Homeಮುಖಪುಟಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

ಪೊಲೀಸ್ ಹಾಗೂ ರಾಜಕೀಯ ಸಂಬಂಧವೆ ವಿಕಾಸ್ ದುಬೆಯ ಅಪರಾಧಕ್ಕೆ ಕಾರಣ: ಇದು ಎಲ್ಲ ರಾಜ್ಯಗಳಿಗೂ ಪಾಠ

8 ಪೊಲೀಸರನ್ನೇ ನಿರ್ದಯವಾಗಿ ಕೊಲ್ಲುವ ಮಟ್ಟಕ್ಕೆ ವಿಕಾಸ್ ದುಬೆ ಬೆಳೆದುದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ ಉತ್ತರ ಪ್ರದೇಶ ಮಾಜಿ ಪೊಲೀಸ್ ಮಹಾನಿರ್ದೇಶಕರು..

- Advertisement -
- Advertisement -

ಕಾನ್ಪುರದಲ್ಲಿ ದರೋಡೆಕೋರ, ಕ್ರಿಮಿನಲ್ ವಿಕಾಸ್ ದುಬೆ ಮತ್ತು ಆತನ ಸಹಚರರು ಎಂಟು ಪೊಲೀಸರನ್ನು ಕೊಂದದ್ದು ಪದಗಳಿಗೆ ನಿಲುಕದ ದುರಂತ. ಇದರ ನೋವಿನ ಆಳ ನನಗೆ ಗೊತ್ತಾಗುತ್ತದೆ. ಯಾಕೆಂದರೆ 2017 ಎಪ್ರಿಲ್ ವರೆಗೆ ನಾನು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥನಾಗಿ ಪೊಲೀಸರನ್ನು ಮುನ್ನಡೆಸುವ ಗೌರವ ಪಡೆದಿದ್ದೇನೆ. ನನ್ನ ಮಾಜಿ ಸಹೋದ್ಯೋಗಿಗಳ ಮೇಲಾದ ಗುಂಡಿನ ಸುರಿಮಳೆ ನನ್ನನ್ನು ವಿಚಲಿತನನ್ನಾಗಿಸುತ್ತದೆ. ವಿಕಾಸ್ ದುಬೆ ಯಾಕಾಗಿ ಇದನ್ನು ಮಾಡಿದ?

ವಿಕಾಸ್ ದುಬೆ, ಕಳೆದ ಕೆಲವು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಆಳವಾಗಿ ಬೇರು ಬಿಟ್ಟುಕೊಂಡಿರುವ ಪೊಲೀಸ್-ರಾಜಕೀಯ ಸಂಬಂಧದ ಫಲಾನುಭವಿ. ಏಕಕಾಲದಲ್ಲಿ ಈತ ಕ್ರಿಮಿನಲ್, ಭೂ ಕಬಳಿಕೆದಾರ, ರಾಜಕೀಯ ಶಕ್ತಿಯ ದಲ್ಲಾಳಿ, ಬ್ರಾಹ್ಮಣ ರಾಬಿನ್ ಹುಡ್ ಆಗಲು ಸಾಧ್ಯವಾಗಿದ್ದಾದರೂ ಹೇಗೆ?

ನಾನು ಇದರ ಕುರಿತು ವಿವರಿಸಲು ಪ್ರಯತ್ನಿಸುತ್ತೇನೆ. ವಿಕಾಸ್ ದುಬೆ ಗ್ರಾಮೀಣ ಕಾನ್ಪುರ್ ಪ್ರದೇಶದ ಚೌಬೆಪುರದ ನಿವಾಸಿ. 1990 ರ ದಶಕದ ಆರಂಭದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಈತ ಕಾನೂನಿನ ಬಗ್ಗೆ ತಿರಸ್ಕಾರ ಹಾಗೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಆ ಸಮಯದಲ್ಲಿ ಆಡಳಿತ ಪಕ್ಷದಲ್ಲಿದ್ದ ಅತ್ಯಂತ ಹಿರಿಯ ಸ್ಥಳೀಯ ರಾಜಕಾರಣಿ ಈತನಿಗೆ ಪ್ರೋತ್ಸಾಹ ನೀಡಿದ್ದರು.

