ವಿವಾದಾತ್ಮಕ ಕೃಷಿ ಕಾಯ್ದೆಗಳ ವಾಪಸ್ ಗೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರ ಮೇಲಿನ ದಾಳಿ ಖಂಡಿಸಿ ತುಮಕೂರಿನಲ್ಲಿ ಜನಪರ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಸಮಿತಿ ನೇತೃತ್ವದಲ್ಲಿ ಸಂಘರ್ಷದ ಸಂಕಲ್ಪದಿನ ಹೆಸರಿನಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಯಿತು.
ಲೇಖಕಿ ಡಾ.ಅರುಂಧತಿ ಮಾತನಾಡಿ, ಗಾಂಧೀಜಿ ಕೊಂದ ಶಕ್ತಿಗಳೇ ಇಂದು ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದಿವೆ. ಕುಟಿಲತೆ, ವಾಮಮಾರ್ಗದಿಂದ ಅಧಿಕಾರ ಹಿಡಿದು ಜನರನ್ನು ಹಿಂಸಿಸುತ್ತಿದೆ. ಇವರಿಗೆ ಅಧಿಕಾರ ಬೇಕೇ ಹೊರತು ರೈತರ ಹಿತ ಬೇಕಾಗಿಲ್ಲ. ಎರಡು ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಅವರ ಬಗ್ಗೆ ಕನಿಷ್ಠ ಕಾಳಜಿ ತೋರಿಸುತ್ತಿಲ್ಲ. ಕೇಂದ್ರ ಸರ್ಕಾರ ಜನರನ್ನು ಜೀವಂತ ಶವಗಳಾಗಿ ಮಾಡಲು ಹೊರಟಿದೆ. ಕುಟಿಲತೆ, ಹಠಮಾರಿತನವೇ ಕೇಂದ್ರದ ನಡೆಯಾಗಿದೆ. ಇಂತಹ ನೀತಿಯನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತ ಹೋರಾಟ ಹತ್ತಿಕ್ಕಲು ಕುಟಿಲ ಮಾರ್ಗ ಅನುಸರಿಸುತ್ತಿದೆ.. ಸರ್ಕಾರವನ್ನು ಪ್ರಶ್ನಿಸುವವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಆರ್.ಎಸ್.ಎಸ್ ಬೆಂಬಲಿಗರು ಕೆಂಪುಕೋಟೆಯಲ್ಲಿ ಧ್ವಜ ಹಾರಿಸಲು ಬಿಟ್ಟು ರೈತರನ್ನು ಕ್ರಿಮಿನಲ್ ಗಳು ಎಂಬಂತೆ ಬಿಂಬಿಸಲು ಹೊರಟಿದೆ. ಮಾಧ್ಯಮಗಳು ಕೂಡ ಕೇಂದ್ರದ ತಾಳಕ್ಕೆ ಕುಣಿಯುತ್ತಿವೆ ಎಂದು ಪ್ರಗತಿಪರರು ಆಕ್ರೋಶ ಹೊರಹಾಕಿದರು.
ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ರೈತರ ಪ್ರತಿಭಟನೆಗೆ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಇದು ಸರ್ವಾಧಿಕಾರದ ಧೋರಣೆ. ಇದನ್ನು ಸರ್ಕಾರ ಕೈಬಿಡಬೇಕು. ಜನಪರವಾಗಿ ಕೆಲಸ ಮಾಡಬೇಕಾಗಿದ್ದ ಸರ್ಕಾರ ಕಾರ್ಪೋರೇಟ್ ವ್ಯವಸ್ಥೆಯನ್ನು ಬಲಪಡಿಸಲು ಹೊರಟಿದೆ. ಇದು ಸರಿಯಲ್ಲ. ಪ್ರಜಾಪ್ರಭುತ್ವ ಮಾದರಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಲ್ಳುತ್ತಿದೆ ಎಂದು ಆರೋಪಿಸಿದರು.
ಹಿರಿಯ ಹೋರಾಟಗಾರ ಸಿ.ಯತಿರಾಜು ಮಾತನಾಡಿ, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ. ರೈತರು ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರೆ ಪ್ರಧಾನಿ ಮೋದಿ ಅತ್ತ ಕಿವಿಗೊಡುತ್ತಿಲ್ಲ. ಸರ್ವಾಧಿಕಾರಿ ಆಡಳಿತದಲ್ಲಿ ಎಲ್ಲವೂ ಅಯೋಮಯವಾಗುತ್ತಿದೆ. ಭೀಮಾ ಕೋರೇಗಾಂವ್ ಹೆಸರಿನಲ್ಲಿ ಪ್ರಗತಿಪರರನ್ನು ಬಂಧಿಸಿ ಜೈಲಲ್ಲಿ ಇಡಲಾಗಿದೆ. ರೈತರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಅವರು ಹೊರಬರದಂತಹ UAPA ಕಾಯ್ದೆಯನ್ನು ಬಳಸಿದೆ ಎಂದು ಕಿಡಿಕಾರಿದರು.
ಪ್ರಗತಿಪರರು, ಪತ್ರಕರ್ತರು ಸೇರಿ ಸರ್ಕಾರ ಮತ್ತು ಜನವಿರೋಧಿ ಕಾಯ್ದೆಗಳ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳೆಂದು ಕರೆದು ಜನರನ್ನು ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ. ಬಂಧಿತರಿಗೆ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ರೈತರು, ಪ್ರಗತಿಪರರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಬಿಜೆಪಿ ಬೆಂಬಲಿಗರನ್ನು ಬಿಟ್ಟು ಎಲ್ಲರನ್ನು ದೇಶದ್ರೋಹಿಗಳೆಂದು ಬಿಂಬಿಸಲು ಹೊರಟಿದೆ. ಹೀಗಾಗಿ ಈ ಸರ್ಕಾರ ಬೇಗ ತೊಲಗಬೇಕು. ಅಖಂಡತೆ, ಏಕತೆಗೆ ಪ್ರಜಾಪ್ರಭುತ್ವಕ್ಕೆ ಈ ಸರ್ಕಾರದಿಂದ ಧಕ್ಕೆ ಬಂದಿದೆ ಎಂದು ಕಿಡಿಕಾರಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಬಿಜೆಪಿ ಜನರನ್ನು ಛೂ ಬಿಟ್ಟು ಹೋರಾಟದ ದಿಕ್ಕುತಪ್ಪುವಂತೆ ಮಾಡುತ್ತಿದೆ. ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿದೆ. ಉತ್ತರ ಪ್ರದೇಶ ಸರ್ಕಾರ ಚಳವಳಿಗೆ ಅಡ್ಡಿಪಡಿಸಲು ಹೋರಾಟ ಸ್ಥಳದಲ್ಲಿ ಒದಗಿಸಿದ್ದ ನೀರು ಮತ್ತು ವಿದ್ಯುತ್ ಸೌಲಭ್ಯವನ್ನು ಕಡಿತಗೊಳಿಸಿದೆ. ಅಮಾನವೀಯತೆಯಿಂದ ವರ್ತಿಸಿದೆ. ಇದು ಖಂಡನೀಯ. ಅದೇ ದೆಹಲಿ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಬಿಜೆಪಿ ರೈತ ಸಂಘಟನೆಗಳಲ್ಲೇ ಬಿರುಕು ಮೂಡಿಸಿ ಒಡೆಯುವ ವ್ಯವಸ್ಥಿತ ಯತ್ನ ನಡೆದಿದೆ. ಇದು ಫಲಿಸುವುದಿಲ್ಲ. ಹೋರಾಟ ನಡೆದೇ ತೀರುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಚರಕ ಆಸ್ಪತ್ರೆಯ ಡಾ.ಬಸವರಾಜು, ಸಾಹಿತಿ ಡಾ. ನಟರಾಜ್ ಬೂದಾಳ್, ರೈತ ಮುಖಂಡ ಅಜ್ಜಪ್ಪ, ಯುವಜನ ಸಂಘಟನೆಯ ಮಂಜುಳ, ಆಶ್ವಿನಿ, ನವೀನ್ ಇದ್ದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳ ರದ್ದತಿ: ಇಂದಿನ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?


