Homeಕರೋನಾ ತಲ್ಲಣಕೋವಿಡ್-19; ಆದ ಎಡವಟ್ಟುಗಳು ಮತ್ತು ಬೇಕಿರುವ ಎಚ್ಚರ: ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ

ಕೋವಿಡ್-19; ಆದ ಎಡವಟ್ಟುಗಳು ಮತ್ತು ಬೇಕಿರುವ ಎಚ್ಚರ: ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ

- Advertisement -
- Advertisement -

“ನೋ ಪ್ಲ್ಯಾನಿಂಗ್ ಮೀನ್ಸ್ ಪ್ಲ್ಯಾನಿಂಗ್ ಫಾರ್ ಡಿಸ್ಟ್ರಕ್ಷನ್”, ಎನ್ನುವ ಆಂಗ್ಲ ಭಾಷೆಯ ಮಾತೊಂದಿದೆ. ಕೋವಿಡ್-19 ಇಂದು ಜಗತ್ತಿನಾದ್ಯಂತ ಹುಟ್ಟಿಸಿರುವ ತಲ್ಲಣಗಳ ಬೇಗುದಿಗೆ ಪರಿಹಾರದ ತಣ್ಣೀರೆರೆಯುವ ನಿಟ್ಟಿನಲ್ಲಿ ಭಾರತದ ಪ್ರಸ್ತುತ ಒಕ್ಕೂಟ ಸರ್ಕಾರ ಕೈಗೊಂಡ ಕ್ರಮಗಳ ಕುರಿತಂತೆ ಹೇಳುವುದಾದರೆ ಈ ಮಾತು ನಿಜ ಎನ್ನಬಹುದು.

ಕಳೆದ ವರ್ಷ ಕೊರೊನಾ ಮಹಾಮಾರಿಯ ಮೊದಲ ಅಲೆ ತಂದೆಳೆದ ದುರಂತಗಳನ್ನು ನಿರ್ವಹಿಸುವಲ್ಲಿ ಆದ ಎಡವಟ್ಟುಗಳ ಜೊತೆಗೆ, ದೇಶದ ಮತ್ತು ಜಾಗತಿಕ ವಲಯದ ತಜ್ಞರು ಕೊಟ್ಟ ವರದಿ ಮತ್ತು ನೀಡಿದ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣಕ್ಕೆ ಇಂದು ದೇಶದಾದ್ಯಂತ ನಗರ-ಪಟ್ಟಣಗಳನ್ನು ವ್ಯಾಪಿಸಿ, ದಾಟಿ ಹಳ್ಳಿ ಹಳ್ಳಿಗಳಿಗೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಕಾರಣ ಎಲ್ಲೆಂದರಲ್ಲಿ ಹೆಣಗಳ ರಾಶಿ ಬೀಳುತ್ತಿವೆ. ಅವುಗಳನ್ನು ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲೂ ಸಾಧ್ಯವಾಗದೆ, ಗಾಯದ ಮೇಲೆ ಬರೆ ಎಳೆಸಿಕೊಂಡಂತೆ ಸ್ಮಶಾನಗಳ ಮುಂದೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ವಾರಸುದಾರರದ್ದಾಗಿದೆ. ಬದುಕಿಗೆ ಆಸರೆಯಾದವರನ್ನು ಕಳೆದುಕೊಂಡು ಉಕ್ಕಿ ಬರುವ ದುಃಖವನ್ನು ಎದೆಗಿಳಿಸಿ ರೋಗದ ಸೋಂಕು ತಮಗೆಲ್ಲಿ ತಗುಲೀತು ಎನ್ನುವ ಭಯದಲ್ಲಿ ನಿಂತವರ ದೃಶ್ಯ ಸಾಮಾನ್ಯವಾಗಿದೆ. ಶವಗಳನ್ನು ಸುಡುವ ಸಂಪ್ರದಾಯ ಹೆಚ್ಚಾಗಿ ಇರುವ ಉತ್ತರ ಭಾರತದಲ್ಲಂತೂ ಸುಡಲು ಕಟ್ಟಿಗೆ ಸಾಲದೆ ಅರೆಬೆಂದ ಹೆಣಗಳನ್ನು ಗಂಗಾ ನದಿಗೆ ಎಸೆಯುತ್ತಿದ್ದು, ತೇಲುವ ಹೆಣಗಳ ರಾಶಿ 1943ರ ಬಂಗಾಲದ ಭೀಕರ ಬರಗಾಲದ ದಾರಣ ಚಿತ್ರವನ್ನು ಕಣ್ಮುಂದೆ ತರುತ್ತದೆ.

