Homeಚಳವಳಿಶೋಷಿತರಿಗೆ ಮೀಸಲಾತಿ ಯಾಕೆ ಬೇಕಿದೆ? : ವಿಕಾಸ್‌ ಆರ್‌ ಮೌರ್ಯ

ಶೋಷಿತರಿಗೆ ಮೀಸಲಾತಿ ಯಾಕೆ ಬೇಕಿದೆ? : ವಿಕಾಸ್‌ ಆರ್‌ ಮೌರ್ಯ

- Advertisement -
- Advertisement -

ಮೀಸಲಾತಿ – ಕಣ್ಣಗಾಯಕ್ಕೊಂದು ಕನ್ನಡಿ

ಈ ಅಂಕಣದ ಆರಂಭಿಕ ಪ್ರಸ್ತಾವನೆಯ ‘ಮೀಸಲಾತಿಯ ಮೂಲ ಋಗ್ವೇದ’ ಎಂಬ ಬರೆಹದಲ್ಲಿ ಪ್ರಾಚೀನ ಭಾರತದಲ್ಲಿ ‘ಅಸಮಾನತೆಗಾಗಿ ಶ್ರೇಣೀಕೃತ ವರ್ಣಾಧಾರಿತ ಮೀಸಲಾತಿ’ಯನ್ನು ಹೇಗೆ ದ್ವಿಜ ವರ್ಗದವರು ಪಡೆದುಕೊಂಡಿದ್ದರು, ನಂತರದಲ್ಲಿ ಅದು ಹೇಗೆ ಜಾತೀಯಾಧಾರಿತ ಶ್ರೇಣೀಕೃತ ಮೀಸಲಾತಿಯಾಗಿ ಬದಲಾಯಿತು ಹಾಗೂ ಇಂತಹ ಮೀಸಲಾತಿಯಿಂದ ಶೂದ್ರರು, ದಲಿತರು ಮತ್ತು ಮಹಿಳೆಯರನ್ನು ಹೇಗೆ ದೂರವಿಟ್ಟಿದ್ದರು ಎಂಬುದನ್ನು ತಿಳಿದಿದ್ದೆವು. ಇದನ್ನು ತಿಳಿದೂ ಸಹ ಇಂದು ಜಾತಿಯಾಧಾರಿತವಾಗಿ ಮೀಸಲಾತಿಯನ್ನು ದಲಿತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಏಕೆ ನೀಡಬೇಕು ಎಂಬ ಪ್ರಶ್ನೆಗಳು ಸಹಜವಾಗಿಯೇ ಮುನ್ನೆಲೆಗೆ ಬಂದುಬಿಡುತ್ತವೆ. ಜಾತಿಯಾಧಾರಿತ ಮೀಸಲಾತಿಯನ್ನು ಯುವಜನತೆಗೆ ಅರ್ಥ ಮಾಡಿಸುವಲ್ಲಿಯೂ ನಾವೆಲ್ಲರೂ ಬಹುತೇಕ ಸೋತಿದ್ದೇವೆ ಅಥವಾ ಬಹಳ ತೆಳುವಾಗಿ ಉತ್ತರಿಸಿರುತ್ತೇವೆ. ಈ ಕಾರಣಕ್ಕಾಗಿ, ಇಂದು ಜಾತಿಯಾಧಾರಿತ ಮೀಸಲಾತಿ ಏಕೆ ಅಸ್ಥಿತ್ವದಲ್ಲಿದೆ ಎಂಬುದನ್ನು ಸಂಕ್ಷಿಪ್ತವಾಗಿಯಾದರೂ ತಿಳಿಯಬೇಕಿದೆ.

ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕು. ಭಾರತ ದೇಶದಲ್ಲಿ ಸೃಷ್ಟಿಯಾಗುವ ಪದವಿ, ಉದ್ಯೋಗಗಳೆಲ್ಲದರಲ್ಲೂ ಭಾರತೀಯರ ಜನಸಂಖ್ಯೆ ಆಧಾರದಲ್ಲಿ ‘ಪ್ರಾತಿನಿದ್ಯ’ ನೀಡಲೇಬೇಕಿರುವುದು ಪ್ರಭುತ್ವದ ಕರ್ತವ್ಯವಾಗಿದೆ ಎಂಬುದನ್ನು ಅರಿಯಬೇಕು. ಈ ಕಾರಣಕ್ಕಾಗಿಯೇ ಮೊದಲಿಗೆ ಶಾಹು ಮಹಾರಾಜರ ಆಡಳಿತದಲ್ಲಿ ಶೂದ್ರ ವರ್ಗವು ಆಸ್ಥಾನದ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಕೇಳಿತು. ಶೂದ್ರರಿಗೆ ಈ ಮಾರ್ಗವನ್ನು ತೋರಿಸಿಕೊಟ್ಟವರು ಬ್ರಾಹ್ಮಣರೇ ಆಗಿದ್ದರು.

