ಎರಡು ವರ್ಷಗಳಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ಪರಿಣಾಮ 12 ಲಕ್ಷಕ್ಕೂ ಹೆಚ್ಚು ಮಕ್ಕಳು ಆಹಾರದಿಂದ ವಂಚಿತರಾಗಿದ್ದಾರೆ ಮತ್ತು 58,554 ಮಕ್ಕಳು ಅನಾಥರಾಗಿದ್ದಾರೆ ಎಂದು ಅಕ್ಟೋಬರ್ 7, 2025ರಂದು ಗಾಝಾ ಆರೋಗ್ಯ ಸಚಿವಾಲಯದ ಬಿಡುಗಡೆ ಮಾಡಿದ ಅಂಕಿ ಅಂಶಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ವಿಶ್ವಸಂಸ್ಥೆಯ ತನಿಖಾ ಆಯೋಗವು ‘ನರಮೇಧ’ ಎಂದು ಘೋಷಿಸಿರುವ ಇಸ್ರೇಲ್ ಆಕ್ರಮಣದಲ್ಲಿ 9,14,102 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು 5,580 ಮಕ್ಕಳು ವೈದ್ಯಕೀಯ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಆಕ್ರಮಣ ಪ್ರಾರಂಭಿಸಿ ಎರಡು ವರ್ಷ ಪೂರ್ಣಗೊಳ್ಳುವಾಗ, ಅಂದರೆ ಅಕ್ಟೋಬರ್ 7, 2025ರವರೆಗೆ ಒಟ್ಟು 20,179 ಮಕ್ಕಳನ್ನು ಇಸ್ರೇಲ್ ಹತ್ಯೆ ಮಾಡಿದೆ. ಗಾಝಾದಲ್ಲಿ ಪ್ರತಿ 52 ನಿಮಿಷಕ್ಕೆ ಒಂದು ಮಗುವನ್ನು ಕೊಲ್ಲಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಹತ್ಯೆಗೈದ ಮಕ್ಕಳಲ್ಲಿ 1,029 ಮಂದಿ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 5,031 ಮಕ್ಕಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 420 ಮಕ್ಕಳು ಯುದ್ಧದ ಅವಧಿಯಲ್ಲೇ ಜನಿಸಿ ಕೊಲ್ಲಲ್ಪಟ್ಟರು ಎಂದಿದೆ.
ಮಕ್ಕಳಿಗೆ ಲಸಿಕೆ ಹಾಕುವ ಪ್ರಮಾಣ 2022ರಲ್ಲಿ ಶೇಕಡ 98.7ರಷ್ಟು ಇತ್ತು. ಅದು 2025ರಲ್ಲಿ ಶೇಕಡ 80ಕ್ಕೆ ಇಳಿದಿದೆ. 1,102 ಮಕ್ಕಳು ಯುದ್ಧದ ಸಮಯದಲ್ಲಿ ಅಂಗಚ್ಛೇದನಕ್ಕೆ ಒಳಗಾಗಿದ್ದಾರೆ.
ಪೂರ್ವ ಜೆರುಸಲೇಂ ಮತ್ತು ಗಾಝಾದಲ್ಲಿ ಇಸ್ರೇಲ್ ‘ನರಮೇಧ’ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗವು ತನ್ನ ವರದಿಯಲ್ಲಿ ಹೇಳಿದೆ.
ಅಕ್ಟೋಬರ್ 8 ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಮತ್ತು ಹಮಾಸ್ ಸಹಿ ಹಾಕಿದೆ ಎಂದು ವರದಿಯಾಗಿದೆ. ಈ ನಡುವೆ ಗುರುವಾರ ಉತ್ತರ ಗಾಝಾದಲ್ಲಿ ಇಸ್ರೇಲ್ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ.
ಇಸ್ರೇಲ್ ಆಕ್ರಮಣದಿಂದ ಅಕ್ಟೋಬರ್ 7ರವರೆಗೆ ಗಾಝಾದಲ್ಲಿ 67,173 ಜನರು ಸಾವನ್ನಪ್ಪಿದ್ದಾರೆ ಮತ್ತು 1,69,780 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ.
