Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾರವಾರ-ಅಂಕೋಲಾ: ಹಾಲಕ್ಕಿಗಳ ಸೀಮೆಯಲ್ಲಿ ಹಣದವರ ಕಾರುಬಾರು!

ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾರವಾರ-ಅಂಕೋಲಾ: ಹಾಲಕ್ಕಿಗಳ ಸೀಮೆಯಲ್ಲಿ ಹಣದವರ ಕಾರುಬಾರು!

- Advertisement -
- Advertisement -

ಸ್ವಾದಿಷ್ಟಕರ ಮೀನಿನ ಭಕ್ಷ್ಯಕ್ಕೆ ಹೆಸರುವಾಸಿಯಾದ ಕಡಲತಡಿಯ ಕಾರವಾರ ಪ್ರಾಕೃತಿಕ ಚೆಲುವಿನ ಚಂದದ ತಾಣ; ಸ್ವಾತಂತ್ರ್ಯ ಹೋರಾಟದ ಹಲವು ಚಳವಳಿಯಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಅಂಕೋಲೆ “ಕರ್ನಾಟಕದ ಬಾರ್ಡೋಲಿ” ಎಂಬ ಹೆಗ್ಗಳಿಕೆ ಹೊಂದಿದೆ. “ಸರ್ವರಿಗೂ ಸಮ ಪಾಲು-ಸರ್ವರಿಗೂ ಸಮ ಬಾಳು”ಎಂಬ ಘೋಷವಾಕ್ಯದ ರೈತ-ಕೂಲಿಕಾರರ ಪ್ರಬಲ ಹೋರಾಟ ಕಟ್ಟಿದ ದಿನಕರ ದೇಸಾಯಿ, ಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಗಳಂತವರ ಕರ್ಮಭೂಮಿ ಅಂಕೋಲಾ-ಕಾರವಾರ. ಈ ಸಮಾಜವಾದಿ ನೆಲವೀಗ ಧರ್ಮಕಾರಣದ ಹಿಡಿತಕ್ಕೊಳಪಟ್ಟಿರುವುದು ದುರಂತವೆಂದು ವ್ಯಾಖ್ಯಾನಿಸಲಾಗುತ್ತಿದೆ. ಅದಿರು ಹಣದ ಹಣಾಹಣಿಯಲ್ಲಿ ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಸಿಗದೆ ಇಡೀ ಕ್ಷೇತ್ರ ಕಂಗಾಲಾಗಿ ಕೂತಿದೆ.

ಸಾಮಾಜಿಕ ಚಹರೆ

ಪಶ್ಚಿಮಕ್ಕೆ ವಿಶಾಲವಾದ ಅರಬ್ಬಿ ಸಮುದ್ರ. ಅದಕ್ಕೆ ಸಮಾನಾಂತರವಾಗಿ ಹಬ್ಬಿರುವ ಸಹ್ಯಾದ್ರಿ ಗಿರಿ ಶಿಖರಗಳ ಸಾಲು. ನಡುವೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ. ಎರಡೂ ತಾಲೂಕುಗಳ ಆರ್ಥಿಕತೆ ಮೀನುಗಾರಿಕೆ ಮೇಲೆ ನಿಂತಿದೆ. ಭತ್ತ, ಶೇಂಗಾ, ಕಲ್ಲಂಗಡಿ, ತರಕಾರಿ ಬೆಳೆದು ಉಣ್ಣುವ ರೈತಾಪಿ ವರ್ಗವಿದೆ. ಎಲ್ಲೂ ಕಾಣದ ’ಇಶಾಡ’ ಎಂಬ ಮಾವಿನ ಹಣ್ಣಿಗೆ ಪ್ರಸಿದ್ಧವಾದ ಅಂಕೋಲೆಯಲ್ಲಿ ವಿಶಿಷ್ಟ ಉಡುಗೆ-ತೊಡುಗೆ, ರೀತಿ-ರಿವಾಜಿನ ’ಹಾಲಕ್ಕಿ ಒಕ್ಕಲಿಗ’ ಎಂಬ ಶ್ರಮ ಸಂಸ್ಕೃತಿಯ ಬುಡಕಟ್ಟು ಜನಸಮೂಹ ದೊಡ್ಡ ಸಂಖ್ಯೆಯಲ್ಲಿದೆ. ಹಾಲಕ್ಕಿಗಳ ಸುಪ್ರಸಿದ್ಧ ಸುಗ್ಗಿ ಕುಣಿತಕ್ಕೆ ಅದರದೆ ಸೊಗಡು-ಸೊಬಗಿದೆ. ಸರಿಯಾದ ಮೀಸಲಾತಿ ಸಿಗದೆ ಈ ಬುಡಕಟ್ಟು ಜನಾಂಗ ಲಾಗಾಯ್ತಿನಿಂದ ಸಾಮಾಜಿಕ ಅನ್ಯಾಯಕ್ಕೊಳಗಾಗುತ್ತಿದೆ. ದಲಿತ ಆಗೇರ ಸಮುದಾಯಕ್ಕೆ ಮೀಸಲಾತಿ ಇದೆಯಾದರೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಏಳ್ಗೆ ಕಂಡಿಲ್ಲ. ಈ ಶೋಷಿತ ಸಮುದಾಯಗಳ ಪ್ರಗತಿಗೆಂದು ಯಾವ ಶಾಸಕನೂ ಸರಿಯಾದ ಯೋಜನೆ ರೂಪಿಸಿಲ್ಲವೆಂಬ ಆಕ್ಷೇಪ ಕೇಳಿಬರುತ್ತಿದೆ.

ರಾಮಕೃಷ್ಣ ಹೆಗಡೆ

ರಾಷ್ಟ್ರೀಯ ಮಹತ್ವದ ಕದಂಬ ನೌಕಾನೆಲೆ ಕಾರವಾರ-ಅಂಕೋಲಾ ನಡುವೆಯಿದೆ. ಉತ್ತರ ತುದಿಯ ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರ ನಿಂತಿದೆ. ನಾಡಿಗೆ ಬೆಳಕು ಕೊಡುವ ಕದ್ರಾ-ಕೊಡಸಳ್ಳಿ ಜಲ ವಿದ್ಯುತ್ ಯೋಜನೆಯಿದ್ದರೂ, ದೀಪದ ಬುಡದಲ್ಲಿ ಕತ್ತಲು ಎಂಬಂತೆ ವಿದ್ಯುತ್ ಸಂಪರ್ಕವಿಲ್ಲದ ಹಲವು ಹಳ್ಳಿಗಳು ಕ್ಷೇತ್ರದಲ್ಲಿದೆ. ಸರಕಾರಿ ಯೋಜನೆಗಳ ಪ್ರಯೋಗಶಾಲೆಯಂತಿರವ ಕಾರವಾರ-ಅಂಕೋಲಾಕ್ಕೆ ಆ ಅಭಿವೃದ್ಧಿ ಹೆಸರಿನ ಯೋಜನೆಗಳಿಂದ ಪ್ರಯೋಜನವೇನಾಗಿಲ್ಲ. ರಾಷ್ಟ್ರ-ರಾಜ್ಯಕ್ಕಾಗಿ ತ್ಯಾಗ ಮಾಡಿದ ಮಂದಿಗೆ ದೀರ್ಘ ಕಾಲ ಸತಾಯಿಸಿ ಕೊಟ್ಟ ಒಂದಿಷ್ಟು ಪರಿಹಾರ ಬಿಟ್ಟರೆ, ಉದ್ಯೋಗ ಸೇರಿದಂತೆ ಮುಂತಾದ ಯಾವ ನಿರೀಕ್ಷೆಗಳೂ ಕೈಗೂಡಿಲ್ಲ.

