Homeಅಂಕಣಗಳುಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

- Advertisement -
- Advertisement -

ಕಲೆಯನ್ನು ಪ್ರಭುತ್ವಗಳು ರಾಜಕೀಯ ಪ್ರೊಪೊಗಾಂಡವಾಗಿ ಬಳಸಿಕೊಂಡ ಅಸಂಖ್ಯಾತ ಉದಾಹರಣೆಗಳು ಜಗತ್ತಿನಾದ್ಯಂತ ಸರ್ವೇಸಾಮಾನ್ಯವಾಗಿವೆ. ಬಹಳ ಪರಿಣಾಮಕಾರಿ ಮಾಧ್ಯಮವಾದ ಸಿನಿಮಾಗಳಲ್ಲಿ ಈ ವಿದ್ಯಮಾನವನ್ನು ಇನ್ನೂ ಹೆಚ್ಚಾಗಿ ಕಾಣಬಹುದು. ’ಅಮೆರಿಕ ಗ್ರೇಟ್’ ಎಂಬುದನ್ನು ಪದೇಪದೇ ಬಿತ್ತಿ, ಹಲವು ಕಮ್ಯುನಿಸ್ಟ್ ಪ್ರಭುತ್ವಗಳು ಅಮೆರಿಕದ ಸಾಮಾನ್ಯ ಜನರ ಶತ್ರು ಎಂಬಂತೆ ಬಿಂಬಿಸಿರುವ ಬಹಳಷ್ಟು ಹಾಲಿವುಡ್ ಸಿನಿಮಾಗಳಿವೆ. ಬಾಲಿವುಡ್ ಸೇರಿದಂತೆ ಭಾರತದ ಹಲವು ಚಿತ್ರರಂಗಗಳ ಸಿನಿಮಾಗಳು ಕೂಡ ಇಂತಹ ಪ್ರೊಪೊಗಾಂಡಕ್ಕೆ ಹೊರತೇನಲ್ಲ. ಜಾತಿ ವ್ಯವಸ್ಥೆಯ ತಾರತಮ್ಯವನ್ನು ಪರೋಕ್ಷವಾಗಿ (ಕೆಲವೊಮ್ಮೆ ನೇರವಾಗಿಯೂ) ಸಮರ್ಥಿಸಿಕೊಳ್ಳುವ, ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪೂರ್ವಗ್ರಹಗಳನ್ನು ಬೆಳೆಸುವ ಅಥವ ಬಿತ್ತುವ, ಪ್ರಭುತ್ವಗಳ ನರೆಟಿವ್‌ಅನ್ನು ಜನರಲ್ಲಿ ನೆಲೆಗೊಳಿಸುವ ಸಿನಿಮಾಗಳಿಗೆ ಇಲ್ಲಿಯೇನೂ ಕೊರತೆಯಿಲ್ಲ. ಇವುಗಳಿಗೆ ಚಿಕಿತ್ಸೆ ಎಂಬಂತೆ ಆಗಾಗ ಕೆಲವು ಚಿಂತನಾರ್ಹ ಮತ್ತು ಜನಪರ ಕಾಳಜಿಯ ತಿಳಿವಳಿಕೆಯುಳ್ಳ ಸಿನಿಮಾಗಳು ಮೂಡಿರುವುದು ನಿಜವಾದರೂ ಅವುಗಳ ಸಂಖ್ಯೆ ಬಹಳ ಕಡಿಮೆ.

ಇತ್ತೀಚೆಗೆ ಬಿಡುಗಡೆಯಾದ ’ದ ಕಾಶ್ಮೀರ್ ಫೈಲ್ಸ್’ ಎಂಬ ಸಿನಿಮಾ ಭಾರತದಲ್ಲಿ ಮೂಡಿರುವ ಪ್ರೊಪೋಗಾಂಡ ಸಿನಿಮಾಗಳಿಗೆಲ್ಲಾ ಅಪ್ಪನಂತದ್ದು! ಅದನ್ನು ನೋಡಿದ ಜನ ತೋರಿಸುತ್ತಿರುವ ಪ್ರತಿಕ್ರಿಯೆಗಳಿಂದ ಅಥವಾ ಅದನ್ನು ಹೆಚ್ಚಿನ ಜನ ನೋಡಲೆಂದು ಭಾಜಪ ಮತ್ತು ಸಂಘಪರಿವಾರ ಮಾಡುತ್ತಿರುವ ಸರ್ಕಸ್ ನೋಡಿದರೆ ಅದು ಸುಲಭವಾಗಿ ತಿಳಿಯುತ್ತದೆ. 