ಬ್ರಾಹ್ಮಣರಲ್ಲಿದ್ದ ಶೈವ ಮತ್ತು ವೈಷ್ಣವ ಬಿಕ್ಕಟ್ಟು ಅವರ ನಡುವಿನ ಪೈಪೋಟಿಗೆ ಕಾರಣವಾಗಿ ಪ್ರತ್ಯೇಕ ಮೀಸಲಾತಿಗಾಗಿ ಮೊದಲು ಬ್ರಾಹ್ಮಣರೇ ಆಗ್ರಹಿಸಿದ್ದರು. ಇದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ಮೈಸೂರು ರಾಜ್ಯವೇ ಆಗಿದೆ. ಇಲ್ಲಿ ಮದ್ರಾಸ್ ಬ್ರಾಹ್ಮಣರ ಪ್ರಾತಿನಿದ್ಯ ಹೆಚ್ಚಾಗಿದ್ದ ಕಾರಣ ಮೈಸೂರು ಬ್ರಾಹ್ಮಣರು ಪ್ರತ್ಯೇಕ ಮೀಸಲಾತಿಗಾಗಿ ಆಗ್ರಹಿಸಿದ್ದರು. ಇದರ ಬೆನ್ನಲ್ಲಿಯೇ ಶೂದ್ರ ಜಾತಿಗಳಲ್ಲಿನ ವಿದ್ಯಾವಂತ ವರ್ಗದ ಪ್ರಜಾಮಿತ್ರ ಮಂಡಳಿ ಹೋರಾಟವು ಹಿಂದುಳಿದ ವರ್ಗಗಳನ್ನು ಸಂಘಟಿಸಿ ಶಿಕ್ಷಣ ಮತ್ತು ಸಾರ್ವಜನಿಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿತು. ಈ ಹೋರಾಟವು ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಗಮನ ಸೆಳೆದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕಾಗಿ ಮಿಲ್ಲರ್ ಸಮಿತಿ ರಚನೆಯಾಯಿತು. ಈ ಮಿಲ್ಲರ್ ಸಮಿತಿ ಕಂಡುಕೊಂಡ ಸತ್ಯಗಳನ್ನು ಮೇಲ್ನೋಟಕ್ಕೆ ಗಮನಿಸಿದರೂ ಸಹ ದಲಿತರಿಗೆ ಮತ್ತು ಶೂದ್ರರಿಗೆ ಜಾತಿಯಾಧಾರಿತ ಮೀಸಲಾತಿಯನ್ನು ಏಕೆ ಕೊಡಬೇಕೆಂದು ಸ್ಪಷ್ಟಗೊಳ್ಳುತ್ತದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ

ಮೈಸೂರು ಸರ್ಕಾರ ತನ್ನ ಆದೇಶದಲ್ಲಿ ‘ಸಾರ್ವಜನಿಕ ಸೇವೆಯ ಹುದ್ದೆಗಳಲ್ಲಿ ಸದ್ಯ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಗಿದ್ದು, ಸರ್ಕಾರವು ಸಾರ್ವಜನಿಕ ಹುದ್ದೆಗಳಲ್ಲಿ ಇತರ ಸಮುದಾಯಗಳ ಸಮರ್ಪಕ ಪ್ರಾತಿನಿದ್ಯವನ್ನೂ ಸಹ ಬಯಸುತ್ತದೆ’ ಎಂದಿತ್ತು. ಈ ಕಾರಣಕ್ಕಾಗಿಯೇ ಸರ್ಕಾರವು ನಮ್ಮ ಸಮಿತಿಗೆ, ಸಾರ್ವಜನಿಕ ಹುದ್ದೆಗಳಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿದ ಇತರ ಪ್ರಮುಖ ಹಿಂದುಳಿದ ಜಾತಿಗಳ ಪಾಲನ್ನು ಹೆಚ್ಚು ಮಾಡಲು ಯಾವ ರೀತಿಯ ಉತ್ತೇಜಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಿಫಾರಸು ಮಾಡಲು ತಿಳಿಸಿ ಎಂದು ಸೂಚಿಸಿತ್ತು.

