ತುಮಕೂರು ಹೊರವಲಯದ ಊರುಕೆರೆ ಸಮೀಪವಿರುವ ಸಬ್ ಜೈಲಿನಲ್ಲಿ ಕೊರೊನಾ ಸೊಂಕಿತ ವ್ಯಕ್ತಿಯನ್ನು ಒಂದು ದಿನದ ಮಟ್ಟಿಗೆ ಬಂಧನದಲ್ಲಿರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿರುವುದು ಆತಂಕ ಉಂಟುಮಾಡಿದೆ. ಕೊರೊನಾ ಸೋಂಕು ಇರುವ ಆರೋಪಿಯನ್ನು ಸಬ್ ಜೈಲಿನಲ್ಲಿಟ್ಟು ಜುಲೈ 5ರಂದು ಬೆಳಗ್ಗೆ ಸ್ಥಳಾಂತರ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಗೊತ್ತಿದ್ದೂ ಪೊಲೀಸರು ಸಬ್ ಜೈಲಲ್ಲಿ ಇಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದ ಇತರೆ ಆರೋಪಿ – ಅಪರಾಧಿಗಳಿಗೂ ಸೋಂಕು ಹರಡುವ ಆತಂಕ ಎದುರಾಗಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಉತ್ತಮ ವಾತಾವರಣ, ಪ್ರಶಾಂತ ಸ್ಥಳದಲ್ಲಿರುವ ಜೈಲಿನಲ್ಲಿ ನಿಗದಿಗಿಂತ ಹೆಚ್ಚು ಮಂದಿ ಆರೋಪಿ/ಅಪರಾಧಿಗಳನ್ನು ಬಂಧನದಲ್ಲಿರಿಸಲಾಗಿದೆ. ಕೊರೊನ ವಾರಿಯರ್‌ಗಳಲ್ಲೂ ಕೊರೊನಾ ಸೋಂಕು ಹರಡುತ್ತಿರುವ ನಡುವೆಯೇ ಸೋಂಕಿತ ವ್ಯಕ್ತಿಯನ್ನು ಸಬ್ ಜೈಲಲ್ಲಿ ಇಟ್ಟು ಅನಾಹುತವನ್ನು ಪೊಲೀಸರು ಮೇಲೆ ಎಳೆದುಕೊಂಡಂತೆ ಆಗಿದೆ.
ಈ ಹಿಂದೆ ಇದೇ ರೀತಿ ತುಮಕೂರು ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣಕ್ಕೆ ಕೊರೊನಾ ಸೋಂಕಿತನೊಬ್ಬ ಬಂದು ಹೋದ ಶಂಕೆಯ ಹಿನ್ನೆಲೆಯಲ್ಲಿ ಇಡೀ ಕಚೇರಿಯನ್ನು ಸ್ಯಾನಿಟೈಜ್ ಮಾಡಲಾಗಿತ್ತು ಸ್ವತಃ ಸಿಇಓ ಮುಂದೆ ನಿಂತು ಸ್ಯಾನಿಟೈಜ್ ಮಾಡಿಸಿದ್ದರು.
ಆದರೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ಒಂದು ದಿನದ ಮಟ್ಟಿಗೆ ಸಬ್ ಜೈಲಿನಲ್ಲಿ ಬಂಧನದಲ್ಲಿಟ್ಟಿದ್ದರೂ ಜೈಲನ್ನು ಸ್ಯಾನಿಟೈಜ್ ಮಾಡುವ ಗೋಜಿಗೆ ಹೋಗಿಲ್ಲ. ಸಬ್ ಜೈಲಲ್ಲಿ ಮೂರು ಪ್ಲಾಟ್ ಗಳಿದ್ದು ಕೊರೊನ ಸೋಂಕಿತ ವ್ಯಕ್ತಿ ಯಾವ ಬ್ಲಾಕ್ ನಲ್ಲಿದ್ದನೋ ಆ ಬ್ಲಾಕ್ ನ ಇತರ ಆರೋಪಿ/ಅಪರಾಧಿಗಳಿಗೂ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಬ್ ಜೈಲಿನಲ್ಲಿ ಒಂದೊಂದು ಬ್ಲಾಕ್ ನಲ್ಲಿ 200 ಮಂದಿಯಂತೆ ಒಟ್ಟು 600 ಮಂದಿ ಆರೋಪಿಗಳು ಇರಬಹುದು. ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಅಪರಾಧಿಗಳು ಈ ಸಬ್ ಜೈಲಲ್ಲಿ ಇದ್ದು ಸೋಂಕು ಹರಡುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಧರಿಸದಿದ್ದರೆ 10,000 ದಂಡ: ಒಂದು ವರ್ಷದವರೆಗೆ ಕೋವಿಡ್ -19 ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದ ಕೇರಳ