ಇದು ಯುವಕ ದುಬೆಗೆ ನಿರ್ಣಾಯಕವಾಗಿತ್ತು. ದುಬೆ ಸ್ಥಳೀಯ ರಾಜಕೀಯ ಪ್ರವೇಶಿಸಿ ಅವುಗಳ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ. ಇದು ಮುಂದಿನ 25-30 ವರ್ಷಗಳಲ್ಲಿ ಅವನು ತನ್ನ ಅನುಕೂಲಕ್ಕೆ ತಕ್ಕಂತೆ ಅವರನ್ನು ಆಡಿಸುವಂತಾಯಿತು. ಈತ 1990 ಮತ್ತು 2000 ರ ದಶಕಗಳಲ್ಲಿ ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಹಾರುತ್ತಾ ಕ್ರಿಯಾಶೀಲವಾಗಿದ್ದ. ಅದೇ ಸಮಯದಲ್ಲಿ ವೇಗವಾಗಿ ನಗರೀಕರಣಗೊಳ್ಳುತ್ತಿದ್ದ ಚೌಬೆಪುರ ಪ್ರದೇಶದಲ್ಲಿ ಅಸಹಾಯಕರಿಂದ ಭೂಮಿಯನ್ನು ಕಸಿದುಕೊಳ್ಳುತ್ತಿದ್ದ. ರಾಜಕೀಯ ಪ್ರೋತ್ಸಾಹವು ಪೊಲೀಸ್ ತನಿಖೆಯಿಂದ ದುಬೆಗೆ ರಕ್ಷಣೆ ನೀಡಿತು.

ಪೊಲೀಸ್ ಠಾಣೆಯೊಳಗಡೆ ಕೊಲೆ

ಸ್ಥಳೀಯ ಭಾರತೀಯ ಜನತಾ ಪಕ್ಷದ ಮುಖಂಡ ಸಂತೋಷ್ ಶುಕ್ಲಾ ಸಕ್ರಿಯವಾಗಿರುವವರೆಗೂ ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳು ಈಡೇರುವುದಿಲ್ಲ ಎಂದು ದುಬೆ ಅರಿತುಕೊಂಡಿದ್ದ. ಶುಕ್ಲಾ ಕೂಡ ಬ್ರಾಹ್ಮಣರಾಗಿದ್ದು, ಈರ್ವರು ಪ್ರಮುಖ ಓಟ್‌ಬ್ಯಾಂಕ್ ಅನ್ನು ಮುನ್ನಡೆಸಲು ಸ್ಪರ್ಧಿಸುತ್ತಿದ್ದರು. ಇದಲ್ಲದೆ, ಶುಕ್ಲಾ ದುಬೆಗಿಂತ ಸೀನಿಯರ್. ಇದರಿಂದ ತನಗಿರುವ ರಾಜಕೀಯ ಬೆಂಬಲದಿಮದ ದುಬೆ 2001 ರಲ್ಲಿ ಶಿವ್ಲಿ ಪೊಲೀಸ್ ಠಾಣೆಯೊಳಗೆ ಸಚಿವ ಮಟ್ಟದ ಕಾರ್ಯಕಾರಿಯಾಗಿದ್ದ ಶುಕ್ಲಾರನ್ನು ಕೊಲೆ ಮಾಡಿದ.