ಹಿಂದುಳಿದ ಜಾತಿಗಳೆಂದರೆ 1911 ರ ಜನಗಣತಿಯಲ್ಲಿ ಯಾವ ಜಾತಿ ಅಥವಾ ಸಮುದಾಯ ಇಂಗ್ಲಿಷ್ ಸಾಕ್ಷರತೆಯಲ್ಲಿ ಶೇಕಡಾ 5 ಕ್ಕಿಂತ ಕಡಿಮೆಯಾಗಿರುತ್ತದೆಯೋ ಅಂತಹ ಸಮುದಾಯ. ಇವರ ಜೊತೆಗೆ ಭಾರತೀಯ ಕ್ರೈಸ್ತರು, ಮುದಲಿಯಾರ್ ಮತ್ತು ಪಿಳ್ಳೈ ಸಮುದಾಯಗಳನ್ನೂ ಸಹ ಸೇರಿಸಿಕೊಳ್ಳಲಾಯಿತು. ಆದ್ದರಿಂದ ಹಿಂದುಳಿದ ಜಾತಿಗಳೆಂದರೆ, ಬ್ರಾಹ್ಮಣರು, ಯುರೋಪಿಯನ್ನರು ಮತ್ತು ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿದ ಸಮುದಾಯಗಳೆಂದು ಭಾವಿಸತಕ್ಕದ್ದು. ಇದರ ಜೊತೆಗೆ ಮತ್ತೊಂದು ವರ್ಗವಾದ ನಿಮ್ನ ವರ್ಗಗಳನ್ನೂ (ಅಸ್ಪೃಶ್ಯರು ಅಥವಾ ದಲಿತರು) ಸಹ ಹಿಂದುಳಿದ ಜಾತಿಗಳಲ್ಲಿ ಸೇರಿಸಿಕೊಳ್ಳಲಾಯಿತಾದರೂ ಇವರಿಗೆ ನಿರ್ದಿಷ್ಟ ಸವಲತ್ತುಗಳನ್ನು ನೀಡುವ ಕಡೆ ಪ್ರತ್ಯೇಕವಾಗಿಯೇ ನಮೂದಿಸಲಾಗಿದೆ.

ದುರಂತವೆಂದರೆ ಸಫಾಯಿ ಕರ್ಮಚಾರಿ ಉದ್ಯೋಗಗಳನ್ನು ಮಿಲ್ಲರ್ ಸಮಿತಿಯೂ ಸಹ ದಲಿತರಿಗೇ ಮೀಸಲಿಟ್ಟಿತು. ಆದಾಗ್ಯೂ ಮಿಲ್ಲರ್ ಸಮಿತಿ ಐತಿಹಾಸಿಕ ತೀರ್ಮಾನವನ್ನು ನೀಡಿತು. ಅದರ ವರದಿಯಲ್ಲಿ ‘ಸಮರ್ಪಕ ಪ್ರಾತಿನಿದ್ಯವೆಂದರೆ, 1911 ರ ಜನಗಣತಿ ತೋರಿಸುವಂತೆ ಒಟ್ಟು 57,01,579 ಜನಸಂಖ್ಯೆಯಲ್ಲಿ ಬ್ರಾಹ್ಮಣರ ಜನಸಂಖ್ಯೆ 1,94,570. ಪಂಚಮರು, ಮಾದಿಗರಂತಹ ನಿಮ್ನವರ್ಗಗಳ ಜನಸಂಖ್ಯೆ 10,43,807. ಉನ್ನತ ಹುದ್ದೆಗಳಿಗೆ ಕೆಲವು ವರ್ಷಗಳವರೆಗೆ ಪ್ರವೇಶಿಸಲಾಗದ ಸ್ಥಿತಿಯಲ್ಲಿರುವ ನಿಮ್ನವರ್ಗಗಳನ್ನು ಹೊರತುಪಡಿಸಿದರೆ, ಬ್ರಾಹ್ಮಣರ ಜನಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ 22 ಜನರಿಗೆ ಒಬ್ಬರಾಗುತ್ತಾರೆ (4.5%). ಈ ಅಂಕಿಅಂಶಗಳನ್ನು ಗಮನಿಸಿದಾಗ, ಸಾರ್ವಜನಿಕ ಹುದ್ದೆಗಳಲ್ಲಿ ಬ್ರಾಹ್ಮಣರ ನಿರ್ದಿಷ್ಟ ಪಾಲನ್ನು ಇಳಿಮುಖಗೊಳಿಸಬೇಕಾದ ಎಲ್ಲಾ ಅವಶ್ಯಕತೆಗಳೂ ಸಹ ನಮಗೆ ಕಂಡುಬರುತ್ತದೆ.

ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ 

ಜನಸಂಖ್ಯೆಯನ್ನಷ್ಟೇ ಪರಿಗಣಿಸದೆ ಸೇವಾ ದಕ್ಷತೆಯನ್ನೂ ಸಹ ಪರಿಗಣಿಸಬೇಕೆಂಬ ಅಂಶ ನಮ್ಮ ಗಮನದಲ್ಲಿದೆ. ಆದಾಗ್ಯೂ “ದಕ್ಷತೆಯನ್ನು ಪ್ರಮುಖವಾಗಿ ಕೇವಲ ಶೈಕ್ಷಣಿಕ ವಿದ್ಯಾರ್ಹತೆಯಿಂದ ಅಳೆಯದೇ ಮತ್ತಷ್ಟು ಆಡಳಿತಾತ್ಮಕ ಗುಣಗಳಾದ ಕರುಣೆ, ಉದ್ದೇಶಿತ ಪ್ರಾಮಾಣಿಕತೆ, ಸಾಮರ್ಥ್ಯ ಮತ್ತು ಸಾಮಾನ್ಯ ಪ್ರಜ್ಞೆ ಅಕ್ಷರಸ್ಥ ಅಧಿಕಾರಿಗಳನ್ನು ಮತ್ತಷ್ಟೂ ಮೇಲ್ದರ್ಜೆಗೆರಿಸುತ್ತವೆ”. ಬ್ರಾಹ್ಮಣ ಸಮುದಾಯದಲ್ಲಿ ಈ ಗುಣಗಳ ಕೊರತೆ ಇದೆಯೆಂದು ನಾವು ಭಾವಿಸುತ್ತಿಲ್ಲ. ಆದರೆ ತಮಗೂ ಇತರ ಜನಾಂಗಗಳಿಗೂ ನಡುವೆ ಇರುವ ಶೈಕ್ಷಣಿಕ ಅರ್ಹತೆಯ ಭಿನ್ನತೆಯನ್ನೇ ಮುಂದುಮಾಡಿಕೊಂಡು ಅತ್ಯಧಿಕ ಪಾಲನ್ನು ಖಂಡಿತವಾಗಿಯೂ ಪಡೆಯಬಾರದು’ ಎಂದು ಕಡಾಖಂಡಿತವಾಗಿ ನಿರ್ಧರಿಸಿತು. ಸರ್ಕಾರದ ಎಲ್ಲಾ ಹಂತದ ಹುದ್ದೆಗಳಲ್ಲಿಯೂ 7 ವರ್ಷಗಳ ಅವದಿಗೆ ಹೆಚ್ಚಾಗದಂತೆ, ಮೇಲ್ದರ್ಜೆಯ ಹುದ್ದೆಗಳಲ್ಲಿ ಅರ್ಧದಷ್ಟು ಮತ್ತು ಕೆಳಹಂತದ ಹುದ್ದೆಗಳಲ್ಲಿ ಮೂರನೇ ಎರಡರಷ್ಟರಲ್ಲಿ ಬ್ರಾಹ್ಮಣೇತರರನ್ನು ನೇಮಕ ಮಾಡಬೇಕು. ಇದರಲ್ಲಿ ನಿಮ್ನವರ್ಗಗಳಿಗೆ ತಕ್ಕಂತೆ ವಿದ್ಯಾರ್ಹತೆಯ ಆದ್ಯತೆಯನ್ನು ಗಮನಿಸಬೇಕು ಎಂದು ತಿಳಿಸಿತು. ಅದರ ಪರಿಣಾಮವಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಿತು.

