ದನ ಕಳ್ಳಸಾಗಣೆ ಆರೋಪಿಸಿ ದಲಿತ ಸಮುದಾಯದ ಇಬ್ಬರು ವ್ಯಕ್ತಿಗಳಿಗೆ ಚಿತ್ರಹಿಂಸೆ ಕೊಟ್ಟಿರುವ ಘಟನೆ ದಕ್ಷಿಣ ಒಡಿಶಾದ ಗಂಜಾಂ ಜಿಲ್ಲೆಯ ಖರಿಗುಮ್ಮ ಗ್ರಾಮದಲ್ಲಿ ಭಾನುವಾರ (ಜೂ.22) ನಡೆದಿದೆ.
ವರದಿಗಳ ಪ್ರಕಾರ, ಇಬ್ಬರು ವ್ಯಕ್ತಿಗಳಿಗೆ ಮೊದಲಿಗೆ ಹಲ್ಲೆ ನಡೆಸಲಾಗಿದೆ. ಬಳಿಕ, ಅವರ ಅರ್ಧ ತಲೆ ಬೋಳಿಸಿ, ಹುಲ್ಲು ತಿನ್ನಿಸಿ, ಚರಂಡಿ ನೀರು ಕುಡಿಸಿ ಚಿತ್ರಹಿಂಸೆ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬೆತ್ತ ಹಿಡಿದು ನಿಂತಿರುವ ವ್ಯಕ್ತಿಗಳು, ಪ್ರಾಣಿಗಳಂತೆ ಇಬ್ಬರ ಬಾಯಲ್ಲಿ ಹುಲ್ಲು ಕಚ್ಚಿಸಿ ರಸ್ತೆಯಲ್ಲಿ ಮಂಡಿ ಮೇಲೆ ನಡೆಸಿರುವುದನ್ನು ನೋಡಬಹುದು.
ಧರಾಕೋಟೆ ಬ್ಲಾಕ್‌ನ ಸಿಂಗಿಪುರ ಗ್ರಾಮದ ನಿವಾಸಿಗಳಾದ ಬುಲು ನಾಯಕ್ ಮತ್ತು ಬಾಬುಲ ನಾಯಕ್ (ಇಬ್ಬರೂ 40ರ ಹರೆಯದವರು) ತಮ್ಮ ಪುತ್ರಿಯರ ಮದುವೆಗೆ ವರದಕ್ಷಿಣೆಯ ಭಾಗವಾಗಿ ಹರಿಪುರದಿಂದ ಒಂದು ಹಸು ಮತ್ತು ಎರಡು ಕರುಗಳನ್ನು ಖರೀದಿಸಿ, ಸರಕು ಸಾಗಣೆ ಆಟೋರಿಕ್ಷಾದಲ್ಲಿ ತಮ್ಮ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದರು.
ಈ ವೇಳೆ ಖರಿಗುಮ್ಮ ಗ್ರಾಮದ ಬಳಿ ಸ್ಥಳೀಯರ ಗುಂಪೊಂದು ಅವರನ್ನು ತಡೆದು, ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದೆ. ಗುಂಪು ಅವರ ಮೊಬೈಲ್ ಫೋನ್‌ಗಳು ಮತ್ತು ಹಣವನ್ನು ಕಸಿದುಕೊಂಡು ಜಾನುವಾರುಗಳನ್ನು ಬಿಟ್ಟು ಕಳಿಸಬೇಕಾದರೆ 30,000 ರೂಪಾಯಿ ಕೊಡುವಂತೆ ಒತ್ತಾಯಿಸಿದೆ. ಇಬ್ಬರೂ ನಿರಾಕರಿಸಿದಾಗ, ದುಷ್ಕರ್ಮಿಗಳು ಅವರ ಕೈಕಾಲುಗಳನ್ನು ಕಟ್ಟಿ, ಥಳಿಸಿದ್ದಾರೆ. ಸ್ಥಳೀಯ ಸಲೂನ್‌ನಲ್ಲಿ ಅರ್ಧ ತಲೆ ಬೋಳಿಸಿ, ಇಬ್ಬರನ್ನೂ ಖರಿಗುಮ್ಮದಿಂದ ಜಹಾಡ ಗ್ರಾಮಕ್ಕೆ ಸುಮಾರು ಎರಡು ಕಿ.ಮೀ ದೂರ ಮಂಡಿ ಮೇಲೆ ನಡೆಸಿದ್ದಾರೆ.
ನಂತರ ಜಹಾಡ ಗ್ರಾಮದ ಚೌಕ್‌ನಲ್ಲಿ ಇಬ್ಬರಿಗೂ ಹುಲ್ಲು ತಿನ್ನುವಂತೆ ಮತ್ತು ಚರಂಡಿ ನೀರು ಕುಡಿಯುವಂತೆ ಒತ್ತಾಯಿಸಿದ್ದಾರೆ. ಗ್ರಾಮಸ್ಥರೊಬ್ಬರು ಈ ವಿಷಯವನ್ನು ಸ್ಥಳೀಯ ನಾಯಕರಿಗೆ ತಿಳಿಸಿದ್ದಾರೆ. ಅವರು ಸ್ಥಳಕ್ಕಾಗಮಿಸಿ ಇಬ್ಬರನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅವರಿಗೂ 30 ಸಾವಿರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದಾರೆ.