ಗೋವಾ ಗಡಿಯಲ್ಲಿರುವ ಕಾರವಾರವಿನ್ನೂ ಕೊಂಕಣಿ ಪ್ರಭಾವದಿಂದ ಹೊರಬಂದಿಲ್ಲ. ಹೆಚ್ಚಿನವರ ವ್ಯವಹಾರಿಕ ಭಾಷೆ ಕೊಂಕಣಿ. ಮರಾಠಿ ಮಾತೂ ಇಲ್ಲಿ ಕೇಳಿಬರುತ್ತದೆ. ದಿನ ಬೆಳಗಾದರೆ ಕಾರವಾರದ ಮಂದಿ ಗೋವಾದ ಕೈಗಾರಿಕೆ ಮತ್ತಿತರೆಡೆ ದುಡಿಯಲು ರೈಲು, ಬಸ್ ಏರಿಹೋಗುತ್ತಾರೆ. ಅಂಕೋಲೆ ಅಪ್ಪಟ ಕನ್ನಡ ಸಂಸೃತಿಯ ನೆಲ. ಕಾರವಾರದ ಬಹುತೇಕ ಜನರು ರಾಷ್ಟ್ರ ರಾಜಕಾರಣ ನೋಡಿ ಮತ ಹಾಕುತ್ತಾರೆ. ಅಂಕೋಲಿಗರು ರಾಜ್ಯ ರಾಜಕೀಯದ ಆಗುಹೋಗಿಗೆ ಪ್ರತಿಕ್ರಿಯಿಸುತ್ತಾರೆ. ಕಾರವಾರ ಜಿಲ್ಲಾ ಕೇಂದ್ರವಾದರು ಆರೋಗ್ಯ ಸಮಸ್ಯೆ, ಅಪಘಾತ ಮುಂತಾದ ಗಂಭೀರ ಪ್ರಸಂಗದಲ್ಲಿ ಜನರು ಗೋವಾ ಅವಲಂಬಿಸಬೇಕಾಗಿರುವುದು ಸ್ಥಳೀಯ ಜನಪ್ರತಿನಿಧಿಗಳ, ರಾಜಕೀಯ ಮುಂದಾಳುಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ!

ರಾಜಕೀಯ ಚರಿತ್ರೆ

ಸುಮಾರು 2,17,000 ಮತದಾರರಿರುವ ಕಾರವಾರ-ಅಂಕೋಲಾ ಕ್ಷೇತ್ರ ಹಾಲಕ್ಕಿಗಳ ಸೀಮೆ. 45 ಸಾವಿರದಷ್ಟು ಮತದಾರರಿರುವ ಹಾಲಕ್ಕಿ ಒಕ್ಕಲಿಗರೆ ಪ್ರಥಮ ಬಹುಸಂಖ್ಯಾತರು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ’ಹಿಂದುಳಿಸಲ್ಪಟ್ಟಿರುವ’ ಹಾಲಕ್ಕಿಗಳ ರಾಜಕೀಯ, ಶೈಕ್ಷಣಿಕ ಪ್ರಜ್ಞೆಯ ಕೊರತೆಯನ್ನು ಎಲ್ಲ ರಾಜಕೀಯ ಪಕ್ಷದವರು ಬಂಡವಾಳ ಮಾಡಿಕೊಂಡಿದ್ದಾರೆ. ಯಾವ ಪಕ್ಷದವರೂ ಈ ಬುಡಕಟ್ಟು ಸಮುದಾಯದವರಿಗೆ ಟಿಕೆಟ್ ಕೊಡುವ ಯೋಚನೆ ಮಾಡುತ್ತಿಲ್ಲ. ರಾಮಕೃಷ್ಣ ಹೆಗಡೆ 1985ರಲ್ಲಿ ಹೈಸ್ಕೂಲ್ ಶಿಕ್ಷಕರಾಗಿದ್ದ ಎನ್.ಎಚ್.ಗೌಡರಿಗೆ ಜನತಾ ಪಕ್ಷದಿಂದ ನಿಲ್ಲಿಸಿ ಶಾಸಕರಾಗುವಂತೆ ಮಾಡಿದ್ದರು. ಬಂಗಾರಪ್ಪ 1989ರಲ್ಲಿ ಕೆ.ಎಚ್.ಗೌಡರನ್ನು ಕಾಂಗ್ರೆಸ್ ಎಮ್ಮೆಲ್ಲೆಯಾಗಿಸಿದ್ದರು. ಕುಮಟಾ ಕ್ಷೇತ್ರದಿಂದ ಶಾಸಕರಾಗಿದ್ದ ಈ ಇಬ್ಬರ ನಂತರ ಹಾಲಕ್ಕಿಗಳಲ್ಲಿ ನಾಯಕತ್ವ ಬೆಳೆಯಲು ಪಟ್ಟಭದ್ರರು ಬಿಡುತ್ತಿಲ್ಲ.

ದೇಶಪಾಂಡೆ

ಮೊದಲು ಕಾರವಾರದೊಂದಿಗೆ ಜೋಯಿಡಾ ಸೇರಿದ್ದರೆ, ಅಂಕೋಲಾ ಯಲ್ಲಾಪುರ ಕ್ಷೇತ್ರದಲ್ಲಿತ್ತು. 2008ರ ಕ್ಷೇತ್ರ ಪುನರ್‌ವಿಂಗಡಣೆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಕಾರವಾರ-ಅಂಕೋಲಾ ಕೇತ್ರದಲ್ಲಿ ದ್ವಿತೀಯ ಬಹುಸಂಖ್ಯಾತರೆಂದರೆ 30 ಸಾವಿರದಷ್ಟಿರುವ ನಾಮಧಾರಿಗಳು (ಈಡಿಗರು). ವಿವಿಧ ಜಾತಿಯಿಂದ ಗುರುತಿಲ್ಪಡುವ ಮೀನುಗಾರ ಸಂಕುಲದವರು 26 ಸಾವಿರವಿದ್ದಾರೆ. 22 ಸಾವಿರ ಕೋಮಾರಪಂತರು, 15 ಸಾವಿರ ಕೊಂಕಣ ಮರಾಠರು, 10 ಸಾವಿರ ಮುಸ್ಲಿಮರು ಮತ್ತು 6-7 ಸಾವಿರ ಕ್ರಿಶ್ಚಿಯನ್ನರು ಜತೆಗೆ ನಾಡವರೆ ಮುಂತಾದ ಸಣ್ಣ ಸಂಖ್ಯೆಯ ಜಾತಿಯ ಮತದಾರಿದ್ದಾರೆ.

ಕಾರವಾರದಲ್ಲಿ ಎಂಇಎಸ್ ಪ್ರಭಾವವಿದ್ದ ಕಾಲವೂ ಒಂದಿತ್ತು. ಕಾರವಾರದ ಬಿ.ಪಿ.ಕದಮ್ 1962ರಲ್ಲಿ ಎಂಇಎಸ್‌ನಿಂದ ಶಾಸಕರಾಗಿದ್ದರು. ಅದೆ ಕದಮ್ 1962ರಲ್ಲಿ ಪಕ್ಷೇತರರಾಗಿ ಮತ್ತು 1972ರಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದ್ದರು. ವಿಧಾನಸಭೆಯ ಉಪ ಸ್ಪೀಕರ್ ಆಗಿದ್ದರು. ಎಮರ್ಜೆನ್ಸಿ ನಂತರದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರನ್ನು ಸೋಲಿಸಿದ ಕದಮ್ ಕಾಂಗ್ರೆಸ್ ಸಂಸದರಾಗಿದ್ದರು. ಆ ಚುನಾವಣೆಯಲ್ಲಿ ಹೆಗಡೆ ಗೆಲ್ಲುತ್ತಾರೆಂಬ ಭರವಸೆಯಿತ್ತಾದರೂ ಕೆನರಾ ಕ್ಷೇತ್ರದಲ್ಲಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರಲ್ಲಿ ಹೆಚ್ಚು ಮತ ಪಡೆದಿದ್ದ ಕದಮ್ ಗೆದ್ದಿದ್ದರು.

