Homeಮುಖಪುಟಪಟಾಕಿ ನಿಷೇಧ: ಬಿಜೆಪಿ ಆಳ್ವಿಕೆಯ ಹರಿಯಾಣ, ಕರ್ನಾಟಕ ರಾಜ್ಯಗಳು ಉಲ್ಟಾ ಹೊಡೆಯುತ್ತಿರುವುದೇಕೆ?

ಪಟಾಕಿ ನಿಷೇಧ: ಬಿಜೆಪಿ ಆಳ್ವಿಕೆಯ ಹರಿಯಾಣ, ಕರ್ನಾಟಕ ರಾಜ್ಯಗಳು ಉಲ್ಟಾ ಹೊಡೆಯುತ್ತಿರುವುದೇಕೆ?

ಕರ್ನಾಟಕದಲ್ಲಿ ಹಸಿರು ಪಟಾಕಿಗೆ ಅವಕಾಶವಿದ್ದರೆ, ಹರಿಯಾಣದಲ್ಲಿ ದಿನದಲ್ಲಿ 2 ಗಂಟೆಗಳ ಸಮಯ ಪಟಾಕಿ ಸಿಡಿಸಬಹುದಾಗಿದೆ.

- Advertisement -
- Advertisement -

ಕೊರೊನಾ ರೋಗಿಗಳ ಶ್ವಾಸಕೋಶ ಮತ್ತು ಉಸಿರಾಟದ ಮೇಲೆ ತೀವ್ರ ಪ್ರಭಾವ ಬೀರುತ್ತದೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಕೆಲವು ರಾಜ್ಯಗಳು ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧ ಮಾಡಿರುವುದು ಸರಿಯಷ್ಟೇ. ಆದರೆ ಸಂಪೂರ್ಣ ಪಟಾಕಿ ನಿಷೇಧ ಘೋಷಿಸಿದ್ದ ಬಿಜೆಪಿ ಆಳ್ವಿಕೆಯ ಹರಿಯಾಣ, ಕರ್ನಾಟಕ ರಾಜ್ಯಗಳು ತಮ್ಮ ನಿರ್ಧಾರಕ್ಕೆ ಉಲ್ಟಾ ಹೊಡೆಯುತ್ತಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ನವೆಂಬರ್ 02 ರಂದೇ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಪಟಾಕಿ ನಿಷೇಧ ಮಾಡಿತ್ತು. ನಂತರ ವಾಯುಮಾಲಿನ್ಯದಲ್ಲಿ ಕುಖ್ಯಾತಿ ಪಡೆದು ಬಹಳ ಚರ್ಚೆಯಲ್ಲಿರುವ ದೆಹಲಿ ರಾಜ್ಯದ ಆಪ್ ಸರ್ಕಾರವು ಪಟಾಕಿ ನಿಷೇಧಿಸಿತ್ತು. ಟಿಎಂಸಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಬಿಜೆಡಿ ನೇತೃತ್ವದ ಓರಿಸ್ಸಾ, ಎಸ್‌ಕೆಎಂ ನೇತೃತ್ವದ ಸಿಕ್ಕಿಂ ಮತ್ತು ಚಂಢಿಗಡ ಸರ್ಕಾರಗಳು ಪಟಾಕಿ ನಿಷೇಧ ನಿರ್ಧಾರ ತೆಗೆದುಕೊಂಡು ಜನಮನ್ನಣೆ ಗಳಸಿದ್ದವು.