1. ಅರ್ಹತಾ ಪರೀಕ್ಷೆಯಿಂದ ವಿನಾಯಿತಿ
2. ಸಮಾನ ಅಥವಾ ಹತ್ತಿರದ ವಿದ್ಯಾರ್ಹತೆ ಹೊಂದಿದಾಗ ಆದ್ಯತೆಯ ಮೇರೆಗೆ ನೇಮಕಾತಿ
3. ನಿಗದಿತ ಕಠಿಣ ಪರೀಕ್ಷೆಗಳಲ್ಲಿ ಸಡಿಲಿಕೆ
4. ಕನಿಷ್ಠ ನಿಗದಿತ ಪ್ರಮಾಣದ ಹಿಂದುಳಿದ ಜಾತಿಗಳ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಕ್ರಿಯೆ

ಮಿಲ್ಲರ್ ಸಮಿತಿ ಕೇವಲ ಬಾಯಿ ಮಾತಿಗೆ ಈ ತೀರ್ಮಾನಕ್ಕೆ ಬರಲಿಲ್ಲ. ಅದಕ್ಕೆ ಬೇಕಾದ ಎಲ್ಲಾ ಅಂಕಿಅಂಶಗಳನ್ನೂ ಸಹ ಕಲೆ ಹಾಕಿತ್ತು. ಈ ಕೆಳಗಿನ ಕೋಷ್ಟಕವನ್ನು ಗಮನಿಸಿದರೆ ದಲಿತರಿಗೆ, ಹಿಂದುಳಿದ ಜಾತಿಗಳಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ಏಕೆ ಕೊಡಬೇಕು ಎಂಬುದು ಅರಿವಾಗುತ್ತದೆ.


ಮುಂದೆ ಮದ್ರಾಸ್‌ನಲ್ಲಿ ದ್ರಾವಿಡ ಚಳವಳಿಯು ಜಸ್ಟೀಸ್ ಪಾರ್ಟಿ ನೇತೃತ್ವದಲ್ಲಿಯೂ ಸಹ ಮಿಲ್ಲರ್ ಸಮಿತಿಯ ಶಿಫಾರಸ್ಸುಗಳ ರೀತಿಯಲ್ಲಿಯೇ ಮಾಟೆಗ್ಯೂ ಚೆಲ್ಮಫೋರ್ಡ್ ಸಮಿತಿಯ ಮುಂದೆ ತನ್ನ ವಾದ ಮಂಡಿಸಿತು. 1914 ರಲ್ಲಿ ಒಟ್ಟು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಪದವೀದರರ ಮಾಹಿತಿಯ ಪ್ರಕಾರ ಅಲ್ಲಿ ಓದುತ್ತಿದ್ದ ಒಟ್ಟು 650 ವಿದ್ಯಾರ್ಥಿಗಳಲ್ಲಿ 452 ಜನ ಬ್ರಾಹ್ಮಣರಾಗಿದ್ದು, 12 ಜನ ಮಾತ್ರ ಅಬ್ರಾಹ್ಮಣರಿದ್ದರು ಹಾಗೂ 74 ಜನ ಇತರ ಜನಾಂಗದವರಿದ್ದರು.

ಮದ್ರಾಸ್ ಶಾಸಕಾಂಗ ಸಭೆ, ಮದ್ರಾಸ್ ವಿ.ವಿಯ ಸೆನೆಟ್ ಸದಸ್ಯರು ಮತ್ತು ಇತರ ಸ್ಥಳೀಯ ಸಾರ್ವಜನಿಕ ಮಂಡಳಿಗಳಲ್ಲಿ ಅಬ್ರಾಹ್ಮಣರು ಪ್ರವೇಶಿಸುವುದೇ ದುಸ್ತರವಾಗಿತ್ತು. ಅಲ್ಲೆಲ್ಲ ಅತಿ ಹೆಚ್ಚು ಜನ ಬ್ರಾಹ್ಮಣರೇ ಸೇರಿಕೊಂಡಿದ್ದರು. 1919 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 128 ಖಾಯಂ ಜಿಲ್ಲಾಧಿಕಾರಿಗಳಲ್ಲಿ (ಮುನ್ಸಿಫ್) 93 ಜನ ಬ್ರಾಹ್ಮಣರಿದ್ದರು, 25 ಜನ ಅಬ್ರಾಹ್ಮಣರಿದ್ದರು, ಉಳಿದವರು ಮುಸ್ಲಿಮರು ಮತ್ತು ಭಾರತೀಯ ಕ್ರೈಸ್ತರು ಮತ್ತು ಆಂಗ್ಲೋ ಇಂಡಿಯನ್ನರು. ಒಟ್ಟು 1007 ಗೆಜೆಟೆಡ್ ಹುದ್ದೆಗಳಲ್ಲಿ 609 ಜನ ಬ್ರಾಹ್ಮಣರಾದರೆ 398 ಜನ ಅಬ್ರಾಹ್ಮಣರು ಉಳಿದವರು ಮುಸ್ಲಿಮರು ಮತ್ತು ಕ್ರೈಸ್ತರು. ಒಟ್ಟು 17,225 ಗುಮಾಸ್ತರ ಹುದ್ದೆಗಳಲ್ಲಿ 9813 ಜನ ಬ್ರಾಹ್ಮಣರಿದ್ದರು. 1882 ಕಾರ್ಯನಿರ್ವಹಿಸುತ್ತಿದ್ದ ಶಾಸನಸಭೆಗಳಲ್ಲಿ ಸುಮಾರು ಮೂರು ದಶಕಗಳವರೆಗೂ ಒಬ್ಬೇ ಒಬ್ಬ ಅಬ್ರಾಹ್ಮಣ ಸದಸ್ಯನನ್ನು ಸಹ ಹೊಂದಿರಲಿಲ್ಲ.

ಇದನ್ನೂ ಓದಿ: ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಈ ಅಂಕಿ ಅಂಶಗಳೆಲ್ಲವೂ ತಿಳಿಸುವುದೇನೆಂದರೆ, ಸರ್ಕಾರಿ ಹುದ್ದೆಗಳಲ್ಲಿ, ಶೈಕ್ಷಣಿಕ ರಂಗದಲ್ಲಿ, ಹಾಸ್ಟೆಲ್ಲುಗಳಲ್ಲಿ ಹೀಗೆ ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿಯೂ ಬ್ರಾಹ್ಮಣರ ಸಂಖ್ಯೆ ಅವರ ಜನಸಂಖ್ಯೆಯ ಪಾಲಿಗಿಂತ ಹಲವಾರು ಪಟ್ಟು ಹೆಚ್ಚಾಗಿತ್ತು. ಇನ್ನು ವೈಶ್ಯರಲ್ಲಿನ ಒಂದು ಭಾಗ ಮತ್ತು ಭೂಮಾಲಿಕ ಜಾತಿಗಳವರೂ ಸಹ ಬ್ರಾಹ್ಮಣರ ನಂತರದಲ್ಲಿ ಪ್ರಬಲವಾದ ಸ್ಥಾನಮಾನಗಳನ್ನು ಹೊಂದಿದ್ದರು. ಆದರೆ ಅತಿ ಹಿಂದುಳಿದ ಜಾತಿಗಳ ಪ್ರವೇಶ ಹೆಚ್ಚೂ ಕಡಿಮೆ ಇಲ್ಲದಂತಾಗಿತ್ತು. ದಲಿತರ ಪ್ರವೇಶವಂತು ಅಸಾಧ್ಯವೇ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸ್ವತಂತ್ರ ಭಾರತದಲ್ಲಿ ಮೊದಲು ಮೀಸಲಾತಿ ದಕ್ಕಿದ್ದು ಸಹಜವಾಗಿ ದಲಿತರಿಗೇ ಆಗಿತ್ತು. ಮಿಲ್ಲರ್ ಸಮಿತಿಯಂತಹ ಪ್ರಗತಿಪರ ಸಮಿತಿಯೂ ಸಹ ದಲಿತರನ್ನು ಸಫಾಯಿ ಕರ್ಮಚಾರಿಕೆಗೆ ಮೀಸಲಿರಿಸುವ ಕಾಲಘಟ್ಟದಲ್ಲಿ ಸಂವಿಧಾನ ಸಭೆ ದಲಿತರಿಗೇ ಮೊದಲಾಗಿ ಮೀಸಲಾತಿ ನೀಡಲು ಸಮ್ಮತಿ ಸೂಚಿಸಿತು. ಇದಕ್ಕೆ ವಲ್ಲಭಬಾಯಿ ಪಟೇಲರೂ ಸಹ ಸಮ್ಮತಿ ಸೂಚಿಸಿದ್ದರು. ಸಂವಿಧಾನ ಸಭೆಯಲ್ಲಿದ್ದ ಬಹುತೇಕ ಸವರ್ಣಿಯರು ದಲಿತರ ಮೀಸಲಾತಿ ಪರವಾಗಿಯೇ ಮಾತನಾಡಿ ಬೆಂಬಲಿಸಿದರು.

ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿಯೇ ಕಾಲಿಡಲು ಅಸಾಧ್ಯವಾಗಿದ್ದ ಪಕ್ಷದಲ್ಲಿ ರಾಜಕೀಯವಾಗಿ ದಲಿತರಿಗೆ ಸಹಜವಾಗಿ ಪ್ರವೇಶ ಪಡೆಯಲು ಸಾಧ್ಯವೇ? ಈ ಕಾರಣಕ್ಕಾಗಿ ದಲಿತರ ಬೇಡಿಕೆಯಾದ ಪ್ರತ್ಯೇಕ ಪತಕ್ಷೇತ್ರವನ್ನು ಬಲಿಕೊಟ್ಟು ಅದರ ಬದಲಿಗೆ 10 ವರ್ಷಗಳಿಗೊಮ್ಮೆ ಪರಿಶೀಲಿನೆಗೆ ಒಳಪಡುವ ರಾಜಕೀಯ ಮೀಸಲು ಕ್ಷೇತ್ರಗಳೂ ಸಹ ಜಾರಿಗೆ ಬಂದಿತು. ತದ ನಂತರದಲ್ಲಿ ಹಿಂದುಳಿದ ಜಾತಿಗಳಿಗೂ ಮೀಸಲಾತಿ ಅನ್ವಯವಾಯಿತು.

ಒಟ್ಟಾರೆ ಮೀಸಲಾತಿ ಎಂಬುದು ಸರ್ಕಾರದ ಎಲ್ಲಾ ಅಂಗಗಳಲ್ಲಿಯೂ ಎಲ್ಲಾ ಜಾತಿಗಳಿಗೂ ಅವರ ಜನಸಂಖ್ಯೆಗನುಗುಣವಾಗಿ ನೀಡಬೇಕಾದ ಪ್ರಾತಿನಿದ್ಯವಾಗಿದೆ. ದೇಶ ಪ್ರಗತಿ ಹೊಂದಬೇಕೆಂದರೆ ದೇಶವಾಸಿಗಳೆಲ್ಲರೂ ಅದರ ಭಾಗವಾಗಬೇಕಾಗಿರುವುದರಿಂದ ಜನಸಂಖ್ಯಾವಾರು ಜಾತಿಯಾಧಾರಿತ ಮೀಸಲಾತಿ ಅಗತ್ಯವಾಗಿದೆ. ಏಕೆಂದರೆ ಈ ನೆಲದಲ್ಲಿ ಶೋಷಣೆಯೂ ಸಹ ಜಾತಿಯಾಧಾರಿತವಾಗಿಯೇ ಆಗಿದೆ. ಅದಕ್ಕೆ ಆಧುನಿಕ ಭಾರತದ ಸಾಕ್ಷಿಯಾಗಿ ಮಿಲ್ಲರ್ ಸಮಿತಿಯ ವರದಿ ಹಾಗೂ ಜಸ್ಟೀಸ್ ಪಾರ್ಟಿಯ ಅಂಕಿಅಂಶಗಳು ನಮ್ಮ ಮುಂದಿವೆ. ಮತ್ತಷ್ಟು ತಿಳಿಯುವ ಕುತೂಹಲವಿದ್ದರೆ ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ದಿವಾನರ ಜಾತಿ ಮೂಲ ಹುಡುಕುತ್ತಾ ಹೊರಡಿ. ಜಾತಿಯಾಧಾರಿತ ಮೀಸಲಾತಿ ಮೊದಲು ಪಡೆದುಕೊಂಡಿದ್ದವರು ಯಾರೆಂದು ನಿಮಗೇ ತಿಳಿಯುತ್ತಾ ಹೋಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೀಸಲಾತಿಯು ದಲಿತರಿಗಾಗಿ ಎಂಬುದಿದ್ದರೆ ಆಡಳಿತ ವರ್ಗದವರು ಆದರೆ ಅದನ್ನು ಸಹ ಬೇರೆಯವರಿಗೆ ವರ್ಗೀಕರಣ ಮಾಡಿರುತ್ತಾರೆ
    ಪ್ರತಿಯೊಂದರಲ್ಲೂ ದೇಶದಲ್ಲಿ ದಲಿತ ಬುಡಕಟ್ಟಿನ ವರಿಗೆ ಅನ್ಯಾಯವೇ ಆಗಿದೆ

