ದೀಪಾವಳಿ: ಪಟಾಕಿ ಸಂಗ್ರಹಣೆ, ಮಾರಾಟ, ಬಳಕೆ ನಿಷೇಧಿಸಿದ ದೆಹಲಿ ಸರ್ಕಾರ
PC: ProKerala

ದೀಪಾವಳಿ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪಟಾಕಿ ನಿಷೇಧ ಕುರಿತು ಈಗಾಗಲೇ ಹಲವು ರಾಜ್ಯಗಳು ಚರ್ಚಿಸತೊಡಗಿವೆ. ಇವುಗಳ ಜೊತೆಯಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಹಿನ್ನೆಲೆ ಪಟಾಕಿ ನಿಷೇದಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಎನ್‌ಜಿಟಿ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಗಾಳಿಯ ಗುಣಮಟ್ಟ ಕುಸಿದು, ವಾಯುಮಾಲಿನ್ಯ ಹೆಚ್ಚಾಗಿರುವ, ಕರ್ನಾಟಕವೂ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್ ನೀಡಿದೆ.

ಎನ್‌ಜಿಟಿ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳಿಗೆ ಈಗಾಗಲೇ ನೋಟಿಸ್ ನೀಡಿದೆ. ಒಡಿಶಾ ಮತ್ತು ರಾಜಸ್ಥಾನದ ರಾಜ್ಯ ಸರ್ಕಾರಗಳು ಈಗಾಗಲೇ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಿವೆ.

ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನವೆಂಬರ್ 7 ರಿಂದ 30 ರವರೆಗೆ ಪಟಾಕಿ ಬಳಕೆಯನ್ನು ನಿಷೇಧಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನವೆಂಬರ್ 2 ರಂದು ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ಮತ್ತು ನಾಲ್ಕು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿತ್ತು.

ಇದನ್ನೂ ಓದಿ: ಕೊರೊನಾ: ಮಕ್ಕಳಿಗಾಗಿ ಜಾಗೃತಿ ಗೇಮ್ ಅಭಿವೃದ್ಧಿಪಡಿಸಿದ ಮದ್ರಾಸ್‌ ಐಐಟಿ ವಿದ್ಯಾರ್ಥಿಗಳು!

ಕೊರೊನಾ ಸಾಂಕ್ರಾಮಿಕದ ಜೊತೆಗೆ ದೀಪಾವಳಿ ಹಬ್ಬವೂ ಇರುವ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿ ಇಂಡಿಯನ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್‌ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ, ಗುರುವಾರದೊಳಗೇ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ.

ಎನ್‌ಜಿಟಿಯು ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್, ತಮಿಳುನಾಡು ಮತ್ತು ತೆಲಂಗಾಣ, ಉತ್ತರಖಂಡ ಮತ್ತು ಪಶ್ಚಿಮ ಬಂಗಾರದಿಂದ ಪ್ರತಿಕ್ರಿಯೆ ಕೋರಿದೆ.

ಇತ್ತ ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ಆರಂಭವಾಗಿದ್ದು, ದೀಪಾವಳಿ ಹಬ್ಬ ಕೂಡ ಹತ್ತಿರದಲ್ಲೇ ಇರುವ ಕಾರಣ ಪಟಾಕಿ ನಿಷೇಧಿಸುವುದರ ಬಗ್ಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿನ್ನೆ ತಿಳಿಸಿದ್ದಾರೆ.

ರಾಜ್ಯದಲ್ಲೂ ಕೊರೊನಾ ನಿರ್ವಹಣೆ ಹಿನ್ನೆಲೆ ಯಾವುದೇ ನಿಯಮಗಳ ಸಡಿಲಿಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಪಟಾಕಿ ನಿಷೇಧಿಸಬೇಕೆ, ಬೇಡವೆ ಎಂಬ ಬಗ್ಗೆ ಸಮಿತಿ ರಚಿಸಿದ್ದು, ಇನ್ನೆರಡು ದಿನಗಳಲ್ಲಿ ತಜ್ಞರು ವರದಿ ನೀಡಲಿದ್ದಾರೆ ಅದರ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದರು. ಸದ್ಯ ಕರ್ನಾಟಕದಲ್ಲೂ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ಎನ್‌ಜಿಟಿ ನೋಟಿಸ್ ನೀಡಿದೆ.


ಇದನ್ನೂ ಓದಿ: ಬಿಹಾರ; ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ, ತಜ್ಞರ ಅನುಮಾನ!

LEAVE A REPLY

Please enter your comment!
Please enter your name here