ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೂ ‘ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ’ಯನ್ನು ಸೋಮವಾರ (ಆ.11) ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇದನ್ನು ‘ಸ್ವಾತಂತ್ರ್ಯ ನಂತರದ ಭಾರತೀಯ ಕ್ರೀಡೆಯಲ್ಲಿನ ಅತಿದೊಡ್ಡ ಸುಧಾರಣೆ’ ಎಂದು ಬಣ್ಣಿಸಿದ್ದಾರೆ.
ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಆರಂಭಿಕ ಮುಂದೂಡಿಕೆಯ ನಂತರ ಲೋಕಸಭೆಯು ಮಧ್ಯಾಹ್ನ 2 ಗಂಟೆಗೆ ಮತ್ತೆ ಸಭೆ ಸೇರಿದಾಗ, ‘ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ’ಯನ್ನು ಕೂಡ ಅಂಗೀಕರಿಸಲಾಯಿತು.
“ಇದು ಕ್ರೀಡೆಯಲ್ಲಿ ಸ್ವಾತಂತ್ರ್ಯದ ನಂತರ ಅತಿದೊಡ್ಡ ಸುಧಾರಣೆಯಾಗಿದೆ. ಈ ಮಸೂದೆಯು ಕ್ರೀಡಾ ಒಕ್ಕೂಟಗಳಲ್ಲಿ ಹೊಣೆಗಾರಿಕೆ, ನ್ಯಾಯ ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ” ಎಂದು ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆ ಸಚಿವ ಮಾಂಡವಿಯಾ ಹೇಳಿದರು.
“ಇದು ಭಾರತದ ಕ್ರೀಡಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ಭಾರೀ ಮಹತ್ವವನ್ನು ಹೊಂದಿರುವ ವಿಷಯಗಳು. ಇಂತಹ ಮಹತ್ವದ ಮಸೂದೆ ಮತ್ತು ಸುಧಾರಣೆಯಲ್ಲಿ ವಿರೋಧ ಪಕ್ಷದ ಭಾಗವಹಿಸುವಿಕೆ ಇಲ್ಲದಿರುವುದು ದುರದೃಷ್ಟಕರ” ಎಂದು ಮಾಂಡವೀಯಾ ಟೀಕಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷಗಳ ಸಂಸದರು ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಕಡೆಗೆ ಮೆರವಣಿಗೆ ಹೊರಟಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಹಾಗಾಗಿ, ಮಸೂದೆಗಳನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದಾಗ ವಿರೋಧ ಪಕ್ಷದ ಸಂಸದರು ಸದನದಲ್ಲಿ ಇರಲಿಲ್ಲ.
ಆದರೆ, ಇಬ್ಬರು ಸಂಸದರು ಮಸೂದೆಯ ಪರಿಗಣನಾ ಚರ್ಚೆಯಲ್ಲಿ ಭಾಗವಹಿಸಿ, ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ನಂತರ, ವಿರೋಧ ಪಕ್ಷದ ಸದಸ್ಯರು ಸದನಕ್ಕೆ ಹಿಂತಿರುಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಗದ್ದಲದ ನಡುವೆಯೇ, ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ನಂತರ ಸದನವನ್ನು ಸಂಜೆ 4 ಗಂಟೆಯವರೆಗೆ ಮುಂದೂಡಲಾಯಿತು.
ಇದಕ್ಕೂ ಮೊದಲು, ಕ್ರೀಡಾ ಸಂಸದೀಯ ಸಮಿತಿಯ ಅಧ್ಯಕ್ಷ ದಿಗ್ವಿಜಯ ಸಿಂಗ್ ಅವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಸಂಸದೀಯ ಸಮಿತಿಗೆ ಕಳಿಸುವಂತೆ ವಿನಂತಿಸಿದರು. ಸಂಸತ್ತು ಮಸೂದೆಯನ್ನು ಅಂಗೀಕರಿಸುವ ಮೊದಲು ಪರಿಶೀಲಿಸಬೇಕು ಮತ್ತು ಚರ್ಚಿಸಬೇಕು ಎಂದು ಹೇಳಿದರು.
