ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾರ್ಮಿಕನೊಬ್ಬ ಚರಂಡಿಯ ಗುಂಡಿಯಲ್ಲಿ ಸಿಲುಕಿದ ಪರಿಣಾಮ ಆತನನ್ನು ಹೊರತೆಗೆಯಲು ಸುಮಾರು ಅರ್ಧ ಗಂಟೆ ಹರಸಾಹಸ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಗುರುವಾರ ಅಪರಾಹ್ನ ಈ ಘಟನೆ ನಡೆದಿದ್ದು, ವಿಡಿಯೋ ಮಾಡಲು ಹೋದ ಸಾರ್ವಜನಿಕರೊಬ್ಬರಿಗೆ ಇಂಜಿನಿಯರ್ ಅಡ್ಡಿಪಡಿಸಿರುವ ಸಂಗತಿಯೂ ವರದಿಯಾಗಿದೆ.
ಒಳಚರಂಡಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಆಗ ಓರ್ವ ಕಾರ್ಮಿಕ ದಿಢೀರ್ ಮ್ಯಾನ್ ಹೋಲ್ ನಲ್ಲಿ ಸೊಂಟದವರೆಗೆ ಸಿಲುಕಿದ್ದಾನೆ. ಮೇಲೆ ಏಳಲು ಸತತ ಪ್ರಯತ್ನಪಟ್ಟರು ಆತನಿಂದ ಆಗಿಲ್ಲ. ಈ ವೇಲೆ ಮೇಲೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಪೋಟೋ ಮತ್ತು ವಿಡಿಯೋ ತೆಗೆಯದಂತೆ ಇಂಜಿನಿಯರ್ ಧಮಕಿ ಹಾಕಿದ್ದಾರೆ.
ವಿಡಿಯೋ ನೋಡಿ
ಆದರೂ ಇಂಜಿನಿಯರ್ ಮಾತುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಆ ವ್ಯಕ್ತಿ ಸಂಪೂರ್ಣ ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ ಬುರುಜೆಯಲ್ಲಿ ಹೂತಿರುವ ಕಾರ್ಮಿಕ ಮೇಲೆ ಬರಲು ಹೆಣಗುತ್ತಿದ್ದರೆ, ಇನ್ನಿಬ್ಬರು ಕೂಡ ಅತನ ಸಹಾಯಕಕ್ಕೆ ಬರಲೂ ಆಗದೆ ಅತ್ತಿತ್ತ ಹೆಜ್ಜೆ ಇಡುವ ದೃಶ್ಯ ಸೆರೆಯಾಗಿದೆ.
ಜೆಸಿಬಿಯಲ್ಲಿ ಸುಮಾರು 20 ಅಡಿ ಆಳ ದೊಡ್ಡ ಗುಂಡಿ ತೋಡಿದ್ದು ಒಳಚರಂಡಿಯ ಮಾರ್ಗ ಹುಡುಕುತ್ತಿರುವಾಗ ಕಾರ್ಮಿಕನೊಬ್ಬ ದಿಢೀರ್ ಕೆಸರು ತುಂಬಿಕೊಂಡಿದ್ದ ಮ್ಯಾನ್ ಹೋಲ್ ಗೆ ಕುಸಿದುಹೋಗಿದ್ದಾನೆ. ಕಾಲು ಕೆಸರಿನಿಂದ ಕೂಡಿದ ಬುರುಜೆಯಲ್ಲಿ ಸಿಲುಕಿದ ಪರಿಣಾಮ ಆತ ಮೇಲೆ ಬರಲು ಹರಸಾಹಸ ಬೀಳಬೇಕಾಗಿದೆ.
ಸತತ 45 ನಿಮಿಷಗಳ ನಂತರ ಮತ್ತೊಬ್ಬ ಕಾರ್ಮಿಕ ಕೆಸರಿನಲ್ಲಿ ಸಿಲುಕಿದ ಕಾರ್ಮಿಕನ ನೆರವಿಗೆ ಬಂದಿದ್ದು ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯ ಕಾಲನ್ನು ಹಿಡಿದು ಶ್ರಮಪಟ್ಟು ಮೇಲೆತ್ತುವಲ್ಲಿ ಸಫಲನಾಗಿದ್ದಾನೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ.
20 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಲಕರಣೆಗಳನ್ನು ನೀಡದೇ ಕೆಲಸ ಮಾಡಿಸುತ್ತಿದ್ದುದು ಕಂಡು ಬಂದಿದೆ. ಕೆಸರಿನಿಂದ ಮೇಲೆದ್ದ ಕಾರ್ಮಿಕರನನ್ನು ಜೆಸಿಬಿಯ ಮೂಲಕವೇ ರಸ್ತೆಯ ಮೇಲೆ ತರಲಾಗಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಕಾರ್ಮಿಕರಿಗೆ ಏನೇ ಅನಾಹುತವಾದರೂ ಯಾರೂ ಕೇಳುವಂತಹ ಪರಿಸ್ಥಿತಿ ಇಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.


