Homeಮುಖಪುಟಕಥೆ: ತ್ಯಾಪೆ

ಕಥೆ: ತ್ಯಾಪೆ

- Advertisement -
- Advertisement -

ಸ್ಕೂಲಿಗೆ ಎಲ್ಲರಂಗೆ ಯೂನಿಫಾರಂ ಹೊಲ್ಸ್ಕೊಂಡು ಹೋಗ್ಬೆಕು ಅನ್ನೊ ಆಸೆ.

ಮನಿಗ್ ಬಂದು ನಮ್ಮಪ್ಪನಗೆ ಹೇಳಿದ್ರೆ, “ಅರ್ವಪ್ಪ ಕೊಟ್ಬುಟ್ಟೌನ… ಅವ್ನ್ ಸಂಬ್ಳದಲ್ಲಿ ಕೊಡ್ಸಕೇಳು ಅವ್ನಮ್ಮನು” ಅಂತ ಮೇಷ್ಟ್ರುಗುಳಿಗೆ ಬಾಯಿಗೆ ಬಂದಂಗೆ ಬೈಯ್ಯೋನು.

ಆ ಮೇಷ್ಟ್ರುಗುಳು ನಮ್ ಸುತ್ತಮುತ್ತಿನ್ ಊರೋರೆಯಾ. ನಮ್ಮಪ್ಪುಂಗೆ ಚೆನ್ನಾಗಿ ಗೊತ್ತಿರೋರು. ನಮ್ಮಪ್ಪ ಆ ಊರುಗುಳಿಗೆ ಅರೆ ಬಡ್ಕಂಡು ಕುಲವಡಿಕೆ ಚಾಕ್ರಿ ಮಾಡೋಕೆ ಸಾರಕ್ಕೆ ಹೋಗ್ತಿದ್ದ.

ನನ್ನುನ್ನು ಒಂದೊಂದು ಸಾರಿ ಅವ್ನ ಜೊತೆ ಕರ್ಕೊಂಡು ವೋಗವ್ನು. ನಮ್ ಮೇಷ್ಟ್ರು ಅಪ್ಪಿ ತಪ್ಪಿ ದಾರಿಲಿ ಎದುರು ಸಿಕ್ಕಾಗ “ನಮಸ್ಕಾರ ಸ್ವಾಮಿ” ಅಂತ ನನಗಿಂತ ಮೊದ್ಲೆ ಬಲಗೈಯೆತ್ತಿ ಹಣೆಮ್ಯಾಲೆ ಇಟ್ಕೊಳೋನು..

ಸಾರಕ್ಕೆ ಹೋಗಿದ್ದ ಊರಲ್ಲಿ ಅಲ್ಲೇ ಯಾರ್ ಮನ್ಲರೋ ಬಿಸಿಬಿಸಿ ಇಡ್ಲಿನೊ ದ್ವಾಸೇನೊ ಕೇಳಿ ನನಿಗೀಸ್ಕಂಡು ತಿನ್ಸೊವ್ನು. ನಾನು ನಮ್ಮಪ್ಪ ಜೊತೆ ಬೀದಿಬೀದಿ ತಿರುಗ್ತಿದ್ದ ನೋಡಿದ್ ಹೆಂಗಸ್ರು “ಕೆಂಪಣ್ಣ ಆ ಹುಡುಗ್ಗುನ್ ಯಾಕ್ ಕರ್ಕಂಡ್ ಬಂದಿದ್ದಿಯಾ? ವಟ್ಟಿಗೇನಾರ ತಿನ್ಸಿದಿಯಾ” ಅನ್ನೋರು. “ಇಲ್ಲ ಮನೀಗೆ ವೊಗ್ತೀವಿ ಕಣ್ ತಾಯಿ, ಇವ್ನ ಸ್ಕೂಲಿಗೆ ಕಳ್ಸಬೇಕು” ಅನ್ನೊವ್ನು. ಅಂಗಾಗಿ ಅವರು ಕೊಡುತ್ತಿದ್ದ ಬಿಸಿಬಿಸಿ ತಿಂಡಿಗುಳು ಸಿಗೋದು. ನಮ್ಮನೇಲಿ ವರ್ಷಕ್ಕೊಂದು ಹಬ್ಬಕ್ಕೊ, ಹರಿದಿನಕ್ಕೊ ಈ ತಿಂಡಿಗುಳು ವಾಸ್ನೆ ಮೂಸ್ತಿದ್ದೆ.

ಚಾಕ್ರಿ ಮುಗಿಸಿ ನಮ್ಮೂರ್‍ಗೆ ತಿರುಗಿ ವಾಪಾಸು ಬರುವಾಗ, ಅಪ್ಪ ನನ್ನ ಹೆಗಲ್ಮ್ಯಾಗ ಕುಂಡ್ರಸ್ಕ್ಯಂಡು ದಾರೀಲಿ ದೂರದಲ್ಲಿ ಕಾಣೋ ಮನೆ ತೋರ್ಸಿ, “ಅಲ್ನೋಡು ಅಲ್ ಕಾಣ್ತಾಯ್ತಲ್ಲ ಪಟೇಲ್ರ್ ಕೆಳ್ಳು ಮನೆ… ಆ ಮನೇಲ್ಲೆ ನಾನು ನಿನ್ನಂಗ ಇದ್ದಾಗ ಎಮ್ಮೆ ಕಾಯ್ಕೊಂಡು ಜೀತಕ್ಕೆ ಇದ್ದಿದ್ದು” ಅಂತ ಸಪ್ಪೆ ಮೋರೆ ಮಾಡ್ಕೊಂಡು ಅವನು ಅನುಭವಿಸಿದ ಕಥೆ ಹೇಳೋನು.

ದಾರಿಮಧ್ಯದಲ್ಲಿ “ಬಾಯ್ ಹಾರ್ಸತಾಯ್ತೆ ಕಣಪ್ಪ ಅಂದರೆ, ಆ ಕಡೆ ಈ ಕಡೆ ನೋಡಿ ಯಾರ್ದರ ತೆಂಗಿನ ತ್ವಾಟದಲಿ ಕದ್ದು ಏಳ್ನೀರ್ ಕಿತ್ತು ಬೇಲಿಲಿ ಚೂಪನೆ ಕೋಲ್ ತಗಂಡು ಏಳ್ನೀರ್ ಕುಕ್ಕಿ ನಂಗೊಂದು ಕುಡಿಸಿ ಅವ್ನೊಂದು ಕುಡ್ದು ನಮ್ಮೂರಿನ ಮಷಾಣ ದಾರಿಲಿ ಹೊಲಮಳ್ಳ ದಾಟಿ ನಮ್ ಹಟ್ಟಿ ಒಳೀಕೆ ಕರ್ಕಂಡು ಬರೋವ್ನು.

ಮನೆ ತಾಕ್ ಬತ್ತಿದಂಗೆ ಹೆಗಲ್ ಮೇಲಿಂದ ನನ್ನ ಕೆಳಾಕಿಳಿಸಿ, “ವೋಗ್ ಸ್ಕೂಲಿಗ್ ವೊತ್ತಾತು, ವೋಗೋಗ್ ವೊಲ್ಡೋಗ್” ಅನ್ನೋವ್ನು. ಹೆಗಿಲಿಂದ ಇಳಿದು ಮನೆಮುಂದೆ ಮಡಿಕೆಲಿಟ್ಟಿದ್ದ ನೀರ್ ಮಕ್ಕಂಡು ಚಪ್ಪಡಿ ಕಲ್ ಮೇಲೆ ನಿಂತು ಮಕಕ್ಕೆ ಎರಡ್ ಹನಿ ನೀರ್ ಚುಮ್ಸ್ಕೊಂಡು ನೆನಸ್ಕಂತಿದ್ದೆ.

ನಮ್ ಸ್ಕೂಲಿಗೆ ಬಿಳಿ ಅಂಗಿ, ಹಸ್ರು ಚೆಡ್ಡಿ, ಹಾಕ್ಕೊಂಡು ವೋಗ್ಬೇಕಿತ್ತು. ತಲಿಗೊಂದು ಕೇಸರಿ ಟವಲ್ ಸುತ್ಕೊಂಡ್ರೆ ಥೇಟ್ ಭಾರತದ ಬಾವುಟ ಆಗೋಗ್ತಿದ್ದೆ. ಅದು ನಮ್ ಸ್ಕೂಲ್ ಯೂನಿಫಾರಂ.

ನಮ್ಮಲ್ಲಿ ನನಗೆ ಗೊತ್ತಿರಂಗೆ ಹೊಸ ಬಟ್ಟೆ ಕೊಡ್ಸಿದ್ದು ಗೊತ್ತೇ ಇಲ್ಲ. ನಮ್ಮಣ್ಣ ಉಟ್ಟಿ ಎಂಟ್‌ವರ್ಷ ಆದ್ಮೆಲೆ ನಮ್ಮವ್ನ ವೊಟ್ಟೆಲಿ ನಾನ್ ಹುಟ್ಟಿದ್ರಿಂದ ನಮ್ಮ ಅಣ್ಣ ಓದಿ ಮುಗ್ಸಿದ್ ಬಟ್ಟೆಗಳೇ ನನಗೂ ಗತಿ ಆಗಿದ್ವು. ಅವು ಉದ್ದ ಆಗಲ ಜಾಸ್ತಿ ಆಗಿ, ಬೆದ್ರುಗೊಂಬೆಗೆ ಬಟ್ಟೆ ಸಿಗಿಸ್ದಂಗೆ ಕಾಣ್ಸ್‌ತ್ತಿದ್ದೆ.

