Homeಕರ್ನಾಟಕಪರಿಹಾರ ನೀಡದೆ ರೈಲು ಮಾರ್ಗಕ್ಕಾಗಿ ಭೂಮಿ ವಶ: ಸಿಎಂ ತವರಿನ ರೈತರ ಆಕ್ರೋಶ

ಪರಿಹಾರ ನೀಡದೆ ರೈಲು ಮಾರ್ಗಕ್ಕಾಗಿ ಭೂಮಿ ವಶ: ಸಿಎಂ ತವರಿನ ರೈತರ ಆಕ್ರೋಶ

ಶಿವಮೊಗ್ಗ-ಶಿಕಾರಿಪುರ-ರಾಣೆ ಬೆನ್ನೂರು ರೈಲ್ವೇ ಮಾರ್ಗವನ್ನು ನಿರ್ಮಿಸಲಾಗುತ್ತಿದ್ದು ಇದಕ್ಕಾಗಿ ಸುಮಾರು 1100 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ

- Advertisement -
- Advertisement -

ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ರೈಲ್ವೆ ಮಾರ್ಗಕ್ಕಾಗಿ ರೈತರ ಫಲವತ್ತಾದ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಇದರ ಕುರಿತು ರೈತರಿಗೆ ಪೂರ್ವ ಮಾಹಿತಿಯನ್ನಾಗಲೀ ಅಥವಾ ವಶಪಡಿಸಿಕೊಳ್ಳುವ ಭೂಮಿಗೆ ಬೆಲೆ ನಿಗದಿಯನ್ನಾಗಲಿ ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಶಿವಮೊಗ್ಗ-ಶಿಕಾರಿಪುರ-ರಾಣೆ ಬೆನ್ನೂರು ರೈಲ್ವೇ ಮಾರ್ಗವನ್ನು ನಿರ್ಮಿಸಲಾಗುತ್ತಿದ್ದು ಇದಕ್ಕಾಗಿ ಸುಮಾರು 1100 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದರೆ ಅದಕ್ಕೆ ಸಮರ್ಪಕ ಪರಿಹಾರ ನೀಡುತ್ತಿಲ್ಲ ಎಂದು ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್, “ಸಾರ್ವಜನಿಕ ಸೇವೆಗಾಗಿ ಇಲ್ಲಿನ ರೈತರು ಭೂಮಿ ಕೊಡಲು ಸಿದ್ಧರಿದ್ದಾರೆ. ಆದರೆ ಅವರಿಗೆ ಯಾವುದೇ ಪರಿಹಾರ ನೀಡದೆ ಭೂಮಿಯನ್ನ ವಶಪಡಿಸಿಕೊಳ್ಳುವುದು ಸರಿಯಲ್ಲ. ಇದರ ಕುರಿತು ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೆ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಖಚಿತವಾದ ಭರವಸೆಗಳನ್ನೂ ಸಹ ನೀಡುತ್ತಿಲ್ಲ. ಹಾಗಾಗಿ ಇಂದಿನ ಮಾರುಕಟ್ಟೆಯ ಬೆಲೆ ನೀಡಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಮತ್ತು ಅವರಿಗೆ ಶೀಘ್ರವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಫೆಬ್ರವರಿ 3 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ‘ದೆಹಲಿ ಗಡಿಯಲ್ಲಿನ ರೈತ ಪ್ರತಿಭಟನೆಗೆ ಸೇರಿಕೊಳ್ಳಿ’: ಕಾರ್ಯಕರ್ತರಿಗೆ ಮನವಿ ಮಾಡಿದ ಅಕಾಲಿ ದಳ

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್ ಆರ್ ಬಸವರಾಜಪ್ಪನವರು ಮಾತನಾಡಿ, “ಒಂದು ಎಕರೆಗೆ 44 ಲಕ್ಷ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಲ್ಲ. 6-12 ಲಕ್ಷ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇಷ್ಟೆ ಅಲ್ಲದೇ ಒಂದು ಹಳ್ಳಿಯಲ್ಲಿ ಎಕರೆಗೆ 6 ಲಕ್ಷ ಹೇಳಿದರೆ, ಮತ್ತೊಂದು ಹಳ್ಳಿಯಲ್ಲಿ ಎಕರೆಗೆ 8 ಲಕ್ಷ ಹೇಳಿದ್ದಾರೆ. ಮತ್ತೊಂದು ಹಳ್ಳಿಯಲ್ಲಿ 12 ಲಕ್ಷ ಹೇಳಿದ್ದಾರೆ. ಹಾಗಾಗಿ ರೈತರಲ್ಲಿ ಗೊಂದಲವುಂಟಾಗಿದೆ. ಇದನ್ನು ಶಾಸಕರಿಗೆ ಹೇಳಿದರೆ, ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ, ಡಿಸಿ ಒಪ್ಪುತ್ತಿಲ್ಲ, ಸರ್ಕಾರ ಒಪ್ಪುತ್ತಿಲ್ಲ ಎಂದು ಕೈ ಎತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಹಾಗಾಗಿ ಸಮರ್ಪಕ ಪರಿಹಾರ ಸಿಗದೇ ನಾವು ಭೂಮಿ ಕೊಡುವುದಿಲ್ಲ ಎಂದು ಫೆಬ್ರವರಿ 3 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಾವು ಭೂಮಿ ಕೊಡಲೇ ಬೇಕು ಎನ್ನುವುದಾದರೆ, ಒಂದು ಎಕರೆಗೆ ಒಂದೂ ಕಾಲು ಕೋಟಿ, ತೋಟಕ್ಕೆ 2 ಕೋಟಿ ನಿಗದಿ ಮಾಡಬೇಕು. ಇಲ್ಲದಿದ್ದರೆ ನಾವು ಭೂಮಿ ಕೊಡುವುದಿಲ್ಲ. ಇದನ್ನೂ ಮೀರಿ ಸರ್ಕಾರ ರೈತರನ್ನು ಜೈಲಿಗೆ ಕಳುಹಿಸಿ ಭೂಮಿ ಪಡೆದುಕೊಳ್ಳುತ್ತದೋ ಅಥವಾ ರೈತರಿಗೆ ಗುಂಡು ಹಾರಿಸಿ ಪಡೆದುಕೊಳ್ಳುತ್ತದೋ ಗೊತ್ತಿಲ್ಲ” ಎಂದು ಹೇಳಿದರು.

ಈ ಯೋಜನೆಯಲ್ಲಿ ಕೆಲವು ರೈತರು ಸಂಪೂರ್ಣ ಅಥವಾ ಭಾಗಶಃ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ಇವರಿಗೆ ಪರ್ಯಾಯ ಜಮೀನು ವ್ಯವಸ್ಥೆಯನ್ನು ಸರ್ಕಾರವೇ ಮಾಡಿಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ. ಇನ್ನು ಇದರಿಂದ ಉಂಟಾಗಬಹುದಾದ ಎಲ್ಲಾ ತೊಂದರೆಗಳನ್ನು ಸರ್ಕಾರ ಮೊದಲೆ ಗ್ರಹಿಸಿ ಬಗೆಹರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.


ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read