ಸುಮಾರು 36 ಕೋಟಿಯಷ್ಟಿದ್ದ ದೇಶದ ಅಂದಿನ ಒಟ್ಟು ಜನಸಂಖ್ಯೆಯಲ್ಲಿ 20ರಿಂದ 30 ಲಕ್ಷ ಜನ ಪ್ರಾಣ ಕಳೆದುಕೊಂಡ ಆ ದುಃಸ್ಥಿತಿಗೆ ಕಾರಣ ಕೇವಲ ಭೌಗೋಳಿಕ ಅಂಶಗಳಷ್ಟೇ ಅಗಿರದೆ ಬಹುಮುಖ್ಯವಾಗಿ ಅಂದಿನ ಬ್ರಿಟಿಷ್ ಆಡಳಿತದ ವೈಫಲ್ಯಗಳೂ ಕಾರಣವಾಗಿದ್ದವು. ಅದರಲ್ಲೂ ಅಂದಿನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್‌ನ ದ್ವೇಷದ ಕ್ರಮಗಳು ಕಾರಣ ಎನ್ನುವದನ್ನು ಇತ್ತೀಚಿನ ಹಲವು ಅಧ್ಯಯನಗಳು ಗುರುತಿಸಿವೆ. ಭಾರತದ ಅಂದಿನ ಸಂಪನ್ಮೂಲಗಳನ್ನು ಬಳಸಿ ಹಸಿದು ತತ್ತರಿಸುವ ಹೊಟ್ಟೆಗಳಿಗೆ ಅನ್ನ, ಆಹಾರ ಧಾನ್ಯಗಳನ್ನು ಕೊಳ್ಳುವ ಬದಲಾಗಿ, ಎರಡನೇ ಮಹಾಯುದ್ಧದ ಕಾರಣಕ್ಕೆ ಭಾರತದ ಹೊರಗೆ ಬಳಕೆ ಮಾಡಿದ್ದಲ್ಲದೆ, “ಭಾರತೀಯರು ಇಲಿಗಳಂತೆ ಹೆಚ್ಚುತ್ತಿದ್ದಾರೆ. ಅಲ್ಲಿ ಜನ ಹಸಿವಿನಿಂದ ಸಾಯುತ್ತಿರುವುದು ನಿಜವಾಗಿದ್ದರೆ ಎಂ.ಕೆ. ಗಾಂಧಿ ಇನ್ನೂ ಬದುಕಿದ್ದಾರೆ ಹೇಗೆ?”, ಎನ್ನುವ ಆತನ ಧಾರ್ಷ್ಟ್ಯದ ಮಾತುಗಳು ಇತಿಹಾಸದಲ್ಲಿ ದಾಖಲಾಗಿವೆ. ಜನ ಅಂದು
ಬೀದಿ ಬೀದಿಗಳಲ್ಲಿ ಹೊಟ್ಟೆಗಿಲ್ಲದೆ ಬಿದ್ದು ಸಾಯುವುದನ್ನು ತಪ್ಪಿಸಲು ಹಣದ ಕೊರತೆಯೇನೂ ಇರಲಿಲ್ಲ. ಬದಲಾಗಿ ಸಂದರ್ಭವನ್ನು ನಿರ್ವಹಿಸುವ ಮಾನವೀಯ ಮನಸ್ಸು ಚರ್ಚಿಲ್ ಮಹಾಶಯನಿಗಿರಲಿಲ್ಲ. ಆದ್ದರಿಂದ ಆಹಾರ ಕೊರತೆ ನೀಗಿಸಲು ಸಹಾಯ ಕೋರಿ ಇಲ್ಲಿನ ವೈಸರಾಯ್ ಸಲ್ಲಿಸಿದ ಮನವಿ ಕಸದಬುಟ್ಟಿ ಸೇರುತ್ತದೆ.

ಭಾರತದ ಇವತ್ತಿನ ಸಂದರ್ಭದಲ್ಲಿ ಈ ಘಟನೆ ನೆನಪಾಗುತ್ತದೆ ಏಕೆಂದರೆ, ಸಾವು-ನೋವುಗಳು ಕೇಕೆ ಹಾಕುವ ಎಂಥಹುದೇ ಗಳಿಗೆಗಳಲ್ಲಿ ಆ ದೇಶ, ರಾಜ್ಯಗಳ ಆಡಳಿತದ ಚುಕ್ಕಾಣಿ ಹಿಡಿದ ಪ್ರಭುತ್ವಗಳ ಹೊಣೆಗಾರಿಕೆ ಬಹು ಮುಖ್ಯವಾದದ್ದು. ಪರಿಹಾರ ಕ್ರಮಗಳ ನಿರ್ವಹಣೆಯಲ್ಲಿನ ಪ್ರಾಮಾಣಿಕತೆ, ಪಾರದರ್ಶಕತೆ, ಪರಿಪಕ್ವತೆ ಮತ್ತು ಜಾಣ್ಮೆಗಳೇ ಸಂತ್ರಸ್ತ ಜೀವಗಳಿಗೆ ಮರುಜೇವಣಿಗೆ. ಅವತ್ತಿನದು ವಸಾಹತುಶಾಹಿ ಪ್ರಭುತ್ವ. ಇವತ್ತಿನದು ಪ್ರಜಾಪ್ರಭುತ್ವ ಸರ್ಕಾರ. ಒಂದಕ್ಕೊಂದು ಹೋಲಿಕೆ ಸಲ್ಲದ್ದಾದರೂ ಜನಕಲ್ಯಾಣ ಕೇಂದ್ರಿತ ಆಡಳಿತದ ಮುನ್ನೆಲೆಯಲ್ಲಿ ನೆನಪು ಹಿನ್ನಲೆಗೆ ಹೋಗದು. ಯಾವುದೇ ಕಾಲದಲ್ಲಿ ಸುಸ್ಥಿರ ಅಭಿವೃದ್ಧಿ ಎಂದರೆ ಜನಪರ ಆಡಳಿತ ಮಾತ್ರ. ಜನಪರ ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕನಿಷ್ಟ ಜೀವನಾವಶ್ಯಕ ಸೌಲಭ್ಯಗಳು ದೊರಕಿಸುವ ಮನಸ್ಥಿತಿ ಮತ್ತು ವ್ಯವಸ್ಥೆ. ಉದ್ಯೋಗ, ಅನ್ನ, ವಸತಿ, ಅಕ್ಷರ, ಆರೋಗ್ಯಗಳೇ ಜನರ ಮೂಲ ಜೀವನಾವಶ್ಯಕತೆಗಳು. ದೇವರು, ಧರ್ಮ, ಜಾತಿ, ಮತ ಮುಂತಾದವುಗಳು ನಂತರದ ಭಾವನಾತ್ಮಕ ಅಗತ್ಯಗಳು ಮಾತ್ರ. ಇವೆರಡನ್ನೂ ಒಳಗೊಂಡ ಮತ್ತು ಅವುಗಳಲ್ಲಿನ ಪರಸ್ಪರ ಪ್ರಭಾವಿಸುವ ಅಥವಾ ಪ್ರಭಾವಿಸಲ್ಪಡುವ ಬಿತ್ತುಗಳೇ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು. ಇವುಗಳ ಸಮಗ್ರ ಬೆಳವಣಿಗೆಯ ಗತಿಯೇ ಅಭಿವೃದ್ಧಿಯ ಸ್ಥಿತಿ ವಿನ್ಯಾಸಗಳು. ಇಂಥ ಸುಸ್ಥಿರ ಅಭಿವೃದ್ಧಿ ವಿನ್ಯಾಸಗಳ ನಿರಂತರ ನಿರ್ವಹಣೆ ಅಲ್ಲಿನ ಪ್ರಭುತ್ವದ ಕ್ರಿಯಾಶೀಲ ಹೊಣೆಗಾರಿಕೆ.

