Homeಕರ್ನಾಟಕಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ: ವೈವಿದ್ಯಮಯ ಗೆಡ್ಡೆ, ಗೆಣಸು ಮಾರಾಟ- ಲಕ್ಷಾಂತರ ರೂ ವಹಿವಾಟು

ಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ: ವೈವಿದ್ಯಮಯ ಗೆಡ್ಡೆ, ಗೆಣಸು ಮಾರಾಟ- ಲಕ್ಷಾಂತರ ರೂ ವಹಿವಾಟು

- Advertisement -
- Advertisement -

ಕಾಡಿನಿಂದ ಆವೃತವಾಗಿರುವ ಉತ್ತರ ಕನ್ನಡದ ಇಡೀ ಜೋಯಿಡಾ ತಾಲ್ಲೂಕಿನಲ್ಲಿ ವೈವಿದ್ಯಮಯ ಗೆಡ್ಡೆ-ಗೆಣಸು ಅನಾದಿ ಕಾಲದಿಂದ ಬೆಳೆಯಲಾಗುತ್ತಿದೆ. ಇಲ್ಲಿಯ ಬುಡಕಟ್ಟು ಕುಣಬಿ ಜನಾಂಗದವರು ಸಾಂಪ್ರದಾಯಿಕವಾಗಿ ಗೆಡ್ಡೆ, ಗೆಣಸು ಬೆಳೆಯುತ್ತಿದ್ದಾರೆ. ಇದು ಕುಣಬಿಗಳ ಮೂಲ ಕಸುಬು. ಕೃಷಿ ವಿಜ್ಞಾನಿಗಳು ಜೋಯಿಡಾ ಭಾಗದ ಗೆಡ್ಡೆ-ಗೆಣಸು ಪರಿಶೀಲಿಸಿ ಇವುಗಳು ಚಿಕ್ಕ ಮಕ್ಕಳ ಆರೋಗ್ಯಕರ ಆಹಾರ ತಯಾರಿಕೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ವರ್ಷದಿಂದ ಜೋಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ ನಡೆಸಲಾಗುತ್ತಿದ್ದು, ಬುಧವಾರ ಈ ಬಾರಿಯ ಮೇಳವನ್ನು ಕುಣಬಿ ಅಭಿವೃದ್ಧಿ ಸಂಘ ಮತ್ತು ಕಾಳಿ ರೈತ ಉತ್ಪದಕರ ಸಂಘ ಆಯೋಜಿಸಿತ್ತು.

230ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ತಾವು ಬೆಳೆದ ನಾನಾ ನಮೂನೆಯ ಗೆಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು. ಗೆಡ್ಡೆಗಳ ವಿವಿಧ ಬಗೆಯ ಖಾದ್ಯ ಮಾರಾಟವೂ ಇತ್ತು. ಸಣ್ಣ-ಪುಟ್ಟ ಗಾತ್ರದಿಂದ ಬೃಹದಾಕಾರದ ಗೆಡ್ಡೆ, ಗೆಣಸುಗಳು ಗೋವಾ, ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಿಂದ ಮೇಳಕ್ಕೆ ಬಂದವರನ್ನು ಚಕಿತಗೋಳಿಸಿದವು. ಜೋಯಿಡಾದ ಸುಮಾರು 50 ಎಕರೆ ಪ್ರದೇಶದಲ್ಲಿ ಗೆಡ್ಡೆ-ಗೆಣಸು ಬೆಳೆಯಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷದ ಗೆಡ್ಡೆ ಮೇಳದಲ್ಲಿ ಮೂರರಿಂದ ಮೂರುವರೆ ಲಕ್ಷದ ವ್ಯಾಪಾರವಾಗಿದೆ ಎನ್ನಲಾಗಿದೆ.

ಮೇಳ ಉದ್ಘಾಟಿಸಿದ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ ಮಾರಿಯೋ ಕ್ರಿಸ್ತರಾಜ ಮಾತನಾಡಿ, “ಜೋಯಿಡಾದ ಹಳ್ಳಿಗಾಡಿನ ಜನರು ಅದರಲ್ಲೂ ಕುಣಬಿ ಸಮುದಾಯದವರು ಗೆಡ್ಡೆ-ಗೆಣಸು ಬೆಳೆದು ಪ್ರಸಿದ್ದರಾಗಿದ್ದಾರೆ. ಹಲವಾರು ತಲೆಮಾರಿನಿಂದ ಬಂದಿರುವ ಈ ಕೃಷಿ ಅಭಿವೃದ್ಧಿಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಪೂರ್ವಜರು ಬೆಳೆಸಿ ಉಳಿಸಿದ ಗೆಡ್ಡೆ, ಗೆಣಸು ತಳಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಈ ಪ್ರಯತ್ನ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಎಲ್ಲ ರಂಗದಲ್ಲಿ ತೀರಾ ಹಿಂದುಳಿದಿರುವ ಜೋಯಿಡಾ ತಾಲೂಕು ಗೆಡ್ಡೆ, ಗೆಣಸು ಮೇಳದಿಂದ ಹೊರ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ. ದಟ್ಟ ಅಡವಿಯಲ್ಲಿ ಬೆಳೆಯುವ ಗೆಡ್ಡೆ-ಗೆಣಸನ್ನು ಕುಣಬಿ ಬುಡಕಟ್ಟಿನ ಸಮುದಾಯ ಅಡುಗೆ ಮನೆಗೆ ಪರಿಚಯಿಸಿದೆ. ಗೆಡ್ಡೆ-ಗೆಣಸು ಮೇಳದ ಹಿಂದಿನ ಶಕ್ತಿ ಸಹ ಕುಣಬಿ ಜನಾಂಗವೇ ಆಗಿದೆ. ಕೆಸುವಿನ ಗೆಡ್ಡೆ, ಸುವರ್ಣಗೆಡ್ಡೆ, ಕೆಂಪು ಗೆಣಸು, ಅರಿಶಿಣ, ಶುಂಠಿ, ಮಾವಿನ ಶುಂಠಿ, ಆನೆ ಪಾದದಂತೆ ಇರುವ ಬೃಹತ್ ಗಾತ್ರದ ಚರಣ ಮತ್ತಿತರ ಗೆಡ್ಡೆಗಳು ಮೇಳದಲ್ಲಿತ್ತು.

ಡೇರಿಯಾ, ಡಿಗ್ಗಿ, ಬಜಾರಕುಣಂಗ, ನಿಗುಂಡಿ, ತೇರಾಳಿ, ನುಜ್ಜಿ, ಕುಂಡಲ, ಬಾಡಪೋಲಿ, ದುಮಾಳ, ಕರಂಜೋಯಿಡಾ, ಅಣಶಿ, ಕುಂಬಾರವಾಡ, ಕುವೇಶಿ ಮುಂತಾದ ಹಳ್ಳಿಗಳ ಪ್ರತಿಯೊಂದು ಕುಣಬಿ ಮನೆ ಹಿತ್ತಲಲ್ಲಿ ಗೆಡ್ಡೆ-ಗೆಣಸು ಬೆಳೆಯಲಾಗುತ್ತದೆ. ಕಣಬಿಗಳ ಆಡು ಭಾಷೆಯಲ್ಲಿ ಗೆಣಸಿಗೆ ಕೋನ್ ಎಂದರೆ ಕೆಸುವಿನ ಗೆಡ್ಡೆಗೆ ಮುಡ್ಲಿ ಎನ್ನುತ್ತಾರೆ.

ದಾವಾ ಮುಡ್ಲಿ, ಚೇಡ್ವಾಲಿ ಮುಡ್ಲಿ, ರಕ್ಯಾಮುಡ್ಲಿ, ಕುಣಬಿಮುಡ್ಲಿ, ಕಾಳಿ ಮುಡ್ಲಿ, ಪುಲಾ ಮುಡ್ಲಿ, ಗಿಡ್ಡಿ ಮುಡ್ಲಿ, ಲಾಂಬಟ ಮುಡ್ಲಿ, ಹುಂಡು, ಕಾಳೊ ತೆರೊ, ದುರತಾಳಿ, ಆಳೆಕೋನ್, ಧಯೆಕೋನ್, ತಾಂಬ್ಡೆ ಕೋನ್, ದುಕರ್ ಕೋನ್, ನಾಗರ್ ಕೋನ್, ಮಾಂಡೆ ಕೋನ್, ಆಳೆ ಕೋನ್, ಚೇನಿ ಕೋನ್, ಕಾಟೆ ಕಣಗಾ, ಝಾಡ ಕಣಗಾ, ತಾರೋಟಿ ಕಣಗಾ ಮುಂತಾದ ಹೆಸರಿನ ಗೆಡ್ಡೆ-ಗೆಣಸು ಜೋಯಿಡಾ ಪ್ರದೇಶದಲ್ಲಿ ವಿಪುಲವಾಗಿ ಬೆಳೆಯಲಾಗುತ್ತದೆ. ಜೋಯಿಡಾ ಮತ್ತು ಹತ್ತಿರದ ರಾಮನಗರ ಈ ಗೆಡ್ಡೆ-ಗೆಣಸುಗಳ ಪ್ರಮುಖ ಮಾರುಕಟ್ಟೆ.


ಇದನ್ನೂ ಓದಿ: ಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...