ವಿಕಾಸ್ ದುಬೆಗಿರುವ ಪೊಲೀಸರೊಂದಿಗಿನ ಮೈತ್ರಿಯನ್ನು ಅನೇಕ ಪುಟಗಳಲ್ಲಿ ಬರೆಯಬಹುದು. ಆದರೆ ನಾನು ಶುಕ್ಲಾ ಹತ್ಯೆಯಿಂದ ಪ್ರಾರಂಭಿಸಿ ಬರೆಯುತ್ತೇನೆ. ತನಿಖೆಯು ಆತನನ್ನು ಆರೋಪಿಯೆಂದು ಘೋಷಿಸಿ, ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಆದರೆ ವಿಚಾರಣೆಯ ಸಮಯದಲ್ಲಿ, ಪ್ರತ್ಯಕ್ಷದರ್ಶಿಗಳು, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗಳು ಪ್ರತಿಕೂಲ ಸಾಕ್ಷ್ಯ ನುಡಿದರು. ಪೊಲೀಸ್ ಠಾಣೆಯೊಳಗೆ ಸರ್ಕಾರಿ ಸಚಿವ ಮಟ್ಟದ ರಾಜಕಾರಣಿಯನ್ನು ಹೊಡೆದುರುಳಿಸಿದರೂ ಸಾಕ್ಷ್ಯಾಧಾರದ ಕೊರತೆಯಿಂದ ಅವನನ್ನು ಖುಲಾಸೆಗೊಳಿಸಲಾಯಿತು.

ಆ ಸಮಯದಲ್ಲಿ ಪ್ರಾಸಿಕ್ಯೂಷನ್ ಏನು ಮಾಡುತ್ತಿತ್ತು? ರಾಜಕೀಯ ನೇಮಕಾತಿಯಾಗಿರುವ ಜಿಲ್ಲಾ ಸರ್ಕಾರಿ ಮಂಡಳಿ ಪ್ರಶ್ನೆ ಎತ್ತ ಬೇಕಿತ್ತು. ಪ್ರಾಸಿಕ್ಯೂಷನ್ ಉಸ್ತುವಾರಿ ಹೊಂದಿರುವ ಜಿಲ್ಲಾಧಿಕಾರಿ ಇದನ್ನು ಕೈಗೈತ್ತಿಕೊಂಡು ವಾದಿಸಬೇಕಿತ್ತು. ಆದರೆ ಇದರ ಬದಲಾಗಿ ಖುಲಾಸೆ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲಾಗುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧರಿಸಿತು.

ಅದರ ನಂತರ, 2000 ರಲ್ಲಿ ಶಾಲಾ ಪ್ರಾಂಶುಪಾಲರ ಹತ್ಯೆ ಪ್ರಕರಣದಲ್ಲಿ ದುಬೆ ಮತ್ತೊಂದು ವಿಚಾರಣೆಯನ್ನು ಎದುರಿಸಬೇಕಾಯಿತು, 2004 ರಲ್ಲಿ ಈ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಘೋಷಿಸಲಾಯಿತು. ಆದರೆ ಆಶ್ಚರ್ಯವೇನೆಂದರೆ ಅನೇಕ ಕೊಲೆ ಪ್ರಕರಣಗಳು ಮತ್ತು ದರೋಡೆ ಸೇರಿದಂತೆ 60 ಕ್ಕೂ ಹೆಚ್ಚು ಪ್ರಕರಣಗಳ ಅಪರಾಧ ಇತಿಹಾಸ ಹೊಂದಿರುವ ವ್ಯಕ್ತಿಗೆ ಶೀಘ್ರದಲ್ಲೇ ಜಾಮೀನು ನೀಡಲಾಗುತ್ತಿರವುದು. ಮತ್ತೆ ಚೌಬೆಪುರಕ್ಕೆ ಬಂದಾಗ ಆತನಿಗೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ವಿವಿಧ ಸರ್ಕಾರಗಳ ಅಡಿಯಲ್ಲಿ ಈತನ ಅಪರಾಧಗಳ ವಿರುದ್ಧದ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಲಿಲ್ಲ?