ಈ ಹೊಣೆಗಾರಿಕೆಯನ್ನು ಮಾರುಕಟ್ಟೆ ಶಕ್ತಿಗಳ ವಶಕ್ಕೆ ಒಪ್ಪಿಸುವುದೆಂದರೆ ಅದು ದುರ್ಬಲರ ದುಃಸ್ಥಿತಿಗೆ ಮಾಡಿಕೊಡುವ ದಾರಿಯಲ್ಲದೆ ಬೇರೇನಿಲ್ಲ. ಮುಕ್ತ ಮಾರುಕಟ್ಟೆ ಇರುವುದೇ ಸಮಾನ ಶಕ್ತಿಯ ಭಾಗಿದಾರರಿಗೆ ಮಾತ್ರ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅತಿ ಅಸಮಾನತೆಗಳಿರುವ ಭಾರತದಲ್ಲಿ ಬೃಹತ್ ಬಂಡವಾಳಶಾಹಿ ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪತ್ತು ಸೃಷ್ಟಿಕಾರರೆಂದು ಓಲೈಸುವ ನಿರ್ಧಾರದ ಸರ್ಕಾರಗಳ ಆಡಳಿತ ಉಂಟುಮಾಡಬಹುದಾದ ದುಃಸ್ಥಿತಿಗಳಿಗೆ ಇವತ್ತಿನ ಕೋವಿಡ್-19ರ ನಿರ್ವಹಣೆ ಸಾಕ್ಷಿಯಾಗುತ್ತಿದೆ. ಇಲ್ಲಿ ಮಾಡಿಕೊಂಡ ಎಡವಟ್ಟುಗಳೆಂದರೆ ನಾವು ಘೋಷಿಸಿಕೊಂಡದ್ದನ್ನು ನಾವೇ ನಿರ್ವಹಿಸದಿರುವುದು. ಕೊಟ್ಟ ಭರವಸೆಗಳನ್ನು ಭ್ರಮೆಯಾಗಿಸುತ್ತಿರುವುದು. ಆಡಳಿತವೊಂದರ ತಪ್ಪು ನಿರ್ಧಾರಗಳು ಅಥವಾ ಸರಿ ನಿರ್ಧಾರಗಳ ತಪ್ಪು ನಿರ್ವಹಣೆ, ಎರಡರ ಪರಿಣಾಮ ಒಂದೇ- ಸಾಮಾನ್ಯ ಜನರಿಗೆ ತಂದೊಡ್ಡುವ ಸಂಕಷ್ಟಗಳು.

ಆದ ಎಡವಟ್ಟುಗಳು

ಮೊದಲನೆಯದಾಗಿ, ಕಳೆದ ವರ್ಷ ಜನವರಿ, 1ರಂದೇ ಮೊದಲ ಪ್ರಕರಣ ವರದಿಯಾದರೂ ಮಾರ್ಚ್ ಮೂರನೇ ವಾರದವರೆಗೂ ಯಾವುದೇ ಸ್ಪಷ್ಟ ಪರಿಹಾರ ಕ್ರಮಗಳಿಗೆ ಮುಂದಾಗದೆ, ಕೇವಲ ನಾಲ್ಕು ಗಂಟೆಗಳ ಮುನ್ಸೂಚನೆಯಲ್ಲಿ ರಾಜ್ಯ ಸರ್ಕಾರಗಳ ಜೊತೆ ಚರ್ಚೆಯೂ ಇಲ್ಲದೆ ಪೂರ್ಣ ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಿದ್ದು. ನಿದ್ದೆಯ ಮಂಪರಿನಲ್ಲಿದ್ದ ರಾತ್ರಿ ಪ್ರಯಾಣಿಕರನ್ನು ಬಸ್ಸಿನಲ್ಲಿಯೇ ಬಿಟ್ಟು ಚಾಲಕ ಇದ್ದಕ್ಕಿದ್ದಂತೆ ಎದ್ದು ಹೋದ ಸ್ಥಿತಿ. ಇದ್ದಕ್ಕಿದ್ದಂತೆ ಕೈಗಾರಿಕೆ, ಸಾರಿಗೆ, ವ್ಯಾಪಾರ, ವಾಣಿಜ್ಯ, ಶಿಕ್ಷಣ, ಸಭೆ-ಸಮಾರಂಭಗಳು, ಮದುವೆ-ಮುಂಜಿಗಳು ನಿಂತು ಹೋದದ್ದರಿಂದ ಆದ ಅನಾನುಕೂಲಗಳಿಗೆ ಲೆಕ್ಕವಿಲ್ಲ. ಊರು ತಲುಪುವ ಮೊದಲೇ ಉಸಿರು ಕಳೆದುಕೊಂಡ ವಲಸೆ ಕಾರ್ಮಿಕರು, ಯಾರೋ ದಾನಿ-ಧರ್ಮಿಗಳು ಕೊಟ್ಟ ತುತ್ತು ಅನ್ನ ಬಾಟಲ್ ನೀರಿನಲ್ಲೇ ಜೀವ ಹಿಡಿದುಕೊಂಡು ಊರು ತಲುಪಿದ ಲಕ್ಷಾಂತರ ಕೂಲಿಕಾರರು, ನಿಗದಿತ ಸಮಯದಲ್ಲಿ ಕಟ್ಟಡ-ರಸ್ತೆ ಕಾಮಗಾರಿಗಳನ್ನು ಮುಗಿಸಲು ಸಾಧ್ಯವಾಗದೆ ನಷ್ಟಕ್ಕೆ ಗುರಿಯಾದ ಕಾಂಟ್ರಾಕ್ಟ್‌ದಾರರು ಪಟ್ಟ ಪಡಿಪಾಟಲು ಹೇಳತೀರದ್ದು.

ಟೆಸ್ಟ್, ಟ್ರ್ಯಾಕ್, ಟ್ರೇಸ್ ಮತ್ತು ಟ್ರೀಟ್ ಎನ್ನುವ ಚಟುವಟಿಕಾ ಸರಣಿಯನ್ನು ಸರಿಯಾಗಿ ನಿರ್ವಹಿಸಿದ್ದರೆ ಇವತ್ತಿನ ದುಃಸ್ಥಿತಿ ನಿಜಕ್ಕೂ ಇಷ್ಟೊಂದು ತೀವ್ರವಾಗಿರುತ್ತಿರಲಿಲ್ಲ.