ಒಂದರಿಂದ ನಾಕನೇ ಕ್ಲಾಸ್‌ತನಕ ಯಾವ್ ಬಟ್ಟೆ ಹಾಕ್ಕೊಂಡೋದ್ರು ನಮ್ ಹೆಡ್ ಮೇಷ್ಟ್ರು ಮುದ್ದಪ್ಪ ಕೇಳ್ತಾನೆ ಇರ್ಲಿಲ್ಲ. ನನ್ಗೂ ಸ್ಕೂಲಿಗೆ ಬಟ್ಟೆ ಹಾಕ್ಕೊಂಡು ಹೋದದ್ದು ಸರಿಯಾಗಿ ನೆನ್ಪಿಲ್ಲ.

ಒಂದು, ಎರಡು, ಮೂರ್ನೇ ಕ್ಲಾಸಿಗೆ ಚಡ್ಡಿ ಹಾಕ್ಕೊಂಡು ಹೋದದ್ದು ನನ್ಗೆ ನೆನ್ಪೇ ಬರ್ತಿಲ್ಲ.

ಸ್ಕೂಲ್ಗೆ ವೋಗೊ ದಾರಿಲಿ ಕೆಲಸಿಲ್ಲದೆ ನಮ್ಮೂರಿನ ಹಳ್ಳಿ ಕಟ್ಟೆಮೇಲೆ ಕೂತ್ಕಂಡ ಹರಟೆ ಹೊಡಿಯೋರು, “ಇದೇನ್ಲಾ ಗಂಟೆ ಅಲ್ಲಾಂಡ್ಸ್ಕೊಂಡು ಹೋಗ್ತಿದಿಯಾ, ಡಣ ಡಣ ಅಂತ ಬಡ್ಕಂತೈತೆ” ಅಂತ ತಮಾಷೆ ಮಾಡ್ಕೊಂಡು ನಗೋರು.

ಅದು ಮಾತ್ರ ನನ್ಗೆ ಚೆನ್ನಾಗಿ ನೆನ್ಪೈತೆ.

ಐದ್ನೆ ಕ್ಲಾಸಿಗೆ ವೋಗೋವತ್ತಿಗೆ ನಂಗೆ ಮಾನ ಮರ್ಯಾದಿ ಅನ್ನೋದರ ಬಗ್ಗೆ ಗಮನ ಬಂದು, ಗಂಟೆ ಅಲ್ಲಾಡಿಸಿಕೊಂಡು ಹೋಗ್ತಿರ್ಲಿಲ್ಲ.

ಸ್ಕೂಲಿಗೆ ಆ ವರ್ಸ ಹೊಸ್ದಾಗಿ ಶಿವಲಿಂಗಪ್ಪ ಅನ್ನೊ ಗಣಿತದ ಮೇಷ್ಟ್ರು ಬಂದಿದ್ದ. ಅವ್ನು ತುಂಬಾ ಸ್ಟ್ರಿಕ್ಟ್. ದಿನ ಪ್ರೆಯರ್ ಲೈನಲ್ಲಿ ಯೂನಿಫಾರಂ ಚೆಕ್ ಮಾಡಿ ಸ್ಕೂಲ್ ವಳಿಕೆ ಬಿಡ್ತಿದ್ದ. ಹಾಕ್ಕಂಡೋಗಿಲ್ಲ ಅಂದ್ರೆ ಮೈ ಕೈ ಬಾಸುಂಡೆ ಬರಂಗೆ ಉಣುಸೆ ಬರ್ಲಲ್ಲಿ ಬಡಿಯೋನು.

ನನ್ನ ಹತ್ರ ನಮ್ಮಣ್ಣನ ಬಿಳಿ ದೊಗಲೇ ಅಂಗಿ ಬಿಟ್ರೆ, ಚಡ್ಡಿ ಇರ್ಲಿಲ್ಲ. ಆ ಅಂಗೀನು ಬಲಗಡೆ ಭುಜದತ್ರ ನೂಲು ಕಾಣೋಹಾಗೆ ನವ್ದೋಗಿ ಹರ್ದಿತ್ತು. ಹರ್ದಿರೋದ್ನಲ್ಲ ಒಟ್ಟಮಾಡಿ ಸೇರ್ಸಿ ನಮ್ಮವ್ವ ಪಿನ್‌ನ ಹಾಕಿ ಸ್ಕೂಲಿಗೆ ಕಳ್ಸ್ತಿದ್ಲು. ಅದೊಂದೆ ಪಿನ್ ಅಲ್ದೆ, ಅಂಗಿಲಿ ನಾಕೈದು ಪಿನ್‌ಗಳು ಹರಿದ್‌ಕಡೆ ಸೇರ್ಕೊಂಡಿದ್ವು.

ಮನೇಲಿ ಎಷ್ಟು ಗೋಗರ್ದ್ರು ಕೊನೆಗೂ ಬಟ್ಟೆ ಕೊಡ್ಸ್ಲೇ ಇಲ್ಲ. ಅವ್ರ್‌ಗೆ ಅವರ್ದೆ ಚಿಂತೆ. ನಮ್ಮಪ್ಪ ಅವ್ವ ಕಂಡೋರು ಮನೇಲಿ ಕೂಲಿ ಕೆಲಸಕ್ಕೆ ಹೊಗ್ತಿದ್ರು ಪ್ರಯೋಜನಕ್ ಬರ್ಲಿಲ್ಲ. ನನ್ ಹತ್ರ ಇನ್ನೊಂದು ಚಡ್ಡಿ ಇದ್ರೂ ಕುಂಡಿ ಕಾಣ್ಸೊ ಹಂಗೆ ಅದು ತೂತ್ ಬಿದ್ದಿತ್ತು.

ಸ್ಕೂಲ್‌ನಲ್ಲಿ ಎಲ್ಲಾರೂ, “ಚಡ್ಡಿ ಹರ್ಕ… ಚಡ್ಡಿ ಹರ್ಕ…” ಅಂತ ಆಡ್ಕೊಳ್ಳೋರು. ಇಡೀ ದಿನ ಪಾಠ ಕೇಳದು ಬಿಟ್ಟು, ತೂತ್ ಕಾಣ್ದಂಗೆ ಕುಂಡಿ ಮುಚ್ಕಣೋದ್ರೊಳಗೆ ದಿನ ಕಳೆದುಹೋಗ್ತಿತ್ತು.

ಊರೊಳ್ಳೆ ಹುಡುಗ್ರು ದಿನಾ ಚನ್‌ಚನ್ನಾಗಿರೊ ಬಟ್ಟೆ ಹಾಕೊಂಡು ಸ್ಕೂಲಿಗ್ ಬರೋರು. ಬುಧವಾರ ಕಲರ್ ಡ್ರೆಸ್ ಇದ್ದಿದ್ ದಿನಾನು ನನ್ದು ಇದೇ ಬಟ್ಟೆ. ಪಿನ್ ಅಂಗಿ ಹರ್ದಿರೋ ಚಡ್ಡಿ.

ಸ್ಕೂಲ್ ಬಿಟ್ಟು ಹಟ್ಟಿ ವಳೀಕ್ ಬಂದಾಗಷ್ಟೆ ನನ್ಗೆ ಸಮಾಧಾನ ಆದಂಗಾಗೋದು. ನಮ್ ಹಟ್ಟಿ ಹುಡುಗ್ರೆಲ್ಲ ಹೆಣ್ಣು ಗಂಡು ಅನದಂಗೆ ನನ್ನಂಗೆ ಹರ್ದಿರೋ ಬಟ್ಟೇಲಿ ಮೈ ಕಾಣ್ಸ್ಕಂಡ ಓಡಾಡ್ತಿದ್ರು.

ಸ್ಕೂಲಂದ್ರೆ ನನಗ್ ಜೀವ ಬಾಯಿಗ್ ಬಂದಂಗಾಗೋದು.

ನಮ್ಮಪ್ಪ ಮನೀಗೆ ಆಗೋವಷ್ಟು ದುಡಿತ್ತಿದ್ದ, ಕುಡಿತ್ತಿದ್ದ. ಆದರೆ ಚಡ್ಡಿ ಕೊಡ್ಸಕೆ ಅವನ ಕೈಯ್ಯಲ್ಲಿ ಆಗಲೇ ಇಲ್ಲ. ಅದೇನ್ ಅವ್ನಗೆ ದೊಡ್ಡ ಕರ್ಚ್ ಆಗಿರ್ಲಿಲ್ಲ. ಆದ್ರು ಅದ್ಯಾಕೋ ಕೊಡ್ಸಲೇ ಇಲ್ಲ.

ಇದರ ಜೊತೆಗೆ ಸ್ಕೂಲ್‌ನಲ್ಲಿ ಕುಗ್ಗಿಹೋಗ್ತಿದ್ದ ಘಟನೆಗಳು ನಡಿತಿದ್ವು.

ಶುಕ್ರವಾರ ಸ್ಕೂಲಲ್ಲಿ ನಡೀತ್ತಿದ್ದ ಶಾರದ ಪೂಜೆಗೆ ಹಟ್ಟಿ ಹುಡುಗ್ರು ಏನೂ ಕೆಲ್ಸ ಮಾಡಂಗಿರ್ಲಿಲ್ಲ.

