ಅಮೆರಿಕದ ಅಧ್ಯಕ್ಷರಾಗಿ ಸೋಮವಾರ (ಜ.20) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಹೆಚ್‌ಒ) ಹೊರ ಬರುವ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಇತರ ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಸದಸ್ಯ ರಾಷ್ಟ್ರಗಳ ರಾಜಕೀಯ ಪ್ರಭಾವದಿಂದ ಡಬ್ಲ್ಯುಹೆಚ್‌ಒ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಡಬ್ಲ್ಯುಹೆಚ್‌ಒಗೆ ಆರ್ಥಿಕ ಸಹಾಯ ನೀಡುವ ವಿಷಯದಲ್ಲೂ ಅಮೆರಿಕಕ್ಕೆ ಅನ್ಯಾಯವಾಗಿದೆ. ಚೀನಾದಂತ ದೊಡ್ಡ ದೇಶಗಳು ಅವರ ಪಾಲನ್ನು ಸರಿಯಾಗಿ ಕೊಡದ ಕಾರಣ, ಅಮೆರಿಕ ಹೆಚ್ಚಿನ ಹೊರೆ ಹೊತ್ತುಕೊಳ್ಳಬೇಕಾಗಿದೆ” ಎಂದು ಟ್ರಂಪ್ ತಿಳಿಸಿದ್ದಾರೆ.
“ಡಬ್ಲ್ಯುಹೆಚ್ಒ ನಮ್ಮನ್ನು ಅಳಿಸಿ ಹಾಕಲು ನೋಡಿತು, ಎಲ್ಲರೂ ನಮ್ಮನ್ನು ತುಳಿಯಲು ನೋಡಿದರು. ಆದರೆ, ಇದು ಇನ್ನು ಮುಂದೆ ನಡೆಯುವುದಿಲ್ಲ” ಎಂದು ಆದೇಶಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಕ್ರಮದಿಂದ ಅಮೆರಿಕ ಮುಂದಿನ 12 ತಿಂಗಳ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ತೊರೆಯಲಿದೆ ಮತ್ತು ಎಲ್ಲಾ ಹಣಕಾಸಿನ ನೆರವನ್ನು ನಿಲ್ಲಿಸಲಿದೆ. ಅಮೆರಿಕ ಡಬ್ಲ್ಯುಹೆಚ್ಒನ ಅತಿದೊಡ್ಡ ಆರ್ಥಿಕ ಬೆಂಬಲಿಗನಾಗಿದ್ದು, ಅದರ ಒಟ್ಟಾರೆ ನಿಧಿಯ ಸುಮಾರು 18ರಷ್ಟು ಪಾಲು ನೀಡುತ್ತಿದೆ. ಡಬ್ಲ್ಯುಹೆಚ್ಒನ 2024-2025ರ ಬಜೆಟ್ 6.8 ಬಿಲಿಯನ್ ಡಾಲರ್ ಆಗಿತ್ತು.
ಟ್ರಂಪ್ ಡಬ್ಲ್ಯುಹೆಚ್‌ಒನಿಂದ ಹೊರ ಬರಲು ಮುಂದಾಗಿರುವುದು ಅನಿರೀಕ್ಷಿತವಲ್ಲ. ಅವರು 2020ರಲ್ಲಿ ಅಧ್ಯಕ್ಷರಾಗಿದ್ದ ತಮ್ಮ ಮೊದಲ ಅವಧಿಯಲ್ಲಿ, “ಕೋವಿಡ್ ಮೂಲಕ ಜಗತ್ತನ್ನು ದಾರಿ ತಪ್ಪಿಸುವ ಚೀನಾದ ಪ್ರಯತ್ನಗಳಿಗೆ ಡಬ್ಲ್ಯುಹೆಚ್ ಸಹಾಯ ಮಾಡುತ್ತಿದೆ” ಎಂದು ಆರೋಪಿಸಿ ಅದರಿಂದ ಹೊರ ಬರಲು ಕ್ರಮ ಕೈಗೊಂಡಿದ್ದರು.
ಟ್ರಂಪ್ ಆರೋಪಗಳನ್ನು ನಿರಾಕರಿಸಿರುವ ಡಬ್ಲ್ಯುಹೆಚ್‌ಒ, ಕೋವಿಡ್ ಸೋಂಕಿತ ಪ್ರಾಣಿಗಳೊಂದಿಗಿನ ಮಾನವ ಸಂಪರ್ಕದಿಂದ ರೋಗ ಹರಡಿದೆಯೇ ಅಥವಾ ದೇಶೀಯ ಪ್ರಯೋಗಾಲಯದಲ್ಲಿ ಇದೇ ರೀತಿಯ ವೈರಸ್‌ಗಳ ಸಂಶೋಧನೆಯಿಂದಾಗಿ ಹರಡಿದೆಯೇ ಎಂಬುವುದನ್ನು ನಿರ್ಧರಿಸಲು ಮಾಹಿತಿ ಹಂಚಿಕೊಳ್ಳಲು ಚೀನಾವನ್ನು ಒತ್ತಾಯಿಸುತ್ತಲೇ ಇದ್ದೇವೆ ಎಂದು ಹೇಳಿದೆ.


