೀವಾಸ್ತವ್ (ಸಮನ್ವಯ ಸಮಿತಿ, ಪ್ರಜಾಪ್ರಭುತ್ವಕ್ಕಾಗಿ ವಕೀಲರು), ವಕೀಲ ಅನ್ಸಾರ್ ಇಂದೋರಿ ಮತ್ತು ವಕೀಲ ಮುಖೇಶ್ ಅವರನ್ನು ಒಳಗೊಂಡ ಸತ್ಯಶೋಧನಾ ತಂಡವು ಮಂಗಳವಾರ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ವರದಿಯನ್ನು ಬಿಡುಗಡೆ ಮಾಡಿದೆ.

ಸತ್ಯಶೋಧನಾ ವರದಿ ಏನು ಹೇಳುತ್ತದೆ?

‘ಹ್ಯುಮ್ಯಾನಿಟಿ ಅಂಡರ್‌ ಅಟ್ಯಾಕ್‌ ಇನ್ ತ್ರಿಪುರ; #ಮುಸ್ಲಿಂ ಲೀವ್ಸ್‌ ಮ್ಯಾಟರ್‌’ ಶೀರ್ಷಿಕೆಯಡಿ ಬಿಡುಗಡೆಯಾದ ಸತ್ಯಶೋಧನಾ ವರದಿಯು ತ್ರಿಪುರಾದಲ್ಲಿನ ಬಿಜೆಪಿ ಸರ್ಕಾರವು ಹಿಂಸಾಚಾರವನ್ನು ನಿಲ್ಲಿಸಬಹುದಿತ್ತು ಆದರೆ ಅವರು ರಾಜ್ಯದಲ್ಲಿ ಗಲಭೆ ನಡೆಸಲು ಹಿಂದುತ್ವದ ಗುಂಪುಗಳಿಗೆ ಮುಕ್ತ ಅವಕಾಶ ನೀಡುವ ದಾರಿಯನ್ನು ಆರಿಸಿಕೊಂಡರು ಎಂಬುದನ್ನು ತಿಳಿಸಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಂತಹ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳು ಜೆಸಿಬಿಗಳೊಂದಿಗೆ ರ್‍ಯಾಲಿಗಳನ್ನು ನಡೆಸಿವೆ ಮತ್ತು ಹಿಂಸೆಗೆ ಪ್ರಚೋದನೆ ನೀಡಿವೆ ಎಂದು ವರದಿಯಲ್ಲಿದೆ.

ಪ್ರತಿಭಟನೆಗೆ ಕರೆ

ವಕೀಲರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತರು ತ್ರಿಪುರ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೇ ಯುಎಪಿಎ ಪ್ರಕರಣ ಕೈಬಿಡುವಂತೆ ಆಗ್ರಹಿಸಿ ನವೆಂಬರ್ 05 ರಂದು ತ್ರಿಪುರ ರಾಜ್ಯದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.


ಇದನ್ನು ಓದಿ: ಕಾರ್ಯಕರ್ತನ ಪತ್ನಿಯನ್ನೇ ಅಪಹರಿಸಿದ ಬಜರಂಗದಳ ಸಂಚಾಲಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ವಿರುದ್ದ ಬ್ಲೂ ಕಾರ್ನರ್ ನೋಟಿಸ್: ಏನಿದು ರೆಡ್, ಬ್ಲೂ ಬಣ್ಣ ಆಧಾರಿತ...

0
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಕರ್ನಾಟಕದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್‌...