ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಬ್ಬರು ಸ್ಥಳೀಯ ನಿವಾಸಿಗಳನ್ನು ಬಂಧಿಸಿದೆ ಎಂದು ವರದಿಯಾಗಿದೆ.
“ಪಹಲ್ಗಾಮ್‌ನ ಬಟ್ಕೋಟ್‌ನ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಹಿಲ್ ಪಾರ್ಕ್‌ನ ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ದಾಳಿಯಲ್ಲಿ ಭಾಗಿಯಾಗಿರುವ ಮೂವರು ಸಶಸ್ತ್ರ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ. ಅವರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಗೆ ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದ್ದಾರೆ” ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾಗಿ indianexpress.com ವರದಿ ಮಾಡಿದೆ.
ತನಿಖೆಯ ಪ್ರಕಾರ, ಪರ್ವೈಜ್ ಮತ್ತು ಬಶೀರ್ ದಾಳಿಗೆ ಮೊದಲು ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ಅವರ ಬಗ್ಗೆ ಗೊತ್ತಿದ್ದೇ ಹಿಲ್ ಪಾರ್ಕ್‌ನಲ್ಲಿರುವ ಗುಡಿಸಲಿನಲ್ಲಿ ಆಶ್ರಯ ಕೊಟ್ಟಿದ್ದರು ಎಂದು ತಿಳಿದು ಬಂದಿದೆ. “ಇಬ್ಬರು ವ್ಯಕ್ತಿಗಳು ಭಯೋತ್ಪಾದಕರಿಗೆ ಆಹಾರ, ಆಶ್ರಯ ಮತ್ತು ಇತರ ಬೆಂಬಲವನ್ನು ಒದಗಿಸಿದ್ದರು. ಆ ಬಳಿಕ ಭಯೋತ್ಪಾದಕರು ಪ್ರವಾಸಿಗರನ್ನು ಹತ್ಯೆಗೈದಿದ್ದಾರೆ. ಇದು ಈವರೆಗಿನ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ” ಎಂದು ಎನ್‌ಐಎ ವಕ್ತಾರರು ಹೇಳಿದ್ದಾಗಿ ವರದಿ ತಿಳಿಸಿದೆ.
ಇಬ್ಬರನ್ನು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಬಂಧಿಸಿರುವ ಎನ್‌ಐಎ, ತನಿಖೆ ಮುಂದುವರೆಸಿದೆ ಎಂದು ಎನ್‌ಐಎ ವಕ್ತಾರರು ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಜನರು ಸಾವನ್ನಪ್ಪಿದ್ದರು ಮತ್ತು 16 ಜನರು ಗಾಯಗೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಮೇ 7ರಂದು ಭಾರತವು ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇದರ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ದಿನಗಳ ಮಿಲಿಟರಿ ಸಂಘರ್ಷ ನಡೆದಿತ್ತು.
Match is fixed: ಚುನಾವಣಾ ಆಯೋಗ ಉತ್ತರ ನೀಡುವ ಬದಲು ಸಾಕ್ಷ್ಯಗಳನ್ನು ನಾಶಪಡಿಸುತ್ತಿದೆ; ರಾಹುಲ್ ಗಾಂಧಿ