ಎರಡನೆಯದಾಗಿ, ಲಾಕ್‌ಡೌನ್ ಅವಧಿಯಲ್ಲಿ ಸೋಂಕು ಪರೀಕ್ಷೆ ಮತ್ತು ಚಿಕಿತ್ಸೆಗಳಿಗೆ ಬೇಕಾಗುವ ಸುರಕ್ಷತಾ ಉಡುಪು, ವೆಂಟಿಲೇಟರ್, ಕಾಯ್ದಿರಿಸುವ ಕೊಠಡಿ, ವೈದ್ಯರು ಮತ್ತು ಸಿಬ್ಬಂದಿವರ್ಗದವರನ್ನು ಸಜ್ಜುಗೊಳಿಸಿಕೊಳ್ಳಬಹುದಿತ್ತು. ಸರಿಯಾದ ಸುರಕ್ಷಾ ಕ್ರಮಗಳಿಲ್ಲದೆ ಎಷ್ಟೋ ಜನ ವೈದ್ಯರು ಪ್ರಾಣ ತೆತ್ತದ್ದೂ ಉಂಟು. ಪ್ರಮುಖವಾಗಿ, ಸೋಂಕು ಪರೀಕ್ಷಾ ಪ್ರಯೋಗಾಲಯಗಳನ್ನು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಒಂದೊಂದಾದರೂ ಅಥವಾ ಸಂಚಾರಿ ಪ್ರಯೋಗಾಲಯಗಳನ್ನು ಆರಂಭಿಸಲು ಮುಂದಾಗಬೇಕಿತ್ತು. ಈಗ ವರ್ಷ ಕಳೆದರೂ ಪರೀಕ್ಷಾ ಕಿಟ್‌ಗಳ ಮತ್ತು ಪ್ರಯೋಗಾಲಯಗಳ ಕೊರತೆ ಎದ್ದು ಕಾಣುತ್ತಿದೆ. ಹಳ್ಳಿಗಳಲ್ಲಿ ಜನ ಸೋಂಕಿನಿಂದ ನರಳುತ್ತಿದ್ದರೂ 30-60 ಕಿಲೋಮೀಟರ್ ದೂರದ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದೆ, ಮನೆಯಲ್ಲೇ ಸ್ವಯಂ ಚಿಕಿತ್ಸೆ ಪಡೆಯುತ್ತಿದ್ದು ಬರುವ ದಿನಗಳಲ್ಲಿ ರೋಗ ಉಲ್ಬಣಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದನ್ನು ಇತ್ತೀಚೆಗೆ ಜಾಗತಿಕ ಆರೋಗ್ಯ ಸಂಸ್ಥೆಯ ಹಿರಿಯ ಸಂಶೋಧಕರೂ ಮತ್ತು ಭಾರತೀಯ ಮಹಿಳೆಯೇ ಆದ ಸೌಮ್ಯಾ ಸ್ವಾಮಿನಾಥನ್ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮಧ್ಯೆ ಸೋಂಕಿನ ಧನಾತ್ಮಕ ದರ ಸರಾಸರಿ 20 ದಾಟುತ್ತಿದೆ. ಆದಾಗ್ಯೂ, ಭಾರತದಲ್ಲಿ ಸೋಂಕಿನ ಪರೀಕ್ಷಾ ಪ್ರಮಾಣ ಅತ್ಯಂತ ಕಡಿಮೆ ಇದೆ – ಪ್ರತಿ ದಶಲಕ್ಷ ಜನಸಂಖ್ಯೆಗೆ 10.5ರಷ್ಟು. ಇದು ಅಮೆರಿಕ, ಬ್ರಿಟನ್, ಇಟಲಿ ಮುಂತಾದ ದೇಶಗಳಲ್ಲಿ ಸುಮಾರು 1000ಪಟ್ಟು ಹೆಚ್ಚಿದೆ.

ಮೂರನೆಯದಾಗಿ, ಸೋಂಕಿಗೆ ಸಂಬಂಧಪಟ್ಟಂತೆ ಮಾಹಿತಿ ನಿರ್ವಹಣೆಯಲ್ಲಿ ಮತ್ತು ಅಂಕಿ ಅಂಶಗಳನ್ನು ಕ್ರೋಢೀಕರಿಸುವಲ್ಲಿ ತೋರುತ್ತಿರುವ ಅಸಡ್ಡೆ ಮತ್ತು ಪಾರದರ್ಶಕತೆಯ ಕೊರತೆ. ಇದು ಜನಸಾಮಾನ್ಯರನ್ನಷ್ಟೇ ಅಲ್ಲ, ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ತಜ್ಞರನ್ನು, ನೀತಿರೂಪಕರನ್ನು ತಪ್ಪುದಾರಿಗೆಳೆಯುತ್ತಿದೆ.
ತಪ್ಪು ಮಾಹಿತಿ ಅಂಶಗಳನ್ನಾಧರಿಸಿದ ತೀರ್ಮಾನಗಳು ತಪ್ಪಾಗಿಯೇ ಇರುತ್ತವೆ ಎನ್ನುವುದರತ್ತ ಗಮನವಹಿಸದಷ್ಟು ಸಂಬಂಧಪಟ್ಟವರ ಬುದ್ದಿ ಮಂಕಾಗಿವೆ. ಆಸ್ಪತ್ರೆಗಳ ಮೂಲಗಳಿಂದ ಸರ್ಕಾರ ಕೊಡುವ ಅಂಕಿ-ಸಂಖ್ಯೆಗಳಿಗೂ ಅಂತ್ಯಕ್ರಿಯೆ ಜಾಗಗಳಲ್ಲಿ ದೊರೆಯುವ ಲೆಕ್ಕಕ್ಕೂ ತಾಳೆಯೇ ಬರುತ್ತಿಲ್ಲ. ಇದನ್ನು ಬಹುತೇಕ ತಜ್ಞರು ಮತ್ತು ಸಂಶೋಧನಾಧ್ಯಯನ ನಿರತ ಸಂಸ್ಥೆಗಳು ದೃಢಪಡಿಸಿವೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ಘನತೆಗೆ ಚ್ಯುತಿ ತರುತ್ತಿದೆ.

ಇನ್ನೂ ಬೇಸರದ ಸಂಗತಿ ಎಂದರೆ, ಈ ಅಸಂಬದ್ದಗಳನ್ನು ಸರಿಪಡಿಸಿಕೊಳ್ಳುವುದರ ಬದಲಾಗಿ ಸಮರ್ಥಿಸುವ ಧೋರಣೆಯನ್ನು ಸಂಬಂಧಪಟ್ಟ ವಕ್ತಾರರು, ಜೊತೆಗೆ ಪ್ರಭುತ್ವದ ಸಮರ್ಥಕರು ಮಾಡುತ್ತಿರುವುದು. ಈ ರೋಗ ಕೇವಲ ಶಾರೀರಿಕವಾದ ರೋಗವಾಗಿಯಷ್ಟೇ ಇರದೆ ಸಾಂಕೇತಿಕವಾಗಿ ಪ್ರಭುತ್ವದ ರೋಗವಾಗಿಯೂ ಗೋಚರಿಸುತ್ತಿದೆ. ಸದ್ಯ ದೇಶದಲ್ಲಿ ಸಮುದಾಯ ರೋಗನಿರೋಧಕಶಕ್ತಿ ಹೆಚ್ಚಿ ರೋಗಿಗಳ ಸಂಖ್ಯೆ ಕಡಿಮೆಯಾಗಬೇಕಾದರೆ ದೇಶದ ಒಟ್ಟು ಜನಸಂಖ್ಯೆಯ ಶೇ.50ರಷ್ಟಾದರೂ ಲಸಿಕೆ ಹಾಕಿಸಿಕೊಳ್ಳಬೇಕೆನ್ನುವುದು ತಜ್ಞರ ಅಭಿಪ್ರಾಯ. ಇದನ್ನು ಒಕ್ಕೂಟ ಸರ್ಕಾರ ಒಪ್ಪಿಕೊಂಡಿದೆ ಕೂಡ. ಆದರೆ, ಈ ಬಗೆಗಿನ ಸ್ಪಷ್ಟ ಕ್ರಮಗಳು ಏನೆನ್ನುವುದು ಯಾರಿಗೂ ಸ್ಪಷ್ಟವಿಲ್ಲ. 18ರಿಂದ 45 ವಯೋಮಾನದವರಿಗೆ ಲಸಿಕೆ ಹಾಕುವ ಕಾರ್ಯಯೋಜನೆ ಅಂದುಕೊಂಡ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿಲ್ಲ. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂವಹನ-ಸಂಯೋಜನೆಯ ಕೊರತೆ ಎದ್ದು ಕಾಣುತ್ತಿದೆ.

ನಾಲ್ಕನೆಯದಾಗಿ, ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಬಗ್ಗೆ. ಈ ಜವಾಬ್ದಾರಿಯನ್ನು ಮೊದಲು ಸಂಪೂರ್ಣವಾಗಿ ಒಕ್ಕೂಟ ಸರ್ಕಾರ ವಹಿಸಿಕೊಂಡು ವ್ಯವಹರಿಸಿತ್ತು. ಇದೀಗ ಕರ್ನಾಟಕ ಸರ್ಕಾರ ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿಸುವುದಾಗಿ ಹೇಳಿಕೊಂಡಿದೆ. ಡಾ. ಅಶ್ವತ್ಥ ನಾರಾಯಣ್ ಅವರು ಕೋವಿಡ್ ಟಾಸ್ಕ್‌ಫೋರ್‍ಸ್ ಮುಖ್ಯಸ್ಥರು. ಅವರು ಹೇಳಿದ್ದು ಆರೋಗ್ಯ ಮಂತ್ರಿ ಡಾ. ಸುಧಾಕರ್ ಅವರಿಗೆ ತಿಳಿದಿರಲಿಲ್ಲವಂತೆ. ಹೀಗಿದೆ ಸಚಿವರುಗಳ ನಡುವಿನ ಹೊಂದಾಣಿಕೆ. ಇಂಥ ಸಂದರ್ಭದಲ್ಲಿ ಭಾರತ ಸರ್ಕಾರವೇ ಇಡೀ ದೇಶಕ್ಕೆ ಬೇಕಾದ ಲಸಿಕೆಯನ್ನು ಖರೀದಿಸಿ ರಾಜ್ಯಗಳಿಗೆ ವಿತರಿಸಬಹುದಿತ್ತು. ಇಲ್ಲಿ ಮುಕ್ತ ಮಾರುಕಟ್ಟೆ ಪ್ರೇರಣೆಗಳು ಮತ್ತು ಖಾಸಗೀಕರಣದ ಕ್ರಿಯಾಶೀಲತೆ ಎದ್ದು ಕಾಣುತ್ತವೆ.

ಲಸಿಕೆ ಉತ್ಪಾದನೆಗಾಗಿ ಕೇವಲ ಎರಡೇ ಎರಡು ಉತ್ಪಾದನಾ ಕಂಪನಿಗಳನ್ನು ಆಯ್ದುಕೊಂಡದ್ದು ನಿಜಕ್ಕೂ ಸರಿಯಲ್ಲ. ಕೇಂದ್ರ ಸರ್ಕಾರಕ್ಕೊಂದು ಬೆಲೆ, ರಾಜ್ಯಗಳಿಗೆ ಮತ್ತೊಂದು, ಖಾಸಗಿಯವರಿಗೆ ಇನ್ನೊಂದು! ಜೊತೆಗೆ, ಖಾಸಗಿ ಕಂಪನಿಗಳಿಗೆ ಸವಾಲೆಸೆಯುವಂತೆ ಔಷಧಿ ಉತ್ಪಾದಿಸುವ ಕಂಪನಿಗಳು ಸಾರ್ವಜನಿಕ ವಲಯದಲ್ಲೇ ಇವೆ. ಹಿಂದೂಸ್ಥಾನ್ ಆಂಟಿಬಯೋಟಿಕ್ ಲಿ., ಕರ್ನಾಟಕ ಆಂಟಿಬಯೋಟಿಕ್ ಲಿ., ರಾಜಸ್ಥಾನ್ ಆಂಟಿಬಯೋಟಿಕ್ ಲಿ., ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸಿಟಿಕಲ್ಸ್ ಲಿ., ಇವುಗಳಿಗೆ ಅವಕಾಶ ನೀಡಬಹುದಿತ್ತು. ಪೂನಾದ ಸಿರಮಿಕ್ಸ್ ಇಂಡಿಯಾ ಮತ್ತು ಹೈದ್ರಾಬಾದಿನ ಬಯೋಟೆಕ್ ಕಂಪನಿಗಳಿಗಿರುವ ಸಾಮರ್ಥ್ಯ, ಸಾಧ್ಯತೆಗಳು ಕಂಪನಿಗಳಿಗಿರಲಿಲ್ಲವೆ? ಇದನ್ನೆಲ್ಲ ಕಡೆಗಣಿಸಿ ಭಾರತ ಇಡೀ ಜಗತ್ತಿಗೇ ಲಸಿಕೆ ಪೂರೈಸುವಷ್ಟು ಶಕ್ತಿ ಹೊಂದಿದೆ ಎಂದು ಬೀಗಿದ್ದು ನಗೆಪಾಟಲಾಗಿದೆ.