    ಬಿಜೆಪಿ ದೇಶವನ್ನಾಳಿದರೂ ಬದಲಾವಣೆಯ ಕಾಣದಾಗಿದೆ
    ಕಾಂಗ್ರೆಸ್ ವರ್ಸಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ
    ಇರುವುದರಲ್ಲಿ ಕಾಂಗ್ರೆಸ್ ಸರ್ಕಾರ ಒಪ್ಪಿಕೊಳ್ಳಬಹುದಾಗಿದೆ ಕಾರಣ ದುಡಿಯುವ ಕೈಗಳಿಗೆ ಕೆಲಸವಿತ್ತು ಹಸಿದು ಬಂದವರಿಗೆ ಮೃಷ್ಟಾನ್ನ ಸಿಗದೇ ಹೋದರೂ
    ಸಾಧಾರಣ ಊಟ ಕಂತು ಮೋಸ ವಿರಲಿಲ್ಲ
    ಮೋದಿ ಮೇಕ್ ಇನ್ ಇಂಡಿಯಾ ತಿನ್ನುವುದಕ್ಕೆ ಊಟವೇ ಸಿಗುತ್ತಿಲ್ಲ
    ದುಡಿಯುವ ಕೈಗಳು ಕೆಲಸವಂತೂ ಮೊದಲೇ ಇಲ್ಲ ಜಿ ಜಿ ಎಸ್ ಟಿ ಬಡ ಸಾಮಾನ್ಯರ ಮೇಲೆ ಏರಿಕೆಯಾದ ಒಂದು ತೂಕ
    ಜನಸಾಮಾನ್ಯ ನಾಗರಿಕರಿಗೆ ಯಾವ ಸರ್ಕಾರ ಬಂದರೂ ಸಹ ಬದಲಾವಣೆ ರೂಪಿಸುವಲ್ಲಿ ಕಾಣುತ್ತಿಲ್ಲ ರಾಮ ಕೃಷ್ಣ ಇಂತಹ ಬೇಡವಾದ ವಿಚಾರಗಳಲ್ಲಿ ಮುಳುಗಿಹೋಗಿದೆ
    ಇರುವ ದೇಶದ ಸಂಪತ್ತುಗಳನ್ನು ಎಂಎಲ್ಎ ಎಂಪಿ ಆಳುವವರು ಸಾಮಾನ್ಯರನ್ನು ಸಮುದ್ರದ ತಿಮಿಂಗಲ ದ ಮೀನಿನಂತೆ ತಿಂದು ತೇಗುತ್ತಿದ್ದಾರೆ
    ಬಡವರ್ಗದ ಕೂಲಿ ಕಾರ್ಮಿಕರನ್ನು ಸಾಮಾನ್ಯರಂತೆ ಜೀವಿಸಲು ಎಲ್ಲಿಂದ ಬಿಡುತ್ತಾರೆ

    ಐದ್ ವರ್ಷ ಕ್ಯಾಬಿನೆಟ್ ಅಲ್ಲಿ ಮಂತ್ರಿಯಾದರೆ ನೂರು ವರ್ಷ ಕೂತು ತಿನ್ನುವ ಸಾವಿರಾರು ಕೋಟಿಗಳನ್ನು ಲೂಟಿ ಮಾಡುವುದಕ್ಕೋಸ್ಕರ ನೇ ಮಂತ್ರಿ ಮಂಡಲ ಮಂಡಲ ಇರುವುದು ಇತ್ತೀಚಿನ ದಿನಗಳಲ್ಲಿ ಇಂತಹ ದುರಾಡಳಿತ ವಿಪರೀತವಾಗಿದೆ ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...