2036ರ ಒಲಿಂಪಿಕ್ಸ್‌ಗೆ ಬಿಡ್ ಮಾಡಲು ಮುಂದಾಗಿರುವ ಭಾರತದಲ್ಲಿ ‘ಪಾರದರ್ಶಕ, ಜವಾಬ್ದಾರಿಯುತ ಮತ್ತು ವಿಶ್ವ ದರ್ಜೆಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು’ ನಿರ್ಮಿಸುವ ಗುರಿಯನ್ನು ಹೊಂದಿರುವ ಎರಡು ಮಸೂದೆಗಳು ಪ್ರಮುಖ ಸುಧಾರಣೆಗಳಾಗಿವೆ ಎಂದು ಸಚಿವ ಮಾಂಡವಿಯಾ ಸಮರ್ಥಿಸಿಕೊಂಡರು.
“1975ರಿಂದ ಕಾಯ್ದೆಯಲ್ಲಿ ತಿದ್ದುಪಡಿಗೆ ಪ್ರಯತ್ನಗಳು ನಡೆದಿವೆ. 1985ರಲ್ಲಿ, ಮೊದಲ ಕರಡು ಮಸೂದೆಯನ್ನು ಸಿದ್ದಪಡಿಸಲಾಗಿತ್ತು. ಆದರೆ, ವೈಯಕ್ತಿಕ ಲಾಭಕ್ಕಾಗಿ ಕ್ರೀಡೆಗಳನ್ನು ಕೂಡ ರಾಜಕೀಯಗೊಳಿಸಲಾಯಿತು. ಕೆಲವು ಮಂತ್ರಿಗಳು ಮಸೂದೆ ಮಂಡಿಸಲು ಪ್ರಯತ್ನಗಳನ್ನು ನಡೆಸಿದ್ದರು. ಆದರೆ, ಮುಂದುವರಿಯಲು ಸಾಧ್ಯವಾಗಲಿಲ್ಲ” ಎಂದು ಸಚಿವ ಮಾಂಡವೀಯಾ ಹೇಳಿದರು.
“2011ರಲ್ಲಿ, ನಾವು ರಾಷ್ಟ್ರೀಯ ಕ್ರೀಡಾ ಸಂಹಿತೆಯನ್ನು ಜಾರಿಗೆ ತಂದೆವು. ಅದನ್ನು ಮಸೂದೆಯಾಗಿ ಪರಿವರ್ತಿಸಲು ಮತ್ತೊಂದು ಪ್ರಯತ್ನ ಮಾಡಲಾಯಿತು. ಅದು ಸಂಪುಟವನ್ನು ತಲುಪಿತು, ಚರ್ಚೆಯೂ ನಡೆಯಿತು. ಆದರೆ, ಅದರ ನಂತರ ಮಸೂದೆಯನ್ನು ಮುಂದೂಡಲಾಯಿತು. ಅದು ಸಂಸತ್ತನ್ನು ತಲುಪಲಿಲ್ಲ” ಎಂದು ಮಸೂದೆಯ ಹಿನ್ನೆಲೆಯನ್ನು ಪ್ರಸ್ತುತಪಡಿಸುತ್ತಾ ಸಚಿವರು ತಿಳಿಸಿದರು.
“ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯು ಬದಲಾವಣೆಯ ಶಕ್ತಿಯಾಗಿದೆ. ಇಷ್ಟು ದೊಡ್ಡ ದೇಶವಾಗಿದ್ದರೂ, ಒಲಿಂಪಿಕ್ ಕ್ರೀಡಾಕೂಟ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಸಾಧನೆ ತೃಪ್ತಿಕರವಾಗಿಲ್ಲ. ಈ ಮಸೂದೆಯು ಭಾರತದ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ” ಎಂದು ಹೇಳಿದರು.
ವರದಿಗಳ ಪ್ರಕಾರ, ಕ್ರೀಡಾ ಆಡಳಿತ ಮಸೂದೆಯು ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ)ಗೆ ಕಠಿಣ ಹೊಣೆಗಾರಿಕೆ ವ್ಯವಸ್ಥೆಯನ್ನು ರಚಿಸಲು ಅವಕಾಶಗಳನ್ನು ಕೊಡುತ್ತದೆ. ಎಲ್ಲಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ಎನ್‌ಎಸ್‌ಎಫ್‌ಗಳು) ಕೇಂದ್ರ ಸರ್ಕಾರದ ನಿಧಿಯನ್ನು ಪಡೆಯಲು ಎನ್‌ಎಸ್‌ಬಿಯ ಮಾನ್ಯತೆಯನ್ನು ಪಡೆಯಬೇಕಾಗುತ್ತದೆ.