ಕೊನೆಯದಾಗಿ, ತಜ್ಞರ ವರದಿಗಳನ್ನು ಗಂಭೀರವಾಗಿ ಪರಿಗಣಿಸದೆ ಇದ್ದದ್ದು ಮತ್ತು ಈ ಸೋಂಕಿನಿಂದ ನಲುಗಿದ ಜಗತ್ತಿನ ಇತರೆ ರಾಷ್ಟ್ರಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ, ಮುಂಬರುವ ದಿನಗಳಲ್ಲಿ ರೂಪಾಂತರಿ ವೈರಸ್ ಉಂಟುಮಾಡಬಹುದಾದ ಅನಾಹುತಗಳನ್ನು ತಡೆಯಲು ಮುಂಜಾಗ್ರತಾ ಕ್ರಮಗಳಾಗಿ ಆಸ್ಪತ್ರೆಗಳನ್ನು ಸಜ್ಜುಗೊಳಿಸುವ, ಪರಿಕರಗಳನ್ನು ಕೊಳ್ಳುವ, ಕೊಂಡ ಉಪಕರಣಗಳನ್ನು ಜೋಡಿಸಿಕೊಳ್ಳುವ ಮತ್ತು ಅವುಗಳನ್ನು ನಿರ್ವಹಿಸಲು ಬೇಕಾದ ಸಿಬ್ಬಂದಿಯನ್ನು ಸಜ್ಜುಗೊಳಿಸಿಕೊಳ್ಳಲು ತಪ್ಪಿದ್ದು. ಜೊತೆಗೆ, ಕೋವಿಡ್-19ರ ಎಲ್ಲ ಮಾರ್ಗಸೂಚಿಗಳನ್ನು ಮೀರಿ ಚುನಾವಣಾ ರ್‍ಯಾಲಿಗಳನ್ನು, ಬಹಿರಂಗ ಗುಂಪು ಪ್ರಚಾರಗಳನ್ನು ಮಾಡಿದ್ದು. ಅರ್ಥವ್ಯವಸ್ಥೆಯನ್ನು ಮರುನಿರ್ಮಾಣ ಮಾಡಲು ಹಾಕಿಕೊಂಡ ಆತ್ಮನಿರ್ಭರ ಭಾರತ ಅಭಿಯಾನವನ್ನು ಘೋಷಿತ ನೆಲೆಯಲ್ಲಿ, ನಿರ್ಧರಿತ
ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗದಿದ್ದುದು. ಇದಕ್ಕಾಗಿ ಘೋಷಿತವಾದ ರೂ. 20 ಲಕ್ಷ ಕೋಟಿ ಪ್ಯಾಕೇಜ್ ಹಣ ಯಾವ ಮೂಲದಿಂದ ಎಷ್ಟು ಬಂತು ಮತ್ತು ಯಾವ ಬಾಬ್ತುಗಳಿಗೆ ಎಷ್ಟು ಖರ್ಚಾಗಿದೆ ಎನ್ನುವುದು ಸ್ಪಷ್ಟವಿಲ್ಲದಿರುವುದು. 2021-22ರ ಕೇಂದ್ರ ಮುಂಗಡಪತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಗಮನಕ್ಕೆ ಬರದಿರಲಾರದು. ಲಸಿಕೆ ಉತ್ಪಾದನೆಗಾಗಿ ಪ್ರಸ್ತಾಪಿಸಿರುವ 35 ಸಾವಿರ ಲಕ್ಷ ಕೋಟಿ ರೂಪಾಯಿಗಳು ಯಾವ ಇಲಾಖೆಯಿಂದ ಎಷ್ಟು ಮತ್ತು ಹೇಗೆ ಖರ್ಚಾಗಲಿದೆ ಎನ್ನುವ ಬಗ್ಗೆ ಸಾಕಷ್ಟು ಅಸ್ಪಷ್ಟತೆಗಳಿವೆ. ಒಟ್ಟಿನಲ್ಲಿ, ಒಕ್ಕೂಟ ಸರ್ಕಾರ ತಾನೇ ಹೇಳಿಕೊಂಡ ಕನಿಷ್ಟ ಸರ್ಕಾರ, ಗರಿಷ್ಠ ಆಡಳಿತ ಎನ್ನುವುದು ತಿರುವು-ಮುರುವಾಗುವಂತೆ ನಡೆದುಕೊಂಡದ್ದು.

ಎಚ್ಚರಿಕೆಯ ಹೆಜ್ಜೆಗಳು

ಈಗ ಕಳೆದ ಒಂದೂವರೆ ವರ್ಷದಿಂದ ಬಹಳಷ್ಟು ನೀರು ಹರಿದಿದೆ. ಇಲ್ಲಿಯವರೆವಿಗೆ ನಡೆದಿರುವ ನಕಾರಾತ್ಮಕ ಮತ್ತು ಸಕಾರಾತ್ಮಕ ಘಟನೆಗಳನ್ನು ಪರಾಮರ್ಶಿಸಿಕೊಂಡು ಎಚ್ಚರಿಕೆಯಿಂದ ತುರ್ತು ಕ್ರಮಗಳಿಗೆ ಮುಂದಾಗಬೇಕಿದೆ. ಅವುಗಳಲ್ಲಿ ಪ್ರಮುಖವಾಗಿ

1. ಈಗ ಯೋಜಿಸಿಕೊಂಡಿರುವಂತೆ ಬರುವ ಡಿಸೆಂಬರ್ ಕೊನೆಯ ಒಳಗಾಗಿ ದೇಶದ ಆರ್ಧದಷ್ಟು ವಿವಿಧ ವಯೋಮಾನದ ಜನರಿಗೆ ಲಸಿಕೆ ಹಾಕುವ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ಇಂಥ ಸೋಂಕು ಸಾಂಕ್ರಾಮಿಕಗಳಿಗೆ ಲಸಿಕೆ ಒಂದೇ ಪರಿಹಾರ ಎನ್ನುವುದು ತಜ್ಞರ ಅಬಿಪ್ರಾಯ ಮತ್ತು ಇದುವರೆವಿಗಿನ ಅನುಭವ.