ಸ್ಕೂಲಲ್ಲಿ ಮೇಷ್ಟು ನೀರ್ ಕೇಳಿದ್ರೆ, ಸ್ಟೀಲ್ ಲೋಟ ಮುಟ್ಟಿ ನಮ್ ಹಟ್ಟಿ ಹುಡುಗ್ರು ಕುಡಿಯಕ್ ನೀರ್ ಕೊಡೋಹಂಗ್ ಇರ್ಲಿಲ್ಲ. ಆ ಹುಡುಗ್ರೆ ಕೊಡ್ಬೇಕಿತ್ತು. ಪ್ಲಾಸ್ಟಿಕ್ ಅಷ್ಟೆ ನಮ್ಮನ್ನ ಮುಟ್ಟಿಸ್ಕೊಂತಿದ್ವು.

ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕೋಕೆ ಕ್ಲಾಸ್‌ರೂಮಲ್ಲೆ ನಮ್ ಹೆಸ್ರು ಕೂಗಿ, “ಕ್ಯಾಸ್ಟ್ ಸರ್ಟಿಫಿಕೇಟ್ ಮಾಡ್ಸ್ಕೊಂಡು ಬರ್ಬೇಕು ಅಂತ ಹೇಳು ನಿಮ್ಮಪ್ಪನಿಗೆ” ಅಂತ ಎಲ್ಲರ ಮುಂದೆ ಎಬ್ಸಿ ನಿಲ್ಸ್ತ್ರಿದ್ರು. ಎಲ್ರು ಆಗ ನಮ್ಮನ್ನೊಂಥರಾ ನೋಡೋರು.

ಗಲೀಜ್ ಬಟ್ಟೆ, ಮೈವಾಸ್ನೆ ಬರ್ತಿದ್ರಿಂದ ಯಾರಾದ್ರು ಕ್ಲಾಸಲ್ಲಿ ಊಸ್ ಬಿಟ್ರೆ, ನಾವ್ ಬಿಡದೆ ಇದ್ರು ಆ ಹೊಣೆ ನಾವ್ ವೊರ್‌ಬೇಕಿತ್ತು. ನನ್ ಪಕ್ಕದಲ್ಲಿ ಕೂತಿದ್ದ ಐನೋರ್ ಹುಡುಗ ಷಡಕ್ಷರಿ ಊಸು ಬಿಟ್ಟಿದ್ದು ನನ್ಗ ಗೊತ್ತಿದ್ರು… ಅವ್ನೆ ನನ್ ಕಡೆ ಕೈತೋರ್ಸಿ ಮೂಗ್ ಮುಚ್ಚಿಕೊಂಡು ನಗ್ತಿದ್ದ.

ಯಾರ್ದಾದ್ರು ಬಳಪ, ಸ್ಲೇಟು, ಸೀಮೆಸುಣ್ಣ ಕಳೆದೋದ್ರೆ ಇನ್ನೇನೂ ಹೇಳಬೇಕಾಗಿಲ್ಲ. ನಮ್ಮವ್ವ ನಮಣ್ಣನ ಹಳೆ ಪ್ಯಾಂಟ್‌ನಲ್ಲಿ ವೊಲ್‌ಕೊಟ್ಟ ಚೀಲಾ ಕಿತ್ತುಕೊಂಡು ಕಳ್ಳಕಳ್ಳ ಅಂತ ಪೀಡುಸ್ತಿದ್ರು. ಸಿಗದಿದ್ರೆ ಹಿಡ್ಕೊಂಡು ಹೊಡಿಯೋರು.

ಇಂತವು ಲೆಕ್ಕಕ್ಕಿಲ್ಲದಷ್ಟು ಹೇಳಬಹುದು.

ಅಲ್ದೆ, ನಮ್ಮನೆ ಬಡತನ, ಜಾತಿಕಾರಣಕ್ಕೆ, ಸ್ಕೂಲ್ ಒಳಗು ಅಲ್ದೆ, ಊರ್ನಲ್ಲೂ ನನ್ಗೆ ತಲೆ ಎತ್ತಕ್ಕಾಗ್ದಂತ ಪರಿಸ್ಥಿತಿ ಬರ್ತಿತ್ತು.

ನಮ್ ಹಟ್ಟಿ ಬಿಟ್ಟು, ಊರೊಳಗೆ ಯಾರ್ದಾದ್ರು ಮದುವೆ-ತಿಥಿ ಆದ್ರೆ, ನಮ್ಮಪ್ಪ ಅವ್ವನ್ನ ಆ ಮನೇವ್ರು ಬಂದು, “ಎಲ್ಲಾದ್ರು ಊಟಾಗಿ, ಊಟ ಮಿಕ್ಕೈತೆ ಬಂದು ಇಕ್ಕಿಸ್ಕಂಡು ವೋಗ್ರಿ” ಅಂತ ಕರಿಯೋವ್ರು.

ಊಟ ಇಕ್ಕಿಸ್ಕಂಡು ಬರೋಕೆ ಆ ಮನೇವ್ರು ಕರ್ದೆ ಕರಿತಾರೆ ಅಂತ ಗೊತ್ತಿರ್ತಿದ್ದ ನಮ್ಮವ್ವ ಮೊದ್ಲೇ ಪಾತ್ರೆ, ಬೊಗಣಿ, ಬೇಸನ್ನು, ಚೆರ್ಕ್ಲು, ಮಿಳ್ಳೆ, ಚೆಂಬು, ಟಿಪಿನ್‌ಕೇರಿ ಎಲ್ಲಾ ಜೋಡಿಸ್ಕಂಡು ಇಟ್ಕಂಡಿರೋಳು. ಅವರು ಬಂದು ಕರ್ದೋದ್ಮೇಲೆ, ಒಂದು ಕೈಲಿ ಟಿಪಿನ್‌ಕೇರಿ ಇನ್ನೊಂದು ಕೈಲಿ ನಮ್ಮವ್ವನ ಸೆರಗ್ ಹಿಡ್ಕೊಂಡು ಪಾಯ್ಸದಾಸೆಗೆ ಜೊಲ್ ಸುರಿಸ್ಕ್ಯ ಡು ಅವ್ರ ಹಿಂದೇನೆ ನಾನು ಹೋಗ್ತಿದ್ದೆ.

ಊಟ ಕೊಡೋರ್ ಮನೆ ನನ್ ಸ್ಕೂಲ್ ತರಗತಿಯ ಹುಡುಗನೋ ಹುಡುಗಿದೋ ಮನೇನೆ ಆಗಿರ್ತಿತ್ತು.

ಅವ್ರ ಮನೆ ವರಗೆ ಬಾಗಲಲ್ಲಿ ನಿಂತ್ಕೊಂಡು “ಸ್ವಾಮಿ ಬಂದಿದ್ದೀವಿ” ಅಂತ ನಮ್ಮಪ್ಪ ಜೋರಾಗಿ ಕೂಗೋನು. ಆ ಮನೆ ಹೆಂಗಸರು ಉಳಿದಿದ್ನೆಲ್ಲ ತಂದು, ನಿಂತ್ಕೊಂಡೆ ನಮ್ ಪಾತ್ರೆಗಳಿಗೆ ಮೇಲಿಂದ ಸುರುದು, “ಶಿವಮ್ಮ ಅನ್ನ ಸ್ವಲ್ಪ ಮ್ಯತ್ತಗಾಗೈತೆ, ಹೋಗಿ ಬೇಗ ಬಿಸಿ ಮಾಡ್ಕ್ಯ, ಸಾರು ಇನ್ನೊಂದು ಸ್ವಲ್ಪ ಹೊತ್ತಾದ್ರೆ ಹೋಗಿಬಿಡುತ್ತೆ… ಕುದಿಸಿಕೊಂಡು ಬಿರ್ನೆ ಊಟ ಮಾಡ್ಕೊಳ್ಳಿ” ಅಂತ ಆವಮ್ಮ ಹೇಳೋವಾಗ, ನಮ್ಮವ್ವ ನೆಲ್ದಲ್ಲೆ ಕುಂತು ತೃಪ್ತ ಭಾವದಲ್ಲಿ “ಅಯ್ತು ತಾಯಿ” ಅನ್ನೋಳು.

ನನ್ ತರಗತಿ ಹುಡುಗಿ ಮನೆ ಒಳಗಡೆ ನಿಂತ್ಕಂಡು, ಊಟ ಇಕ್ಕಿಸ್ಕಂಡ್ತಿದ್ದ ನಮ್ಮನ್ನ ನೋಡ್ತಿರವ್ಳು. ’ಥೂ ಪಾಪ’ ಅಂತ ಅವ್ಳ್ ನನ್ನ ನೋಡ್ತಿದ್ದ ನೋಟ ನನ್ನ ಪಾತಾಳಕ್ಕೆ ತಳ್ಳುತ್ತಿತ್ತು. ಅವಳಿಗೆ ಮುಖಕ್ಕೆ ಮುಖ ಕೊಟ್ಟು ನೋಡೋಕಾಗದೆ ನಾಚಿಕೆಯಿಂದ ಕೆಳಗಡೆ ಕತ್ತು ಬಗ್ಗಿಸ್ತಿದ್ದೆ. ಆಗ ಕೆಳಗಡೆ ಇಟ್ಟಿದ್ದ ಟಿಪಿನ್‌ಕೇರಿ ಕಣ್ಣಿಗೆ ಬಿದ್ದು ಅದರಲ್ಲಿ ತುಂಬಿದ ಪಾಯ್ಸ ನೋಡಿ ಆ ಅವಮಾನವೆಲ್ಲ ಮರೆತ್ಹೋಗಿ ಬಾಯಲ್ಲಿ ಜೊಲ್ಲು ಸುರುಸ್ತಾ, ಯಾವಾಗ ತಿಂತಿನೋ ಪಾಯ್ಸ ಅನ್ನಿಸ್ತಿತ್ತು.