ರಾಮಕೃಷ್ಣ ಹೆಗಡೆಯೊಂದಿಗೆ ನಿಜಲಿಗಂಪ್ಪನವರ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದ ಎಸ್.ಡಿ ಗಾಂವ್ಕರ್ 1978ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಅವರನ್ನು ಕಾಂಗ್ರೆಸ್‌ನ ಡಿ.ವಿ ವೈಂಗಣಕರ್ ಸೋಲಿಸಿ ಶಾಸಕರಾದರು. ಕಾಂಗ್ರೆಸ್‌ನ ಪ್ರಭಾಕರ್ ರಾಣೆ 1983 ಮತ್ತು 1985ರಲ್ಲಿ ಎಮ್.ಟಿ ನಾಯ್ಕ್‌ರನ್ನು ಮಣಿಸಿದರು. 1989ರಲ್ಲಿ ರಾಣೆ ಜನತಾದಳದ ಅರವಿಂದ ತೆಂಡೂಲ್ಕರ್ ವಿರುದ್ಧ ದೊಡ್ಡ ಅಂತರದಲ್ಲಿ ಜಯಸಾಧಿಸಿದರು. ಮೂರನೆ ಅವಧಿಯಲ್ಲಿ ರಾಣೆ ಮತ್ತು ರಾಜ್ಯ ಕಾಂಗ್ರೆಸ್ ಕಾರವಾರ ಕ್ಷೇತ್ರದಲ್ಲಿ ನಿಧಾನಕ್ಕೆ ಮಂಕಾಗಿಹೋಗಿದ್ದು ಇತಿಹಾಸ.

’ರಾಬಿನ್‌ಹುಡ್’ ಅಸ್ನೋಟಿಕರ್ ರಂಗ ಪ್ರವೇಶ

ಒಂದೆಡೆ ರಾಣೆಯವರ ಬಲಗೈ ಬಂಟನಾಗಿದ್ದ ವಸಂತ ಅಸ್ನೋಟಿಕರ್ ತಿರುಗಿ ಬಿದ್ದರೆ, ಮತ್ತೊಂದೆಡೆ ಬೆಂಗಳೂರು ಮಟ್ಟದಲ್ಲಿ ಅಂದಿನ ಸಿಎಂ ಬಂಗಾರಪ್ಪನವರ ಅವಕೃಪೆಗೆ ರಾಣೆ ತುತ್ತಾಗಿದ್ದರು. 1994ರ ಚುನಾವಣೆಯಲ್ಲಿ ಬಂಗಾರಪ್ಪನವರ ಕೆಸಿಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ’ರಾಬಿನ್‌ಹುಡ್’ ಪ್ರತೀತಿಯ ವಸಂತ ಅಸ್ನೋಟಿಕರ್ 10,625 ಅಂತರದಲ್ಲಿ ರಾಣೆಯನ್ನು ಸೋಲಿಸಿದರು. ಅಲ್ಲಿಂದಾಚೆ ರಾಣೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂದೆಲ್ಲ ಸುತ್ತುಹೊಡೆದು ರಾಜಕೀಯವಾಗಿ ನಗಣ್ಯರಾಗಿಹೋದರು. ಅಧಿಕಾರರೂಢ ಜನತಾದಳಕ್ಕೆ, ಅಂದರೆ ಅಂದು ಪ್ರಭಾವಿಯಾಗಿದ್ದ ಜಿಲ್ಲಾ ಉಸ್ತವಾರಿ ಮಂತ್ರಿ ದೇಶಪಾಂಡೆಗೆ ಬೆಂಬಲ ಸೂಚಿಸಿದ್ದ ಅಸ್ನೋಟಿಕರ್‌ಗೆ ಮೀನುಗಾರಿಕಾ ನಿಗಮದ ಅಧ್ಯಕ್ಷರಾಗಿ ಮಾಡಲಾಗಿತ್ತು.

ವಸಂತ ಅಸ್ನೋಟಿಕರ್

1999ರ ಇಲೆಕ್ಷನ್ ಸಮುಯದಲ್ಲಿ ದೇಶಪಾಂಡೆ ಜತೆಗೂಡಿ ಕಾಂಗ್ರೆಸ್ ಸೇರಿದ ಅಸ್ನೋಟಿಕರ್ 42,502 ಮತ ಪಡೆದು ಪುನರಾಯ್ಕೆಯಾದರು. ಬಿಜೆಪಿ ಹುರಿಯಾಳಾಗಿದ್ದ ರಾಣೆಗೆ ಕೇವಲ 28,546 ಓಟುಗಳಷ್ಟೇ ಸಿಕ್ಕಿದ್ದು. ದೊಡ್ಡ ಮಟ್ಟದ ಆದಾಯ ತರುತ್ತಿದ್ದ ಕಾರವಾರದ ಬಂದರು ಕಾರ್ಮಿಕರ ಗುತ್ತಿಗೆ ವ್ಯವಹಾರದಲ್ಲಿ ಭೂಗತ ಲೋಕದ ವೈರತ್ವ ಕಟ್ಟಿಕೊಂಡಿದ್ದ ಅಸ್ನೋಟಿಕರ್ ಎರಡನೆ ಬಾರಿ ಎಮ್ಮೆಲ್ಲೆಯಾದ ಕೆಲವೆ ತಿಂಗಳಲ್ಲಿ ಹತ್ಯೆಗೀಡಾದರು. ರಾಣೆ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ನ್ಯಾಯಾಲಯದಲ್ಲಿದ್ದರಿಂದ ಸುಮಾರು ನಾಲ್ಕು ವರ್ಷ ಕಾರವಾರ ಕ್ಷೇತ್ರಕ್ಕೆ ಶಾಸಕನಿಲ್ಲದಂತಾಗಿತ್ತು. ಈ ನಡುವೆ ಅಸ್ನೋಟಿಕರ್ ಮಡದಿ ಶುಭಲತಾರನ್ನು ಕಾಂಗ್ರೆಸ್ ಸ್ಥಳೀಯಾಡಳಿತ ಸಂಸ್ಥೆಯಿಂದ ಎಮ್ಮೆಲ್ಸಿ ಮಾಡಲಾಗಿತ್ತು.

ಆನಂದ ಅಸ್ನೋಟಿಕರ್ ಆಡಂಬೋಲ

ಸಂಸದೆಯಾಗಿದ್ದ ಮಾರ್ಗರೆಟ್ ಆಳ್ವ 2004ರ ಚುನಾವಣೆಯಲ್ಲಿ ತಮ್ಮ ನಂಬಿಕಸ್ಥ ಅನುಯಾಯಿ ಅಶೋಕ್ ನಾಯ್ಕ್‌ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಈ ಅಶೋಕ್ ನಾಯ್ಕ್ ಮತ್ತು ಅಸ್ನೋಟಿಕರ್ ಫ್ಯಾಮಿಲಿ ಸಂಬಂಧ ಅಷ್ಟಕ್ಕಷ್ಟೇ. ಮಾಜಿ ಶಾಸಕ ರಾಣೆ ಜನತಾ ದಳದಿಂದ ಕಣಕ್ಕಿಳಿದಿದ್ದರು. ಈ ಇಬ್ಬರೂ ಗೆಲ್ಲುವುದು ಅಸ್ನೋಟಿಕರ್ ಕುಟುಂಬಕ್ಕೆ ಬೇಡವಾಗಿತ್ತು. ದಿವಂಗತ ಅಸ್ನೋಟಿಕರ್‌ರ ಚಿಗುರು ಮೀಸೆಯ ಮಗ ಆನಂದ್ ತನ್ನ ಗುರುವೂ, ಅಪ್ಪನ ಆತ್ಮೀಯ ಗೆಳೆಯನೂ ಆಗಿದ್ದ ಗಣಪತಿ ಉಳ್ವೇಕರ್ (ಈಚೆಗಷ್ಟೆ ಬಿಜೆಪಿಯಿಂದ ಎಮ್ಮೆಲ್ಸಿಯಾಗಿದ್ದಾರೆ) ಸಂಗಡ ಬಿಜೆಪಿಯ ಹುರಿಯಾಳಾಗಿದ್ದ ಗಂಗಾಧರ ಭಟ್ ಬೆನ್ನಿಗೆ ನಿಂತರು. ಅಸ್ನೋಟಿಕರ್ ತಂಡ ಹಳ್ಳಿಹಳ್ಳಿಯಲ್ಲಿ ಪ್ರಚಾರಮಾಡಿ ಅನಾಮಧೇಯ ಗಂಗಾಧರ್ ಭಟ್‌ರನ್ನು ಗೆಲ್ಲಿಸಿದರು.

ರಾಣೆ ಮತ್ತು ವಸಂತ್ ಅಸ್ನೋಟಿಕರ್ ಸ್ವಲ್ಪವಾದರೂ ಕ್ಷೇತ್ರದತ್ತ ಗಮನ ಹರಿಸುತ್ತಿದ್ದರು. ಆದರೆ ಗಂಗಾಧರ್ ಭಟ್ ಐದು ವರ್ಷ ಅಸ್ನೋಟಿಕರ್ ಕುಟುಂಬಕ್ಕೆ ನಿಷ್ಠರಾಗಿ ಕಾಲ ಕಳೆದರೆ ಹೊರತು ಕ್ಷೇತ್ರಕ್ಕೇನು ಪ್ರಯೋಜನವಾಗಲಿಲ್ಲವೆಂದು ಜನರು ಹೇಳುತ್ತಾರೆ. 2008 ಚುನಾವಣೆಯಲ್ಲಿ ಖುದ್ದು ಆನಂದ ಅಸ್ನೋಟಿಕರ್ ಅಖಾಡಕ್ಕಿಳಿದರು. ಮಾರ್ಗರೆಟ್ ಆಳ್ವರ ವಿರೋಧದ ನಡುವೆಯೂ ದೇಶಪಾಂಡೆ ಹಠಹಿಡಿದು ಆನಂದ್‌ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಬಂದರು ವ್ಯವಹಾರದಲ್ಲಿ ಮನಸ್ತಾಪವಾಗಿ ಅಸ್ನೋಟಿಕರ್ ಕುಟುಂಬದಿಂದ ದೂರಾಗಿದ್ದ ಗಣಪತಿ ಉಳ್ವೇಕರ್ ಶಿಷ್ಯನ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆನಂದ್ ಎದುರಾಳಿಗಿಂತ ಎರಡು ಪಟ್ಟು ಮತ ಪಡೆದು ಶಾಸನಸಭೆಗೆ ಹೋದರು.

ಅತಂತ್ರವಾದ ಆನಂದ್!

ಶಾಸಕನಾದ ಕೆಲವೇ ತಿಂಗಳಲ್ಲಿ ಆನಂದ್ ಅಸ್ನೋಟಿಕರ್ ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾದರು. ಶಾಸಕ ಸ್ಥಾನಕ್ಕೆ ಆನಂದ್ ರಾಜೀನಾಮೆ ಕೊಟ್ಟಿದ್ದರಿಂದ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅದಿರು ರಫ್ತು ಉದ್ಯಮಿ ಸತೀಶ್ ಸೈಲ್ ಪೈಪೋಟಿ ನೀಡಿದರಾದರೂ ಬಿಜೆಪಿಯಿಂದ ಆನಂದ್ ಗೆದ್ದರು. ಆದರೆ ಸಂಸದ ಅನಂತಕುಮಾರ್ ಹೆಗಡೆ ಮತ್ತು ಅಂದು ಮಂತ್ರಿಯಾಗಿದ್ದ ಕಾಗೇರಿಯಂಥ ಸಂಘಪರಿವಾರದ ಘಟಾನುಘಟಿಗಳ ನಡುವೆ ಆನಂದ್ ಬಿಜೆಪಿಯಲ್ಲಿ ಬಾಳಿಕೆ ಬರಲಿಲ್ಲ. ಸಿಎಂ ಯಡಿಯೂರಪ್ಪ ವಿರುದ್ಧ ಬಂಡೆದ್ದಿದ್ದ ಶಾಸಕರ ತಂಡದಲ್ಲಿದ್ದ ಆನಂದ್ ಶಾಸಕತ್ವದಿಂದ ಅನರ್ಹರಾಗಬೇಕಾಗಿ ಬಂತು.

ಆನಂದ ಅಸ್ನೋಟಿಕರ್

ಅತ್ತ ಆನಂದ್ ಹೈಕೋರ್ಟ್-ಸುಪ್ರೀಂ ಕೋರ್ಟ್ ಎಂದು ಅತಂತ್ರರಾದರೆ, ಇತ್ತ ಕಾರವಾರ ವರ್ಷಗಟ್ಟಲೆ ಶಾಸಕನಿಲ್ಲದ ಖಾಲಿ ಕ್ಷೇತ್ರವಾಗುಳಿಯಿತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಆನಂದ್ ಶಾಸಕತ್ವಕ್ಕೆ ಮತ್ತೆ ಜೀವ ಬಂತಾದರೂ 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ಆನಂದ್ ಮಾಡಿದ ಪಕ್ಷಾಂತರ, ಅಧಿಕಾರ ರಾಜಕಾರಣದ ಅವಾಂತರದಿಂದ ಬೇಸತ್ತ ಜನರು 35,880 ಮತಗಳ ದೊಡ್ಡ ಅಂತರದಲ್ಲಿ ಸೋಲಿಸಿದ್ದರು. ಅದಿರು ಅವ್ಯವಹಾರದ ಸಿಬಿಐ ಕೇಸ್‌ನಿಂದಾಗಿ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರನಾಗಿ ಸ್ಪರ್ಧಿಸಿದ್ದ ಸತೀಶ್ ಸೈಲ್ ಶಾಸಕನಾಗಿದ್ದರು.

