ಕೊರೊನಾ ಮೂರನೇ ಅಲೆಯಲ್ಲಿ ತೆಲಂಗಾಣದಲ್ಲಿ ಸಾವುಗಳು ಸಂಭವಿಸುವ ಕುರಿತು ಭೀತಿ ಸೃಷ್ಟಿಸುವ ಹೇಳಿಕೆ ನೀಡಿದ ಟೆಲಿವಿಷನ್ ಪ್ಯಾನಲಿಸ್ಟ್ ವಿರುದ್ಧ ಕ್ರಮಕೈಗೊಳ್ಳುವಂತೆ ತೆಲಂಗಾಣ ಸರ್ಕಾರ ಪೊಲೀಸರಿಗೆ ದೂರು ನೀಡಿದೆ.
ಕೆಮಿಕಲ್ ಎಂಜಿನಿಯರ್ ಆಗಿರುವ ಪರುಚುರಿ ಮಲ್ಲಿಕ್ ವಿರುದ್ಧ ತೆಲಂಗಾಣ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಡಾ.ಜಿ.ಶ್ರೀನಿವಾಸ್ ರಾವ್ ಅವರು ದೂರು ದಾಖಲಿಸಿದ್ದಾರೆ. ಟಿವಿ ಪ್ಯಾನಲಿಸ್ಟ್ ಆಗಿರುವ ಮಲ್ಲಿಕ್ ಸುದ್ದಿ ಚಾನೆಲ್ ಒಂದರ ನೇರ ಪ್ರಸಾರದ ಚರ್ಚೆಯಲ್ಲಿ, ಕೊರೊನಾ ಮೂರನೇ ಅಲೆಯಲ್ಲಿ ತೆಲಂಗಾಣದ ಪ್ರತಿಯೊಂದು ಮನೆಯಲ್ಲಿಯೂ ಸಾವುಗಳು ದಾಖಲಾಗುತ್ತವೆ ಎಂದು ಹೇಳಿದ್ದರು.
ಮಲ್ಲಿಕ್ ಅವರು ಮಾಧ್ಯಮದಲ್ಲ ಹೇಳಿರುವ ಹೇಳಿಕೆಗಳು ವೈದ್ಯಕೀಯ ನೀತಿಶಾಸ್ತ್ರದ ವಿಷಯದಲ್ಲಿ ಹೆಚ್ಚು ಆಕ್ಷೇಪಾರ್ಹವಾಗಿವೆ. ಜೊತೆಗೆ ಸಾಮಾನ್ಯ ಜನರಲ್ಲಿ ಭೀತಿ ಉಂಟುಮಾಡುತ್ತದೆ” ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕರು ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತೆಲಂಗಾಣ: 40,000 ಕೋಟಿ ಸಾಲವಿದ್ದರೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ
ಶ್ರೀನಿವಾಸ ರಾವ್ ಅವರು ತಮ್ಮ ದೂರಿನಲ್ಲಿ, ಮಲ್ಲಿಕ್ ವಿಷಯ ತಜ್ಞರಲ್ಲ. ತಮ್ಮ ಹೇಳಿಕೆಯಿಂದ ಸುಳ್ಳು ಭೀತಿ ಸೃಷ್ಟಿಸಿರುವುದಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54 ರ ಅಡಿಯಲ್ಲಿ ಮಲ್ಲಿಕ್ ವಿರುದ್ಧ ಕ್ರಮಕೈಗೊಳ್ಳಲು ಕೋರಿದ್ದಾರೆ. ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಕೊರೊನಾ ಮೂರನೇ ಅಲೆಯಿಂದ ಕುಟುಂಬಗಳು ಅಥವಾ ಮಕ್ಕಳ ಮೇಲೆ ಆಗುವ ಪರಿಣಾಮದ ಬಗ್ಗೆ ಜಾಗತಿಕವಾಗಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಕೂಡ ಅನುಭವ / ವೈಜ್ಞಾನಿಕ ಮುನ್ಸೂಚನೆ ನೀಡಿಲ್ಲ” ಎಂದು ದೂರಿನಲ್ಲಿ ಹೇಳಲಾಗಿದೆ. ಆಧಾರರಹಿತ ಮತ್ತು ಯಾವುದೇ ವೈಜ್ಞಾನಿಕ ಬೆಂಬಲವಿಲ್ಲದ ವದಂತಿಗಳನ್ನು ಅನಗತ್ಯವಾಗಿ ಹರಡುವುದು ಖಂಡಿತವಾಗಿಯೂ ಸಾಮಾನ್ಯ ಜನರಿಗೆ ಭೀತಿ ಉಂಟುಮಾಡುತ್ತದೆ ಎಂದು ಹೇಳಲಾಗಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ರಾವ್, ಈ ವದಂತಿಗಳನ್ನು ನಂಬಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ. ಆಸ್ಪತ್ರೆಯ ಹಾಸಿಗೆಗಳು, ಔಷಧಿಗಳು, ಆಮ್ಲಜನಕ ಮತ್ತು ಮಾನವಶಕ್ತಿಯ ವಿಷಯದಲ್ಲಿ ರಾಜ್ಯವು ಉತ್ತಮವಾಗಿ ಸಜ್ಜುಗೊಂಡಿರುವುದರಿಂದ ಅಪ್ಪಳಿಸಲಿರುವ ಮೂರನೇ ಅಲೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಭೂ ಕಬಳಿಕೆ ಆರೋಪದಿಂದ ಟಿಆರ್‌ಎಸ್ ತೊರೆದಿದ್ದ ಮಾಜಿ ಸಚಿವ ಬಿಜೆಪಿ ಸೇರ್ಪಡೆ