ಸಾವನ್ನಪ್ಪಿದವರಲ್ಲಿ 20,179 (30%) ಮಕ್ಕಳು, 10,427 (16%) ಮಹಿಳೆಯರು, 4,813 (7%) ವೃದ್ಧರು ಮತ್ತು 31,754 (47%) ಪುರುಷರು ಒಳಗೊಂಡಿದ್ದಾರೆ. ಇದಲ್ಲದೆ, 4,900 ಜನರು ಅಂಗವಿಕಲತೆಗೆ ಒಳಗಾಗಿದ್ದಾರೆ. ಪ್ರತಿದಿನ ಕನಿಷ್ಠ 13 ಕುಟುಂಬಗಳು ಹತ್ಯಾಕಾಂಡಕ್ಕೆ ಒಳಗಾಗುತ್ತಿವೆ. ಇದುವರೆಗೆ ಒಟ್ಟು 8,910 ಕುಟುಂಬಗಳು ಹತ್ಯಾಕಾಂಡಕ್ಕೆ ಒಳಗಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,
ಆಹಾರ ಅಭದ್ರತೆ ಮತ್ತು ಆರೋಗ್ಯ ರಕ್ಷಣೆ
ದತ್ತಾಂಶ ತೋರಿಸುವಂತೆ, 2025ರಲ್ಲಿ ಗಾಝಾದಲ್ಲಿ 4,163 ಗರ್ಭಪಾತಗಳು, 2,415 ಅಕಾಲಿಕ ಜನನಗಳು ಮತ್ತು 274 ನವಜಾತ ಶಿಶುಗಳ ಸಾವುಗಳು ವರದಿಯಾಗಿವೆ.
ಅಪೌಷ್ಟಿಕತೆಯಿಂದ ಸಂಭವಿಸಿದ ಸಾವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, 2023ರಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, 2025ರಲ್ಲಿ ಈ ಸಂಖ್ಯೆ 408ಕ್ಕೆ ಏರಿಕೆಯಾಗಿದೆ. ಈ ಸಾವುಗಳಲ್ಲಿ 157 (34.1%) ಮಕ್ಕಳು, 188 (40.8%) ವೃದ್ಧರು, 44 (9.5%) ಮಹಿಳೆಯರು ಮತ್ತು 72 (15.6%) ಪುರುಷರು ಒಳಗೊಂಡಿದ್ದಾರೆ.
ಆಗಸ್ಟ್ 2025ರಲ್ಲಿ ಐದು ವರ್ಷದೊಳಗಿನ 14,383 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿರುವುದು ವರದಿಯಾಗಿದೆ. ಈ ಪೈಕಿ 3,466 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜನವರಿ 2025ರ ನಂತರ 452 ಮಕ್ಕಳು ಅಪೌಷ್ಠಿಕತೆಗೆ ತುತ್ತಾಗಿದ್ದಾರೆ.
ಗಾಝಾದಲ್ಲಿರುವ ಎಲ್ಲಾ 38 ಆಸ್ಪತ್ರೆಗಳ ಮೇಲೂ ಇಸ್ರೇಲ್ ದಾಳಿ ಮಾಡಿದೆ. ಪರಿಣಾಮ ಕೇವಲ 13 ಆಸ್ಪತ್ರೆಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ, 25 ಆಸ್ಪತ್ರೆಗಳು ಮುಚ್ಚಲ್ಪಟ್ಟಿವೆ.
ಗಾಝಾದಲ್ಲಿರುವ ಎಲ್ಲಾ 157 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೂ ಇಸ್ರೇಲ್ ದಾಳಿ ಮಾಡಿದೆ. ಪರಿಣಾಮ 103 ಆಸ್ಪತ್ರೆಗಳು ಮುಚ್ಚಲ್ಪಟ್ಟಿವೆ ಮತ್ತು 54 ಭಾಗಶಃ ಕಾರ್ಯನಿರ್ವಹಿಸುತ್ತಿವೆ.
