Homeಕರ್ನಾಟಕಬೀದಿ ನಾಟಕದ ಕಲಾವಿದರನ್ನು ಅಕ್ಷರಶಃ ಬೀದಿಗೆ ತಳ್ಳಿದ ಸರ್ಕಾರ: ನಾಟಕದ ಮೂಲಕ ಪ್ರತಿಭಟನೆ

ಬೀದಿ ನಾಟಕದ ಕಲಾವಿದರನ್ನು ಅಕ್ಷರಶಃ ಬೀದಿಗೆ ತಳ್ಳಿದ ಸರ್ಕಾರ: ನಾಟಕದ ಮೂಲಕ ಪ್ರತಿಭಟನೆ

- Advertisement -
- Advertisement -

ಸರ್ಕಾರದ ನೂರಾರು ಯೋಜನೆಗಳನ್ನು ಬೀದಿ ನಾಟಕಗಳ ಮೂಲಕ ಜನರಿಗೆ ತಲುಪಿಸುತ್ತಿದ್ದ ಕಲಾವಿದರು ಇಂದು ಬೀದಿ ನಾಟಕ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ. ಬೀದಿ ನಾಟಕಗಳನ್ನು ರಾಜ್ಯ ಸರ್ಕಾರ ಹೊರ ರಾಜ್ಯಗಳ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ್ದು, ಇದರಿಂದ ತಮ್ಮ ಬದುಕು ಅತಂತ್ರಗೊಂಡಿದೆ ಎಂದು ಆರೋಪಿಸಿ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಇಂದು ಫ್ರೀಡಂ ಪಾರ್ಕ್‌‌ನಲ್ಲಿ ಪ್ರತಿಭಟನೆ ನಡೆಸಿದೆ.

ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ತಮ್ಮ ಸಂಕಷ್ಟಗಳನ್ನು ಬೀದಿ ನಾಟಕಗಳ ಮೂಲಕ ಪ್ರಸ್ತುತಪಡಿಸಿ, ಹೋರಾಟದ ಹಾಡುಗಳನ್ನು ಹಾಡುವ ಮೂಲಕವೇ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.

ಬೀದಿ ನಾಟಕ ತಂಡಗಳ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, “ಬೀದಿ ನಾಟಕಕಾರರ ಸಂತತಿ ಬಸವಣ್ಣನ ಕಾಲದಿಂದ ಜಾನಪದ ಸಂಸ್ಕೃತಿಯಂತೆ ತಲೆತಲಾಂತರಗಳನ್ನು ದಾಟಿ ಬಂದಿದೆ. ಕಳೆದ 40 ವರ್ಷಗಳಿಂದ ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳನ್ನು ಬೀದಿ ನಾಟಕಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದೇವೆ. ಆದರೆ ಸರ್ಕಾರ ಇನ್ನು ಮುಂದೆ ಎಲ್‌ಇಡಿ ಪರದೆಗಳ ಮೂಲಕ ಜಾಗೃತಿ ಮೂಡಿಸುತ್ತೇವೆ ಎನ್ನುವ ಮೂಲಕ ನಮ್ಮನ್ನು ಬೀದಿಗೆ ತಳ್ಳಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಪೋಲಿಯೋ ಲಸಿಕೆ, ಮಕ್ಕಳ ಮಹಿಳೆಯರ ಅಪೌಷ್ಠಿಕತೆ, ಬಾಲ್ಯ ವಿವಾಹ-ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಕಲಿ-ನಲಿ ಅಕ್ಷರ ದಾಸೋಹಾ, ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸವಲತ್ತುಗಳಿಂದ ಹಿಡಿದು ಪೊಲೀಸ್‌ ಇಲಾಖೆಯ ಸುರಕ್ಷತಾ ಸಪ್ತಾಹದ ವರೆಗೆ ಸರ್ಕಾರದ ಹತ್ತಾರು ಕಾರ್ಯಕ್ರಮಳನ್ನು ನಾವು ಬೀದಿ ನಾಟಕದ ಮೂಲಕ ಜನರಿಗೆ ತಲುಪಿಸಿದ್ದೇವೆ. ಹಾಡು ಕಟ್ಟಿ ಅಭಿನಯದ ಮೂಲಕ ಜನರನ್ನು ನಗಿಸುವ-ಅಳಿಸುವ ಕಲೆಯ ಜೊತೆಗೆ ಚಿಂತನೆಯ ಓರೆಗೆ ಹಚ್ಚುವ ಕೆಲಸವನ್ನೂ ನಾವು ಮಾಡಿದ್ದೇವೆ. ಈ ವೃತ್ತಿಯಲ್ಲಿರುವವರಿಗೆ ಬೇರೆ ಯಾವುದೇ ಉಪ ಕಸುಬುಗಳಿಲ್ಲ. ಇಲ್ಲಿ ಬರುವ ಆದಾಯವೇ ಬದುಕಿಗೆ ಮೂಲ. ಈಗ ಏಕಾಏಕಿ ನಮ್ಮನ್ನು ಕೈಬಿಟ್ಟರೆ ನಾವೇನು ಮಾಡಬೇಕು” ಎಂದು ಪ್ರಶ್ನಿಸಿದರು.