ಬಲಶಾಲಿ ಬ್ರಾಹ್ಮಣ 

ಆ ಹೊತ್ತಿಗೆ, ವಿಕಾಸ್ ದುಬೆ ಚೌಬೆಪುರ ಪ್ರದೇಶದಲ್ಲಿ ಎರಡು ಡಜನ್‌ಗೂ ಹೆಚ್ಚು ಬ್ರಾಹ್ಮಣ ಪ್ರಾಬಲ್ಯದ ಗ್ರಾಮಗಳನ್ನು ನಿಯಂತ್ರಿಸುವ ಮಟ್ಟಿಗೆ ಖ್ಯಾತಿ ಪಡೆದಿದ್ದನು. ಅವನು ಹೇಳಿದವರು ಮಾತ್ರ ಈ ಗ್ರಾಮಗಳಲ್ಲಿ ಪ್ರಧಾನ್ ಆಗಲು ಸಾಧ್ಯವಾಗುತ್ತಿತ್ತು. ಈ ಮೂಲಕ ಅನಧಿಕೃತವಾಗಿ ಅಧಿಕಾರ ಅನುಭವಿಸುತ್ತಿದ್ದ. ಆತನ ಪರವಾಗಿ 20 ಪ್ರಧಾನ್‌ಗಳು ಆಯ್ಕೆಯಾದರೆ ಸಾಕು ಶಾಸಕಾಂಗ ಸಭೆ ಸ್ಥಾನವನ್ನು ಗೆಲ್ಲಲು ಮತ್ತು ಸಂಸತ್ತಿನ ಚುನಾವಣೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲು ಇದು ಸಾಕಾಗುತ್ತಿತ್ತು.

ಸ್ಥಳೀಯ ರಾಜಕೀಯ ಪುಡಾರಿಗಳ ಆಜ್ಞೆಯ ಮೇರೆಗೆ ಸ್ಟೇಷನ್ ಹೌಸ್ ಅಧಿಕಾರಿಯನ್ನು ವಾಡಿಕೆಯಂತೆ ನಿಯೋಜಿಸಲಾಗುತ್ತಿತ್ತು. ಇದರಿಂದ ಸ್ಥಳೀಯ ಪೊಲೀಸರು ದುಬೆಯನ್ನು ಎದುರು ಹಾಕಿಕೊಳ್ಳಲು ಧೈರ್ಯಮಾಡುತ್ತಾರೆಯೇ? ಅವರು ಬ್ಯಾಲೆನ್ಸ್ ಕಾಪಾಡಿಕೊಳ್ಳಬೇಕಾಗಿತ್ತು. ಪೊಲೀಸರು ಇರುವುದು ಸುವ್ಯವಸ್ಥೆ‌ ಕಾಪಾಡಿಕೊಳ್ಳಲು ಮಾತ್ರ. ಎಲ್ಲಿಯವರೆಗೆ ಅವರು ದುಬೆಗೆ ತೊಂದರೆ ನೀಡಲಿಲ್ಲವೋ, ಅಲ್ಲಿಯವರೆಗೆ ಆತ ಪೊಲೀಸರಿಗೆ ತೊಂದರೆ ನೀಡಲಿಲ್ಲ. ರಾಜ್ಯ ರಾಜಧಾನಿ ಲಕ್ನೋ ಇದನ್ನೆಲ್ಲ ತಿಳಿಯಲು ಅಥವಾ ಕಾಳಜಿ ವಹಿಸಲು ತುಂಬಾ ದೂರದಲ್ಲಿತ್ತು.

ತೀರಾ ಇತ್ತೀಚೆಗೆ, ಸೋದರ ಸಂಬಂಧಿಯನ್ನು ಕೊಲೆ ಮಾಡಿದ್ದಕ್ಕಾಗಿ 2018 ರಲ್ಲಿ ಬಂಧಿಸಲ್ಪಟ್ಟಿದ್ದರೂ ದುಬೆ ಫೆಬ್ರವರಿಯಲ್ಲಿ ಜಾಮೀನು ಪಡೆದಿದ್ದ.