’ಹಣಾ’ಹಣಿ ಕ್ಷೇತ್ರ

ಸಿದ್ದು ಸರಕಾರವಿದ್ದಾಗ ಸೈಲ್ ಕಾಂಗ್ರೆಸ್ ಸಹ ಶಾಸಕನಾಗಿ ಗುರುತಿಸಿಕೊಂಡರು. ಬಿಜೆಪಿಯಲ್ಲಿ ಆನಂದ್ ಸಂಪೂರ್ಣ ಮೂಲೆಗುಂಪಾದರು. ರಾಜಕೀಯ ನಿವೃತ್ತಿ ಪಡೆದಂತೆ ಕ್ಷೇತ್ರದಿಂದಲೆ ಕಣ್ಮರೆಯಾದ ಆನಂದ್ ತಮ್ಮ ಗೋವಾ, ಮುಂಬೈ, ಬೆಂಗಳೂರಿನ ವ್ಯವಹಾರದಲ್ಲಿ ತೊಡಗಿಕೊಂಡರು. ಬಿಜೆಪಿಯಲ್ಲಿ ಮೇಲೇಳಲು ಸಂಸದ ಅನಂತಕುಮಾರ್ ಹೆಗಡೆ ಬಿಡಲಿಲ್ಲ. ಕಾಂಗ್ರೆಸ್ ಸೇರಲು ಶತಾಯಗತಾಯ ಪ್ರಯತ್ನಿಸಿದ ಆನಂದ್‌ಗೆ ದೇಶಪಾಂಡೆ ಅಡ್ಡಗಾಲು ಹಾಕಿದರು. ಎಲ್ಲೂ ಸಲ್ಲದೆ ಅನಿವಾರ್ಯವಾಗಿ ಜೆಡಿಎಸ್ ಸೇರಿ 2018ರ ಚುನಾವಣೆ ಘೋಷಣೆಯಾದಾಗ ಪ್ರತ್ಯಕ್ಷರಾದ ಆನಂದ್‌ಗೆ ಅವರದೆ ಗರಡಿಯಲ್ಲಿ ಪಳಗಿದ ಕಾರವಾರ ತಾಪಂ ಮಾಜಿ ಸದಸ್ಯೆ ರೂಪಾಲಿ ನಾಯ್ಕ್ ಬಿಜೆಪಿ ಅಭ್ಯರ್ಥಿಯಾಗಿ ಮುಖಾಮುಖಿಯಾದರು.

ಮತ್ತೊಂದು ಮಗ್ಗುಲಲ್ಲಿ ಸತೀಶ್ ಸೈಲ್ ಆಕ್ರಮಣ ಆರಂಭಿಸಿದ್ದರು. ಸತೀಶ್ ಮತ್ತು ರೂಪಾಲಿ ಅದಿರು ಹಣವನ್ನು ಹೊಳೆಯಾಗಿ ಹರಿಸಿದ್ದರೆಂಬ ಮಾತು ಕೇಳಿಬಂದಿತ್ತು. ರೆಸಾರ್ಟ್ ಉದ್ಯಮಿ ಆನಂದ್ ಈ ಹಣವಂತರಿಗೆ ಭರ್ಜರಿ ಪೈಪೋಟಿ ನೀಡಿದ್ದರು. ಈ ’ಹಣಾ’ಹಣಿಯಲ್ಲಿ ರೂಪಾಲಿ ನಾಯ್ಕ್ 60,339 ಮತ ಪಡೆದರೆ, ಆನಂದ್‌ಗೆ 46,275 ಓಟು ಸಿಕ್ಕಿತ್ತು. ಸತೀಶ್ ಸೈಲ್ 45,071 ಮತ ಪಡೆಯಲಷ್ಟೆ ಸಾಧ್ಯವಾಯಿತು. ಕಾರವಾರದ ಪ್ರಥಮ ಮಹಿಳಾ ಶಾಸಕಿ ಎಂಬ ದಾಖಲೆಯ ರೂಪಾಲಿ ನಾಯ್ಕ್ ಅಭಿವೃದ್ಧಿ ರಾಜಕಾರಣಕ್ಕಿಂತ ಧನಾಧಾರಿತ ರಾಜಕೀಯವನ್ನು ಲೀಲಾಜಾಲವಾಗಿ ಮಾಡುತ್ತ ಎದುರಾಳಿಗಳನ್ನು ಕಟ್ಟಿಹಾಕಿದ್ದಾರೆಂಬ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ.

ಕಾರವಾಡ-ಅಂಕೋಲದ ವಿಡಿಯೋ ನೋಡಿ

ಬದುಕು-ಬವಣೆ

ಉತ್ತರ ಕನ್ನಡದ ರಾಜಧಾನಿ ಕಾರವಾರ ಜನರ ನಿರೀಕ್ಷೆಯ ಅರ್ಧದಷ್ಟು ಅಭಿವೃದ್ಧಿಯಾಗಿಲ್ಲ. ಅದಕ್ಕೆ ಹೊಂದಿಕೊಂಡೆ ಇರುವ ಅಂಕೋಲೆಯ ಪಾಡು ಕೂಡ ಅಷ್ಟೆ. ರಸ್ತೆ ಪಕ್ಕದಲ್ಲಿ ಹೂವು ಮಾರುವ, ಮುಳ್ಳಣ್ಣು ಮಾರುವ ಹೆಂಗಸರಿಂದ ಅವುಗಳನ್ನು ಕೊಂಡುಕೊಂಡು ಜನಸಾಮಾನ್ಯರೊಂದಿಗೆ ಬೆರೆಯುವ ಕಲೆಯುಳ್ಳ ಶಾಸಕಿ ರೂಪಾಲಿ ನಾಯ್ಕ್ ಒಂದಿಷ್ಟು ’ಸ್ಥಾವರ’ ಕಾಮಗಾರಿ ಮಾಡಿಸುತ್ತಿದ್ದಾರೆಯೆ ಹೊರತು ಅವಳಿ ತಾಲೂಕುಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನೀಲನಕ್ಷೆ ಹಾಕಿಕೊಂಡಿಲ್ಲವೆಂದು ಆಕ್ಷೇಪ ಕ್ಷೇತ್ರದಲ್ಲಿದೆ. ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕನಿಷ್ಟ ಟ್ರಾಮಾ ಸೆಂಟರ್ ಇಲ್ಲ. ಅಪಘಾತವಾದರೆ, ಗಂಭೀರ ಆರೋಗ್ಯ ಸಮಸ್ಯೆಯಾದರೆ ಪಕ್ಕದ ಗೋವಾ, ಬೆಳಗಾವಿ, ಮಣಿಪಾಲ, ಮಂಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರೋಗಿಯನ್ನು ಒಯ್ಯಬೇಕಾದ ಅನಿವಾರ್ಯತೆಯಿದೆ. ಅಷ್ಟು ದೂರ ತಲುಪುವ ತನಕ ರೋಗಿಯ ಪ್ರಾಣ ಉಳಿದರೆ ಅದೆ ಅದೃಷ್ಟ!

ಮಾರ್ಗರೆಟ್ ಆಳ್ವ

ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಕೈಗಾರಿಕೆ, ಮೀನುಗಾರಿಕಾ ಸೌಲಭ್ಯ, ಕಲ್ಲಂಗಡಿ-ತರಕಾರಿ ಬೆಳೆವ ರೈತ ಮಹಿಳೆಯರ ಫಸಲಿಗೆ ಭದ್ರತೆ ಇಲ್ಲವಾಗಿದೆ. ಕೃಷಿ ಉತ್ಪನ್ನಕ್ಕೆ ಬೆಲೆ ಬರದಿದ್ದರೆ,ಮೀನಿಗೆ ಮಂಜುಗಡ್ಡೆ ಸಿಗದೆ ಹಾಳಾದರೆ ಕೇಳುವರಿಲ್ಲ. ಸಾಂಪ್ರದಾಯಿಕ ಮೀನುಗಾರರ ದೋಣಿಗಳಿಗೆ ಅವಶ್ಯವಾದ ಸೀಮೆ ಎಣ್ಣೆ ಪೂರೈಕೆ ಆಗುತ್ತಿಲ್ಲ. ಕಡಲ ಮಕ್ಕಳ ಹೊಟ್ಟೆ ಮೇಲೆ ಹೊಡೆಯುವ ಸರಕಾರದ ಈ ನೀತಿಯ ಬಗ್ಗೆ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಾಜಾಳಿ, ಬೈತಕೋಲ್ ಮೀನುಗಾರಿಕಾ ಜೆಟ್ಟಿ ವಿಸ್ತರಣೆ ಆಗಬೇಕಾಗಿದೆ. ಕಾರವಾರ, ಅಂಕೋಲಾದ ಬೆಸ್ತರಿಗೆ ಮೀನು ಕೆಡದಂತೆ ಸಂರಕ್ಷಿಸುವ ಶೈತ್ಯಾಗಾರದ ಅಗತ್ಯವಿದೆ. ಇಡೀ ಕಾರವಾರ ನಗರದ ಕೊಳಚೆ, ಕಲ್ಮಷ ಬಂದು ಸೇರುವ ಬೃಹತ್ ಚರಂಡಿ ಕೋಣೆನಾಲಾ ಸಮಸ್ಯೆ ಪರಿಹಾರವಾಗದೆ ಜನರನ್ನು ಕಾಡುತ್ತಿದೆ.