“ಪ್ರತಿ ಜಿಲ್ಲೆಯಲ್ಲಿ 150-200 ಜನರಂತೆ ಸುಮಾರು 5-6 ಸಾವಿರ ಬೀದಿ ನಾಟಕ ಕಲಾವಿದರಿದ್ದೇವೆ. ಕೊರೊನಾ ಸಂದರ್ಭದಲ್ಲಿ ಸತತ ಒಂದೂವರೆ ವರ್ಷಗಳ ಕಾಲ ಬೀದಿ ನಾಟಕ ಮತ್ತು ಬೇರೆ ಕೆಲಸ ಯಾವುದೂ ಇಲ್ಲದೆ ನಾವು ಸಂಕಷ್ಟಕ್ಕೆ ಒಳಗಾಗಿದ್ದೆವು. ಆಗಲೂ ಸರ್ಕಾರ ಸಹಾಯಹಸ್ತ ಚಾಚಲಿಲ್ಲ. ನಾವು ಐಷರಾಮಿ ಜೀವನ ಕೇಳುತ್ತಿಲ್ಲ. ಸಾಮಾನ್ಯ ಜೀವನ ನಡೆಸಲು ಬೀದಿ ನಾಟಕ ಮಾಡಲು ಅವಕಾಶ ಕೊಡಿ ಎಂದಷ್ಟೆ ಕೇಳುತ್ತಿದ್ದೇವೆ. ಆದರೆ ಈಗ ಏಕಾಏಕಿ ಖಾಸಗಿಯವರಿಗೆ ಟೆಂಡರ್ ಕೊಡುವ ಮೂಲಕ ನಮ್ಮ ಆದಾಯ-ಬದುಕನ್ನೇ ಕಸಿದುಕೊಂಡಿರುವುದು ಅನ್ಯಾಯ” ಎಂದು ರಾಮಣ್ಣ ಕಿಡಿಕಾರಿದರು.

ಸಂಘದ ಗೌರವಾಧ್ಯಕ್ಷ ಪುರುಷೋತ್ತಮಗೌಡ ಮಾತನಾಡಿ, “ಖಾಸಗಿ ಕಂಪೆನಿಗಳು ಎಲ್‌ಇಡಿ ಟಿವಿ ಪರದೆಯಲ್ಲಿ ತೋರಿಸುವ ನಾಟಕಗಳು ಜನರಿಗೆ ಅರ್ಥವೂ ಆಗದು. ಕೇವಲ ಕಮಿಷನ್ ಆಸೆಗಾಗಿ ಇದನ್ನು ಹೊರಗುತ್ತಿಗೆ ನೀಡಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೂಡಲೇ ವಾರ್ತಾ ಮತ್ತು ಸಂಪರ್ಕ ಇಲಾಕೆ ಖಾಸಗಿ ಕಂಪೆನಿಗೆ ನೀಡಿರುವ ಗುತ್ತಿಗೆಯನ್ನು ಹಿಂಪಡೆದು ಬೀದಿ ನಾಟಕಕಾರರಿಗೆ ಬದುಕು ಕಟ್ಟಿಕೊಡಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಾವಣೆಗೆರೆಯ ಹೇಮಂತ್, ತುಮಕೂರಿನ ಮಂಜುನಾಥ್, ಮೈಸೂರಿನ ಸಲ್ಮಾ ಮತ್ತು ಮಂಡ್ಯದ ವೈರಮುಡಿ ಎಚ್.ಪಿ ಸೇರಿದಂತೆ ಹಲವರು ಭಾಗವಹಿಸಿದ್ದರು.


ಇದನ್ನೂ ಓದಿ: ಕೋಮು ಗಲಭೆಗಳಿಂದ ಭಾರತದಲ್ಲಿ ಸ್ಥಳಾಂತರಗೊಂಡವರ ಕೆಲವು ಫೈಲ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...