ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಸೆಪ್ಟೆಂಬರ್ 27ರಂದು ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು ಮತ್ತು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸಿಬಿಐ ತನಿಖೆಯ ಮೇಲ್ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎನ್.ವಿ ಅಂಜಾರಿಯಾ ಅವರ ಪೀಠವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ತಮಿಳುನಾಡು ಮೂಲದವರಲ್ಲದ, ಆದರೆ ತಮಿಳುನಾಡು ಕೇಡರ್‌ನ ಇಬ್ಬರು ಐಎಎಸ್ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ಕಾಲ್ತುಳಿತ ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಟಿವಿಕೆ ಪ್ರಧಾನ ಕಾರ್ಯದರ್ಶಿ (ಚುನಾವಣಾ ಕಾರ್ಯತಂತ್ರ) ಆಧವ್ ಅರ್ಜುನ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದೆ.
ಇತರ ಅರ್ಜಿದಾರರಾದ ಕಾಲ್ತುಳಿತದಲ್ಲಿ ಪತ್ನಿಯನ್ನು ಕಳೆದುಕೊಂಡ ಎಮುರ್ ಪುತ್ತೂರಿನ ಪಿ. ಸೆಲ್ವರಾಜ್, ಒಂಬತ್ತು ವರ್ಷದ ಮಗನನ್ನು ಕಳೆದುಕೊಂಡ ಅಲಮರತುಪಟ್ಟಿಯ ಪಿ. ಪನ್ನೀರ್‌ಸೆಲ್ವಂ ಮತ್ತು ಬಿಜೆಪಿಯ ತಮಿಳುನಾಡು ಕಾನೂನು ಘಟಕದ ಉಪಾಧ್ಯಕ್ಷ ಜಿ.ಎಸ್. ಮಣಿ ಕೂಡ ಸಿಬಿಐ ತನಿಖೆಯನ್ನು ಕೋರಿದ್ದರು.
ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ಕರೂರಿನಲ್ಲಿ ಟಿವಿಕೆಗೆ ರೋಡ್ ಶೋ ನಡೆಸಲು ಅನುಮತಿ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು. ರಾಜಕೀಯ ಸಭೆಗಳಿಗೆ ಸರ್ಕಾರ ಇನ್ನೂ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ಅಂತಿಮಗೊಳಿಸುತ್ತಿದೆ ಎಂಬ ಕಾರಣಕ್ಕೆ ಎಐಎಡಿಎಂಕೆಗೆ ಇದೇ ರೀತಿಯ ಅನುಮತಿಯನ್ನು ನಿರಾಕರಿಸಲಾಗಿದೆ ಎಂಬುವುದನ್ನು ಗಮನಿಸಿತ್ತು. ಎಸ್‌ಒಪಿ ಸಂಬಂಧಿತ ಗೊಂದಲಗಳನ್ನು ಪರಿಹರಿಸುವ ಬದಲು, ಮದ್ರಾಸ್ ಹೈಕೋರ್ಟ್ ಎಸ್‌ಐಟಿ ರಚಿಸಿದೆ ಎಂದು ಟೀಕಿಸಿತ್ತು.
ಸರ್ಕಾರವು ಮಧ್ಯರಾತ್ರಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಬೆಳಿಗ್ಗೆ 4 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಅರ್ಜಿದಾರರೊಬ್ಬರು ವಾದಿಸಿದಾಗ, ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಪಿ. ವಿಲ್ಸನ್, ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಇಂತಹ ಆರೋಪಗಳನ್ನು ಮಾಡಿರುವುದು ಇದೇ ಮೊದಲು ಸರ್ಕಾರ ಈ ಸಂಬಂಧ ವಿವರವಾದ ಅಫಿಡವಿಟ್ ಸಲ್ಲಿಸಲಿದೆ ಎಂದು ಹೇಳಿದ್ದರು.
“ನಮ್ಮ ಮುಖ್ಯಮಂತ್ರಿ ಕರೂರಿಗೆ ವಿಮಾನದಲ್ಲಿ ತೆರಳಿದಾಗ ಜನರು ತಮ್ಮವರ ಶವಗಳಿಗಾಗಿ ಬೇಡಿಕೊಳ್ಳಲು ಪ್ರಾರಂಭಿಸಿದರು. ಹಾಗಾಗಿ, ಜಿಲ್ಲಾಧಿಕಾರಿ ಅನುಮತಿ ನೀಡಿದರು. ಹತ್ತಿರದ ಜಿಲ್ಲೆಗಳಿಂದ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರನ್ನು ಕರೆಸಲಾಗಿತ್ತು ಎಂದಿದ್ದರು.
“ನಮ್ಮ ಆರೋಗ್ಯ ಕಾರ್ಯದರ್ಶಿಯವರು ಸಮ್ಮೇಳನದಲ್ಲಿ ಭಾಗವಹಿಸಿದ್ದ 220 ವೈದ್ಯರು, 165 ದಾದಿಯರು ಮತ್ತು ಇತರ ವೈದ್ಯರನ್ನು ಸಜ್ಜುಗೊಳಿಸಿದ್ದರು ಎಂದು ವಿಲ್ಸನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿ ಮಹೇಶ್ವರಿ ಅವರು, ಅವರು ವಿಧಿವಿಜ್ಞಾನ ತಜ್ಞರೇ? ಎಂದು ಪ್ರಶ್ನಿಸಿದ್ದರು.
ದುರಂತ ನಡೆದ ಬಳಿಕ ವಿಜಯ್ ಸೇರಿದಂತೆ ಟಿವಿಕೆ ನಾಯಕರು ಜನರ ರಕ್ಷಣೆಗೆ ದಾವಿಸುವ ಬದಲು ಸ್ಥಳದಿಂದ ಪಲಾಯನ ಮಾಡಿದ್ದರು ಎಂಬ ಮದ್ರಾಸ್ ಹೈಕೋರ್ಟ್‌ನ ಅವಲೋಕನಗಳನ್ನು ಟಿವಿಕೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಅವಲೋಕನಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ನಮ್ಮ ನಾಯಕತ್ವಕ್ಕೆ ಅವಕಾಶ ನೀಡಿರಲಿಲ್ಲ ಎಂದು ಟಿವಿಕೆ ವಕೀಲರು ದೂರಿದ್ದರು.
ಅರ್ಜಿದಾರರಲ್ಲಿ ಒಬ್ಬರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ವಿ. ರಾಘವಾಚಾರಿ, ಕಾಲ್ತುಳಿತವು ಸ್ವಯಂಪ್ರೇರಿತವಲ್ಲ ಎಂದಿದ್ದರು. ಆ ದಿನ ಮಧ್ಯಾಹ್ನ 3 ಗಂಟೆಯಿಂದ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಕೆಲವು ಡಿಎಂಕೆ ಸದಸ್ಯರು ಊಹಿಸಿದ್ದರು ಎಂದು ಹೇಳಿದರು. ಪೊಲೀಸರು ದುಷ್ಕರ್ಮಿಯೊಬ್ಬ ಜನಸಮೂಹದ ಮೇಲೆ ಶೂ ಎಸೆಯಲು ಅವಕಾಶ ಮಾಡಿಕೊಟ್ಟರು, ಇದರಿಂದಾಗಿ ಗದ್ದಲ ಉಂಟಾಯಿತು ಎಂದು ಅವರು ಆರೋಪಿಸಿದ್ದರು. ಈ ಹಿಂದೆ ಎಐಎಡಿಎಂಕೆಗೆ ನಿರಾಕರಿಸಲಾದ ಸ್ಥಳದಲ್ಲಿ ಟಿವಿಕೆ ರ‍್ಯಾಲಿಗೆ ಅನುಮತಿ ನೀಡಿದ ಸರ್ಕಾರದ ನಿರ್ಧಾರವನ್ನು ರಾಘವಾಚಾರಿ ಪ್ರಶ್ನಿಸಿದ್ದರು. ದುರಂತದ ಹಿಂದೆ ಪೊಲೀಸರದ್ದೇ ಸಂಪೂರ್ಣ ತಪ್ಪಿದೆ ಎಂದು ದೂರಿದ್ದರು.
ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸುವ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಮೂವರು ಸಾವು


