ವಾಯ್ಸ್ ಆಫ್ ಅಮೆರಿಕ ಸೇರಿದಂತೆ ಅಮೆರಿಕದಿಂದ ಹಣಕಾಸು ನೆರವು ಪಡೆಯುತ್ತಿರುವ ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳ ಸಾಮೂಹಿಕ ವಜಾ ಮಾಡುವ ಪ್ರಕ್ರಿಯೆಯನ್ನು ಡೊನಾಲ್ಡ್ ಟ್ರಂಪ್ ಆಡಳಿತ ಭಾನುವಾರ (ಮಾ.16) ಆರಂಭಿಸಿದೆ ಎಂದು ವರದಿಯಾಗಿದೆ.
ಎಲ್ಲಾ ಉದ್ಯೋಗಿಗಳನ್ನು ರಜೆ ಮೇಲೆ ಕಳುಹಿಸಿದ ಬೆನ್ನಲ್ಲೇ, ಮಾರ್ಚ್ ಅಂತ್ಯದಿಂದ ನಿಮ್ಮನ್ನು ವಜಾ ಮಾಡಲಾಗುವುದು ಎಂದು ತಿಳಿಸುವ ಈ-ಮೇಲ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳುಹಿಸಲಾಗಿದೆ.
“ನಿಮ್ಮ ಎಲ್ಲಾ ಕೆಲಸಗಳನ್ನು ತಕ್ಷಣ ನಿಲ್ಲಿಸಬೇಕು. ಸಂಸ್ಥೆಯ ಯಾವುದೇ ಕಟ್ಟಡ ಅಥವಾ ಸೌಲಭ್ಯಗಳನ್ನು ಬಳಸಲು ಅನುಮತಿ ಇಲ್ಲ” ಎಂದು ಈ-ಮೇಲ್‌ನಲ್ಲಿ ಹೇಳಲಾಗಿದೆ.
ವಾಯ್ಸ್ ಆಫ್ ಅಮೆರಿಕ ಸಂಸ್ಥೆಯ ಹೆಚ್ಚಿನ ಸಿಬ್ಬಂದಿ ಗುತ್ತಿಗೆ ನೌಕರರು. ಅದರಲ್ಲೂ ಇಂಗ್ಲಿಷೇತರ ಭಾಷೆಗಳ ಹೆಚ್ಚಿನ ಸಿಬ್ಬಂದಿ ಗುತ್ತಿಗೆ ಮೇಲೆ ನೇಮಕಗೊಂಡವರು. ಅವರ ನಿಖರ ಸಂಖ್ಯೆ ಎಷ್ಟು ಎಂಬುವುದು ಸದ್ಯಕ್ಕೆ ಗೊತ್ತಾಗಿಲ್ಲ.
ಹೆಚ್ಚಿನ ಗುತ್ತಿಗೆ ನೌಕರರು ಅಮೆರಿಕದ ನಾಗರಿಕರಲ್ಲ. ಅಂದರೆ, ಅವರು ಅಮೆರಿಕದಲ್ಲಿ ಉಳಿಯಲು ವೀಸಾಗಳಿಗಾಗಿ ತಮ್ಮ ಕೆಲಸವನ್ನು ಅವಲಂಬಿಸಿದ್ದರು. ಕೆಲಸ ಕಳೆದುಕೊಂಡರೆ ಅವರು ದೇಶ ಬಿಡಬೇಕಾದ ಅನಿವಾರ್ಯತೆ ಎದುರಾಗಲಿದೆ.
ಕಾನೂನು ರಕ್ಷಣೆ ಹೊಂದಿರುವ, ವಾಯ್ಸ್ ಆಫ್ ಅಮೆರಿಕದ ಪೂರ್ಣಾವಧಿ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸಲು ಸಾಧ್ಯವಿಲ್ಲ. ಆದರೆ, ಅವರೆಲ್ಲ ಆಡಳಿತಾತ್ಮಕ ರಜೆಯಲ್ಲಿದ್ದಾರೆ ಮತ್ತು ಕೆಲಸ ಮಾಡದಂತೆ ಅವರಿಗೆ ಸೂಚಿಸಲಾಗಿದೆ ಎಂದು ವರದಿಗಳು ಹೇಳಿವೆ.
ಎರಡನೇ ವಿಶ್ವ ಮಹಾಯುದ್ಧದ ಸಮಯದಲ್ಲಿ ಸ್ಥಾಪಿಸಲಾದ ವಾಯ್ಸ್ ಆಫ್ ಅಮೆರಿಕ, ಮಾಧ್ಯಮ ಸ್ವಾತಂತ್ರ್ಯವಿಲ್ಲದ ದೇಶಗಳನ್ನು ತಲುಪುವ ಧ್ಯೇಯದೊಂದಿಗೆ ಪ್ರಪಂಚದಾದ್ಯಂತ 49 ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ.
ವಾಯ್ಸ್ ಆಮೆರಿಕ ಸೇರಿದಂತೆ ಅಮೆರಿಕದ ನೆರವು ಪಡೆಯುತ್ತಿರುವ ರೆಡಿಯೊ ಫ್ರಿ ಯೂರೋಪ್, ರೆಡಿಯೊ ಲಿಬರ್ಟಿ, ರೆಡಿಯೊ ಫ್ರಿ ಏಷ್ಯಾ, ರೆಡಿಯೊ ಫರ್ಡಾ, ಅಲ್ ಹುರ್ರಾ ಮುಂತಾದ ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳನ್ನೂ ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 31ರಿಂದ ಅನ್ವಯವಾಗುವಂತೆ ತನ್ನನ್ನು ವಜಾಗೊಳಿಸಲಾಗಿದೆ ಎಂದು ಪತ್ರಿಕಾ ಸ್ವಾತಂತ್ರ್ಯ ಮತ್ತು ತಪ್ಪು ಮಾಹಿತಿಯ ಕುರಿತು ವರದಿ ಮಾಡುವ ವಾಯ್ಸ್ ಆಫ್ ಅಮೆರಿಕದ ವರದಿಗಾರ ಲಿಯಾಮ್ ಸ್ಕಾಟ್ ಹೇಳಿದ್ದಾರೆ.
ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಹಿಂದಿರುಗುವ ಸಮಯ ಸನ್ನಿಹಿತ; ದಿನಾಂಕ, ಸ್ಥಳ ಪ್ರಕಟಿಸಿದ ನಾಸಾ


