ಬೆಂಗಳೂರಿನ ಸಂಪಿಗೆಹಳ್ಳಿ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ ಗುಂಪೊಂದು, ‘ಜೈಶ್ರೀರಾಮ್’ ಹೇಳುವಂತೆ ಒತ್ತಾಯಿಸಿರುವ ಆರೋಪ ಕೇಳಿ ಬಂದಿದೆ.
ಉತ್ತರ ಬೆಂಗಳೂರಿನ ಸಂಪಿಗೆಹಳ್ಳಿ ಪ್ರದೇಶದಲ್ಲಿ ಜೂನ್ 22ರಂದು ಭಾನುವಾರ ಘಟನೆ ನಡೆದಿದೆ. ಸುಮಾರು ಏಳು ಮಂದಿಯ ಗುಂಪು ಹಲ್ಲೆ ನಡೆಸಿದೆ. ಇದರಿಂದ ಹೆಗ್ಡೆ ನಗರದ ಮೆಕ್ಯಾನಿಕ್ ವಸೀಮ್ ಅಹ್ಮದ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು thenewsminute.com ವರದಿ ಮಾಡಿದೆ.
ವಸೀಮ್ ಜೊತೆಗಿದ್ದ ಸಹ ಮೆಕ್ಯಾನಿಕ್ ಝಮೀರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಇಬ್ಬರು ಸಂಪಿಗೆಹಳ್ಳಿ ಮುಖ್ಯ ರಸ್ತೆ ಮೂಲಕ ಚೊಕ್ಕನಹಳ್ಳಿಗೆ ಪ್ರಯಾಣಿಸುತ್ತಿದ್ದಾಗ ಸಂಜೆ 4.30 ರಿಂದ 5.30 ರ ನಡುವೆ ಹಲ್ಲೆ ನಡೆದಿದೆ ಎಂದು ಝಮೀರ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
“ನಾವು ಆಟೋ ನಿಲ್ಲಿಸಿದ್ದಾಗ ಅಲ್ಲಿಗೆ ಬಂದ ಐದಾರು ಮಂದಿಯ ಗುಂಪು, ನೀವೇಕೆ ಇಲ್ಲಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಸೀಮ್ ಅವರಿಗೆ ಮರುಪ್ರಶ್ನೆ ಹಾಕಿದ್ದಾರೆ. ಈ ವೇಳೆ ಆ ಗುಂಪು ವಸೀಮ್‌ಗೆ ಥಳಿಸಲು ಪ್ರಾರಂಭಿಸಿದೆ. ವಸೀಮ್ ನೋವು ಮತ್ತು ಭಯದಿಂದ ‘ಅಲ್ಲಾಹ್’ ಎಂದಾಗ, ಅವರು ಬೆದರಿಸಿದರು. ಜೈಶ್ರೀರಾಮ್ ಕೂಗುವಂತೆ ಒತ್ತಾಯಿಸಿದರು. ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಆದರೆ, ಅವರು ವಸೀಮ್ ಮೇಲೆ ಕೋಲಿನಿಂದ ಹಲ್ಲೆ ನಡೆಸುತ್ತಿದ್ದರು” ಎಂದು ಝಮೀರ್ ದೂರಿನಲ್ಲಿ ತಿಳಿಸಿದ್ದಾಗಿ thenewsminute.com ವಿವರಿಸಿದೆ.
ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 118(1), 299, 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದಿದೆ.
ಆರೋಪ ಅಲ್ಲಗಳೆದ ಪೊಲೀಸರು
ಜೈಶ್ರೀರಾಮ್ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ ಎಂದು deccanherald.com ವರದಿ ಮಾಡಿದೆ.
ದೂರಿನಲ್ಲಿ ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿರುವ ಬಗ್ಗೆ ಉಲ್ಲೇಖಿಸಿಲ್ಲ. ಘಟನಾ ಸ್ಥಳದ ಹತ್ತಿರದಲ್ಲಿ ಇದ್ದ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಸಾಕ್ಷಿಗಳು ಹಲ್ಲೆ ನಡೆಸಿದವರು ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿರುವ ಬಗ್ಗೆ ಖಚಿತಪಡಿಸಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಸಜೀತ್ ವಿ.ಜೆ ಹೇಳಿದ್ದಾಗಿ ವರದಿ ತಿಳಿಸಿದೆ.
“ನಾವು ಇನ್ನೂ ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ವೈರಲ್ ವಿಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಮಾಡಿರುವ ಆರೋಪಗಳು ತಾಳೆಯಾಗಿಲ್ಲ.
ನಾವು ಅವರ ವಿಡಿಯೋ ಹೇಳಿಕೆಯನ್ನು ಕೂಡ ಪಡೆದುಕೊಂಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ deccanherald.com ಹೇಳಿದೆ.
ಡಿಸಿಪಿ ಪ್ರಕಾರ, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಘಟನೆಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದಿದೆ.
ಚಾಮರಾಜನಗರ | ಅಡುಗೆ ಸಿಬ್ಬಂದಿ ದಲಿತೆ ಎಂಬ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ಕಳಿಸದ ಪೋಷಕರು!