ಊರಲ್ಲಿ ನಡಿಯೋ ದೇವ್ರ ಹಬ್ಬಕ್ಕೆ ನಮ್ಮಪ್ಪ ಅರೆ ಬಡಿಯೋಕೆ ಹೋಗ್ತಿದ್ದ.

ನಾನ್ ದೂರದಲ್ಲಿ ಗೋಡೆ ಮರೇಲಿ ನಿಂತು ಇಣುಕಿ ನೋಡ್ತಿದ್ದೆ. ನಮ್ಮಪ್ಪ ಕುಡುದು ತೂರಾಡ್ಕಂಡು ಅರೆ ಬಡಿಯೋದ್ನ ನೋಡ್ತಾ ಊರ್ ಜನರು ಬೇಕ್‌ಬೇಕಂತ ಅವನನ್ನ ನೂಕಿ ತಳ್ಳಿ ಚೇಡಿಸಿ ಅರೆ ಬಡಸ್ತಿದ್ರು. ಬೆಳಿಗ್ಗೆ ಎದ್ದು ಸ್ಕೂಲಿಗೆ ಬಂದಾಗ ಹುಡುಗರೆಲ್ಲ ರಾತ್ರಿ ನಮ್ಮಪ್ಪ ಯಂಗ್ ತಟ್ಟಾಡ್ಕೊಂಡು ಅರೆ ಬಡಿತಿದ್ದ ಅನ್ನೊದ್ನ ಮಾಡಿ ತೋರ್ಸಿ “ನೀ ಯಾವಾಗ್ಲ ಕಲೀತಿಯಾ ಅರೆ ಬಡಿಯೋದ್ನ? ನೀನು ಕುಡಿತೀಯಾ?” ಅಂತ ಆಡ್ಕೊಳ್ಳೋರು.

ಊರಲ್ಲಿ ಯಾರಾದ್ರು ಸತ್ರೆ ಹೆಣ ಮಣ್ ಮಾಡಿ, ಊರಿನ ಹೆಬ್ಬಾಗಿಲಿಗೆ ವಾಪಸು ಬರುವಾಗ “ಆ ಕುಲುವಾಡಿ ಕರೀರಿ” ಅನ್ನೋರು. ಆಗ ನಮ್ಮಪ್ನೋ ಅವ್ವನೋ ಹೋಗಿ ಹೆಬ್ಬಾಗಿಲು ಮುಂದೆ ನೆಲದ ಮೇಲೆ ಸೊನ್ನೆ ಬರ್ದು ಅದರೊಳಗೆ ಪ್ಲಸ್ ಆಕಾರ ಬರೆಯೋರ್; ಸತ್ತಿದ್ ಮನೆಯವ್ರು ಅದರೊಳಗೆ ಚಿಲ್ಲರೆ ಕಾಸು ಹಾಕೋರು. ಊರಲ್ಲಿ ಯಾರಾದ್ರು ಸತ್ರೆ ಈ ಚಾಕ್ರಿ ನಮ್ಮನೆಯವ್ರೆ ಮಾಡ್ಬೇಕಾಗಿತ್ತು.

ಒಂದಿನ ಊರಲ್ಲಿ ಯಾರೋ ಸತ್ತಾಗ ನಮ್ಮಪ್ಪ ಅವ್ವ ಇಬ್ರೂ ಹೊಲಕ್ಕೆ ಅರ್ತೆ ಒಡದು ಬೀಜ ಬಿತ್ತಕ್ಕೋಗಿದ್ರು. ನನ್ ಸ್ಕೂಲಲ್ಲಿ ಕೂತಿದ್ದೆ ಲಕ್ಷ್ಮಿದೇವಿ ಮೇಡಮ್ಮು…

“ನಾಡಿನ ಗಣ್ಯಾರು
ಗ್ರಾಮದಿ ನೆರೆದರು
ಬನ್ನಿರಿ ಎಲ್ಲರೂ
ಉತ್ಸವದಿ
ಪರಿಸರ ನಾವು ಸರಿಪಡಿಸೋಣ
ಬನ್ನಿರಿ ಎಲ್ಲರೂ ಹರುಷದಲಿ”

ಅನ್ನೋ ಕನ್ನಡದ ಪದ್ಯ ಹೇಳುಸ್ತಿದ್ರು. ನಾನು ಬೋರ್ಡ್ ಮುಂದೆ ನಿಂತು ಕೈ ಕಟ್ಟಿಗಂಡು ಪದ್ಯ ಹೇಳ್ತಿದ್ದೆ; ಯಾರೋ ಬಂದವ್ವರೆ “ಮೇಡಮ್ಮವರೆ ಆ ಕುಲುವಾಡಿ ಕೆಂಪ್ಪಣ್ಣನ್ ಮಗನ್ನ ಕಳಿಸಿ, ಹಿಂಗ್ ಕರಕಂಡೋಗಿ ಹಂಗ್ ಕಳ್ಸ್ತೀನಿ” ಅಂದ.

ಮೇಡಮ್ಮು “ಯಾಕ್ ಏನಾಯ್ತು” ಅಂದ್ರು.

“ಮನ್ತಾಕ ಹೋಗಿದ್ದೆ. ಅವ್ರ ಮನೇಲಿ ಯಾರು ಇಲ್ಲ. ಈ ಹುಡುಗ ಇಲ್ಲೆ ಸ್ಕೂಲಲ್ಲಿ ಇದ್ನಲ್ಲ, ಅದಕೆ ಆ ಹೆಬ್ಬಾಗಿಲು ತಾವ ಸತ್ತೋರು ಮನೆವ್ರು ದುಡ್ಡು ಹಾಕ್ಬೇಕಿತ್ತು, ಅದಿಕ್ಕೆ ಈ ಹುಡುಗನ್ನ ಕರಕಂಡು ಹೋಗಕ ಬಂದಿನಿ” ಅಂದ.

ಮೇಡಮ್ಮು “ಹೋಗ್ ಬಾ” ಅಂದ್ರು.

ಊರಲ್ಲಿ ಯಾರೋ ಸತ್ತಾಗ ನಮ್ಮಪ್ಪ ಹೆಬ್ಬಾಗಿಲ ಹತ್ರ ಸೊನ್ನೆ ಬರ್ದು ದುಡ್ ತಕ್ಕಂಡಿದ್ದು ನೆನಪಾಗಿ, ನನ್ಗೆ ಅದು ಕೀಳು ಅಂತ ಅನಿಸಿ, “ನಾನ್ ಬರಲ್ಲ” ಅಂದೆ.

“ಲೇ ನಿಮ್ ಅಪ್ಪ ಸತ್ರೆ ಕುಲವಾಡಿಕೆ ಯಾರ್ ಮಾಡ್ತಾರೆ ಬಾ ಆಚೆಗೆ” ಅಂತ ಜೋರ್ ಮಾಡಿದ. ಮತ್ಯೆಲ್ಲಿ ಒಡ್ದಾನೋ ಅವನು ಅಂತ ಅಳುತ ಊರ್ನ ಹೆಬ್ಬಾಗಿಲು ಕಡೆಗೆ ಅವನ್ಹಿಂದೆ ಹೊರಟೆ. ಅವನ್ಹಿಂದೆ ಹೋಗುವಾಗ ನನ್ನ ಪುಸಲಾಯಿಸ್ತಾ, “ದುಡ್ಡ ಸಿಗುತ್ತೆ ಕಣ್ ಬರ್ಲಾ, ಚಾಕ್ಲೆಟ್ಟೊ ಶುಂಟಿ ಪೆಪ್ಪೆರ್‌ಮಿಂಟ್‌ನೋ ತಿನ್ಬೋದು” ಅಂದ. “ನನ್ಗೇನು ಬ್ಯಾಡ” ಅಂತ ಅಂದ್ರು, ಕೈ ಹಿಡ್ಕಂಡು ದರದರ ಎಳ್ಕಂಡು ಹೋದ.

ಎಲ್ಲಾರು ನಾನ್ ಬರೋದ್ನ ನಿಂತು ನೋಡ್ತಿದ್ರು

“ಬರೀಲಾ ಬಿರ್ರನೆ ನೆಲಕ್ಕೆ” ಅಂದ. ಗೊತ್ತಿದ್ರು ನನ್ಗೆ ಬರಲ್ಲ ಅಂದೆ. ಅವ್ನೆ ಅವನ ಕೈಮೇಲೆ ಬರ್ದು ತೋರ್ಸಿ “ಹಿಂಗ್ ಬರಿಲಾ” ಅಂದ. ಅದನ್ನ ನೋಡಿಕ್ಕೊಂಡು ಕಾಪಿ ಮಾಡೊನ್ತರ ಮಣ್ಣ ಮೇಲ್ ಬರ್ದೆ. ನಾಕಾಣೆ ನಾಕು, ಎಂಟಾಣೆವು ಎರಡು ಆ ಸೊನ್ನೆ ಒಳಿಕೆ ಸತ್ತೋರು ಮನೆವ್ರು ನಾಕ್ ಕಾಯಿನ್ ಹಾಕಿದ್ರು. “ಸರಿ ವೋಗ್ಲ, ಇಷ್ಟಕ್ಕೆ ಅಳ್ತೀಯಾ, ವೋಗ್ ಸ್ಕೂಲಿಗೆ” ಅಂದ.

ನಿಂತ್ಕಂಡು ನೋಡ್ತಿದ್ದೋರು ಆ ಸಾವನ್ನ ಮರೆತು ಹಲ್ಲ ಗಿಂಜ್ಕೊಂಡು ನಗ್ತಿದ್ರು.