ತನ್ನ ಕಾರ್ಯಕಾರಿ ಸಮಿತಿಗೆ ಚುನಾವಣೆಗಳನ್ನು ನಡೆಸಲು ವಿಫಲವಾದ ಅಥವಾ ‘ಚುನಾವಣಾ ಕಾರ್ಯವಿಧಾನಗಳಲ್ಲಿ ಸಂಪೂರ್ಣ ಅಕ್ರಮಗಳನ್ನು’ ಎಸಗಿದ ರಾಷ್ಟ್ರೀಯ ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸುವ ಅಧಿಕಾರ ಎನ್‌ಎಸ್‌ಬಿಗೆ ಇರುತ್ತದೆ.
ವಾರ್ಷಿಕ ಲೆಕ್ಕಪರಿಶೋಧನೆ ಮಾಹಿತಿಯನ್ನು ಪ್ರಕಟಿಸಲು ವಿಫಲವಾದರೆ ಅಥವಾ ಸಾರ್ವಜನಿಕ ನಿಧಿಗಳ ದುರುಪಯೋಗಪ ಸಂಬಂಧ ಕ್ರಮಗಳನ್ನು ಕೈಗೊಳ್ಳಲು ಎನ್‌ಎಸ್‌ಬಿಗೆ ಅಧಿಕಾರವಿರುತ್ತದೆ. ಅದರ, ಕ್ರಮ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಸಂಸ್ಥೆಯನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ.
ಮತ್ತೊಂದು ವೈಶಿಷ್ಟ್ಯವೆಂದರೆ, ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯ ಪ್ರಸ್ತಾವನೆ. ಇದು ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಹೊಂದಿದ್ದು, ಫೆಡರೇಶನ್‌ಗಳು ಮತ್ತು ಕ್ರೀಡಾಪಟುಗಳನ್ನು ಒಳಗೊಂಡ ಆಯ್ಕೆಯಿಂದ ಚುನಾವಣೆಯವರೆಗಿನ ವಿವಾದಗಳನ್ನು ನಿರ್ಧರಿಸುತ್ತದೆ. ಒಮ್ಮೆ ಸ್ಥಾಪಿಸಿದ ನಂತರ, ನ್ಯಾಯಮಂಡಳಿಯ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದು.
ಸಂಬಂಧಪಟ್ಟ ಅಂತಾರಾಷ್ಟ್ರೀಯ ಸಂಸ್ಥೆಗಳ ಕಾನೂನುಗಳು ಮತ್ತು ಬೈಲಾಗಳು ಅನುಮತಿಸಿದರೆ, 70 ರಿಂದ 75 ವರ್ಷದೊಳಗಿನವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಆಡಳಿತಾಧಿಕಾರಿಗಳಿಗೆ ವಯಸ್ಸಿನ ಮಿತಿಯ ವಿಷಯದಲ್ಲಿ ಮಸೂದೆಯು ಕೆಲವು ರಿಯಾಯಿತಿಗಳನ್ನು ನೀಡುತ್ತದೆ. ಇದು ವಯಸ್ಸಿನ ಮಿತಿಯನ್ನು 70 ಕ್ಕೆ ಸೀಮಿತಗೊಳಿಸಿದ ರಾಷ್ಟ್ರೀಯ ಕ್ರೀಡಾ ಸಂಹಿತೆಯನ್ನು ತೆಗೆದು ಹಾಕುತ್ತದೆ.
2036 ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದ ಬಿಡ್ಡಿಂಗ್‌ಗೆ ಪೂರ್ವಸಿದ್ಧತಾ ಚಟುವಟಿಕೆಗಳ ಭಾಗವಾಗಿ, ಉತ್ತಮ ಫಲಿತಾಂಶಗಳನ್ನು ತರಲು, ಕ್ರೀಡಾ ಶ್ರೇಷ್ಠತೆಯನ್ನು ತರಲು ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸುಧಾರಿತ ಪ್ರದರ್ಶನಕ್ಕೆ ಸಹಾಯ ಮಾಡಲು ಕ್ರೀಡಾ ಆಡಳಿತದ ವ್ಯವಸ್ಥೆಯು ಸಕಾರಾತ್ಮಕ ರೂಪಾಂತರಕ್ಕೆ ಒಳಗಾಗುವುದು ಕಡ್ಡಾಯವಾಗಿದೆ” ಎಂದು ಮಸೂದೆಯ ಉದ್ದೇಶಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಚುನಾವಣಾ ಆಯೋಗದ ಕಚೇರಿಗೆ ಪ್ರತಿಭಟನಾ ಮೆರವಣಿಗೆ: ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು


