ಇರಾನ್ ರಾಜಧಾನಿ ಟೆಹ್ರಾನ್‌ನ ಸುಪ್ರೀಂ ಕೋರ್ಟ್ ಕಟ್ಟಡದಲ್ಲಿ ಶನಿವಾರ (ಜ.18) ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನ್ಯಾಯಮೂರ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ರಾಜ್ಯ ಮಾಧ್ಯಮ ವರದಿ ಮಾಡಿದೆ.
“ಇಂದು ಬೆಳಿಗ್ಗೆ ಬಂದೂಕುಧಾರಿಯೊಬ್ಬ ಸುಪ್ರೀಂ ಕೋರ್ಟ್‌ಗೆ ನುಗ್ಗಿ ಇಬ್ಬರು ಧೈರ್ಯಶಾಲಿ ಮತ್ತು ಅನುಭವಿ ನ್ಯಾಯಾಧೀಶರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರೂ ನ್ಯಾಯಾಧೀಶರು ಹುತಾತ್ಮರಾಗಿದ್ದಾರೆ. ದಾಳಿ ಮಾಡಿದಾತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ನ್ಯಾಯಾಂಗದ ಮೀಝಾನ್ ಆನ್‌ಲೈನ್ ವೆಬ್‌ಸೈಟ್ ವರದಿ ಮಾಡಿದೆ.
ಹತ್ಯೆಗೀಡಾದ ಇಬ್ಬರು ನ್ಯಾಯಾಧೀಶರನ್ನು ಅಲಿ ರಝಿನಿ ಮತ್ತು ಮೊಹಮ್ಮದ್ ಮೊಘಿಸೆಹ್ ಎಂದು ಗುರುತಿಸಲಾಗಿದೆ. ಇವರು ರಾಷ್ಟ್ರೀಯ ಭದ್ರತೆ, ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ವಿರುದ್ಧದ ಅಪರಾಧಗಳ ವಿರುದ್ಧ ಹೋರಾಡುವ ಪ್ರಕರಣಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದೆ.
ಹತ್ಯೆಯ ಹಿಂದಿನ ಉದ್ದೇಶ ತಕ್ಷಣ ಗೊತ್ತಾಗಿಲ್ಲ. ಆದರೆ, ದಾಳಿ ಮಾಡಿದ ವ್ಯಕ್ತಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ಇರಲಿಲ್ಲ ಮತ್ತು ಹತ್ಯೆಗೀಡಾದ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರಲಿಲ್ಲ. ಅಧಿಕಾರಿಗಳು ಘಟನೆ ಸಂಬಂಧ ತನಿಖೆ ಕೈಗೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.
“ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಇಬ್ಬರು ನ್ಯಾಯಾಧೀಶರ ಕೋಣೆಗೆ ನುಗ್ಗಿ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ನ್ಯಾಯಾಂಗ ವಕ್ತಾರ ಅಸ್ಗರ್ ಜಹಾಂಗೀರ್ ಅವರು ರಾಜ್ಯ ದೂರದರ್ಶನಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