ಅಲ್ಲಿಂದ ನಾನ್ ಸ್ಕೂಲ್ ಕಡೆ ಓಡಿಹೋದೆ.

ಮೇಡಮ್ ಕ್ಲಾಸ್ಸು ಮುಗಿದಿತ್ತು. ಮಹೇಶ, ಸಂತೋಷ ಎಲ್ಲಾರೂ “ಎಷ್ಟು ಸಿಕ್ತಲಾ ಕಾಸು” ಅಂತ ಕಿಚ್ಚಾಯಿಸಿದ್ರು. ಜೋಬೊಳಗೆ ಕಾಯಿನ್ ಅಳ್ಳಾಡಿಸಿ ಹಿಂದೆ ಹೋಗಿ ನೆಲದ ಮೇಲೆ ಕುತ್ಕಂಡೆ. ಅವ್ರ ಎದ್ರು ನಿಂತು ಮಾತಾಡೋ ಧೈರ್ಯನೂ ನನಿಗಿರ್ಲಿಲ್ಲ. ನಾನು ಮಾಡೋ ಎಲ್ಲಾ ಕೆಲಸಗುಳು ಅವರಿಗೆ ಕೀಳಾಗೆ ಕಾಣ್ತಿತ್ತು.

ಒಂದಿನ ಭಾನುವಾರ ನಮ್ಮವ್ವ ಬೇಸನ್ಗೆ ಬಟ್ಟೆ ತುಂಬಿ ನನಗೊಂದು ಗಂಟಲ್ಲಿ ಬಟ್ಟೆ ಕಟ್ಟಿ ತಲೆ ಮೇಲೆ ಇಟ್ಟಳು. ಇಬ್ರು ಹೊತ್ಕೊಂಡು ನಮ್ಮೂರ ಕೆರೆಗೆ ಬಟ್ಟೆ ತೊಳೆಯಾಕೆ ವೋದ್ವಿ.

ಅಲ್ಲೂ ಕೂಡಾ ನಾವು ಎಲ್ಲಾರು ಬಟ್ಟೆ ತೊಳೆಯೋ ಕಡೆ ತೊಳಿಯಂಗಿರ್ಲಿಲ್ಲ. ಕಲ್ಲು ಖಾಲಿ ಇತ್ತುಂತ, ತಲೆ ಮೇಲೆ ಇದ್ದ ಬಟ್ಟೆ ಗಂಟ್ನ ಕಲ್ಲಮೇಲೆ ಇಟ್ಟೆ. ಅಲ್ಲೆ ಬಟ್ಟೆ ತೊಳಿತ್ತಿದ್ದ ಊರಳ್ಳೋರು ಪವಿತ್ರಮ್ಮ, “ಶಿವಕ್ಕ ನಿಮ್ಮಡುಗುಂಗೆ ಹೇಳು ಆಕಡೆ ಬಟ್ಟೆ ತಗೊಂಡು ಹೋಗೋಕೆ. ಆ ಕಡೆ ಕಲ್ಲಾಕಂಡು ತೊಳಕಳ್ಳಿ. ನಮ್ಮವು ಮಡಿ ಬಟ್ಟೆ ಇದಾವೆ ದೇವ್ರವೂ” ಅಂದಾಗ, ಅವ್ವ “ಬಾರ್ಲಾ ಪಾಪ, ಗಂಟು ಈ ಕಡೆ ತೊಗೊಂಡು” ಅಂತ ಕರದ್ಲು. ಪವಿತ್ರಮ್ಮನ ದುರುಗುಟ್ಕಂಡು ನೋಡಿ ಗಂಟ್ ತಗಂಡು ನಮ್ಮವ್ವನ ಕಡೆಗೆ ಬಂದೆ.

ಊರಿಗೆ ಕೆರೆ ಒಂದೆ ಆದರಿಂದ ಊರಿನವ್ರೆಲ್ಲ ಅಲ್ಲೆ ಬಟ್ಟೆ ತೊಳೆಯವ್ರು.

ನಮ್ಮವ್ವ ಕೆರೆದಡದಲ್ಲಿ ಕುಂತ್ತು, ಬಟ್ಟೆನಾ ನೀರ್‌ನಲ್ಲಿ ನೆನಾಕಿ, ಬಾರ್ ಸೋಪಲ್ಲಿ ತೊಳ್ದು, ಸೆಣದು, ಕುಕ್ಕಿ ಜಾಲಾಡಿ, “ಏ ಪಾಪ, ಬಾರ್ಲಾ ಇಲ್ಲಿ ಈ ಬಟ್ಟೆ ಒಣಾಕು” ಅಂತ ಕೂಗಿ ಕರ್ದ್ಲು. ನಾನು ಸೀರೆ ಅರಿಬೇಲಿ, ನೀರಲ್ಲಿ ಆಟ ಆಡ್ತಾ, ಕಪ್ಪೆ ಇಡಿತಿದ್ದೋನು ಓಡ್ ಬಂದೆ. ಅವ್ವ ಕೈಗೆ ಜಾಲಾಡಿಸಿದ್ದ ಬಟ್ಟೆ ಕೊಟ್ಟು, “ಆ ಬಂಡೆ ಕಲ್ ಮೇಲೆ ಒಣಾಕು ಬಟ್ಟೆ ಬೇಗ ಒಣ್‌ಕತವೆ” ಅಂದ್ಲು. ಹಿಂಗೆ ಅವ್ವ ತೊಳದಂಗೆ ನಾನು ಬಟ್ಟೆ ಒಣಾಕ್ತಿದ್ದೆ.

ಒಣಾಕುವಾಗ ಬಂಡೆ ಕೆಳಗೆ ಮಣ್ಣೊಳಗೆ ಅರ್ದಂಬರ್ಧ ಮುಚ್ಕಂಡಿದ್ದ ಹಸ್ರು ತುಂಡು ಬಟ್ಟೆ ಕಣ್ಣಿಗೆ ಬಿತ್ತು. ಅದುಕೆ ಅದ್ರ ಬಣ್ಣ ಬಣಗೆಟ್ಟಂಗಾಗಿತ್ತು.

ಹತ್ರ ಹೋಗಿ ಎತ್ಗಂಡು ನೋಡಿದ್ರೆ, ಅದು ಹಸ್ರು ಚೆಡ್ಡಿ! ಅದು ಎಷ್ಟು ಖುಷಿ ಆಯ್ತಂದ್ರೆ, ಬಂಡೆ ಮೇಲೆಲ್ಲ ಕುಣ್ದಾಡಬೇಕು ಅನಿಸ್ತು. ಅಷ್ಟ್ರಲ್ಲಿ ಚಡ್ಡಿ ಮ್ಯಾಕೆತ್ತಿ ನೋಡ್ದೆ. ಆ ಚಡ್ಡಿ ತೂತೊಳಗಿಂದ ಆಕಾಶ ಕಾಣ್ಸ್ತಿತ್ತು.

ಚಡ್ಡಿ ಸಿಕ್ತು ಅಂತ ತಂದು ನೀರನಲ್ಲಿ ಚನ್ನಾಗ್ ಜಾಲಾಡಿಸ್ದೆ. ಚಡ್ಡಿಗೆ ಅಂಟಿದ ಕೆಸರು ಬಿಡ್ಲೆ ಇಲ್ಲ. ಅವ್ವನತ್ರ ಹೋಗಿ ಬಾರ್ ಸೋಪ್ ಚೂರ್ ಮುರ್ಕಂಡು ಬಂದು ತಿಕ್ಕಿತಿಕ್ಕಿ ಚಡ್ಡಿ ತೊಳ್ದೆ. ಬಣ್ಣ ಹಸ್ರು ತಿರ್ಗಿ ಇದು ತೀರ ಹಳೆದಲ್ಲ ಅನಿಸ್ತು.

ನೀರಲ್ಲಿ ನಿಂತು ನಾನು ಬಟ್ಟೆ ಜಾಲಾಡ್ಸ್ತಿದ್ದಿದ್ದನ್ನ ನೋಡಿದ ಅವ್ವ, “ಮತ್ಯಾಕ್ಲಾ ಬಟ್ಟೆ ತೊಳಿತಿದಿಯಾ. ಒಣಾಕೋಗು ನಾನ್ ಜಾಲಾಡ್ಸಿದಿನಿ” ಅಂತ ಕೂಗಿ ಹೇಳಿದ್ಳು.

“ಏ ಬಟ್ಟೆ ಕೆಳಗಡೆ ಬಿತ್ತು ಕಣವ್ವ, ಒಣಾಕಕೋಗುವಾಗ ಅಟ್ಲಾಯ್ತು ಅದಿಕ್ಕೆ ತೊಳೀತಿದಿನಿ” ಅಂತ ಕೂಗಿ ಹೇಳಿದೆ. ಸೋಪ್ ಖಾಲಿ ಆಗೊವರ್ಗು ಚಡ್ಡಿ ತೊಳ್ದು ಬೇಗ ವಣ್‌ಗ್ಲೀ ಅಂತ ಹಿಂಡಿಹಿಂಡಿ ಬಿಸ್ಲು ಬಿದ್ದಿರೊ ಬಂಡೆ ಮೇಲೆ ಬಂದು, ಬಂಡೆ ಮೇಲಿದ್ ಧೂಳ್‌ನೆಲ್ಲ ಊಫ್ ಅಂತ ಉರ್ಬಿ, ಚೆಡ್ಡಿ ಬಂಡೆಮ್ಯಾಲೆ ಒಣಾಕಿ, ಅಲ್ಲೆ ಕಾಯ್ಕಂಡು ಕೂತ್ಕಂಡೆ. ಅವ್ವ ಮತ್ತೆ “ಬರ್ಲಾ ಬಿರ್‌ಬಿರ್ನೆ ಒಣಾಕು” ಅಂತ ಕೂಗಿದ್ಲು. ಬೀಸೋ ಗಾಳಿಗೆ ಚೆಡ್ಡಿ ಎಲ್ಲಿ ಹಾರೋಗುತ್ತೊ ಅಂದ್ಕೊಂಡು, ಚಡ್ಡಿಲಿದ್ದ ಎರಡು ತೂತಿನ ಮೇಲೆ, ಎರಡು ಕಲ್ಲಿಕ್ಕಿ, “ಬಂದೆ ಕಣವ್ವೊ” ಅಂತ ಓಡ್ ಬಂದೆ.