ಬಿಜೆಪಿ ನೇತೃತ್ವದ ಕರ್ನಾಟಕ ಮತ್ತು ಹರಿಯಾಣ ಸರ್ಕಾರಗಳು ಸಹ ಸಂಪೂರ್ಣ ಪಟಾಕಿ ನಿಷೇಧ ಮಾಡುವುದಾಗಿ ಘೋಷಿಸಿದ್ದವು. ಈ ನಿರ್ಧಾರವನ್ನು ಪರಿಸರ ಪ್ರೇಮಿಗಳು, ಪ್ರಜ್ಞಾವಂತರು ಬೆಂಬಲಿಸಿದ್ದರು. ನವೆಂಬರ್ 06 ರಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಂಪೂರ್ಣ ಪಟಾಕಿ ನಿಷೇಧ ಎಂದು ಮಧ್ಯಾಹ್ನ ಘೋಷಿಸಿದರೆ ಸಂಜೆ ವೇಳೆಗೆ ಹಸಿರು ಪಟಾಕಿಗಳನ್ನು ಸಿಡಿಸಬಹುದು ಎಂದು ಯೂಟರ್ನ್ ಹೊಡೆದಿದ್ದರು.

ಅದೇ ರೀತಿಯಲ್ಲಿ ನವೆಂಬರ್ 07 ರಂದು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಸಹ ಪಟಾಕಿ ನಿಷೇಧ ಮಾಡುವುದಾಗಿ ಘೋಷಿಸಿದ್ದರು. ಒಂದು ದಿನದ ನಂತರ ಇಂದು ದಿನಕ್ಕೆ 2 ಗಂಟೆಗಳ ಸಮಯ ಪಟಾಕಿ ಸಿಡಿಸಬಹುದು ಎಂದು ಹರಿಯಾಣ ಸಿಎಂ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಕಡಿಮೆ ರಾಸಾಯನಿಕಗಳನ್ನು ಹೊಂದಿರುವ ಮತ್ತು ಹಾನಿಕಾರಕವಲ್ಲದ ಪಟಾಕಿಗಳನ್ನು ಹಸಿರು ಪಟಾಕಿಗಳು ಎಂದು ಕರೆಯಲಾಗುತ್ತದೆ. ಇವು ನೈಟ್ರೇಟ್ ಮತ್ತು ಬೇರಿಯಂ ರಾಸಯನಿಕ ಮುಕ್ತ ಪಟಾಕಿಗಳಾಗಿದ್ದು, ಅಲ್ಯೂಮಿಲಿಯಂ ಮತ್ತು ಥರ್ಮೈಟ್‌ ಒಳಗೊಂಡಿವೆ. ಈ ಪಟಾಕಿ ಸಿಡಿದಾಗ ಹೆಚ್ಚು ಹೊಗೆ ಬರುವುದಿಲ್ಲ ಎನ್ನಲಾಗುತ್ತಿದೆ. ಆದರೆ ದೀಪಾವಳಿಗೆ ಇನ್ನು ಕೇವಲ ಒಂದು ವಾರವಿರುವಾಗ ಸಾಮಾನ್ಯ ಪಟಾಕಿಗಳು ಎಲ್ಲಾ ಚಿಲ್ಲರೆ ಅಂಗಡಿಗಳಿಗೆ ತಲುಪಿರುವಾಗ ಯಡಿಯೂರಪ್ಪನವರ ಈ ತೀರ್ಮಾನದಿಂದ ಯಾವುದೇ ಪ್ರಯೋಜನವಿಲ್ಲ. ಜನ ಪಟಾಕಿ ಸಿಡಿಸಿಯೇ ಸಿಡಿಸುತ್ತಾರೆ ಎಂದು ಹಲವರು ದೂರಿದ್ದಾರೆ.

ಇನ್ನು ಹರಿಯಾಣ ಸರ್ಕಾರ ನೀಡಿರುವ 2 ಗಂಟೆಗಳ ಕಾಲ ಪಟಾಕಿ ಸಿಡಿಸಲು ಅವಕಾಶವು ಪಟಾಕಿ ನಿಷೇಧ ನಿಲುವಿಗೆ ವಿರುದ್ಧವಾಗಿದೆ. ಒಂದೇ ಸಮಯದಲ್ಲಿ ಬಹುತೇಕ ಜನರು ಪಟಾಕಿ ಸಿಡಿಸಿದರೆ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಈ ನಿರ್ಧಾರ ಸರಿಯಲ್ಲ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.