ಕಾರವಾರದ ವಾಣಿಜ್ಯ ಬಂದರಿನ ಎರಡನೆ ಹಂತದ ವಿಸ್ತರಣೆಯನ್ನು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರಮಾಲಾ ಯೋಜನೆಯಲ್ಲಿ ಶುರುಮಾಡುವ ಹವಣಿಕೆ ನಡೆಯುತ್ತಿದೆ. ಸಮಸ್ತ ಕಾರವಾರಿಗರು ಈ ಯೋಜನೆಯನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಮೀನುಗಾರರು ಬಂದರು ವಿಸ್ತರಣೆಯಿಂದ ತಮ್ಮ ತುತ್ತಿಗೆ
ಆಧಾರವಾಗಿರುವ ಕಸುಬಿಗೆ ಸಂಚಕಾರ ಬರುತ್ತದೆಂದು ಆಕ್ರೋಶದಲ್ಲಿದ್ದರೆ, ಕಾರವಾರದ ಅಸ್ಮಿತೆಯ ಪ್ರಜ್ಞೆ ಇರುವವರು ಜಿಲ್ಲೆಗೆ ಮುಕುಟ ಪ್ರಾಯದಂತಿರುವ ಕಡಲ ತೀರ (ಬೀಚ್) ಸಾಗರಮಾಲಾ ಯೋಜನೆ ನುಂಗಿಹಾಕುತ್ತದೆಂಬ ಬೇಸರದಲ್ಲಿದ್ದಾರೆ. ಸಂಸದ ಅನಂತಕುಮಾರ್ ಹೆಗಡೆ ಹಠಕ್ಕೆ ಬಿದ್ದಂತೆ ಈ ಯೋಜನೆ ಮಾಡಿಯೇ ತೀರುತ್ತೇನೆಂದು ಆರ್ಭಟಿಸುತ್ತಿದ್ದಾರೆ. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಯಾರಿಗೂ ತೊಂದರೆ ಆಗದಂತೆ ಯೋಜನೆ ಕೈಗೊಳ್ಳಿ ಎನ್ನುತ್ತಿದ್ದಾರೆ. ಮುಗಿದ ಎಮ್ಮೆಲ್ಸಿ ಚುನಾವಣೆ ಸಂದರ್ಭದಲ್ಲಿ ಬಂದರು ಗುತ್ತಿಗೆ ಪಡೆದ ಖಾಸಗಿ ಕಂಪನಿಯವರು ಆಡಳಿತಾರೂಢ ಪಕ್ಷಕ್ಕೆ ಐದು ಕೋಟಿ ಕೊಟ್ಟಿದ್ದಾರೆಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಕಂದಬ ನೌಕಾ ನೆಲೆಯಲ್ಲಿ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳನ್ನು ಯೋಜನಾ ನಿರಾಶ್ರಿತರಿಗೆ ಮತ್ತು ಸ್ಥಳೀಯರಿಗೆ ಮೀಸಲಿಡುವ ಭರವಸೆ ಕೊಡಲಾಗಿತ್ತು. ಆದರೆ ಈ ಉದ್ಯೋಗದ ನೇಮಕಾತಿ ಮುಂಬೈನ ನೌಕಸೇನಾ ಕಚೇರಿಯಲ್ಲಿ ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಅದರ ಮಾಹಿತಿಯೆ ಸಿಗದಂತಾಗಿದೆ. ಈ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮುಗ್ದ ಯುವಕರಿಗೆ ಕೆಲಸ ಕೊಡಿಸುವುದಾಗಿ ದಲ್ಲಾಳಿಗಳು ಹಣ ಸಂಗ್ರಹಿಸುತ್ತಿದ್ದಾರೆ. ಸದರಿ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಕಾರವಾರ ನೌಕಾದಳದ ಕಚೇರಿಯಲ್ಲೆ ನಡೆಯುವಂತೆ ಆಗಬೇಕೆಂಬ ಒತ್ತಾಯವಿದ್ದರೂ ಸಂಸದ, ಶಾಸಕರು ಕೇರ್ ಮಾಡುತ್ತಿಲ್ಲವೆಂಬ ಆಕ್ರೋಶ ಕಾರವಾರದಲ್ಲಿದೆ.

ಕಾರವಾರ ಮತ್ತು ಅಂಕೋಲೆಯ ಅಭಿವೃದ್ಧಿಯ ಹೆಬ್ಬಾಗಿಲಾಗಲಿದೆಯೆಂಬ ನಿರೀಕ್ಷೆಯ ಕರಾವಳಿ ಮತ್ತು ಉತ್ತರ ಕರ್ನಾಟಕ ಜೋಡಿಸುವ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕಾಮಗಾರಿಗೆ ವಾಜಪೇಯಿ ಪಿಎಂ ಆಗಿದ್ದಾಗಲೆ ಚಾಲನೆ ನೀಡಲಾಗಿತ್ತು. ಆದರೆ ಪರಿಸರವಾದಿಗಳ ಆಕ್ಷೇಪದಿಂದ ಕಾಮಗಾರಿ ಸ್ಥಗಿತವಾಗಿ ಹಲವು ವರ್ಷಗಳಾಗಿದೆ. ಕಾರವಾರಕ್ಕೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಯೋಜನೆ ಮಂಜೂರಾಗಿದ್ದು, ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಬಿಜೆಪಿ ಮುಖಂಡರ ವ್ಯಾವಹಾರಿಕ ಮೇಲಾಟಗಳಿಂದ ಕಾರ್ಯಗತ ಆಗುತ್ತಿಲ್ಲವೆನ್ನಲಾಗಿದೆ.

ಸತೀಶ್ ಸೈಲ್

ಕಾರವಾರ ಮತ್ತು ಅಂಕೋಲಾದ ನಗರ-ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಕಾಳಿ ನದಿ ನೀರು ವಿಕರಣದ ಭಯದಿಂದ ಬಳಸುವಂತಿಲ್ಲವಾಗಿದೆ. ಕಾಳಿ ನದಿ ದಂಡೆಯಲ್ಲಿ ಅಣುಸ್ಥಾವರ ಇದೆ. ಹಾಗಾಗಿ ವ್ಯರ್ಥವಾಗಿ ಸಮುದ್ರ ಸೇರುವ ಗಂಗಾವಳಿ ನದಿ ನೀರನ್ನು ಸಂಗ್ರಹಿಸಿ ಕಾರವಾರ-ಅಂಕೋಲಾಕ್ಕೆ ನೀರು ಒದಗಿಸಬೇಕೆಂಬ ಒತ್ತಾಯ ಶುರುವಾಗಿದೆ. ಅಂಕೋಲಾದ ಕುರ್ವೆಗಳ (ನಡುಗಡ್ಡೆ) ಜನರು ಸಂಕಷ್ಟ ಅನುಭವಿಸುತ್ತಿದ್ದು, ಇವರ ಸ್ಥಳಾಂತರ ತುರ್ತಾಗಿ ಆಗಬೇಕಾಗಿದೆ.

ಹಾಲಕ್ಕಿಗಳಿಗ್ಯಾಕೆ ಮೀಸಲಾತಿ ಸಿಗುತ್ತಿಲ್ಲ?

ಉತ್ತರ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಕೊಪ್ಪಗಳು ನಾಗರಿಕ ಪ್ರಪಂಚದ ನಡುಗಡ್ಡೆಗಳಂತಿವೆ. ಹಲವು ವರ್ಷಗಳ ಶೋಷಣೆ ಮತ್ತು ಮೀಸಲಾತಿ ಕೊರತೆಯಿಂದ ಎಲ್ಲ ರಂಗದಲ್ಲಿ ಹಿಂದುಳಿದಿರುವ ಈ ವಿಶಿಷ್ಟ ಸಂಸ್ಕೃತಿಯ ಜನಾಂಗಕ್ಕೆ ವಿಶೇಷ ಸೌಲಭ್ಯಗಳನ್ನು ನೀಡುವ ಕೆಲಸವಾಗಬೇಕಿದೆ. ಎಲ್ಲ ಪಕ್ಷದ ಮುಖಂಡರು ಮತ್ತು ಜನಪ್ರತಿನಿಧಿಗಳು ಹಾಲಕ್ಕಿಗಳ ಉದ್ಧಾರದ ಉದ್ದುದ್ದ ಭಾಷಣ, ಭರವಸೆ
ಬಿತ್ತರಿಸುತ್ತಲೆ ಬಂದಿದ್ದಾರೆ. ಈ ಗುಡ್ಡಗಾಡು ಮಂದಿ ತಮಗೆ ಪರಿಶಿಷ್ಟ ಪಂಗಡ ಮೀಸಲಾತಿ ನ್ಯಾಯವಾಗಿ ಸಿಗಬೇಕಿದೆ; ನಾವೀಗ ಸಾಮಾಜಿಕ-ಆರ್ಥಿಕ-ಶೈಕ್ಷಣಿಕವಾಗಿ ಬಲಾಢ್ಯರಾದವರ ಜತೆ ಸ್ಪರ್ಧಿಸಬೇಕಾಗಿದೆ. ನಮ್ಮ ಮೀಸಲಾತಿ ಬೇಡಿಕೆ ಪರಿಗಣಿಸಿ ಎಂದು ಹಲವು ವರ್ಷದಿಂದ ಮನವಿ ಮಾಡುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರು ಪರಿಶಿಷ್ಟ ಪಂಗಡ ಮೀಸಲಾತಿ ಕೇಳಲು ಶುರು ಮಾಡಿದ ನಂತರ ಮೂರ್‍ನಾಲ್ಕು ಸರಕಾರಗಳು ಬಂದುಹೋಗಿದೆ. ಹಾಲಕ್ಕಿಗಳ ಕುಲಶಾಸ್ತ್ರೀಯ ಅಧ್ಯಯನ ಮುಂತಾದ ಪ್ರಕಿಯೆಗಳೆಲ್ಲ ಮುಗಿದಿದೆ. ಅಂಕೋಲೆಯ ಇಬ್ಬರು ಹಾಲಕ್ಕಿ ಸಂಕುಲದ ಮಹಿಳೆಯರಿಗೆ ಪದ್ಮಶ್ರೀಯಂಥ ಉನ್ನತ ಪ್ರಶಸ್ತಿ ಬಂದಿದೆ. ಹಾಲಕ್ಕಿ ಒಕ್ಕಲಿಗರು ಪರಿಶಿಷ್ಟ ಪಂಗಡ ಮೀಸಲಾತಿಗೆ ಅರ್ಹರೆಂಬುದು ನಿಸ್ಸಂಶಯವಾಗಿ ಸಾಬೀತಾಗಿದೆ. ಪಾರ್ಲಿಮೆಂಟಿನಲ್ಲಿ ಮೀಸಲಾತಿಗೆ ಒಪ್ಪಿಗೆ ಪಡೆಯುವ ಹಂತಕ್ಕೆ ಬಂದಿದೆ. ಆದರೆ ಜನಪ್ರತಿನಿಧಿಗಳ ಬದ್ಧತೆ ಕೊರತೆಯಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ. ಸಂಸದ ಅನಂತಕುಮಾರ್ ಹೆಗಡೆ ಇಚ್ಛಾಶಕ್ತಿ
ತೋರಿಸಿದರೆ ಪಪಂ ಮೀಸಲಾತಿ ಸಿಗುವುದು ತಡವಾಗುವುದಿಲ್ಲವೆಂದು ಹಾಲಕ್ಕಿ ಸಮುದಾಯದವರು ಹೇಳುತ್ತಾರೆ.

ಪಟ್ಟಭದ್ರ ಮೇಲ್ವರ್ಗದವರು ಹಾಲಕ್ಕಿಗಳ ಮೀಸಲಾತಿಗೆ ಅಡ್ಡಗಾಲು ಹಾಕಿದ್ದಾರೆಂಬ ಮಾತು ಕೇಳಿಬರುತ್ತಿದೆ. ಒಂದು ಅಂದಾಜಿನಂತೆ ಉತ್ತರ ಕನ್ನಡದಲ್ಲಿ ಬಹುಸಂಖ್ಯಾತರಾದ ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸಿದರೆ ಮುಂದೊಂದು ದಿನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತದೆಂಬ ದೂ(ದು)ರಾಲೋಚನೆಯಿಂದ ಮೇಲ್ವರ್ಗದ ಮುಂದಾಳುಗಳು ಹಾಲಕ್ಕಿಗಳ ಬೇಡಿಕೆ ಈಡೇರದಂತೆ ಚಿತಾವಣೆ ಮಾಡುತ್ತಿದ್ದಾರೆನ್ನಲಾಗಿದೆ. ಸಂಸದೆಯಾಗಿದ್ದ ಮಾರ್ಗರೆಟ್ ಆಳ್ವ ಒಬ್ಬರನ್ನು ಬಿಟ್ಟರೆ ಮತ್ಯಾರೂ ಹಾಲಕ್ಕಿಗಳಿಗೆ ಪಪಂ ಮೀಸಲಾತಿ ಕೊಡಿಸಲು ಪ್ರ್ರಾಮಾಣಿಕವಾಗಿ ಪ್ರಯತ್ನಿಸಿಲ್ಲವೆನ್ನಲಾಗಿದೆ.

