Homeಮುಖಪುಟಕೋಮು ಗಲಭೆಗಳಿಂದ ಭಾರತದಲ್ಲಿ ಸ್ಥಳಾಂತರಗೊಂಡವರ ಕೆಲವು ಫೈಲ್ಸ್

ಕೋಮು ಗಲಭೆಗಳಿಂದ ಭಾರತದಲ್ಲಿ ಸ್ಥಳಾಂತರಗೊಂಡವರ ಕೆಲವು ಫೈಲ್ಸ್

- Advertisement -
- Advertisement -

ಪ್ರತಿಯೊಬ್ಬರಿಗೂ ತಮ್ಮ ಮೂಲ ನೆಲೆ-ನೆಲಗಳ ಮೇಲೆ ಬಿಡಿಸಲಾಗದ ಭಾವನಾತ್ಮಕ ಸಂಬಂಧವಿರುತ್ತದೆ.
ನಗರೀಕರಣ, ಉದ್ಯೋಗದ ಕಾರಣಕ್ಕಾಗಿ ದೂರದ ಬೇರೆಬೇರೆ ನಗರಗಳಲ್ಲಿ, ವಿದೇಶಗಳಲ್ಲಿ ನೆಲೆಸಿದ್ದರೂ ಸಹ ತಮ್ಮ ಮೂಲದ ಬಗೆಗೆ ಪ್ರೀತಿ, ಉತ್ಕಟತೆ ಇದ್ದೇ ಇರುತ್ತದೆ. ಹೀಗಿರಬೇಕಾದರೆ ಯುದ್ಧ, ಗಲಭೆ, ಆಕ್ರಮಣ, ಮುಳುಗಡೆ ಇತ್ಯಾದಿ ಕಾರಣಗಳಿಗಾಗಿ ಮೂಲನೆಲೆಯಿಂದ ಬಲವಂತವಾಗಿ ಹೊರದಬ್ಬಿದರೆ ಆ ನೋವು ಶಾಶ್ವತ ಗಾಯವಾಗಿ ಉಳಿದುಬಿಡುತ್ತದೆ. ಭಾರತ ಪಾಕ್ ವಿಭಜನೆಯ ಕಾಲದಲ್ಲಿನ ಆ ನೋವುಗಳು ತಲೆಮಾರು ಕಳೆದರೂ ಇಂದಿಗೂ ಹಸಿಹಸಿಯಾಗಿಯೇ ಇವೆ.

ಹೀಗಿರಬೇಕಾದರೆ ಕಾಶ್ಮೀರದಿಂದ ಕಾಶ್ಮೀರಿ ಪಂಡಿತರನ್ನು ಸ್ಥಳಾಂತರಿಸಿದ್ದನ್ನು ಆಧರಿಸಿ ತೆಗೆಯಲಾದ ’ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದೊಡ್ಡ ವಿವಾದವೆಬ್ಬಿಸಿದೆ. ಬಿಜೆಪಿ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಿ ಚಿತ್ರವನ್ನು ಪ್ರಮೋಟ್ ಮಾಡುವ ಮೂಲಕ ರಾಜಕೀಯ ಲಾಭಕ್ಕೆ ಮುಂದಾಗಿದೆ. ಕಾಶ್ಮೀರಿ ಪಂಡಿತರ ಸ್ಥಳಾಂತರವನ್ನು ಖಂಡಿಸಲೇಬೇಕು. ಅವರಿಗೆ ನ್ಯಾಯಯುತ ಪರಿಹಾರ ಒದಗಿಸಿಕೊಡುವುದು ಸರ್ಕಾರದ ಜವಾಬ್ದಾರಿ ಕೂಡ ಹೌದು. ಆದರೆ ಈ ಚಿತ್ರದ ಮೂಲಕ ಉತ್ಪ್ರೇಕ್ಷೆಗೆ ಮುಂದಾಗಿ, ಸ್ಥಳಾಂತರಕ್ಕೆ ಧಾರ್ಮಿಕ ಕಾರಣ ನೀಡಿ, ಮತ್ತೊಂದು ಸಮುದಾಯವನ್ನು ದ್ವೇಷಿಸುವಂತೆ ಮಾಡಲಾಗುತ್ತಿದೆ ಎಂದು ಪ್ರಜ್ಞಾವಂತರು ಆಕ್ಷೇಪ ಎತ್ತಿದ್ದಾರೆ. ಅದೇ ಸಮಯದಲ್ಲಿ ಕಾಶ್ಮೀರ್ ಫೈಲ್ಸ್ ಕೇವಲ ಪಂಡಿತರ ನೋವು ವ್ಯಕ್ತಪಡಿಸುತ್ತಿದೆ. ಪಂಡಿತರಿಗಿಂತ 10 ಪಟ್ಟು ಹೆಚ್ಚು ಸಾವು-ನೋವು ಸ್ಥಳಾಂತರ ಅನುಭವಿಸಿದ ಮತ್ತು ಅನುಭವಿಸುತ್ತಿರುವ ಕಾಶ್ಮೀರಿ ಮುಸ್ಲಿಮರ
ಕುರಿತು ಏಕೆ ದನಿಯೆತ್ತುತ್ತಿಲ್ಲ; ಈ ದೇಶದಲ್ಲಿ ಹತ್ತಾರು ಸ್ಥಳಾಂತರಗಳು ನಡೆದು ಹಲವಾರು ಸಮುದಾಯಗಳನ್ನು ಬೀದಿಗೆ ತಳ್ಳಲಾಗಿದೆ, ಅದಕ್ಕೆ ಏಕೆ ನಿಮ್ಮ ಮನ ಮಿಡಿಯುವುದಿಲ್ಲ? ಸೆಲೆಕ್ಟಿವ್ ಕಣ್ಣೀರು ಸರಿಯೇ ಎಂಬ ಪ್ರಶ್ನೆಗಳು ಎದ್ದಿವೆ. ಹಾಗಾಗಿ ಈ ದೇಶದಲ್ಲಿ ನಡೆದ ದೊಡ್ಡದೊಡ್ಡ ಸ್ಥಳಾಂತರ ಮತ್ತು ಅವು ತಂದ ಸಾವು-ನೋವುಗಳ ಕುರಿತು ಬೆಳಕು ಚೆಲ್ಲುವುದು ಕಾಲದ ಅಗತ್ಯವಾಗಿದೆ. ಅಂತಹ ಕೆಲವು ಸಂದರ್ಭಗಳನ್ನು ಇಲ್ಲಿ ನೆನೆಸಿಕೊಳ್ಳಲಾಗಿದೆ.

ಸಿಖ್ ನರಮೇಧ 1984: ಮೃತಪಟ್ಟವರ ಸಂಖ್ಯೆ 3,500ರಿಂದ 30,000

ಆಪರೇಷನ್ ಬ್ಲೂಸ್ಟಾರ್‌ಗೆ ಆದೇಶ ನೀಡಿದ್ದಕ್ಕಾಗಿ ಸಿಖ್ ಅಂಗರಕ್ಷಕರಿಂದ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಕೊಲೆಯಾದ ನಂತರ ಸಿಖ್ ಜನರ ಮಾರಣಹೋಮ ನಡೆಯಿತು. ಪಂಜಾಬ್‌ನಲ್ಲಿ ತೀವ್ರವಾಗಿದ್ದು, ಇಡೀ ದೇಶಕ್ಕೆ ಇದು ಹರಡಿತು. 3350 ಸಿಖ್ಖರು ಮೃತಪಟ್ಟರೆಂದು ಸರ್ಕಾರಿ ಅಂಕಿಅಂಶಗಳು ಹೇಳಿದರೆ 30,000ವರೆಗೂ ಆ ಸಂಖ್ಯೆಯಿದೆ ಎಂದು ಸ್ವತಂತ್ರ ಸಂಸ್ಥೆಗಳು ಉಲ್ಲೇಖಿಸಿವೆ. ಈ ಮಹಾನ್ ಹತ್ಯಾಕಾಂಡದಲ್ಲಿ ಸುಮಾರು 20,000 ಜನರು ಸ್ಥಳಾಂತರಗೊಂಡಿದ್ದಾರೆ.

ಬಾಂಬೆ ಗಲಭೆ 1992-93: ಮೃತಪಟ್ಟವರ ಅಂದಾಜು ಸಂಖ್ಯೆ 900

1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ನಂತರ ದೇಶಾದ್ಯಂತ ಗಲಭೆಗಳು ಭುಗಿಲೆದ್ದವು. ಅದು ಹೆಚ್ಚು ತೀವ್ರತರದಲ್ಲಿ ಹರಡಿದ್ದು ಬಾಂಬೆಯಲ್ಲಿ. ಮುಸ್ಲಿಮರನ್ನು ಗುರಿಯಾಗಿಸಿ ಅವರು ಹೆಚ್ಚಾಗಿ ವಾಸಿಸುತ್ತಿದ್ದ ತುಳಸಿವಾಡಿ ಸ್ಲಂನಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಯಿತು. ಅದು ಸಹಬಾಳ್ವೆ ನಡೆಸುತ್ತಿದ್ದ ಹಲವು ಹಿಂದೂಗಳನ್ನು ಸಹ ಬಲಿ ತೆಗೆದುಕೊಂಡಿತ್ತು. ಎರಡು ತಿಂಗಳು ಹಬ್ಬಿದ ಈ ಗಲಭೆಯಲ್ಲಿ ತಮ್ಮದಲ್ಲದ ತಪ್ಪಿಗೆ ಸುಮಾರು 575 ಜನ ಮುಸ್ಲಿಮರು, 275 ಜನ ಹಿಂದೂಗಳು ಮತ್ತು 50 ಜನ ಇತರ ಸಮುದಾಯಗಳ ಜನರು ಪ್ರಾಣ ತೆತ್ತರು. ಸಾವಿರಾರು ಕುಟುಂಬಗಳು ಪ್ರಾಣಭಯದಿಂದ ಬಾಂಬೆ ತೊರೆದರು. ಅಂದು ಬಾಂಬೆ ತ್ಯಜಿಸಿದವರು 30 ವರ್ಷಗಳಾದರೂ ಹಿಂತಿರುಗಿಲ್ಲ.

ತುಳಸಿವಾಡಿ ಸ್ಲಂನಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕಹಿ ನೆನಪುಗಳು ಇಂದಿಗೂ ಉಳಿದುಕೊಂಡಿವೆ. ಕೆಲ ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿ ಆಶ್ರಮಗಳ ನೆರವಿನಿಂದ ಗಲಭೆಯಲ್ಲಿ ಬದುಕುಳಿದ ಕೆಲವರು ಇಂದಿನ ಮುಂಬೈನ ಹಲವೆಡೆ ನೆಲೆ ಪಡೆದಿದ್ದಾರೆ. ತುಳಸಿವಾಡಿಯಲ್ಲಿ ಮುಸ್ಲಿಮರ ಸಹಾಯದಿಂದ ಬದುಕುಳಿದ ವಾಘ್‌ಚೋರ್ ಮತ್ತು ಅವರ ಹಿಂದೂ ಸ್ನೇಹಿತರು ಪ್ರತಿವರ್ಷ ಹಣ ಸಂಗ್ರಹಿಸಿ, ತಮ್ಮ ಮುಸ್ಲಿಂ ನೆರೆಹೊರೆಯವರಿಗಾಗಿ ಅವರು ರಂಜಾನ್ ಉಪವಾಸವನ್ನು ಮುರಿಯುವಾಗ ವಾರ್ಷಿಕ ಇಫ್ತಾರ್ ಕೂಟವನ್ನು ಆಯೋಜಿಸುತ್ತಾರೆ.

ಗುಜರಾತ್ ಗಲಭೆ 2002: ಮೃತಪಟ್ಟವರ ಅಂದಾಜು ಸಂಖ್ಯೆ 2500

2002ರಲ್ಲಿ ಹಾಲಿ ಪ್ರಧಾನಿ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ನಡೆದ ಮುಸ್ಲಿಮರ ನರಮೇಧದಲ್ಲಿ 2500ಕ್ಕೂ ಹೆಚ್ಚು ಜನ ಪ್ರಾಣ ತೆತ್ತರು. ಎರಡು ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಕೋಮುದಳ್ಳುರಿಯಲ್ಲಿ ತಮ್ಮ ಸ್ವಂತ ಮನೆ, ಅಂಗಡಿಗಳನ್ನು ಕಳೆದುಕೊಂಡರು. ಅಹಮದ್‌ಬಾದ್‌ನಲ್ಲಿನ ಸಿಟಿಜನ್ ನಗರ್ ಎಂಬ ಪ್ರದೇಶದಲ್ಲಿ ಗಲಭೆಯ ಸಂತ್ರಸ್ತರಿಗಾಗಿ ತಾತ್ಕಾಲಿಕ ಕ್ಯಾಂಪ್ ತೆರೆಯಲಾಯಿತು. ಆದರೆ ಗಲಭೆ ನಡೆದು 20 ವರ್ಷಗಳ ನಂತರವೂ (ಈ ವರ್ಷಕ್ಕೆ) ಅದು ಮುಸ್ಲಿಂ ಕುಟುಂಬಗಳಿರುವ ಶಾಶ್ವತ ಸ್ಲಂ ಆಗಿ ಬದಲಾಗಿದೆ. ಇಂದಿಗೂ 40ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ವಾಸಿಸುತ್ತಿವೆ. ನೂರಾರು ಅಡಿ ಎತ್ತರದ ಕಸದ ಗುಡ್ಡೆಗಳು ಅಲ್ಲಿವೆ. ರಾಸಾಯನಿಕ ಕಾರ್ಖಾನೆಗಳು ತಲೆಎತ್ತಿ ವಿಷಗಾಳಿ ಉಗುಳುತ್ತಿವೆ. ಸಮರ್ಪಕ ರಸ್ತೆ, ಕುಡಿಯುವ ನೀರು ಇಲ್ಲದೆ ಇಲ್ಲಿನ ಜನ ಪರಿತಪಿಸುತ್ತಿದ್ದಾರೆ.

ಒಂದು ವರ್ಷದ ನಂತರ ಕೆಲ ಇಸ್ಲಾಮಿಕ್ ಪುನರ್ವಸತಿ ಸಂಸ್ಥೆಗಳು ಮತ್ತು ಸ್ಥಳೀಯ ಎನ್‌ಜಿಓಗಳು ಸೇರಿ 16,087 ಜನರಿಗೆ ರಾಜ್ಯಾದ್ಯಂತ 83 ಕಾಲೋನಿಗಳನ್ನು ತೆರೆದು ಪುನರ್ವಸತಿ ಒದಗಿಸಲಾಯಿತು. ಅಲ್ಲಿ ಸುಮಾರು 3,000 ಕುಟುಂಬಗಳು ಇಂದಿಗೂ ವಾಸ ಮಾಡುತ್ತಿವೆ. ಈ 83 ಕಾಲೋನಿಗಳಲ್ಲಿ 53ಕ್ಕೆ ಸಮರ್ಪಕ ರಸ್ತೆಗಳಿಲ್ಲ. 68 ಕಾಲೋನಿಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ. 18 ಕಾಲೋನಿಗಳಲ್ಲಿ ಬೀದಿದೀಪಗಳಿಲ್ಲ. ಕಳೆದ 20 ವರ್ಷಗಳಿಂದ ನಿರಾಶ್ರಿತರು ಅಲ್ಲಿ ವಾಸಿಸುತ್ತಿದ್ದರೂ 62 ಕಾಲೋನಿಗಳಲ್ಲಿನ ಕುಟುಂಬಗಳಿಗೆ ಇನ್ನು ಮನೆಯ ಹಕ್ಕುಪತ್ರ ಸಿಕ್ಕಿಲ್ಲ! ಇನ್ನು ಶುದ್ಧ ಕುಡಿಯುವ ನೀರು, ಅಂಗನವಾಡಿ, ಶಾಲೆ, ಆಸ್ಪತ್ರೆ ಎಲ್ಲಾ ಕನಸಿನ ಮಾತೆ ಸರಿ.

ಅಹಮದಾ ಬಾದ್‌ನಲ್ಲಿನ ಜಾಹುಪುರ್, ಮದನಿನಗರ್ ಹೆಚ್ಚು ಮುಸ್ಲಿಂ ನಿರಾಶ್ರಿತ ಕುಟುಂಬಗಳು ವಾಸಿಸುತ್ತಿರುವ ಪ್ರದೇಶವಾಗಿದೆ. ಇಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ದಕ್ಕಿದ್ದು 2016ರಲ್ಲಿ. ಅದು ಸಹ ದೊರೆತದ್ದು ನೂರಾರು ಮನವಿಗಳಿಂದ ಪ್ರಯೋಜನವಾಗದೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ನಂತರವಷ್ಟೆ.

ಮುಜಾಫರ್‌ನಗರ ಗಲಭೆ 2013: ಕೊಲೆಯಾದವರ ಸಂಖ್ಯೆ 60

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಆಗಸ್ಟ್ 2013ರ ಕೊನೆಯ ವಾರದಲ್ಲಿ ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು ತಮ್ಮ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದರು. ಮುಜಾಫರ್‌ನಗರ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಕನಿಷ್ಠ 62 ಜನರು ಸಾವನ್ನಪ್ಪಿದರು. 40,000 ಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಕೊಲೆ, ಅತ್ಯಾಚಾರ, ದರೋಡೆ, ಮನೆಗಳಿಗೆ ಬೆಂಕಿ ಇಟ್ಟ ಸುಮಾರು 510ಕ್ಕೂ ಹೆಚ್ಚು ಪ್ರಕರಣಗಳಲ್ಲಿ 1480 ಜನರ ಮೇಲೆ ಕೇಸು ದಾಖಲಾಯಿತು. 7 ಜನರನ್ನು ಹೊರತುಪಡಿಸಿ ಸಾವಿರಾರು ಜನರು ದೋಷಮುಕ್ತರೆನಿಸಿಕೊಂಡಿದ್ದಾರೆ. ಆದರೆ ಗಲಭೆಯಿಂದ ಮನೆ, ಆಸ್ತಿ ಕಳೆದುಕೊಂಡ ಜನರು ಮಾತ್ರ ಇನ್ನು ಅಲೆಯುತ್ತಲೆ ಇದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ: ಸ್ಥಳಾಂತರಗೊಂಡವರ ಸಂಖ್ಯೆ 3 ಲಕ್ಷ

1947ರ ಸಮಯದಲ್ಲಿ ಮೊದಲು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುತ್ತಿದ್ದ ಲಕ್ಷಾಂತರ ಜನ ಪಾಕ್ ದಾಳಿಯಿಂದಾಗಿ ನಿರಾಶ್ರಿತರಾಗಿ ಜಮ್ಮು ಮತ್ತು ಭಾರತದ ವಿವಿಧ ಭಾಗಗಳಿಗೆ ವಲಸೆ ಬಂದಿದ್ದಾರೆ. 41,219 ಕುಟುಂಬಗಳು ಈ ರೀತಿ ನೆಲೆ ಅರಸುತ್ತಾ ಬಂದು ಹಲವು ದಶಕಗಳು ಕಳೆದರೂ ಸರ್ಕಾರ ಅವರನ್ನು ಕೈಹಿಡಿದಿಲ್ಲ. 3 ಲಕ್ಷ ಜನರಿದ್ದವರು ಈಗ ಆ ಸಂಖ್ಯೆ 12 ಲಕ್ಷಕ್ಕೆ ತಲುಪಿದ್ದು, 9 ಲಕ್ಷ ಜಮ್ಮುವಿನಲ್ಲಿ ಮತ್ತು 3 ಲಕ್ಷ ಜನ ಭಾರತದ ಇತರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಯುದ್ಧ ಮುಗಿದ ಮೇಲೆ ವಾಪಸ್ ಆ ಪ್ರದೇಶಕ್ಕೆ ಕಳುಹಿಸುವುದಾಗಿ ಭಾರತ ಇವರಿಗೆ ಭರವಸೆ ನೀಡಿತ್ತು. ಆದರೆ ಆಗಿದ್ದು ಮಾತ್ರ ಬೇರೆ ಇದಲ್ಲದೆ ಉತ್ತರ ಪ್ರದೇಶದಲ್ಲಿ ನೂರಾರು ಮಾಬ್ ಲಿಂಚಿಂಗ್ ಪ್ರಕರಣ ನಡೆದಿದ್ದು, ಬಹುತೇಕ ದಲಿತ, ಮುಸ್ಲಿಂ ಕುಟುಂಬಗಳು ಭಯದಿಂದ ಗ್ರಾಮ ತೊರೆದಿರುವ ಉದಾಹರಣೆಗಳಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಗಲಭೆಗಳಾಗಿದ್ದು ಮನೆ ಮಠ ತೊರೆದವರ ಸಂಖ್ಯೆ ಊಹೆಗೆ ನಿಲುಕದ್ದಾಗಿದೆ.


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ರೀತಿಯ ಗಲಭೆಗಳು ದೇಶಾದ್ಯಂತ ಬಹಳ ಹಿಂದೆ ನಡೆದಘಟನೆನಡೆದಿದ್ದು ಈಗ ಈಚಲನ ಚಿತ್ರದಮೂಲಕ ಏನನ್ನು ಸಾದಿಸಹೊರಟಿದ್ದಾರೆ. ಇದರಿಂದ ನವ ಯುವಕರಿಗೆ ರೋಷ ಬಿತ್ತಿದಂತಾಗುವುದಿಲ್ಲವೆ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...