ಎಲ್ಲಾ ಬಟ್ಟೆ ತೊಳದಾಕಿ ಅವ್ವ ಎಲೆ ಅಡಿಕೆ ಹಾಕ್ಕೊಂಡು ಅಲ್ಲೆ ಬಟ್ಟೆ ತೊಳಿತಿದ್ದ ನಮ್ಮಟ್ಟಿ ಗೌರಮ್ಮನ ಜೊತೆ ಮಾತಿಗೆ ಕೂತಿದ್ಲು. ನಾನ್ ಅವ್ವ ಕೊಟ್ಟ ಬಟ್ಟೆ ತಂದು ಬೇಗ ಒಣಾಕಿ ಕಲ್ಲಿಕ್ಕಿ ಹೋಗಿದ್ದ ಚಡ್ಡಿ ಬೇಗ ಒಣಗಲಿ ಅಂತ ಕೈಯಲ್ಲಿಟ್ಕೊಂಡು ಬೀಸೊ ಗಾಳಿಗೆ ಚಡ್ಡಿ ಹಾರಾಡ್ಸತಿದ್ದೆ.

ಅವ್ವ ಮತ್ತೆ ಕೂಗಿ “ಬೇಸನ್ ತೊಗೊಂಡು ಬಟ್ಟೆ ತುಂಬ್ಕೊ… ಉಳಿದು ಬಟ್ಟೆ ಸೀರೆಲ್ಲಿ ಹಾಕಿ ಗಂಟುಕಟ್ಟು” ಅಂದ್ಲು. ಬಂಡೆಮೇಲೆ ಒಣಗಿದ ಅವ್ವನ ಸೀರೆ ನೆಲಕ್ಕಾಕಿ ಅದ್ರ ವಳಗೆ ಚಡ್ಡಿ ಕೆಳಗಾಕಿ ಉಳಿದ ಬಟ್ಟೆ ಸೀರೆಲ್ಲಿ ಗಂಟಕಟ್ಟಿದೆ.

ತಲೆಮ್ಯಾಲೆ ಗಂಟ್ಟೊತ್ಕೊಂಡು ಮನೆಗ್ ನಡ್ಕಂಡು ಬರುವಾಗ ನಾನು ಒಬ್ಬೊಬ್ನೆ ನಗ್ತಿದ್ದೆ. ಅವ್ವ ನೋಡಿ “ಯಾಕ್ಲ ಪಾಪ ಹಂಗ ನಗ್ತಿದೀಯಾ” ಅಂದ್ಲು. ನಾನು ಮತ್ತೆ ನಕ್ಕು “ಏನಿಲ್ಲ ಕಣವ್ವೋ” ಅಂದೆ. ಮನೆಗ್ ಬಂದ್ವಿ. ಮನೆಗ್ ಬಂದವ್ನೆ, ಬೆಂಗಳೂರು ಕ್ಯಾಲೆಂಡ್ರಲ್ಲಿ ಚುಚ್ಚಿದ ಸೂಜಿ ತೊಗೊಂಡು, ಅವ್ವನ ಎಲೆ ಅಡಿಕೆ ಚೀಲ್‌ದಲ್ಲಿ ನೂಲ್ ತೊಗಂಡು, ಸೂಜಿಗೆ ಪೊಣ್ಸಿ ಒಲಿತ ಮನೆ ವೊರ್‍ಗಿನ ಜಗ್ಲಿ ಮ್ಯಾಲೆ ಕುತ್ಕಂಡೆ. ನಮ್ಮನೆ ಕರಿ ನಾಯಿ ನನ್ ಕಾಲ್ದಡಿ ಮಣ್ಣಲ್ಲಿ ಬಿದ್ದು ಒದ್ದಾಡ್ತಿತ್ತು.

ಸೂರ್ಯ ಅದಾಗ್ಲೆ ನೆತ್ತಿಗೇರಿದ್ದ. ಅವ್ವ ಅಡುಗೆ ಕ್ವಾಣಿಯಿಂದ “ಬಿರ್ ಬಿರ್ನೆ ಊಟ ಮಾಡ್ಕ್ಯ ಬಾ. ಆಡಿಗೆ ಹೋಗೋಕೆ ವೊತ್ತಾಗುತ್ತೆ” ಅಂದ್ಲು. “ನಾನ್ ಬರಲ್ಲ ಇವತ್ತು, ನೀನೆ ಹೋಗು” ಅಂದಿದ್ದಕ್ಕೆ ಅವ್ವ ಮುದ್ದೆ ತಿರುವೋ ಕವ್‌ಗೋಲ್ನ ಆಚೆ ಇಡ್ಕಂಬಂದು “ಏನ್ ಮಾಡ್ತಿಯಾ ಮನೆ ತವ? ಬಾ ಹೋಗನ… ಹಟ್ಟಿಲಿ ಒಂದ್ ಮನೇನು ಬಿಡ್ದೆ ಎಣಿಸ್ಕೆಂಡು ಅವರಿವ್ರ ಮನೆ ತಿರಗ್ತಿಯಾ” ಅಂತ ಸಿಡಿಕಿದ್ಲು. ನಾನು ಬ್ಲೇಡ್ ತೊಗೊಂಡು ಅವ್ವನ ಹಳೆ ಕಾಟನ್ ಸಿಲ್ಕ್ ಸೀರೆಲಿ ಕಟ್ ಮಾಡ್ಕಂಡು ಎಲ್ಡು ತ್ಯಾಪೆ ಮಾಡಿ ಚಡ್ಡಿ ತೂತ್ ಮುಚ್ತಿದ್ದೆ.

ಅವ್ವ ಅದನ್ನ ನೋಡಿ “ಇದ್ಯಾವದ್ಲ ಚಡ್ಡಿ..! ಹಸ್ರು ಬಟ್ಟೆ ಎಲ್ ಸಿಕ್ತು ತ್ಯಾಪೆ ಹಾಕೋಕೆ” ಅಂದ್ಲು. ಕೆರೆತಾವ ಯಾರೋ ಮರ್ತು ಬಿಟ್ಟೋಗಿದ್ರು ಕಣವ್ವ, ಹಳೆ ತಲ್‌ದಿಂಬಲ್ಲಿ ಹಸ್ರು ಬಟ್ಟೆ ತುಂಡಿತ್ತಲ್ಲ ಅದ್ರಲ್ಲಿ ಚೂರ್ ಹರ್ಕಂಡು ತೂತ್ ಮುಚ್ತಿದೀನಿ” ಅಂತ ಒಂದು ನಿಜ ಒಂದು ಸುಳ್ಳು ಹೇಳಿದೆ. “ಸರಿ ನಡಿ ಊಟ ಮಾಡ್ಕ್ಯ. ಆಡ್ ಮೇಯ್ಸತಾವ ನಾನೇ ಒಲ್ಕೊಡ್ತಿನಿ” ಅಂದ್ಲು. ನಮ್ಮವ್ವ ತಲೆ ದಿಂಬು, ಈಚಲ ಚಾಪೆಗೆ ದಡ ಒಲಿತ್ತಿದ್ದು, ಒದ್ಕಣಕೆ ಕೌದಿ ಒಲಿತ್ತಿದ್ದು ನಾನ್ ನೋಡಿದ್ರಿಂದ ನಂಬಿಕೆ ಬಂದು ನಮ್ಮವ್ವ ನನಗಿಂತ ಚನಾಗಿ ಒಲ್ದಕೊಡ್ತಾಳಂತ ಊಟ ಮಾಡಿ ಜವಣೆ ಕಡ್ಡಿ ಹೆಗಲಿಗೆ ಹೊತ್ಕಂಡು ಆಡುಗುಳ ಹೊಡ್ಕಂಡು ಹೊಲ್‌ಮಳಕ್ಕೆ ಹೋದ್ವಿ.

ಎಷ್ಟೊತ್ತಾದ್ರು ಅವ್ವ ಚಡ್ಡಿ ಹೊಲ್ದುಕೊಡ್ದೆ ಇದ್ದದ್ದನ್ನು ನೋಡಿ ಚಡ್ಡಿ ಹಿಡ್ಕಂಡು ಅವ್ವನ ಹಿಂದಿಂದೆ ಹೋಗ್ತಾ, “ಬಿರ್ನೆ ಹೊಲ್ದಕೊಡವ್ವ ಬಿರ್ನೆ ಹೊಲ್ದುಕೊಡವ್ವ ಅಂತ ಅವ್ವನ ಪ್ರಾಣ ತಿಂತಿದ್ದೆ.