ಈಗ ಸ್ಪಷ್ಟವಾದ ಸಂಗತಿಯೆಂದರೆ, ದುರಂತ ನಡೆದ ಎರಡು – ಮೂರು ದಿನಗಳ ಮೊದಲು, ಹೊಸ ಅಧಿಕಾರಿಯೊಬ್ಬರು ಕಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾದರು. ಅವರು ಪರಾರಿಯಾದ ವಿಕಾಸ್ ದುಬೆ ಬಗ್ಗೆ ಸುಳಿವು ಕೊಟ್ಟವರಿಗೆ 25 ಸಾವಿರ ರೂ.ಗಳ ಬಹುಮಾನವನ್ನು ಘೋಷಿಸಿದರು. ಬಹುಮಾನದ ಘೋಷಣೆಯು ಅಪರಾಧಿನ್ನು “ಭೀತಿಗೊಳಿಸುವ ಅಂಶ”ವಾಗಿತ್ತು.

ಸರ್ಕಲ್ ಇನ್ಸ್‌ಪೆಕ್ಟರ್ ದೇವೇಂದರ್ ಮಿಶ್ರಾ ನೇತೃತ್ವದ ಪೊಲೀಸ್ ಪಡೆ ಜುಲೈ 1 ರಂದು ವಿಕಾಸ್ ದುಬೆ ಮೇಲೆ ದಾಳಿ ನಡೆಸಲು ಯೋಜಿಸಿದಾಗ, ಕಾನ್ಪುರ್ ಪೊಲೀಸರೇ ಯಾರೋ ದುಬೆಗೆ ದಾಳಿಯ ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಶೂಟರ್‌ಗಳನ್ನು ಬಾಡಿಗೆಗೆ ಕರೆತಂದು ಹೊಂಚುಹಾಕಿ ದಾಳಿ ಮಾಡಿರುವುದರಿಂದ ಈ ದುರ್ಘಟನೆ ಜರುಗಿದೆ.

ಜೀವ ಕಳೆದುಕೊಂಡ ನನ್ನ ಸಂಗಾತಿಗಳಿಗಾಗಿ ನಾನು ದುಃಖಿಸುತ್ತೇನೆ. ನಾನು ಈ ವ್ಯವಸ್ಥೆಯ ಬಗ್ಗೆ ವಿಷಾದಿಸುತ್ತೇನೆ ಮತ್ತು ಅದು ಬದಲಾಗಬೇಕೆಂದು ಒತ್ತಾಯಿಸುತ್ತೇನೆ. ಪೊಲೀಸರು ತಮ್ಮ ಕೆಲಸವನ್ನು ವೃತ್ತಪರವಾಗಿ ಮಾಡುತ್ತಾರೆಯೇ ಹೊರತು ದ್ವೇಷ, ಕೋಪದಿಂದಲ್ಲ ಎಂದು ನಾನು ನಂಬುತ್ತೇನೆ. ಆರೋಪಿಗೆ ಶಿಕ್ಷೆಯಾಗುವಂತೆ ಸಾಕ್ಷಿಗಳನ್ನು ಸಂಗ್ರಹಿಸುತ್ತಾರೆ ಎಂದು ನಾನು ನಂಬುತ್ತೇನೆ.

ಕೃಪೆ: ಜಾವೀದ್ ಅಹ್ಮದ್, ಸ್ಕ್ರೋಲ್.ಇನ್

(ಜಾವೀದ್ ಅಹ್ಮದ್, ಉತ್ತರ ಪ್ರದೇಶ ಮಾಜಿ ಪೊಲೀಸ್ ಮಹಾನಿರ್ದೇಶಕರು)


ಓದಿ: ವಿಕಾಸ್ ದುಬೆಗೆ ‘ದಾಳಿಯ ಮಾಹಿತಿ ಸೋರಿಕೆ’: 3 ಕಾನ್ಪುರ ಪೊಲೀಸರ ಮೇಲೆ ಶಂಕೆ – ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

0
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಗುರುವಾರ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ...