PC:Holidify

ವಿಶ್ವವನ್ನೇ ಆವರಿಸಿರುವ ಕೊರೊನಾ ಹಿನ್ನೆಲೆ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ. ಭಾರತದಲ್ಲಿ ದೀಪಾವಳಿ ಹಬ್ಬ ಇರುವ ಹಿನ್ನೆಲೆ ಸಂಭ್ರಮಾಚರಣೆಗೆ ಹಲವು ನಿಬಂಧನೆಗಳನ್ನು ಸರ್ಕಾರ ವಿಧಿಸಿದೆ. ಎನ್‌ಜಿಟಿ ಪಟಾಕಿ ನಿಷೇಧ ಸಂಬಂಧ 18ಕ್ಕೂ ಹೆಚ್ಚು ರಾಜ್ಯಗಳಿಗೆ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ.

ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಹಸಿರು ಮಂಡಳಿ ಎಲ್ಲವೂ ಜನರ ಆರೋಗ್ಯಕ್ಕಾಗಿ ನಿಯಮಗಳನ್ನು ಮಾಡುತ್ತಿವೆ. ಆದರೆ, ಜನರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೊರೊನಾ ಸಾಂಕ್ರಾಮಿಕ ರೋಗ ಆರಂಭದ ದಿನಗಳಲ್ಲಿ ಇದ್ದ ಮುನ್ನೆಚ್ಚರಿಕೆ ಈಗ ಮರೆಯಾಗಿದೆ. ಆರೋಗ್ಯಕ್ಕಿಂತ ಹಬ್ಬವೇ ಮುಖ್ಯ ಎನ್ನುವಂತೆ ಶಾಪಿಂಗ್‌ನಲ್ಲಿ ಮುಳುಗಿದ್ದಾರೆ.

ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಜನಸಂದಣಿ ನಿಜಕ್ಕೂ ಗಾಬರಿ ಬೀಳಿಸುವಂತಿದೆ. ದೀಪಾವಳಿ ಶಾಪಿಂಗ್‌ಗಾಗಿ  ಬೀದಿಗಿಳಿದ ಜನ ಸಂಪೂರ್ಣವಾಗಿ ಕೊರೊನಾ ವೈರಸ್ ಇದೆ ಎನ್ನುವುದನ್ನೇ ಮರೆತಿದ್ದಾರೆ. ಬೇಕಾಬಿಟ್ಟಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರವಿಲ್ಲದೆ ಜನರು ಪರಸ್ಪರ ನೂಕುನುಗ್ಗಲಲ್ಲಿ ಓಡಾಡುವುದು ಮತ್ತು ಅಂಗಡಿಗಳ ಒಳಗೆ ಗುಂಪು ಗುಂಪಾಗಿ ಸೇರುತ್ತಿರುವುದು ಕೊರೊನಾ ಮತ್ತಷ್ಟು ಹಬ್ಬಲು ಕಾರಣವಾಗಬಹುದು.

ಇದನ್ನೂ ಓದಿ: ಹಸಿರು ಪಟಾಕಿಗಳು ಎಂದರೇನು..? ಅವು ಮಾಲಿನ್ಯಕಾರಕವಲ್ಲವೇ..?

ಅಂಗಡಿಗಳಲ್ಲಿ, ರಸ್ತೆಗಳಲ್ಲಿ ಜನ ಮಾಸ್ಕ್‌ಗಳನ್ನು ಧರಿಸುವುದು ಬೇಕಾಬಿಟ್ಟಿಯಾಗಿದೆ. ಮಾಸ್ಕ್ ಹಾಕಿದ್ದೇವೆ ಎಂದು ತೋರಿಸಿಕೊಳ್ಳಲು ಮಾತ್ರ ಬಳಕೆಯಾಗುತ್ತಿದೆ. ಇನ್ನೂ ದೈಹಿಕ ಅಂತರವಂತೂ ಮರೆತ ಮಾತಾಗಿದೆ. ಚುನಾವಣಾ ರ್‍ಯಾಲಿ, ಸಂಭ್ರಮಗಳಂತೆಯೇ ಜನ ಶಾಪಿಂಗ್‌ ಹೆಸರಲ್ಲಿ ಕೊರೊನಾಗೆ ಆಹ್ವಾನ ನೀಡುತ್ತಿದ್ದಾರೆ. ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರಿಗಳು ಮಾಸ್ಕ್ ಧರಿಸುವಂತೆ ಹೇಳಿದರೂ ಗ್ರಾಹಕರು ಅಸಡ್ಡೆ ಮಾಡುತ್ತಾರೆ ಎಂದು ಕೆಲ ವ್ಯಾಪಾರಿಗಳು ಆರೋಪಿಸಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಜನ ಸಾಲುಗಟ್ಟಿ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರೊನಾ ಇರುವುದಾದರೂ ಎಲ್ಲಿ ಎಂಬ ವ್ಯಂಗ್ಯದ ಪ್ರಶ್ನೆಗಳಿಟ್ಟು ನೆಟ್ಟಿಗರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು, “ಹಬ್ಬದಲ್ಲಿ ಹಬ್ಬದಿರಲಿ ಕೊರೊನಾ” ಎಂದಿದ್ದಾರೆ.

 

“ದೀಪಾವಳಿ ನಮ್ಮೆಲ್ಲರಿಗೂ ಹಬ್ಬವಾಗಬೇಕೇ ಹೊರತು ಕೊರೊನಾಗೆ ಹಬ್ಬವಾಗಬಾರದು. ಹಬ್ಬದ ಸಡಗರ ಸಂಭ್ರಮದ ನಡುವೆ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಿವುದು, ಪದೇ ಪದೇ ಕೈತೊಳೆಯುವುದು, ಭೌತಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ. ನಮ್ಮ ನಿರ್ಲಕ್ಷವೇ ಕೊರೊನಾಗೆ ಆಹ್ವಾನ” ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.

ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ವಾಯುಮಾಲಿನ್ಯ ಹೆಚ್ಚಾಗಿ ಕೊರೊನಾ ಉಲ್ಬಣವಾಗುವ ಭಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಹಬ್ಬದ ನೆಪದಲ್ಲಿ ಸಾಮಾನ್ಯರು ಈ ರೀತಿ ಕೊರೊನಾ ನಿಯಮಗಳ ಉಲ್ಲಂಘನೆ ಎಷ್ಟು ಸರಿ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ.


ಇದನ್ನೂ ಓದಿ: ಪಟಾಕಿ ನಿಷೇಧ: ಬಿಜೆಪಿ ಆಳ್ವಿಕೆಯ ಹರಿಯಾಣ, ಕರ್ನಾಟಕ ರಾಜ್ಯಗಳು ಉಲ್ಟಾ ಹೊಡೆಯುತ್ತಿರುವುದೇಕೆ?

LEAVE A REPLY

Please enter your comment!
Please enter your name here