“ತಡಿಲಾ ಆಡಿಗೆ ಬೇವಿನಸೊಪ್ಪು ಸೆಣದಾಕಿ ಆಡಿನ ಹೊಟ್ಟೆ ಪುಟ್ಟಗಾದ್ಮೇಲೆ, ಆ ಕಟ್ಟೆ ತವ ನೀರ್ ಕುಡಿಸಿ, ಬನ್ನಿ ಮರದ್ ಕೆಳಗೆ ಕುಂತು ಒಲ್ದಕೊಡ್ತಿನಿ. ಆಡಿಗೆ ಹೊಟ್ಟೆ ತುಂಬಿ ಮಳ್ಳಗೆ ನೀರ್ ಕುಡುದಿರ್ತಾವೆ, ಆವಾಗ ಆಡು ಎಲ್ಲಿಗು ಓಡೋಗಲ್ಲ ಅಂತೇಳಿ ಕಟ್ಟೆ ಕಡಿಗೆ ಆಡಗುಳುನೆಲ್ಲ ಹೊಡ್ಕಂಡು ಹೊರುಟ್ವಿ.

ನಮ್ ಕೆಂನ್ದಾಡು ಹೊಲ್ದಲ್ಲಿ ಅಳಸೊಪ್ಪು ತಿಂದು ಸೊಕ್ಕು ಬಂದು ಕಟ್ಟೆಕಡಿಕೆ ನಡಿದೆ ಅಲ್ಲೆಲ್ಲೆ ತಲ್ಸುತ್ತಿ ಬಂದು ಮಲಿಕಂತ್ತಿತ್ತು.

ಅವ್ವ ಕೆಂದಾಡಿನ ಕಿವಿ ಹಿಡ್ಕಂಡ್ ಮುಂದೆ ಎಳ್ಕಂಡೋದ್ರೆ, ನಾನ್ ಆಡಿನ್ ಕುಂಡಿಗೆ ಅಚೋ ಅಚೋ ನಡಿನಡಿ ಅಂತ ಕೈಲಿ ದೂಕ್ಯಂಡು ಬಂದು ಕ್ಯಂದಾಡಿಗೆ ಕಟ್ಟಿಗ್ ನೀರ್ ಕುಡ್ಸಿ ಅದರ ಬೆನ್ನಿಮೇಲೆ ನೀರ್ ಹಾಕಿದೆ. ಆಡುಗುಳೆಲ್ಲ ವೊಟ್ತುಂಬಾ ನೀರ್ ಕುಡ್ದು, ಬನ್ನಿಮರದ ನೆಳ್ಳಲ್ಲಿ ಮನಿಕಂಡ್ರೆ, ಕೆಲವು ಅಲ್ಲೆ ಮೆಳೆ ಮೇಯ್ತಿದ್ವು. ಸೊಕ್ಕಿದ ಕ್ಯಂದಾಡ ಬನ್ನಿ ಮರದ ನೆಳಲ್ಲಿ ಮಲಗ್ಸಿ, ಅವ್ವ ನನ್ಗೆ, “ಚಡ್ಡಿ ಉಡ್ದಾರ ಬಿಚ್ಚಿ ಮೂರ್ಸಾರಿ ಆಡಿನ್ ಬೆನ್ ಮೇಲೆ ದಾಟ್ಯಾಡು” ಅಂದ್ಲು. ಚಡ್ಡಿ ಉಡ್ದಾರ ಬಿಚ್ಚಿ ದಾಟ್ಯಾಡಿ ಮೂರ್ಸರಿ ಮೂಡ್ಲು ದಿಕ್ಕಿಗೆ ತಿರುಗಿ ಥೂ ಥೂ ಥೂ ಅಂತ ಉಗುದು ಚೆಡ್ಡಿ ಉಡ್ದಾರ ಹಾಕ್ಕೊಂಡೆ.

ಅವ್ವ ನೆಳ್ಳಲ್ಲಿ ಕುಂತು ತೂತ್ ಚಡ್ಡಿ ಹಸ್ರು ಬಟ್ಟೆ ತಗಂಡು ಒಲಿಯಾಕ್ ಕುಂತ್ಲು. ನಾನು “ಗುಬ್ ಗುಬ್ ಆಗೊಂಗೆ ಒಲೀಬೇಡ, ಒಲಿಗೆ ಹಾಕಿರೋದು ಗೊತ್ತಾಗ್ಲೆಬಾರ್ದು, ಹೊಸ ಚಡ್ಡಿ ಟೈಲರ್ ಒಲ್ದಂಗೆ ಒಲ್ದಕೊಡು” ಅಂತ ಒಂದೇ ಸಮ್ಮೇ ಅವ್ವನ ತಲೆ ತಿಂತಿದ್ದೆ. ಕಟ್ಟೆನೀರಲ್ಲಿ ಈಜ್‌ತಾ ಮೀನ್ ಹುಡುಕ್ತಿದ್ದ ಗುಂಡುಮುಳಕ ಹಕ್ಕಿ, ಮುಳುಗಿ ಮುಳುಗಿ ಮೇಲೇಳುತ್ತಾ ದಡಕ್ ಬಂದು ಕಲ್ ಮೇಲೆ ಕುಂತು ರೆಕ್ಕೆ ಬಿಚ್ಚಿ ಹಾರಿ ಹೋಗೋಕೆ ಮೈ ಒಣಗ್ಸ್ತಿತ್ತು. ನಮ್ ಕೆಂದಾಡು ಸುಧಾರಿಸ್ಕ್ಯಂಡು ಬೇಲಿಲ್ ಮೇಯ್ತಿದ್ದ ಆಡುಗುಳು ಜೊತೆ ಮೇಯಕ್ಕೆ ವೋತು.

ಅಂತೂ ಅಷ್ಟರಲ್ಲಿ ಅವ್ವ ತೂತ್ ಚಡ್ಡಿ ಒಲ್ದಾಗಿ “ಎಲಿ ಒಂದ್ಸಾರಿ ಹಾಕ್ಕಂಡು ನೋಡು” ಅಂದ್ಲು. ಚಡ್ಡಿ ಇಸ್ಕಂಡು ಹಾಕಿದ ಚಡ್ಡಿ ಮೇಲೆ ಹಾಕ್ಕೊಂಡೆ. ತೊಡೆ ಹಿಡ್ಕಂಡು ಚಡ್ಡಿ ಸೊಂಟಕ್ಕೆ ಹೊಗ್ಲಿಲ್ಲ. “ಲೇ ಒಳ್ಳೆ ಅವಸ್ರುಗುಟ್ಟಿದ್ ಆಂಜನೇಯ ಆಡ್ದಂಗೆ ಆಡ್ತಿಯಲ್ಲ, ಆಕ್ಯಂಡಿರ ಚಡ್ಡಿ ಬಿಚ್ಚಿ ಇದನ್ನಾಕ್ಯ ಅಂದ್ಲು. ಚಡ್ಡಿ ಬಿಚ್ಚಿ ಇದನ್ನಾಕ್ಕಂಡೆ. ತೊಡೆ ಜಾಗದಲ್ಲಿ ಸ್ವಲ್ಪ ಸಡಿಲ ಅನ್ಸಿ ಈಗ ಚಡ್ಡಿ ಮ್ಯಾಕ್ ಹೋಯ್ತು.

ಆದರೆ, ಸೊಂಟಕ್ಕೆ ಉಕ್ಸು ನೆಟ್ಕತಾನೇ ಇರ್ಲಿಲ್ಲ. ಜೀಪ್‌ನ ಜಾಗದಲ್ಲಿ ಇದ್ದಿದ್ ಎರಡು ಗುಂಡಿಲಿ ಒಂದು ಗುಂಡಿ ಬಿಚ್ಚಿ ಚಡ್ಡಿ ಮ್ಯಾಕೆಳಕಂಡೆ. ಆಗ್ಲು ಸೊಂಟಕ್ಕೆ ಚಡ್ಡಿ ಮೇಕ್ ಏರ್ಲಿಲ್ಲ.

ನಾಳೆ ಸ್ಕೂಲಿಗೆ ಹೋಗೋವಾಗ ಅಂಗಿ ಎತ್ಕಂಡು ಚಡ್ಡಿ ತೋರ್ಸ್ಕಂಡು ಹೋಗ್ಬೇಕು ಅಂದುಕೊಂಡಿದ್ದು ಕನಸೆಲ್ಲ ನಿರಾಸೆ ಆಯ್ತು. ಮಕ ಸಪ್ಪಗ ಮಾಡ್ಕೊಂಡು ಅವ್ವನ ನೋಡ್ದೆ. ಅವ್ವ ಪಟೇಲರ ಸಿದ್ದಣ್ಣರ ಬೇಲಿ ಒಳಗ ನುಗ್ತಿದ್ದು ಆಡ್ ನೋಡಿ “ವೋಗ್ ವೋಗ್ ಆಡು ಈಕಾಡೆ ಒಡ್ಸಕ್ಯಂಬಾ ವೋಗ್, ಆಡು ಅವಯ್ಯನ ಕೈಗೆ ಸಿಕ್ರೆ ಸಾಯ್‌ಗೊನ್ಸಿಬಿಡ್ತಾನೆ” ಅಂತ ಗಾಬ್ರಿಲಿ ಹೇಳಿದ್ಲು.