2023ರ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಯ ಬೆಡ್‌ಗಳ ಬಳಕೆಯ ಪ್ರಮಾಣ ಶೇಕಡ 82 ಆಗಿತ್ತು. ಆದರೆ, 2025ರ ಸೆಪ್ಟೆಂಬರ್‌ನಲ್ಲಿ ಈ ದರ ಶೇಕಡ 225.5ಕ್ಕೆ ಏರಿಕೆಯಾಗಿದೆ. ಇದರರ್ಥ, ಆಸ್ಪತ್ರೆಯ ಬೆಡ್‌ಗಳ ಬೇಡಿಕೆಯು ಲಭ್ಯವಿರುವ ಬೆಡ್‌ಗಳ ಸಂಖ್ಯೆಗಿಂತ ಗಣನೀಯವಾಗಿ ಹೆಚ್ಚಾಗಿದೆ, ಒಂದೇ ಬೆಡ್ ಅನ್ನು ಒಂದಕ್ಕಿಂತ ಹೆಚ್ಚು ರೋಗಿಗಳಿಗೆ ಬಳಸಲಾಗುತ್ತಿದೆ.
ಗಾಝಾದ ಜನಸಂಖ್ಯೆಯು 21,00,000 ಎಂದು ಅಂದಾಜಿಸಲಾಗಿದೆ. ಆಸ್ಪತ್ರೆಯ ಬೆಡ್‌ಗಳ ಒಟ್ಟು ಸಂಖ್ಯೆ 2022ರಲ್ಲಿ 3,560 ಇದ್ದದ್ದು 2025ರ ವೇಳೆಗೆ 1,578ಕ್ಕೆ ಕಡಿಮೆಯಾಗಿದೆ. ಇದರಿಂದ ಆಸ್ಪತ್ರೆಯ ಸೌಲಭ್ಯಗಳ ಮೇಲಿನ ಒತ್ತಡವು ಗಮನಾರ್ಹವಾಗಿ ಹೆಚ್ಚಾಗಿದೆ, ಏಕೆಂದರೆ ಕಡಿಮೆ ಬೆಡ್‌ಗಳು ಇರುವಾಗ ಬೇಡಿಕೆಯು ತೀವ್ರವಾಗಿ ಏರಿಕೆಯಾಗಿದೆ.
ಇದಲ್ಲದೆ, 362 ಆರೋಗ್ಯ ಸಿಬ್ಬಂದಿ ಇಸ್ರೇಲಿ ಬಂಧನದಲ್ಲಿದ್ದಾರೆ, 1,701 ಆರೋಗ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 211 ಆಂಬ್ಯುಲೆನ್ಸ್‌ಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು ದತ್ತಾಂಶ ತೋರಿಸಿದೆ.
ಎಲ್ಲಾ ಏಳು ಎಂಆರ್‌ಐ ಯಂತ್ರಗಳು, 17ರಲ್ಲಿ 10 ಸಿಟಿ ಸ್ಕ್ಯಾನರ್‌ಗಳು 35 ರಲ್ಲಿ 25 ಆಮ್ಲಜನಕ ಕೇಂದ್ರಗಳು ಮತ್ತು 110ರಲ್ಲಿ 61 ವಿದ್ಯುತ್ ಜನರೇಟರ್‌ಗಳು ನಾಶವಾದ ವೈದ್ಯಕೀಯ ಉಪಕರಣಗಳಲ್ಲಿ ಸೇರಿವೆ.
ಗಾಝಾದಲ್ಲಿರುವ 260 ನೀರಿನ ಬಾವಿಗಳಲ್ಲಿ ಕೇವಲ 116 ಬಾವಿಗಳು ಮಾತ್ರ ಈಗ ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ, ಒಬ್ಬ ವ್ಯಕ್ತಿಗೆ ದಿನಕ್ಕೆ ಲಭ್ಯವಿರುವ ನೀರಿನ ಪ್ರಮಾಣವು 2023ರ ಅಕ್ಟೋಬರ್ 7ರ ಮೊದಲು 84.6 ಇದ್ದದ್ದು, ಈಗ ಕೇವಲ 5 ಲೀಟರ್‌ಗಳಿಗೆ ಕಡಿಮೆಯಾಗಿದೆ.