ಚಾಲ್ತಿ ರಾಜಕಾರಣ

ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ವೈಯಕ್ತಿಕ ಮುತುವರ್ಜಿಯಿಂದ ಮದುವೆ-ಮುಂಜಿ, ಶೀಕು-ಸಂಕಟ, ಕ್ರೀಡಾ ಕೂಟ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧಾರಾಳವಾಗಿ ದಾನಧರ್ಮ ಮಾಡುತ್ತ ಹಳ್ಳಿಹಳ್ಳಿಗಳಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಶಾಸಕನಾಗುವ ಕನಸು ಕಾಣುತ್ತಿರುವ ಬಿಜೆಪಿಯ ಕೆಲವರು ರೂಪಾಲಿಗೆ ಟಿಕೆಟ್ ತಪ್ಪಿಸುವ ಕಾರ್ಯಾಚರಣೆ ನಡೆಸಿದ್ದಾರೆನ್ನಲಾಗಿದೆ. ಆದರೆ ಚುನಾವಣೆ ಎದುರಿಸಲು ಬೇಕಾದಷ್ಟು ಸಂಪನ್ಮೂಲ, ಹೈಕಮಾಂಡ್ ಸಂಪರ್ಕ ರೂಪಾಲಿಗೆ ಹೆಚ್ಚಿದೆಯೆಂದು ಬಿಜೆಪಿಯಲ್ಲಿ ಮಾತಾಡಿಕೊಳ್ಳಲಾಗುತ್ತಿದೆ. ಕಾಮಗಾರಿ ಪೀಸ್ ವರ್ಕ್ ಮಾಡಿ ಪರ್ಸೆಂಟೇಜ್‌ಅನ್ನು ಶಾಸಕಿ ಹೊಡೆಯುತ್ತಿದ್ದಾರೆಂದು ಗುತ್ತಿಗೆದಾರ ಸಂಘ ನೇರವಾಗಿಯೇ ಆರೋಪ ಮಾಡುತ್ತಿದೆ. ಕಾರವಾರಿಗರಿಗೆ ಬೇಡವಾದ ವಾಣಿಜ್ಯ ಬಂದರು ವಿಸ್ತರಣೆ ಬಗ್ಗೆ ಅಸ್ಪಷ್ಟ ನಿಲುವು, ಬಾಣಂತಿ ಸಾವಿಗೆ ಕಾರಣ ಎನ್ನಲಾದ ಜಿಲ್ಲಾಸ್ಪತ್ರೆ ಅಧೀಕಕ ಡಾ. ಶಿವಾನಂದ ಕುಡ್ತಲಕರ್ ವರ್ಗಾವಣೆ ಮಾಡಿಸಲಾಗದ ಅಸಹಾಯಕತೆ ಶಾಸಕಿ ರೂಪಾಲಿಯವರನ್ನು ಟೀಕೆ-ಟಿಪ್ಪಣಿ ಎದುರಿಸುವಂತೆ ಮಾಡಿದೆ.

ರೂಪಾಲಿ ನಾಯ್ಕ್

ಬಲ-ದೌರ್ಬಲ್ಯಗಳ ನಡುವೆ ರೂಪಾಲಿ ನಾಯ್ಕ್‌ರೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಅವರು ಕ್ಷೇತ್ರ ಹದ ಮಾಡಿಕೊಳ್ಳುತ್ತಿದ್ದಾರೆ. ಕದ್ರಾ-ಕಿನ್ನರ-ಮಾಜಾಳಿಯಿಂದ ಅಮದಳ್ಳಿ ತನಕ ರೂಪಾಲಿ ದುರ್ಬಲರಾಗಿದ್ದು, ಇಲ್ಲಿ ಕಾಂಗ್ರೆಸ್‌ನ ಸತೀಶ್ ಸೈಲ್ ಮತ್ತು ಜೆಡಿಎಸ್‌ನ ಆನಂದ ಅಸ್ನೋಟಿಕರ್ ಪ್ರಬಲರಾಗಿದ್ದಾರೆ. ಅಮದಳ್ಳಿಯಿಂದ ಇಡೀ ಅಂಕೋಲಾ ತಾಲೂಕಲ್ಲಿ ರೂಪಾಲಿ ಎದುರಾಳಿಗಳಿಬ್ಬರಿಗಿಂತ ತುಂಬ ಮುಂದಿದ್ದಾರೆನ್ನಲಾಗಿದೆ. ಹೀಗಾಗಿ ರೂಪಾಲಿ ಈ ಭಾಗದಲ್ಲೆ ಗಮನ ಕೇಂದ್ರೀಕರಿಸಿದ್ದಾರೆ.

ಚುನಾವಣೆಗಿನ್ನು ಒಂದು ವರ್ಷವಿರುವ ಈ ಸಂದರ್ಭದಲ್ಲಿ ಕ್ಷೇತ್ರದ ರಾಜಕೀಯ ಗಮನಿಸಿದರೆ ಸೈಲ್‌ಕಿಂತ ಆನಂದ್ ಹೆಚ್ಚು ಜನರಿಗೆ ಸಹ್ಯವಾಗಿರುವುದು ಕಂಡುಬರುತ್ತದೆ. ಆದರೆ ಆನಂದ್‌ಗೆ ವೈಯಕ್ತಿಕ ಚಾರಿಷ್ಮಾ ಬಿಟ್ಟರೆ
ಜೆಡಿಎಸ್‌ನಿಂದ ಲಾಭವೇನಿಲ್ಲ. ಕಾರವಾರದಲ್ಲಿ ಜೆಡಿಎಸ್‌ಗೆ ನೆಲೆಬೆಲೆಯಿಲ್ಲ. ಹೀಗಾಗಿ ಆನಂದ್ ಕಾಂಗ್ರೆಸ್ ಸೇರಲು ಶತಾಯಗತಾಯ ಪ್ರಯತ್ನ ನಡೆಸಿದ್ದರು. ಸಾಧ್ಯವಾಗದಿದ್ದಾಗ ಬಿಜೆಪಿಗೆ ಹೋಗಲು ನೋಡಿದರು.

ಉತ್ತರ ಕನ್ನಡದಲ್ಲಿ ಸಂಸದ ಹೆಗಡೆಯ ಏಕೈಕ ಕಟುಟೀಕಾಕಾರ ಆನಂದ್ ಅಸ್ನೋಟಿಕರ್. ಕಾಂಗ್ರೆಸ್‌ನ ದೇಶಪಾಂಡೆ ಮತ್ತು ಬಿಜೆಪಿಯ ಹೆಗಡೆ ಇಬ್ಬರನ್ನು ಏಕಕಾಲಕ್ಕೆ ಎದುರು ಹಾಕಿಕೊಂಡಿರುವ ಆನಂದ್ ಅತಂತ್ರರಾಗಿದ್ದಾರೆ. ಆಪರೇಶನ್ ಕಮಲ ತನ್ನ ರಾಜಕೀಯ ಬದುಕನ್ನು ಆಪೋಶನ ಪಡೆಯಿತೆಂದು ಆನಂದ್ ಹಳಹಳಿಸುತ್ತಿದ್ದಾರೆ. ಆನಂದ್‌ಗೆ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ ಎನ್ನಲಾಗುತ್ತಿದ್ದು, ಹಾಗೇನಾದರು ಆದರೆ ರೂಪಾಲಿ ನಾಯ್ಕ್‌ಗೆ ಅನುಕೂಲವಾಗಲಿದೆ ಎಂಬ ಚರ್ಚೆ ನಡೆದಿದೆ. ಇದೆಲ್ಲ ಸಾಧ್ಯಾಸಾಧ್ಯತೆಗಳು ಏನೇ ಇರಲಿ, ಅಖಾಡದಲ್ಲಿ ’ಹಣಾ’ಹಣಿ ಮಾತ್ರ ಗ್ಯಾರಂಟಿ!!


ಇದನ್ನೂ ಓದಿ: ಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಹಳಿಯಾಳ-ಜೋಯಿಡಾ: ತಡವಾದ ಅಭಿವೃದ್ಧಿ; ಸಾಮ್ರಾಜ್ಯ ಉಳಿಸಿಕೊಳ್ಳುವರಾ ದೇಶಪಾಂಡೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...