ಆಗಸ್ಟ್ 1ರಿಂದ ಭಾರತವು ಶೇಕಡ 25ರಷ್ಟು ಸುಂಕ ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ಭಾರತ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ಘೋಷಿಸಲಾದ ಶೇಕಡ 25 ಸುಂಕ ದರವು ಏಪ್ರಿಲ್ 2ರ ‘ವಿಮೋಚನಾ ದಿನ’ ಸಮ್ಮೇಳನದಲ್ಲಿ ಟ್ರಂಪ್ ಘೋಷಿಸಿದ ಶೇಕಡ 26 ಕ್ಕಿಂತ ಶೇಕಡ 1ರಷ್ಟು ಕಡಿಮೆಯಾಗಿದೆ.
“ನೆನಪಿಡಿ, ಭಾರತ ನಮ್ಮ ಸ್ನೇಹಿತನಾಗಿದ್ದರೂ, ನಾವು ವರ್ಷಗಳಲ್ಲಿ ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರ ಮಾಡಿದ್ದೇವೆ. ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚಿವೆ, ವಿಶ್ವದಲ್ಲೇ ಅತ್ಯಧಿಕವಾಗಿವೆ ಮತ್ತು ಅವರು ಇತರ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ” ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಅಲ್ಲದೆ, ಅವರು ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲು ರಷ್ಯಾದಿಂದಲೇ ಖರೀದಿಸಿದ್ದಾರೆ. ಚೀನಾದೊಂದಿಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರು ಹೌದು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾ ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಇದು ಒಳ್ಳೆಯದಲ್ಲ. ಆದ್ದರಿಂದ ಭಾರತವು ಆಗಸ್ಟ್‌ನಿಂದ ಪ್ರಾರಂಭಿಸಿ ಶೇಕಡ 25ರಷ್ಟು ಸುಂಕವನ್ನು ಮತ್ತು ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ದಂಡವನ್ನೂ ಪಾವತಿಸಬೇಕು” ಎಂದು ಬರೆದುಕೊಂಡಿದ್ದಾರೆ.

ಈ ಮಧ್ಯೆ, ಟ್ರಂಪ್ ವಿವಿಧ ದೇಶಗಳಿಗೆ ಘೋಷಿಸಿರುವ ಪ್ರತಿ ಸುಂಕಗಳು ಆಗಸ್ಟ್ 1,2025 ರಿಂದ ಜಾರಿಗೆ ಬರಲಿವೆ. ಅದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಉದ್ದೇಶವನ್ನು ಘೋಷಿಸಿದ್ದರೂ, ಎರಡೂ ದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ರೂಪಿಸಲು ಸಾಧ್ಯವಾಗಿಲ್ಲ. ಎರಡೂ ದೇಶಗಳ ಅಧಿಕಾರಿಗಳ ನಡುವೆ ಐದು ಸುತ್ತಿನ ಮಾತುಕತೆಗಳು ನಡೆದಿವೆ ಮತ್ತು ಆಗಸ್ಟ್ ಅಂತ್ಯದಲ್ಲಿ ಅಮೆರಿಕದ ತಂಡ ಭಾರತಕ್ಕೆ ಭೇಟಿ ನೀಡುವ ಆರನೇ ಸುತ್ತಿನ ಮಾತುಕತೆ ನಡೆಯಲಿದೆ.
ವ್ಯಾಪಾರ ಒಪ್ಪಂದ ಅಂತಿಮಗೊಳ್ಳದ ಕಾರಣ ಭಾರತವು 20-25ರಷ್ಟು ಸುಂಕವನ್ನು ತೆರಬೇಕಿದೆ ಎಂದು ನಿನ್ನೆ ಟ್ರಂಪ್ ಸುಳಿವು ನೀಡಿದ್ದರು. ರಾಯಿಟರ್ಸ್ ವರದಿಯ ಪ್ರಕಾರ, ಆಗಸ್ಟ್ 1 ರಿಂದ ಅಮೆರಿಕ ವಿಧಿಸಬಹುದಾದ ಯಾವುದೇ ಸುಂಕಗಳು ತಾತ್ಕಾಲಿಕವಾಗಿರಬಹುದು. ಏಕೆಂದರೆ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಭಾರತವು ತನ್ನ ಮಾರುಕಟ್ಟೆಯನ್ನು ಅಮೆರಿಕದ ಸರಕುಗಳಿಗೆ ತೆರೆಯಬೇಕೆಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದರು. ಆದರೆ, ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಕೃಷಿ ಮತ್ತು ಡೈರಿ ಕ್ಷೇತ್ರಗಳು ಜಿಗುಟಾದ ಅಂಶಗಳಾಗಿವೆ. ಭಾರತವು ಇವುಗಳ ಬಗ್ಗೆ ತನ್ನ ನಿಲುವನ್ನು ಕಠಿಣಗೊಳಿಸಿದೆ, ಅವುಗಳನ್ನು ತೆರೆಯಲು ನಿರಾಕರಿಸಿದೆ.