ಈ ಎರಡು ಬಿಜೆಪಿ ಸರ್ಕಾರಗಳು ಯೂ ಟರ್ನ್ ಹೊಡೆಯಲು ತಮ್ಮ ಹಿಂದೂತ್ವವಾದಿ ನಿಲುವುಗಳೇ ಕಾರಣ ಎನ್ನಲಾಗುತ್ತಿದೆ. ಮುಖ್ಯವಾಗಿ ಹಿಂದೂಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧಿಸಿದರೆ ಬಹಳಷ್ಟು ಹಿಂದೂಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಷೇಧ ಮಾಡದಿದ್ದರೆ ಹಸಿರು ನ್ಯಾಯಮಂಡಳಿ ಕ್ರಮ ತೆಗೆದುಕೊಳ್ಳುತ್ತದೆ. ಹಾಗಾಗಿ ‘ಹಾವು ಸಾಯಬಾರದು, ಕೋಲು ಮುರಿಯಬಾರದು’ ಎಂಬ ಗಾದೆ ಮಾತಿನಂತೆ ಪಟಾಕಿ ನಿಷೇಧ ಮಾಡಿದಂತೆ ಘೋಷಿಸಿ ಸ್ವಲ್ಪ ಸಮಯದಲ್ಲಿ ಉಲ್ಟಾ ಹೊಡೆದಿದ್ದಾರೆ.

ಹಾಗಾಗಿ ಇದು ಎನ್‌ಜಿಟಿಯ ಕಣ್ಣೊರೆಸುವ ತಂತ್ರವಾಗಿ ಈ ಎರೆಡೂ ಸರ್ಕಾರಗಳು ಪಟಾಕಿ ನಿಷೇಧ ಘೋಷಿಸಿದ್ದವು. ಸ್ವಲ್ಪ ಸಮಯದಲ್ಲಿಯೇ ಅವುಗಳಲ್ಲಿ ಬದಲಾವಣೆ ತರುವ ಮೂಲಕ ನಾವು ಹಿಂದೂಗಳ ಪರ ಇದ್ದೇವೆ ಎಂದು ತೋರಿಸಿಕೊಳ್ಳುತ್ತಿವೆ. ಹಾಗಾಗಿ ಈ ಎರಡೂ ರಾಜ್ಯಗಳಲ್ಲಿ ಸಂಪೂರ್ಣ ಪಟಾಕಿ ನಿಷೇಧ ಎನ್ನುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ.

ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನವೆಂಬರ್ 7 ರಿಂದ 30 ರವರೆಗೆ ಪಟಾಕಿ ಬಳಕೆಯನ್ನು ನಿಷೇಧಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನವೆಂಬರ್ 2 ರಂದು ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ಮತ್ತು ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ನಾಲ್ಕು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿತ್ತು.

ಪರಿಸರದ ಮೇಲೆ ಕಾಳಜಿ ಇರುವ ಎಲ್ಲಾ ರಾಜ್ಯಗಳು ಸಹ ಸಂಪೂರ್ಣ ಪಟಾಕಿ ನಿಷೇಧ ಮಾಡಬೇಕಿದೆ. ದೀಪಾವಳಿ ಮಾತ್ರವಲ್ಲದೇ ಎಲ್ಲಾ ಸಮಯದಲ್ಲಿಯೂ ಪಟಾಕಿಯ ಉತ್ಪಾದನೆ, ಮಾರಾಟ ಮತ್ತು ಸಿಡಿಸಿವಿಕೆಯನ್ನು ತಡೆಗಟ್ಟಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ.


ಇದನ್ನೂ ಓದಿ: ವಾಯುಮಾಲಿನ್ಯ: ಪಟಾಕಿ ನಿಷೇಧ ಸಂಬಂಧ 18 ರಾಜ್ಯಗಳಿಗೆ ಎನ್‌ಜಿಟಿ ನೋಟಿಸ್!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...