2. ಲಸಿಕೆ ಒಳಗೊಂಡಂತೆ ಜೀವ ಉಳಿಸುವ ಔಷಧಿಗಳ ಉತ್ಪಾದನೆಗಾಗಿ ಖಾಸಗಿ ವಲಯದ ಸಂಸ್ಥೆಗಳ ಜೊತೆಗೆ ಸಾರ್ವಜನಿಕ ವಲಯದ ಕಂಪನಿಗಳನ್ನು ಬಳಸಿಕೊಳ್ಳಬೇಕು.

3. ಎರಡನೇ ಮಹಾಯುದ್ಧದ ಕಾರಣದಿಂದ ಆದ ಆರೋಗ್ಯ ಹಾನಿಯನ್ನು ಸರಿಪಡಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಜಾರಿಗೆ ತಂದ, “ರಾಷ್ಟ್ರೀಯ ಆರೋಗ್ಯ ಸೇವಾ ಕಾಯಿದೆ-1946” ಮಾದರಿಯಲ್ಲಿ ಕಾಯ್ದೆ ರಚಿಸಿ ಉಚಿತ ಆರೋಗ್ಯ ಸೇವೆ ನೀಡುವುದು ಅತ್ಯಂತ ಸೂಕ್ತ ಎನ್ನುವ ಅಭಿಪ್ರಾಯ ಕೆಲವು ಆರೋಗ್ಯ ತಜ್ಞರದ್ದಾಗಿದೆ. ಜನರ ಆರೋಗ್ಯದ ಹೊಣೆ ಸರ್ಕಾರದ್ದಾಗಬೇಕೇ ಹೊರತು ಮುಕ್ತ ಮಾರುಕಟ್ಟೆ ವಶಕ್ಕೆ ಕೊಡುವುದಲ್ಲ.

4. ರಾಷ್ಟ್ರ ರಾಜಧಾನಿ ದೆಹಲಿ ಒಳಗೊಂಡಂತೆ ಗೋವಾ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮುಂತಾದ ಕಡೆಗಳಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಸತ್ತಿರುವುದು ನಿಜ. ಒಂದು ಅಂದಾಜಿನ ಪ್ರಕಾರ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಆಮ್ಲಜನಕ ಉತ್ಪಾದನಾ ಘಟಕ ತೆರೆಯಲು ಸಾಧ್ಯವಿರುವಾಗ ಅಂತಹ ಘಟಕಗಳನ್ನು ತಾಲ್ಲೂಕಿಗೊಂದರಂತೆ ತೆರೆಯುವುದು ದೊಡ್ಡ ಮೊತ್ತದ ವಿಷಯವೇನೂ ಅಲ್ಲ.

5. ಕರ್ನಾಟಕವೂ ಒಳಗೊಂಡಂತೆ ಬಹಳಷ್ಟು ಕಡೆ ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ವೆಂಟಿಲೇಟರ್‌ಗಳನ್ನು ಒದಗಿಸಲಾಗಿದ್ದರೂ, ಅವುಗಳನ್ನು ನಿರ್ವಹಿಸುವ ತಾಂತ್ರಿಕ ಸಿಬ್ಬಂದಿ ಕೊರತೆಯಿಂದಾಗಿ ಇವತ್ತಿನ ತುರ್ತು ಅಗತ್ಯದ ಸಂದರ್ಭದಲ್ಲೂ ಸದ್ಬಳಕೆಯಾಗದೆ ಧೂಳುಗಟ್ಟಿರುವ ವರದಿಗಳಿವೆ. ಇದರ ನಿರ್ವಹಣೆಗೆ ಬೇಕಾದ ವೈದ್ಯಕೀಯ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಂಡು ಕಾರ್ಯಭಾರವಿಲ್ಲದ ಸಮಯದಲ್ಲಿ ಅವರ ಸೇವೆಯನ್ನು ಅವರ ವೃತ್ತಿಪೂರಕ ಕೆಲಸಗಳಿಗೆ ಬಳಸಿಕೊಳ್ಳಬಹುದು.

6. ದೇಶಾದ್ಯಂತ ಜನಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ನಿಟ್ಟಿನಲ್ಲಿ ಹಾಲಿ ಇರುವ ವೈದ್ಯಕೀಯ ಕಾಲೇಜುಗಳಲ್ಲಿನ ಮೂಲಸೌಲಭ್ಯಗಳನ್ನು ಬಳಸಿಕೊಂಡೇ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು ಸೂಕ್ತ ನಿರ್ಧಾರ. ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾದಲ್ಲಿ ಜನಸಾಮಾನ್ಯರಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಸುಲಭವಾಗಿ ತಲುಪುತ್ತದೆ.

7. ಪ್ರಸ್ತುತ ಸರ್ಕಾರ ಭಾರತೀಯ ವೈದ್ಯ ಪದ್ಧತಿ ಕುರಿತಂತೆ ಹೆಚ್ಚು ಆಸಕ್ತಿ ಹೊಂದಿದ್ದು ಅದನ್ನು ಹೆಚ್ಚು ಜನಪ್ರಿಯಗೊಳಸಲು ಅಲ್ಲಿನ ಶಿಕ್ಞಣ, ತರಬೇತಿ ಮತ್ತು ಚಿಕಿತ್ಸಾ ವಿಧಾನಗಳನ್ನು ಉನ್ನತ ಸಂಶೋಧನೆಗಳ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡರೆ ಜನಸಮ್ಮತಿ ದೊರೆಯುವುದರಲ್ಲಿ ಎರಡು ಮಾತಿಲ್ಲ. ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಹಜ್ಜೆ ಇಡಲು ಇವತ್ತಿನ ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಳ್ಳಬೇಕಿದೆ.

8. ಎಲ್ಲಕ್ಕಿಂತ ಮುಖ್ಯವಾಗಿ, ಶುಶ್ರೂಷಕರನ್ನೂ ಒಳಗೊಂಡಂತೆ ಆರೋಗ್ಯ ಸೇವಾಕ್ಷೇತ್ರದಲ್ಲಿ ಕೆಲಸ ಮಾಡುವ ಪೂರಕ ಸಿಬ್ಬಂದಿಗೆ ವೇತನ ಮತ್ತು ಸಾಮಾಜಿಕ ಭದ್ರತೆಗಳು ಬೇಕಿವೆ. ತಳಹಂತದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಇವತ್ತೂ ಕೂಡ ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯಗಳಿಲ್ಲ. ವೃತ್ತಿ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದಲ್ಲಿ ಅವಲಂಬಿತರಿಗೆ ಸೂಕ್ತ ಪರಿಹಾರ ಕಾಲಮಿತಿಯಲ್ಲಿ ಸಿಗುವಂತೆ ಕ್ರಮಗಳಾಗ ಬೇಕಿವೆ.

9. ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ದುಡಿಯುವ ಸಿಬ್ಬಂದಿ ಸಂಖ್ಯೆ ಅಗತ್ಯಕ್ಕಿಂತ ತೀರಾ ಕಡಿಮೆ ಇದ್ದು ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ. ಆರೋಗ್ಯ ಸೇವೆಯಲ್ಲಿ ದಕ್ಷತೆ ಕಡಿಮೆಯಾಗಲು ಮತ್ತು ಅವಘಡಗಳು ಸಂಭವಿಸಲು ಇದೂ ಕೂಡ ಮುಖ್ಯ ಕಾರಣ. ಕನಿಷ್ಟ ಸಂಖ್ಯೆಯ ಸಿಬ್ಬಂದಿಯ ನೇಮಕಾತಿ ಇಲ್ಲದಿದ್ದಲ್ಲಿ ಅದೆಷ್ಟೇ ಉತ್ತಮ ಭೌತಿಕ ಸೌಲಭ್ಯಗಳಿದ್ದರೂ ನಿರುಪಯುಕ.

10. ಕಳೆದ ವರ್ಷವೂ ಸೇರಿದಂತೆ ಕೋವಿಡ್ ಸಂಬಂಧದ ಅನಾಹುತಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರದ ಕ್ರಮಗಳು ನಿಜಕ್ಕೂ ಅನುಕರಣೀಯ. ಪ್ರಾಂಜಲ ಮನಸ್ಸಿನಿಂದ ಅವುಗಳನ್ನು ಒಪ್ಪಿಕೊಂಡು ದೇಶದಾದ್ಯಂತ ಅನುಷ್ಠಾನಗೊಳಿಸುವುದು ಒಳ್ಳೆಯದು.

11. ಸದ್ಯ ಈ ಲೇಖನ ಮುಗಿಸುವ ಹೊತ್ತಿಗೆ ಕರ್ನಾಟಕ ಸರ್ಕಾರ ಹಳ್ಳಿಹಳ್ಳಿಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಈ ರೋಗಕ್ಕೆ ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳಾಗಿ ಹಲವು ಕಾರ್ಯಕ್ರಮಗಳನ್ನು ಆದೇಶಿಸಿದ್ದು ಅವುಗಳಲ್ಲಿ ಆಡಳಿತಾತ್ಮಕ ಕ್ರಮಗಳ ಜೊತೆಗೆ ಕೂಡಲೇ ಸಂಚಾರಿ ಚಿಕಿತ್ಸಾಲಯಗಳನ್ನು ಆರಂಭಿಸುವುದೂ ಒಂದು ಸ್ವಾಗತಾರ್ಹ ಕ್ರಮ.

ಕೊನೆಯದಾಗಿ, ಇಂದಿನ ಕೋವಿಡ್-19ರ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ನ್ಯಾಯಾಲಯಗಳಲ್ಲಿ ದಾಖಲಾಗುತ್ತಿವೆ. ಅವುಗಳಲ್ಲಿ ಹುರುಳಿಲ್ಲದಿಲ್ಲ. ಇವನ್ನು ನ್ಯಾಯಪೀಠಗಳು ಗಮನಿಸಿಯೇ ನಿರ್ದೇಶನಗಳನ್ನು ನೀಡುತ್ತಿವೆ. ಈ ಬಗ್ಗೆ ಆಡಳಿತನಿರತ ಸರ್ಕಾರಗಳು, ಸಚಿವರು, ಸಂಸದರು ಮತ್ತು ಶಾಸಕರುಗಳು ಮನಬಂದಂತೆ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಈ ಸಂಬಂಧದ ನ್ಯಾಯಾಂಗದ ಕ್ರಿಯಾಶೀಲತೆಯನ್ನು ಕಾರ್ಯಾಂಗದಲ್ಲಿನ ಅನಗತ್ಯ ಹಸ್ತಕ್ಷೇಪ ಎಂದು ತಿಳಿಯುವುದು ಪ್ರಜಾಸತ್ತಾತ್ಮಕ ಧೋರಣೆಯ ಲಕ್ಷಣವಲ್ಲ. ಸಾವಿನ ದವಡೆಯಲ್ಲಿರುವ ವ್ಯಕ್ತಿಯಾಗಲೀ, ಅವರ ಸಂಬಂಧಿಕರಾಗಲೀ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಯಾಚಿಸಿದರೆ, ಅದನ್ನು ಮಾಧ್ಯಮಗಳು ಜನತೆಗೆ ತಲುಪಿಸುವ ಕೆಲಸ ಮಾಡಿದರೆ, ಅದನ್ನು ಅಪರಾಧ ಎಂದು ಪರಿಗಣಿಸುವುದು, ಕಾನೂನು ಕ್ರಮಕ್ಕೆ ಮುಂದಾಗುವುದು, ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ದೇಶಕ್ಕೆ ಗೌರವ ತರುವಂತಹುದ್ದಲ್ಲ. ವಿರೋಧ ಪಕ್ಷಗಳೂ ಸಹ ಸರ್ಕಾರಗಳ ಸಕಾರಾತ್ಮಕ ಕಾರ್ಯಗಳ ಜೊತೆಗೆ ಕೈಜೋಡಿಸಿ ಅವುಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕಿದೆ. ಇದಕ್ಕೆ ಆಳುವ ಸರ್ಕಾರಗಳು ಅವಕಾಶ ಕಲ್ಪಿಸಿಕೊಡುವ ವಾತಾವರಣವನ್ನು ಸೃಷ್ಟಿಸಬೇಕಿದೆ. ?

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್

0
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿ ತೊರೆದು ಇಂದು (ಏ.19) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾಲೀಕಯ್ಯ ಗುತ್ತೇದಾರ್‌ ಅವರನ್ನು...