ಹಲ್ಲೆಯಿಂದಾಗಿ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದರೂ, ಇಬ್ಬರು ಸಂತ್ರಸ್ತರು ಸ್ಥಳದಿಂದ ತಪ್ಪಿಸಿಕೊಂಡು ತಮ್ಮ ಗ್ರಾಮ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಧರಾಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಗ್ಯೂ, ಪೊಲೀಸರು ಭಾನುವಾರ ವಿವಿಐಪಿ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ತಡರಾತ್ರಿಯ ವೇಳೆಗೆ ದೂರು ಸ್ವೀಕರಿಸಿ ಎಫ್‌ಐಆರ್ ಮಾಡಿದ್ದಾರೆ.
ಈ ಅಮಾನವೀಯ ಕೃತ್ಯದ ಸುದ್ದಿ ತಿಳಿದ ದಲಿತ ಮಹಾಸಭಾದ ಗಂಜಾಂ ಘಟಕದ ನಾಯಕರು ಸಿಂಗಿಪುರ ಗ್ರಾಮದಲ್ಲಿ ಸೋಮವಾರ (ಜೂ.23) ಪ್ರತಿಭಟನಾ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಒಂದು ವರ್ಷದ ಬಿಜೆಪಿ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಗಂಜಾಂನಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಮತ್ತು ಅವರ ವಶದಲ್ಲಿರುವ ದನಗಳನ್ನು ತಕ್ಷಣವೇ ರಕ್ಷಿಸುವಂತೆ ದಲಿತ ಮಹಾಸಭಾ ಒತ್ತಾಯಿಸಿದೆ.
ಈ ಘಟನೆ ಕುರಿತು ಮಾತನಾಡಿರುವ ಗಂಜಾಂ ಎಸ್ಪಿ ಸುಭೇಂದು ಪಾತ್ರ, “ಖರಿಗುಮ್ಮ ಮತ್ತು ಜಹಾಡದ ಕೆಲವು ಗ್ರಾಮಸ್ಥರು ದನಗಳ ಕಳ್ಳಸಾಗಣೆ ಶಂಕೆಯ ಮೇಲೆ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಮುಖ್ಯ ಉದ್ದೇಶ ಹಣ ಸುಲಿಗೆಯಾಗಿತ್ತು. ಸಂತ್ರಸ್ತರು ಹಣ ಕೊಡದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇಲ್ಲಿಯವರೆಗೆ, ಒಂಬತ್ತು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಮನುವಾದಿ ಚಿಂತನೆಯ ಅನಾಗರಿಕತೆ ರಾಹುಲ್ ಗಾಂಧಿ ಆಗ್ರಹ:
ಘಟನೆ ಕುರಿತು ಪ್ರತಿಕ್ರಿಯಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, “ಇದು ಅಮಾನವೀಯ ಘಟನೆ ಮಾತ್ರವಲ್ಲ, ಮನುವಾದಿ ಚಿಂತನೆಯ ಅನಾಗರಿಕತೆ. ಜಾತಿ ಇನ್ನು ಮುಂದೆ ಒಂದು ಸಮಸ್ಯೆ ಅಲ್ಲ ಎನ್ನುವವರಿಗೆ ಕೈಗನ್ನಡಿ” ಎಂದಿದ್ದಾರೆ.
ಸಾಮಾಜಿ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು “ದಲಿತರ ಘನತೆಯನ್ನು ತುಳಿಯುವ ಪ್ರತಿಯೊಂದು ಘಟನೆಯೂ ಬಾಬಾ ಸಾಹೇಬರ ಸಂವಿಧಾನದ ಮೇಲಿನ ದಾಳಿ ಮತ್ತು ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ವಿರುದ್ಧದ ಪಿತೂರಿಯಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ. ವಿಶೇಷವಾಗಿ ಒಡಿಶಾದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಿವೆ. ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ದೇಶವು ಮನುಸ್ಮೃತಿಯಿಂದಲ್ಲ, ಸಂವಿಧಾನದಿಂದ ನಡೆಸಲ್ಪಡುತ್ತಿದೆ” ಎಂದು ಹೇಳಿದ್ದಾರೆ.
ओडिशा में दो दलित युवकों को घुटनों पर चलने, घास खाने और गंदा पानी पीने पर मजबूर करना सिर्फ़ अमानवीय नहीं, बल्कि मनुवादी सोच की बर्बरता है।
ये घटना उन लोगों के लिए आईना है जो कहते हैं कि जाति अब मुद्दा नहीं रही।
दलितों की गरिमा को रौंदने वाली हर घटना, बाबा साहेब के संविधान पर…
— Rahul Gandhi (@RahulGandhi) June 23, 2025


