ಶನಿವಾರ (ಸೆ.27) ಕರೂರಿನಲ್ಲಿ ಆಯೋಜಿಸಿದ್ದ ಪಕ್ಷದ ರ್‍ಯಾಲಿಯಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ನಿರ್ದೇಶಿಸಲು ಕೋರಿ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ ಭಾನುವಾರ (ಸೆ.28) ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.
ಟಿವಿಕೆ ಕಾನೂನು ವಿಭಾಗದ ಅಧ್ಯಕ್ಷ ಎಸ್. ಅರಿವಝಗನ್ ನೇತೃತ್ವದ ವಕೀಲರ ಗುಂಪೊಂದು ಚೆನ್ನೈನ ಗ್ರೀನ್‌ವೇಸ್ ರಸ್ತೆಯಲ್ಲಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ. ದಂಡಪಾಣಿ ಅವರ ಮನೆಗೆ ತೆರಳಿ ಮನವಿ ಮಾಡಿದೆ ಅಥವಾ ಪ್ರಸ್ತಾಪ ಮುಂದಿಟ್ಟಿದೆ.
ಅಲ್ಲದೆ, ಘಟನೆಯ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಳ್ಳುವಂತೆ ವಿನಂತಿಸಿದೆ.
ಟಿವಿಕೆ ಪಕ್ಷದ ಪದಾಧಿಕಾರಿ ನಿರ್ಮಲ್ ಕುಮಾರ್ ಅವರ ಪ್ರಕಾರ, ನ್ಯಾಯಾಧೀಶರು ವಕೀಲರಿಗೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಸೋಮವಾರ (ಸೆ.30) ಮಧ್ಯಾಹ್ನ 2.15ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.
ಈ ನಡುವೆ ಕರೂರು ಕಾಲ್ತುಳಿತ ದುರಂತದ ತನಿಖೆ ಪೂರ್ಣಗೊಳ್ಳುವವರೆಗೆ ನಟ ವಿಜಯ್ ಅವರ ಟಿವಿಕೆ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ತುರ್ತು ಅರ್ಜಿಯನ್ನು ನ್ಯಾಯಮೂರ್ತಿ ಎನ್. ಸೆಂಥಿಲ್‌ಕುಮಾರ್ ಇಂದು ಸಂಜೆ 4:30ಕ್ಕೆ ವಿಚಾರಣೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ದುರಂತದ ಬಗ್ಗೆ ತನಿಖೆ ನಡೆಸಲು ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಾಧೀಶೆ ಅರುಣಾ ಜಗದೀಶನ್ ನೇತೃತ್ವದ ಆಯೋಗವು ಭಾನುವಾರ (ಸೆ.28) ತಡರಾತ್ರಿ ಕರೂರಿಗೆ ಆಗಮಿಸಲಿದೆ ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ಆಯೋಗ ಸಲ್ಲಿಸುವ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನೆರೆಯ ಜಿಲ್ಲೆಗಳಿಂದ 345ಕ್ಕೂ ಹೆಚ್ಚು ವೈದ್ಯರು ಮತ್ತು ದಾದಿಯರನ್ನು ನಿಯೋಜಿಸಲಾಗಿದೆ ಎಂದು ಉದಯನಿಧಿ ಮಾಹಿತಿ ನೀಡಿದ್ದಾರೆ.
ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಸಂತ್ರಸ್ತರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.
ಈ ನಡುವೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಕರೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 31 ವರ್ಷದ ಕವಿನ್ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಭಾನುವಾರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕರೂರು ಕಾಲ್ತುಳಿತ ದುರಂತ | ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ನಟ ವಿಜಯ್