1989-90ರ ಇಸವಿಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಅವರು ಕಾಶ್ಮೀರ ತೊರೆದು ಭಾರತದ ಹಲವು ಭಾಗಗಳಿಗೆ ಡಿಸ್‌ಪ್ಲೇಸ್ ಆದ ಕಥಾಹಂದರ ಹೊಂದಿದೆ ಎಂಬುದನ್ನು ಈ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ಹಲವು ಲೇಖನಗಳು ತಿಳಿಸುತ್ತವೆ. ಕಾಶ್ಮೀರದಲ್ಲಿ ಜನಸಂಖ್ಯೆಯ ಆಧಾರವಾಗಿ ಒಂದು ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಸಿದ ಹಲ್ಲೆ-ಹತ್ಯೆ ಮತ್ತು ಅದರಿಂದಾದ ಆಂತರಿಕ ವಲಸೆಯ ಬಗ್ಗೆ ಸಿನಿಮಾ ಮಾಡಿದ್ದರೆ, ನಿರ್ದೇಶಕನಿಗೆ ಮಾನವ ಹಕ್ಕುಗಳ ಬಗ್ಗೆ ಕಾಳಜಿ ಇದೆ ಎಂದು ಯಾರಾದರೂ ತಿಳಿಯಬೇಕು. ಆದರೆ ಇದು ಮಾನವ ಹಕ್ಕುಗಳ ಬಗ್ಗೆ ಸದಾ ವಿಷಕಾರುವ ವ್ಯಕ್ತಿಯೊಬ್ಬ ಮಾಡಿರುವ ಸಿನಿಮಾವಾಗಿದೆ. ಇದನ್ನು ಥಿಯೇಟರ್‌ನಲ್ಲಿ ನೋಡಿದ ಕೆಲವರು, ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರ (ಅವರಲ್ಲೂ ಮೆಜಾರಿಟಿ ಸಂತ್ರಸ್ತರೇ) ವಿರುದ್ಧ ಪ್ರತೀಕಾರಕ್ಕೆ ಕರೆ ಕೊಡುತ್ತಿದ್ದಾರೆ; ಇನ್ನು ಕೆಲವರು ಮುಸ್ಲಿಂ ನಟರ ಸಿನಿಮಾಗಳನ್ನು ನೋಡಬೇಡಿ ಎಂದು ಭಾಷಣ ಬಿಗಿಯುತ್ತಿದ್ದಾರೆ; ಮುಸ್ಲಿಮರ ಜೊತೆಗೆ ವ್ಯವಹರಿಸಬೇಡಿ ಎನ್ನುವುದರಿಂದ ಹಿಡಿದು ದೇಶದಾದ್ಯಂತ ಮುಸ್ಲಿಮರ ಮಾರಣಹೋಮಕ್ಕೆ ಕೆಲವರು ಕರೆ ನೀಡುತ್ತಿದ್ದಾರೆ. ಅಲ್ಲಿಗೆ ಈ ಸಿನಿಮಾ ಒಂದು ಕೋಮಿನ ವಿರುದ್ಧ ದ್ವೇಷ ಹುಟ್ಟುಹಾಕಲು ನಿರ್ಮಿಸಿರುವ ಸಿನಿಮಾವೆಂದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಸಿನಿಮಾವೊಂದು ಅಂತಃಕರಣವನ್ನು ಕಲಕುವ, ಆ ಮೂಲಕ ಪ್ರಭುತ್ವಗಳನ್ನು-ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವೆಡೆಗೆ ಪ್ರೇರೇಪಿಸುವಂತೆ ಇದ್ದರೆ ಅದು ಒಳ್ಳೆಯ ಸಿನಿಮಾ ಎನ್ನಬಹುದು. ತೀರಾ ಜನರಲೈಸ್ ಮಾಡಿ, ಪ್ರಭುತ್ವದ ಪಾತ್ರವನ್ನು ಮರೆಮಾಚಿ, ಒಂದು ಪಂಗಡದ ಸಂತ್ರಸ್ತರ ಬಗ್ಗೆ ಸಹಾನುಭೂತಿ ತೋರಿಸಿ ಇನ್ನೊಂದು ಪಂಗಡದ ಸಂತ್ರಸ್ತರ ವಿರುದ್ಧ ಹಿಂಸೆಗೆ ಪ್ರಚೋದಿಸುವ ಸಿನಿಮಾವನ್ನು ಏನೆನ್ನುವುದು?

ಕಾಶ್ಮೀರಿ ಪಂಡಿತರ ಹತ್ಯೆಯ ಸಂಖ್ಯೆಯನ್ನು ಸಾವಿರಾರು ಪಟ್ಟು ಹೆಚ್ಚಿಸಿ, 89-90ರಲ್ಲಿ ನಡೆದ ವಿದ್ಯಮಾನಗಳನ್ನು ನಿಖರತೆಯಿಂದ ಚಿತ್ರಿಸದೆ (ಸೃಜನಶೀಲ ಸ್ವಾತಂತ್ರ್ಯದಲ್ಲಿಯೂ ಪ್ರ್ರಾಮಾಣಿಕವಾದ ಚಿತ್ರಣ ಸಾಧ್ಯವಿದೆ), ಕಾಶ್ಮೀರದಲ್ಲಾದ ಗಲಭೆಗಳಿಗೆ ಪ್ರಭುತ್ವದ ಮತ್ತು ಸೇನೆಯ ಅತಿಗಳನ್ನು ಮರೆಮಾಚಿ, ಜನರ ಭಾವನೆಗಳನ್ನು ಕೆರಳಿಸಿ ದ್ವೇಷವನ್ನು ಹರಡುವುದಕ್ಕಾಗಿಯೇ ಮಾಡಿದ ಸಿನಿಮಾಗೆ ಬಿಜೆಪಿಯ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ನೀಡಿದ್ದರೆ, ಸಂಘ ಪರಿವಾರದವರು ಈ ಸಿನಿಮಾ ಬಗ್ಗೆ ಟೀಕೆ ಮಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ತಮ್ಮ ಎಂದಿನ ಚಾಳಿಯನ್ನು ಪರಿಣಾಮಕಾರಿಯಾಗಿ ಮುಂದುವರಿಸಿದ್ದಾರೆ. ಸಿನಿಮಾದ ಸುತ್ತ ನಡೆಯುತ್ತಿರುವ ಚರ್ಚೆಗಳು ಮತ್ತು ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳಿಂದಲೇ ಸಿನಿಮಾದ ಅಪ್ರಮಾಣಿಕತೆಯನ್ನು ಹಲವು ಸ್ತರಗಳಲ್ಲಿ ಅವಲೋಕಿಸಬಹುದಾಗಿದೆ.

ಮೊದಲನೆಯದಾಗಿ, ಕಾಶ್ಮೀರಿ ಪಂಡಿತರ ಹತ್ಯೆಯ ಸಂಖ್ಯೆಯನ್ನು, ಎಕ್ಸಾಗರೇಟ್ ಪದವೂ ನಾಚುವಂತೆ ಹಲವು ಸಾವಿರ ಪಟ್ಟು ಹೆಚ್ಚಿಸಿ ಹೇಳಿರುವುದು; 1990ರ ಮಾರ್ಚ್ ಹೊತ್ತಿಗೆ ಕಾಶ್ಮೀರದಿಂದ ಅಲ್ಲಿನ ಪಂಡಿತರ ಸ್ಥಳಾಂತರ ಬಹುತೇಕ ಪೂರ್ಣಗೊಂಡಿದ್ದ ಮೇಲೆ, ಪಂಡಿತ ಸಮುದಾಯದ ಸಂಸ್ಥೆಯಾದ ’ಆಲ್ ಇಂಡಿಯಾ ಕಾಶ್ಮೀರಿ ಪಂಡಿತ್ ಕಾನ್ಫರೆನ್ಸ್’, ತಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, 32 ಕಾಶ್ಮೀರಿ ಪಂಡಿತರು ಭಯೋತ್ಪಾದಕರಿಂದ ಹತರಾದರು ಎಂದು ಹೇಳಿತ್ತು. ಇನ್ನು ನವೆಂಬರ್ 2021ರ ಮಾಹಿತಿ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯ ಪ್ರಶ್ನೆಗೆ ಜಮ್ಮು ಕಾಶ್ಮೀರ ಪೊಲೀಸರು ನೀಡಿದ ಉತ್ತರದ ಪ್ರಕಾರ 1990ರಲ್ಲಿ ಹತ್ಯೆಯಾದ ಕಾಶ್ಮೀರಿ ಪಂಡಿತರ ಸಂಖ್ಯೆ 89. ಇನ್ನೂ ಹಲವು ಮೂಲಗಳನ್ನು ಶೋಧಿಸಿದರೂ 1989ರಲ್ಲಿ ಮತ್ತು 90ರಲ್ಲಿ ಹತ್ಯೆಯಾದ ಒಟ್ಟು ಕಾಶ್ಮೀರಿ ಪಂಡಿತರ ಸಂಖ್ಯೆ ಸುಮಾರು 250ರಿಂದ 350. ಹೀಗಿರುವಾಗ ಈ ಸಂಖ್ಯೆಯನ್ನು 4000 ಎಂದು ಸುಳ್ಳುಸುಳ್ಳೆ ಸಿನಿಮಾ ಬಿಂಬಿಸಿರುವುದು ತನ್ನ ಹಿಂದುತ್ವ ಪ್ರೊಪೋಗಾಂಡ ಕಾರಣಕ್ಕಲ್ಲದೆ ಮತ್ತೇನು?

ಪ್ರತಿ ಸಾವೂ ಕೂಡ ನೋವಿನ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯೇ. ಯಾರೊಬ್ಬರಾದರೂ ಹುಟ್ಟಿಬೆಳೆದ ಪ್ರದೇಶದಿಂದ ಬಲವಂತದಿಂದ, ಭಯಭೀತಿಯಿಂದ ಒಕ್ಕಲೇಳುವ ಸನ್ನಿವೇಶಕ್ಕೆ ದೂಕಲ್ಪಡುವುದು ಮತ್ತು ಸ್ಥಳಾಂತರವಾಗುವುದು ಕೂಡ ಅಮಾನವೀಯ ವಿದ್ಯಮಾನಗಳೇ. ಅದಕ್ಕೆ ಪರಿಹಾರ ಒದಗಿಸಲು ಇಂತಹ ಮಾನವೀಯ ಬಿಕ್ಕಟ್ಟಿನ ಅಂತಃಶೋಧದ ಅವಶ್ಯಕತೆ ಇದೆ. ’ಸೃಷ್ಟಿ’ ಮಾಡಿದ ಧಾರ್ಮಿಕ ಕೋಮುದ್ವೇಷದ ಕೋನವನ್ನು ಈ ವಿದ್ಯಮಾನಗಳಿಗೆ ತಳುಕುಹಾಕುವುದಲ್ಲ. ಕಾಶ್ಮೀರಿ ಪಂಡಿತರ ಮೇಲಾದ ಹಲ್ಲೆಯ ಸಮಯದಲ್ಲಿಯೇ ಭಯೋತ್ಪಾದನೆಯಿಂದ ಸಾವಿರಾರು ಮುಸ್ಲಿಮರು ಕೂಡ ಹತ್ಯೆಯಾಗಿದ್ದಾರೆ. ಆ ಹತ್ಯೆಗಳಿಗೆ ಬೆನ್ನು ತಿರುಗಿಸಿ, ತನ್ನ ರಾಜಕೀಯ ಅಜೆಂಡಾಗೆ ಬೇಕಾದ ಒಂದು ಹತ್ಯಾಕಾಂಡವನ್ನು ಮಾತ್ರ ರೋಚಕಗೊಳಿಸಿ, ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಕೆರಳಿಸುವ ಪ್ರಕ್ರಿಯೆಗೆ ಕಲೆಯನ್ನು ಬಳಸಿಕೊಳ್ಳುವುದು, ಅದಕ್ಕೆ ಬಿಜೆಪಿ ನೇತೃತ್ವದ ಸರ್ಕಾರಗಳು ಸಹಾಯಹಸ್ತ ಚಾಚುವುದು, ತನ್ನ ಹಲವು ವರ್ಷಗಳ ಕೋಮು ರಾಜಕೀಯವನ್ನು ಈ ಮೂಲಕ ಮುಂದುವರೆಸುವುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಎರಡನೆಯದಾಗಿ, ಇಷ್ಟು ವರ್ಷ ಬಿಜೆಪಿ ಮತ್ತು ಸಂಘಪರಿವಾರದವರು ಮಾನವ ಹಕ್ಕುಗಳ ಬಗ್ಗೆ ನಿರಂತರವಾಗಿ ನಡೆಸಿಕೊಂಡು ಬಂದ ಅಪಪ್ರಚಾರದ ಹಿನ್ನೆಲೆಯಲ್ಲಿ, ಈಗ ಕಾಶ್ಮೀರಿ ಪಂಡಿತರ ವಿಷಯದಲ್ಲಿ ತೋರಿಸುತ್ತಿರುವ ಅಪ್ರಾಮಾಣಿಕ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ನಕಲಿ ಎನ್‌ಕೌಂಟರ್‌ಗಳ ಸಮಯದಲ್ಲಿ, ಸಶಸ್ತ್ರ ಮಾವೋವಾದಿಗಳು ಅಥವಾ ಪ್ರತ್ಯೇಕವಾದಿಗಳ ವಿರುದ್ಧ ಸಮರದ ಹೆಸರಿನಲ್ಲಿ ಎಷ್ಟೋ ನಾಗರಿಕರನ್ನು ಹತ್ಯೆ ಮಾಡಿದಾಗ, ಅಷ್ಟೇ ಏಕೆ ಚಿಂತಕರ-ಬರಹಗಾರರ ಮೇಲೆ ಸಿನಿಮೀಯ ರೀತಿಯಲ್ಲಿ ಆರೋಪಗಳನ್ನು ಹೊರಿಸಿ ಯುಎಪಿಎಯಂತಹ ಕರಾಳ ಕಾನೂನುಗಳನ್ನು ಹೇರಿ ಬಂಧಿಸಿ ಜೈಲಿನಲ್ಲಿ ಕೊಳೆಸುವ ಸಂದರ್ಭಗಳಲ್ಲಿ, ಮಾನವ ಹಕ್ಕುಗಳ ಪ್ರಶ್ನೆ ಬಂದಾಗ ಕುಹಕವಾಡಿದ, ಗೇಲಿ ಮಾಡಿದ ಜನಕ್ಕೆ ಇಂದು ಮಾನವ ಹಕ್ಕುಗಳ ಬಗ್ಗೆ ಬೋಧಿಸುವ ನೈತಿಕತೆ ಉಳಿದಿದೆಯೇ?

ನೆರೆ ದೇಶಗಳಲ್ಲಿನ ಹಲವು ಸಂಘರ್ಷಗಳಲ್ಲಿ ಸಿಲುಕಿ ದಾರಿಕಾಣದೆ ಭಾರತದಂತಹ ದೇಶಕ್ಕೆ ನೆಲೆ ಅರಸಿ ಬಂದ ಜನರನ್ನು ಧರ್ಮಾಧಾರಿತವಾಗಿ ಕರೆಸಿಕೊಳ್ಳುವ, ಮುಸ್ಲಿಮರಾಗಿದ್ದರೆ ಅವರಿಗೆ ಆಶ್ರಯವನ್ನು ನಿರಾಕರಿಸುವ ನೀತಿಯನ್ನು ಬಿಜೆಪಿ ಕೆಲವೊಮ್ಮೆ ನೇರವಾಗಿ ಮತ್ತೆ ಕೆಲವೊಮ್ಮೆ ಪರೋಕ್ಷವಾಗಿ ಅನುಸರಿಸುತ್ತಾ ಬಂದಿಲ್ಲವೇ? ಅಷ್ಟೇ ಏಕೆ, ಭಾರತದಲ್ಲಿ ನಡೆದ ಕೋಮು ಘರ್ಷಣೆಗಳಲ್ಲಿ ಆಂತರಿಕವಾಗಿ ಡಿಸ್‌ಪ್ಲೇಸ್ ಆದ ಎಷ್ಟೋ ಜನರ ಬಗ್ಗೆ ಬಿಜೆಪಿ ಸರ್ಕಾರಗಳು ಅನುಸರಿಸುತ್ತಿರುವ ತರತಮದ ನೀತಿಗಳು ಕಣ್ಣಿಗೆ ರಾಚುತ್ತವೆ. ಗೋಧ್ರಾ ಹತ್ಯಾಕಾಂಡ, ಮುಜಾಫರ್‌ನಗರ ಕೋಮು ಘರ್ಷಣೆಯಲ್ಲಿ ನೆಲೆ ಕಳೆದುಕೊಂಡವರ ಸ್ಥಿತಿಗತಿಗಳು ಇಂದು ಶೋಚನೀಯವಾಗಿದೆ. ಈ ಸಮಯದಲ್ಲಿ ಸೆಲೆಕ್ಟಿವ್ ಆಗಿ ಕಾಶ್ಮೀರಿ ಪಂಡಿತರ ನೋವಿಗೆ ಮಾತ್ರ ಮಿಡಿದು ಉಳಿದವರ ವಿರುದ್ಧ ದ್ವೇಷ ಹಬ್ಬಿಸುವುದು ನೈತಿಕ ಅಧಃಪತನವಲ್ಲದೆ ಮತ್ತೇನು?

ಕಾಶ್ಮೀರಿ ಪಂಡಿತರ ವಿಷಯದಲ್ಲಿಯೂ, ಹಲವು ಸರ್ಕಾರಗಳು ಸ್ಥಳಾಂತರಗೊಂಡವರಿಗೆ ಸರಿಯಾದ ನೆಲೆಯನ್ನು ಒದಗಿಸಲು ವಿಫಲವಾಗಿರುವಂತೆ, ಬಿಜೆಪಿ ಆಡಳಿತದ ಹಲವು ಸರ್ಕಾರಗಳು ಕೂಡ ಇದರಲ್ಲಿ ದಯನೀಯವಾಗಿ ಸೋತಿವೆ. ರಾಜಕೀಯ ದುರುದ್ದೇಶಕ್ಕಾಗಿ ಮಾತ್ರ ಈ ಸಮಸ್ಯೆಯನ್ನು ಹೈಲೈಟ್ ಮಾಡುತ್ತಾ ದಿಟ ಕಾಳಜಿಯನ್ನು ಎಂದೂ ನಡೆಯಲ್ಲಿ ತೋರಿಸದೆ ಮತರಾಜಕಾರಣ ಮಾಡುವವರ ಪಕ್ಷಪಾತಿಯಾಗಿರುವ ನಿರ್ದೇಶಕ ವಿವೇಕ ಅಗ್ನಿಹೋತ್ರಿಯ ಈ ಸಿನಿಮಾವನ್ನು ಕಾಶ್ಮೀರಿ ಪಂಡಿತರಲ್ಲೇ ಹಲವರು ತಿರಸ್ಕರಿಸಿದ್ದಾರೆ. ಇದು ಇನ್ನೂ ದೊಡ್ಡ ಧ್ವನಿ ಪಡೆದುಕೊಳ್ಳಬೇಕಿದೆ.

ಮೂರನೆಯದಾಗಿ, ಕಾಶ್ಮೀರಿ ಸಮಸ್ಯೆಯ ಸಮಗ್ರ ಅವಲೋಕನದ ಕೊರತೆ; ಒಂದು ಸಿನಿಮಾವಾಗಿ ಒಂದು ಪ್ರದೇಶದ ಸಂಘರ್ಷಕ್ಕೆ ಕಾರಣವಾಗಿರುವ ಸಂಪೂರ್ಣ ಇತಿಹಾಸವನ್ನು ಚಿತ್ರಿಸುವುದು ಸುಲಭವಲ್ಲದೆ ಹೋದರೂ, ಸಮಸ್ಯೆಯ ಬಹು ಆಯಾಮಗಳನ್ನು ಸೂಚ್ಯವಾಗಿಯಾದರೂ ಒಳಗೊಳ್ಳಬೇಕಾದ ಬದ್ಧತೆಯನ್ನು ಅದು ಹೊಂದಿರಬೇಕು. ಕಾಶ್ಮೀರಿ ಸಮಸ್ಯೆಯಲ್ಲಿ ಭಾರತದ ಹಲವು ಸರ್ಕಾರಗಳ ಪಾತ್ರವೇನು? 87ರ ಚುನಾವಣೆಯನ್ನು ’ರಿಗ್’ ಮಾಡಿದ್ದುದು ಅಲ್ಲಿನ ಇನ್ಸರ್ಜೆನ್ಸಿ ಹೆಚ್ಚಲು ನೀಡಿದ ಕೊಡುಗೆ ಏನು? ಸರ್ಕಾರ ವಜಾಗೊಂಡು ಜಗಮೋಹನ್ ಎಂಬ ವ್ಯಕ್ತಿ ರಾಜ್ಯಪಾಲರಾಗಿ ಬಂದಾಗ ನಡೆಸಿದ ದುರಾಡಳಿತ; ಎಎಫ್‌ಎಸ್‌ಪಿಎ ಅನ್ನು ಕಾಶ್ಮೀರದಲ್ಲಿ ಹೇರಿದ ಮೇಲೆ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಪಡೆಗಳು ಅಲ್ಲಿನ ನಾಗರಿಕರ ಮೇಲೆ ನಡೆಸಿದ ದೌರ್ಜನ್ಯದಿಂದ ಅಲ್ಲಿನ ಪ್ರಾದೇಶಿಕ ಜನ ಕಂಗೆಟ್ಟದ್ದು; ನೆರೆ ಪಾಕಿಸ್ತಾನ ಪ್ರಭುತ್ವದ ಕುತಂತ್ರ; ಹೀಗೆ ಇವೆಲ್ಲವನ್ನೂ ಕನಿಷ್ಟ ಮಟ್ಟದಲ್ಲೂ ಧ್ವನಿಸದೆ ಏಕಪಕ್ಷೀಯವಾಗಿ ಒಂದು ರಾಜಕೀಯ ಪಕ್ಷದ ವಕ್ತಾರನಂತೆ ಸಿನಿಮಾ ನಿರ್ದೇಶನ ಮಾಡಿರುವ ಕುಟಿಲ ತಂತ್ರವನ್ನು ’ತಿಳಿಯದ’ ಪ್ರೇಕ್ಷಕರಿಗೆ ಸತ್ಯವನ್ನು ಮನಗಾಣಿಸುವ ಕೆಲಸ ತೀವ್ರವಾಗಬೇಕಿದೆ.

ನಾಲ್ಕನೆಯದಾಗಿ ಸಾಮರಸ್ಯದ ಕಾಳಜಿಗಿಂತ ಒಡೆದು ಆಳುವ ತಂತ್ರಗಾರಿಕೆ; ಕಾಶ್ಮೀರಿ ಪಂಡಿತರ ಮತ್ತು ಕಾಶ್ಮೀರಿ ಮುಸ್ಲಿಮರ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಲು ಬರುವುದಿಲ್ಲವಾದರೂ, ಇರುವ ಅಪನಂಬಿಕೆಗಳ ಕಂದರಕ್ಕೆ ಸೇತುವ ಕಟ್ಟುವ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನಗಳ ನೂರಾರು ಉದಾಹರಣೆಗಳನ್ನು ಹಲವರು ದಾಖಲಿಸಿದ್ದಾರೆ. 89-90ರ ಸಮಯದಲ್ಲಿ ಕಾಶ್ಮೀರಿ ಪಂಡಿತರು ಗುಳೆಹೋಗಬೇಕಾದ ಪರಿಸ್ಥಿತಿ ಇದ್ದಾಗಲೂ, ಮುಸ್ಲಿಮರ ಪರವಾಗಿ ಜಮ್ಮು ಕಾಶ್ಮೀರದ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಮುಫ್ತಿ ಬಹಾವುದ್ದೀನ್ ಫರೂಕಿ ಮತ್ತು ಕಾಶ್ಮೀರಿ ಪಂಡಿತರ ಪರವಾಗಿ ಅವರ ನಾಯಕ ಎಚ್ ಎಸ್ ಜುಟ್ಟೋ ಶಾಂತಿ ಕಾಪಾಡಲು ಮತ್ತು ಕಣಿವೆಯಲ್ಲಿ ಪಂಡಿತರು ಉಳಿಯುವಂತೆ ನೋಡಿಕೊಳ್ಳಲು ಜಂಟಿ ಪ್ರಕಟಣೆಗೆ ಸಹಿ ಹಾಕಿದ್ದನ್ನು ಕೆ ಬಾಲಗೋಪಾಲ್ ತಮ್ಮ ’ಪ್ರಕ್ಷುಬ್ಧ ಕಣಿವೆ’ ಪುಸ್ತಕದಲ್ಲಿ (ಅನುವಾದ: ನಗರಗೆರೆ ರಮೇಶ್ ಮತ್ತು ವಿ ಎಸ್ ಶ್ರೀಧರ) ದಾಖಲಿಸಿದ್ದಾರೆ.

ಕಾಶ್ಮೀರದ ಬಿಕ್ಕಟ್ಟಿನ ಬಗ್ಗೆ ಅಧಿಕೃತವಾಗಿ ಬರೆಯುವ ಸುಮಾಂತ್ರಾ ಬೋಸ್ ಅವರು ’ಕಾಶ್ಮೀರ್ ಅಟ್ ದ ಕ್ರಾಸ್‌ರೋಡ್ಸ್’ ಎಂಬ ತಮ್ಮ ಪುಸ್ತಕದಲ್ಲಿ ದಾಖಲಿಸುವ ಈ ಮಾತುಗಳನ್ನು ಗಮನಿಸಿ: “ನಾನು 1990ರ ಮಧ್ಯ ಭಾಗದಲ್ಲಿ ಕಾಶ್ಮೀರದಲ್ಲಿ ಪ್ರವಾಸ ಮಾಡಿದಾಗ, ಕೆಲವು ಪಂಡಿತರನ್ನು ಭೇಟಿ ಮಾಡುವುದಕ್ಕೆ ಅಚ್ಚರಿಯಾಗಿತ್ತು, ಕೆಲವು ಪ್ರಕರಣಗಳಲ್ಲಿ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಡೀ ಕುಟುಂಬಗಳನ್ನು ಭೇಟಿ ಮಾಡಿದೆ. ಅವರಲ್ಲಿ ಕೆಲವರು 1990ರ ಸಾಮೂಹಿಕ ವಲಸೆಯಲ್ಲಿ ಭಾಗಿಯಾಗಿರದಿದ್ದರೆ ಇನ್ನೂ ಕೆಲವರು ತಮ್ಮ ಪ್ರದೇಶಗಳಲ್ಲಿ ಭಯೋತ್ಪಾದನೆ ಕಡಿಮೆಯಾಗುತ್ತಿದ್ದುದಕ್ಕೆ ಜಮ್ಮುವಿನಿಂದ ಆಗಷ್ಟೇ ಹಿಂದಿರುಗಿದ್ದರು. ತಮ್ಮ ಮುಸ್ಲಿಂ ನೆರೆಯವರು ಮತ್ತು ಗೆಳೆಯರು ತಮ್ಮ ಬೆಂಬಲಕ್ಕೆ ನಿಂತಿರುವುದಾಗಿ ಅವರೆಲ್ಲಾ ಹೊಗಳಿದರು. ಅಷ್ಟೇ ಅಲ್ಲದೆ, ಪಂಡಿತ್ ಸಮುದಾಯದ ಒಂದು ಕಟ್ಟರ್ ಬಣ ಮೂರು ದಶಕಗಳಿಂದಲೂ ತಮ್ಮ ಕಣಿವೆಯ ಮೂಲನೆಲೆಯನ್ನು ಭದ್ರವಾಗಿ ಹಿಡಿದುಕೂತಿದೆ. ಕಣಿವೆಯ ಸೋಫಿಯಾನ್ ಜಿಲ್ಲೆಯ ಝೈನಪೋರಾ ಹಳ್ಳಿಯಲ್ಲಿ ಆ ಬಣದ ಒಬ್ಬ ವ್ಯಕ್ತಿ ಕಾಂತ ರಾಮ್ ಟೀಕೂ ತಮ್ಮ 112ನೇ ವಯಸ್ಸಿನಲ್ಲಿ ಜುಲೈ 2020ರಲ್ಲಿ ನಿಧನ ಹೊಂದಿದರು..”

ಹೀಗೆ ಕಾಶ್ಮೀರಿ ಪಂಡಿತರನ್ನು ಮುಸ್ಲಿಮರು ರಕ್ಷಿಸಿರುವ ಹಲವಾರು ಉದಾಹರಣೆಗಳನ್ನು ಈ ಪುಸ್ತಕವೂ ಸೇರಿದಂತೆ ಹಲವೆಡೆ ದಾಖಲಿಸಲಾಗಿದೆ. ಕಾಶ್ಮೀರಿ ಪಂಡಿತರು ಕಣಿವೆಗೆ ಹಿಂದಿರುಗಬೇಕೆಂದು ಕಾಶ್ಮೀರಿ ಮುಸ್ಲಿಮರು ಮನವಿ ಮಾಡಿದ ಹಲವಾರು ಉದಾಹರಣೆಗಳಿವೆ. ಅಲ್ಲಿನ 23 ಹಿಂದೂ ದೇವಾಲಯಗಳಲ್ಲಿ 21 ಹಿಂದೂ ದೇವಾಲಯಗಳಿಗೆ ಯಾವ ಹಾನಿಯೂ ಅಗದಂತೆ ಸಾಮಾನ್ಯ ಕಾಶ್ಮೀರಿ ಮುಸ್ಲಿಮರು ಕಾಯ್ದಿರುವ ವರದಿಗಳಿವೆ. ಇಂತಹ ವರದಿಗಳು ಸಂಘ ಪರಿವಾರದ ಸುಳ್ಳುಗಳನ್ನು ಅಲ್ಲಗಳೆಯುತ್ತವೆ. ಇಂದಿನ ವಿಷಮ ಘಳಿಗೆಯ ಸಂದರ್ಭದಲ್ಲಿ, ದೂರವಾಗಿರುವ ಮನಸ್ಸುಗಳನ್ನು ಮತ್ತು ಸಮುದಾಯಗಳನ್ನು ಬೆಸೆಯುವ ನೈಜ ಕಥೆಗಳನ್ನು ಸಿನಿಮಾದಲ್ಲಿ ಪ್ರಧಾನವಾಗಿ ನಿರೂಪಿಸಿ, ಪರಿಹಾರದೆಡೆಗೆ ತಮ್ಮ ಒಲವನ್ನು-ಬದ್ಧತೆಯನ್ನು ನಿರ್ದೇಶಕ ದಾಖಲಿಸುವ ವಿಪುಲ ಅವಕಾಶವಿದ್ದರೂ ಆತ ಆಯ್ದುಕೊಂಡಿದ್ದು ದ್ವೇಷವನ್ನು ಹೆಚ್ಚಿಸುವ ಕಲ್ಪಿತ ಕತೆಗಳನ್ನು!

ಕಾಶ್ಮೀರ ಹಲವು ವರ್ಷಗಳಿಂದ ಹತ್ತಾರು ಹಿತಾಸಕ್ತಿಯ ಅಧಿಕಾರ ಕೇಂದ್ರಗಳಿಂದ ನಲುಗಿರುವ ಪ್ರದೇಶ. ಒಂದು ಕಡೆ ಪಾಕಿಸ್ತಾನ ಪ್ರಭುತ್ವ, ಮತ್ತೊಂದು ಕಡೆಗೆ ಭಾರತದ ಪ್ರಭುತ್ವ ಮತ್ತು ಸೇನೆ, ಪ್ರತ್ಯೇಕವಾದಿಗಳ ಬಣ, ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು – ಹೀಗೆ ಹತ್ತು ಹಲವು ಬಣಗಳಿಂದ ಅಲ್ಲಿ ಸಾಮಾನ್ಯ ಮುಸ್ಲಿಂ ಮತ್ತು ಹಿಂದೂ ನಾಗರಿಕರು ನಿರಂತರ ಹಿಂಸೆ ಮತ್ತು ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ. ಸಾಮಾನ್ಯ ನಾಗರಿಕರನ್ನು ಖಳನಾಯಕರಂತೆ ಚಿತ್ರಿಸಿ, ಬಿಕ್ಕಟ್ಟಿನ ಸಂಕೀರ್ಣತೆಯನ್ನು ಗೌಣಗೊಳಿಸಿ, ಮಾನವ ಹಕ್ಕುಗಳ ಬಗ್ಗೆ ಪಕ್ಷಪಾತದ ಮತ್ತು ತೋರಿಕೆಯ ಕಾಳಜಿಯನ್ನಷ್ಟೇ ಪ್ರದರ್ಶಿಸಿ, ದ್ವೇಷದ ಅಜೆಂಡಾವನ್ನು ಮೊಳಗಿಸಲು ಮಾಡಿರುವ ಈ ಸಿನಿಮಾದ ಬಗೆಗೆ ಸತ್ಯದರ್ಶನ ಮಾಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.


ಇದನ್ನೂ ಓದಿ: ದಿ ಕಾಶ್ಮೀರ್‌ ಫೈಲ್ಸ್ ನಿರ್ಮಿಸಿದವರ ಜೊತೆ ಭಯೋತ್ಪಾದಕರ ನಂಟು: ಜಿತನ್ ರಾಮ್ ಮಾಂಝಿ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...