ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ವಿಶ್ವಪ್ರಸಿದ್ದ ಹಾರ್ವರ್ಡ್ ವಿಶ್ವ ವಿದ್ಯಾಲಯದ 2.2 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಅನುದಾನ ಮತ್ತು 60 ಮಿಲಿಯನ್‌ಗಿಂತಲೂ ಹೆಚ್ಚಿನ ಮೌಲ್ಯದ ಒಪ್ಪಂದಗಳನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಶ್ವೇತಭವನದಿಂದ ಬಂದ ಅವಶ್ಯಕತೆಗಳ ಪಟ್ಟಿಯನ್ನು ಹಾರ್ವರ್ಡ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಹೂದಿ ವಿರೋಧಿ ನೀತಿಯನ್ನು ಎದುರಿಸುವುದು ಮತ್ತು ವಿಶ್ವವಿದ್ಯಾನಿಲಯದ ಆಡಳಿತ, ಪ್ರವೇಶ ಮತ್ತು ನೇಮಕಾತಿ ಪದ್ಧತಿಗಳನ್ನು ಸುಧಾರಿಸುವ ಗುರಿಯನ್ನು ಇದು ಹೊಂದಿದೆ.
“ಹಾರ್ವರ್ಡ್‌ನ ಪ್ರತಿಕ್ರಿಯೆಯು ನಮ್ಮ ದೇಶದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ದೇಶ ವಿರೋಧಿ ಮನಸ್ಥಿತಿಗಳನ್ನು ಬಲಪಡಿಸುತ್ತದೆ” ಎಂದು ಯುಎಸ್ ಶಿಕ್ಷಣ ಇಲಾಖೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಶುಕ್ರವಾರ ಶ್ವೇತಭವನವು ಹೊಸ ಮತ್ತು ವಿಸ್ತೃತ ಬೇಡಿಕೆಗಳ ಪಟ್ಟಿಯನ್ನು ಕಳುಹಿಸಿದ್ದು, ಫೆಡರಲ್ ಸರ್ಕಾರದೊಂದಿಗೆ ಆರ್ಥಿಕ ಸಂಬಂಧವನ್ನು ಕಾಪಾಡಿಕೊಳ್ಳಲು ಹಾರ್ವರ್ಡ್ ಅವುಗಳನ್ನು ಪಾಲಿಸಬೇಕು ಎಂಬುವುದಾಗಿ ಎಚ್ಚರಿಸಲಾಗಿದೆ ಎಂದು ಹಾರ್ವರ್ಡ್ ಅಧ್ಯಕ್ಷ ಅಲನ್ ಗಾರ್ಬರ್ ಸೋಮವಾರ (ಏ.14) ವಿಶ್ವವಿದ್ಯಾಲಯ ಸಮುದಾಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
“ನಾವು ಅವರ ಪ್ರಸ್ತಾವಿತ ಒಪ್ಪಂದವನ್ನು ಸ್ವೀಕರಿಸುವುದಿಲ್ಲ ಎಂದು ನಮ್ಮ ಕಾನೂನು ಸಲಹೆಗಾರರ ಮೂಲಕ ಆಡಳಿತಕ್ಕೆ ತಿಳಿಸಿದ್ದೇವೆ” ಎಂದು ಗಾರ್ಬರ್ ಹೇಳಿದ್ದಾರೆ. “ವಿಶ್ವವಿದ್ಯಾನಿಲಯವು ತನ್ನ ಸ್ವಾತಂತ್ರ್ಯವನ್ನು ಅಥವಾ ತನ್ನ ಸಾಂವಿಧಾನಿಕ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ” ಎಂದಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯವು ಯಹೂದಿ ವಿರೋಧಿ ಹೋರಾಟವನ್ನು ಲಘುವಾಗಿ ಪರಿಗಣಿಸಿಲ್ಲ. ಆದರೂ, ಸರ್ಕಾರದ ಹಲವು ಬೇಡಿಕೆಗಳು ಅತಿರೇಕದಿಂದ ಕೂಡಿವೆ. ಸರ್ಕಾರ ಮುಂದಿಟ್ಟಿರುವ ಕೆಲವು ಬೇಡಿಕೆಗಳು ಯಹೂದಿ ವಿರೋಧಿ ಹೋರಾಟವನ್ನು ತಡೆಯುವ ಗುರಿಯನ್ನು ಹೊಂದಿದ್ದರೂ, ಬಹುಪಾಲು ಬೇಡಿಕೆಗಳು ಹಾರ್ವರ್ಡ್‌ನ ‘ಬೌದ್ಧಿಕ ಪರಿಸ್ಥಿತಿಗಳ’ ನೇರ ಸರ್ಕಾರಿ ನಿಯಂತ್ರಣವನ್ನು ತೋರಿಸುತ್ತದೆ ಎಂದು ಗಾರ್ಬರ್ ಹೇಳಿದ್ದಾಗಿ ಬಿಬಿಸಿ ವರದಿ ಮಾಡಿದೆ.
ಗಾರ್ಬರ್ ಅವರ ಪತ್ರದ ಬೆನ್ನಲ್ಲೇ ಯುಎಸ್ ಶಿಕ್ಷಣ ಇಲಾಖೆಯು ನಿಧಿ ಸ್ಥಗಿತವನ್ನು ಘೋಷಿಸಿದೆ. “ಇತ್ತೀಚಿನ ವರ್ಷಗಳಲ್ಲಿ ಕ್ಯಾಂಪಸ್‌ಗಳನ್ನು ಕಾಡುತ್ತಿರುವ ಕಲಿಕೆಯ ಅಡ್ಡಿ ಸ್ವೀಕಾರಾರ್ಹವಲ್ಲ. ಯಹೂದಿ ವಿದ್ಯಾರ್ಥಿಗಳ ಮೇಲಿನ ಕಿರುಕುಳ ಅಸಹನೀಯ. ಗಣ್ಯ ವಿಶ್ವವಿದ್ಯಾನಿಲಯಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಮತ್ತು ತೆರಿಗೆದಾರರ ಬೆಂಬಲವನ್ನು ಪಡೆಯುವುದನ್ನು ಮುಂದುವರಿಸಲು ಬಯಸಿದರೆ ಅರ್ಥಪೂರ್ಣ ಬದಲಾವಣೆಗೆ ಬದ್ಧರಾಗುವ ಸಮಯ ಇದು” ಎಂದು ಶಿಕ್ಷಣ ಇಲಾಖೆ ಹೇಳಿದೆ.
ಅಮೆರಿಕನ್ ಮೌಲ್ಯಗಳಿಗೆ ವಿರುದ್ದವಾಗಿರುವ ವಿದ್ಯಾರ್ಥಿಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಬೇಕು.ಯಹೂದಿ ವಿರೋಧಿ ಮನಸ್ಥಿತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಪರಿಶೀಲಿಸಲು ಬಾಹ್ಯ ಸರ್ಕಾರ-ಅನುಮೋದಿತ ಪಕ್ಷಕ್ಕೆ ಅವಕಾಶ ನೀಡಬೇಕು. ಕ್ಯಾಂಪಸ್‌ನಲ್ಲಿ ಮಾಸ್ಕ್ ನಿಷೇಧಿಸುವುದು, ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ ಉಪಕ್ರಮಗಳನ್ನು ಕೊನೆಗೊಳಿಸುವುದು, ಅಪರಾಧ ಚಟುವಟಿಕೆ, ಹಿಂಸೆ ಅಥವಾ ಕಿರುಕುಳವನ್ನು ಉತ್ತೇಜಿಸುವ ಆರೋಪ ಹೊತ್ತಿರುವ ವಿದ್ಯಾರ್ಥಿ ಕ್ಲಬ್‌ಗಳ ಮಾನ್ಯತೆ ರದ್ದುಪಡಿಸುವುದು ಸರ್ಕಾರದ ಬೇಡಿಕೆಗಳಲ್ಲಿ ಸೇರಿವೆ.
ಗಾಜಾ ಮೇಲಿನ ಇಸ್ರೇಲ್ ಆಕ್ರಮಣ ಮತ್ತು ಅದಕ್ಕೆ ಅಮೆರಿಕದ ಬೆಂಬಲದ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯಗಳು ಯಹೂದಿ ವಿರೋಧಿತ್ವವನ್ನು ಪ್ರವರ್ಧಮಾನಕ್ಕೆ ತರಲು ಅವಕಾಶ ಮಾಡಿಕೊಟ್ಟಿವೆ ಎಂದು ಶ್ವೇತಭವನ ವಾದಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹಾರ್ವರ್ಡ್ ಫೆಡರಲ್ ಹೂಡಿಕೆಯನ್ನು ಸಮರ್ಥಿಸುವ ಬೌದ್ಧಿಕ ಮತ್ತು ನಾಗರಿಕ ಹಕ್ಕುಗಳ ಷರತ್ತುಗಳನ್ನು ಪೂರೈಸಲು ವಿಫಲವಾಗಿದೆ ಎಂದು ಆಡಳಿತವು ಶುಕ್ರವಾರ ಬರೆದ ಪತ್ರದಲ್ಲಿ ತಿಳಿಸಿದೆ.
ಗಾಜಾ ಕದನವಿರಾಮ ಮಾತುಕತೆ: ಕತಾರ್‌ಗೆ ನಿಯೋಗ ಕಳುಹಿಸುತ್ತಿರುವುದಾಗಿ ಹೇಳಿದ ಹಮಾಸ್