ನಾನು ಒಂದೇ ಉಸ್ರುಗೆ ಒಡೋವಾಗ ಕಾಲು ತೊಡ್ರು ಬಂದು ಓಡಕ್ಕಾಗ್ದೆ ನನ್ ಚಡ್ಡಿ ಪಿಟ್ಟಾಗಿ, ಎಡವಿ ಮಕಾಡೆ ಬಿದ್ದೆ. ನಾನ್ ಬಿದ್ದಿದ್ದು ನೋಡಿ, ಅವ್ವ ಹಿಂದೆನೆ ಓಡ್ ಬಂದು ಬಾಯಿಂದ ಬೆಳಲ್ಲಿ ಉಗುಳು ತಗ್ದು ತರ್ಚಿದ ಮಂಡಿಗೆ ಅಚ್ಚಿ ಒಂದೇ ಸಮ್ನೆ ಬೈತಿದ್ಲು. “ಈ ಪಾಪುರ್ ಸೂಳೆಮಗನಿಗೆ ಎಷ್ಟ್ ಬಡಕಂಡ್ರು ಹೇಳಿದ ಮಾತು ಕೇಳಲ್ಲ. ಇವ್ನುದು ಹಟವೇ ಹಟ. ನಾನೇ ಆಡು ಓಡಿಸ್ಕ್ಯಂಡು ಬರ್ತಿನಿ. ಆ ಚಡ್ಡಿ ಬಿಚ್ಚಿ ಹಳೆ ಚಡ್ಡಿ ಹಾಕ್ಯ ವೋಗು” ಅಂತ ಆಡ್ನಿಂದೆ ಅವ್ಳೆ ಓಡಿದ್ಲು.

ಹೊತ್ತು ಮುಳುಗೋ ಹೊತ್ತಿಗೆ ಆಡ್ ಮೇಯ್ಸ್ಕಂಡು ಮನೆಗ್ ಬಂದು ಆಡ್ ನೆರ್ಕೆ ಗೊಂತಿಗೆ ಕೂಡಿ, ದನಕರ ಕಟ್ಟಿ, ಅಡಿಗೆ ಮಾಡಿ, ಎಲ್ಲಾರಿಗೂ ಊಟ ಕೊಟ್ಟು ಮುಸ್ರೆ ತೊಳ್ದು ಅವ್ವ ಚಾಪೆ ಮೇಲೆ ಮನಿಕ್ಕಳಕೆ ಬಂದ್ಲು.

ನಾನು ಬೆಳದಿಂಗಳ ಬೆಳಕಲ್ಲಿ ಹಟ್ಟಿ ಬಾಗಲಲ್ಲಿ ಚಡ್ಡಿ ಹಿಡ್ಕಂಡು ಜಗ್ಲಿ ಮೇಲೆ ಕುಂತು, ಚುಕ್ಕಿಗುಳು ಎಣಿಸುವಾಗ, ಮೋಡಗುಳು ಚಂದ್ರನನ್ನ ಮುಚ್‌ತಿದ್ವು, ಚಂದ್ರ ನನ್ನ ಮಕ ಇಣುಕಿಇಣುಕಿ ನೋಡ್ತಿದ್ದ. ನಮ್ಮಪ್ಪ ಚಾಪೆಮೇಲೆ ಮಲಿಕಂಡು, “ಸೀಮೆಣ್ಣೆ ದೀಪ ತಲ್ದಿಂಬಿಂದ ದೂರ ಇಟ್ ಮನಿಕ್ಕಾ ಅಂತ ಅವ್ವನಿಗೆ ಹೇಳ್ತಿದ್ದು ನನ್ ಕಿವಿಗ್ ಕೇಳಿ, ವಳಿಕೆ ಕೈಯ್ಯಲ್ಲಿ ಚಡ್ಡಿ ಹಿಡ್ಕಂಡು ಬಂದು ಅವ್ನತ್ರ ಚಾಪೆ ಮೇಲೆ ಕುಂತೆ.

ಅವ್ವ ಕೌದಿ ಮಕದ್ಮೇಲೆ ಹೊಚ್ಕಂಡು ಆಗ್ಲೆ ಮಲ್ಗಿದ್ಲು. ಅವ್ವನ ಭುಜ ಅಲ್ಲಾಡಿಸಿ, “ಯವ್ವ ಯವ್ವ ಚೆಡ್ಡಿ ಯವ್ವ ಯವ್ವ ಚೆಡ್ಡಿ” ಅಂದೆ. ಅವ್ವ ಮಕದ್ಮೇಲೆನ ಕೌದಿ ತೆಗ್ದು “ನೆಮ್ದಿಯಾಗಿ ಮನಿಕಳ್ಳಕೆ ಬಿಡಲ್ಲ ಈ ಮುಂಡೆ ಮಗ, ಈ ಸರೊತ್ತಲ್ಲು ಸಾಯ್ತಾನೆ” ಅಂತ ಎದ್ದು ಎರಡು ಬೆನ್ನಿಗೆ ಗುದ್ದಿದ್ಲು. ನಮ್ಮಪ್ಪ ಆವತ್ತು ಸ್ವಲ್ಪ ಜಾಸ್ತಿನೆ ತಗಂಡಿದ್ರಿಂದ “ಲೇ ಇಷ್ಟೊತ್ನ್ಯಾಗೆ ಏನ್ಲ ನಿಂದು, ತಿಕಾ ಮುಚ್ಕಂಡು ಬಿದ್ಕ ಬಾ” ಅಂತ ಮನಿಕಂಡೆ ಗದ್ರಿದ್ ಕೇಳಿ, ಅವ್ವನ ಹೊಟ್ಟೆ ಸಂದಿಗೆ ಸೇರಿ ಸೆರಗು ವೊಚ್ಕಂಡು ಬಿಕ್ಳಿಸಿಬಿಕ್ಳಿಸಿ ಅತ್ತು ಮಕಾಡೆ ಮನಿಕಂಡೆ.

ಬೆಳಿಗ್ಗೆ ಸೂರ್ಯ ಹುಟ್ಟೋ ಮೊದ್ಲೆ ನಮ್ಮಪ್ಪೆದ್ದು ಆಡು-ದನಕರ ಆಚೆ ಕಟ್ಟಿ, ಅಕಾಶವಾಣಿ ರೇಡಿಯೋಲ್ ಬರ್ತಿದ್ದ ವೈಲೀನ್ ಕೂಯ್‌ತಿದ್ದ ಮ್ಯೂಸಿಕ್ ಹಾಕಿದ್ದ.

ಅರ್ಧಗಂಟೆ ಅವ್ರು ವೈಲೀನ್ ಕೂಯ್‌ತಿದ್ ಟೈಮಲ್ಲೆ ನಮ್ಮಪ್ಪ ನನ್ ಮಲಿಗಿದ್ ಜಾಗಕ್ಕೆ ಬಂದು, ಕಾಲಲ್ಲಿ ಒದ್ದೊದ್ದು “ಎದ್ದೇಳ್ಲ ಮ್ಯಾಕೆ, ಕಸ ಬಾಚಾಕು… ನೋಡೊಗು ಆ ಊರೊಳಗಿರೋ ಉತ್ತುಮರು ಮಕ್ಕಳನ್ನ, ಬೆಳಿಗ್ಗೆ ಎದ್ದು ಮಕ ತೊಳಕಂಡು ಹಣಿಗೆ ವಿಭೂತಿ ಪಟ್ಟೆ ಹೊಡ್ಕಂಡು ಎದ್ದೆಂಗೆ ಕೆಲಸ ಮಾಡ್ತಾರೆ ಮನೇಲಿ. ನೀನು ಇದಿಯಾ” ಅಂತ ಏದ್ದೇಳೊ ಮೊದ್ಲೆ ಉಗುದು ಉಪ್ಪಿನಕಾಯಿ ಹಾಕೋನು. ಎಚ್ಚರ ಇದ್ದು, ಅಪ್ಪ ವೊದ್ದು ಎಬ್ರುಸೋ ಹೊತ್ತಿಗೆ ರೇಡಿಯೋಲಿ ಸಂಸ್ಕೃತ ವಾರ್ತೆ ಶುರುವಾಗ್ತಿತ್ತು “ಸಂಸ್ಕೃತ ವಾರ್ತಾಃ ಶೂಯಂತಃ ಪ್ರವಾಜಕ ಬಲದಿವಾನಂದ ಸಾಗರಃ” ಅಂತ ಅವ್ರು ವಾರ್ತೆ ಓದ್ತಿರುವಾಗ, ಮಲಗಿದ್ದಲ್ಲೆ ನನ್ಗೆ ಚಡ್ಡಿ ನೆನಪಾಗಿ, ಉತ್ಸಾಹದಲ್ಲಿ ಎದ್ದು ಕಸ ಬಾಚಾಕಿ ಮಕ ತೊಕ್ಕಂಡು ಸ್ಕೂಲಿಗೆ ಹೊಗೋಕೆ ಅವಸ್ರ ಅವಸ್ರದಲಿ ರೆಡಿ ಆದೆ.

ಅವತ್ತು ಒಂದೇದಿನ ನನ್ಗ್ ನೆನ್ಪಿರೋಂಗೆ ಸ್ಕೂಲಿಗೆ ಹೊಗೋಕೆ ಅಷ್ಟೊಂದು ಉಮ್ಮಸ್ಸು ಬಂದಿದ್ದು; ಈ ಚಡ್ಡಿ ದೆಸೆಯಿಂದ. ಅವ್ವ ಎದ್ದು ಕಸ ಮುಸ್ರೆ ವೊಡ್ದು ರಾಗಿ ರೊಟ್ಟಿ ತಟ್ಟಿ ಕೊಟ್ಲು. ರಾತ್ರಿ ಉಳಿದಿದ್ ಬಸ್ಸಾರಲ್ಲೆ ತಿಂದು ಅವ್ವ ತ್ಯಾಪೆ ಹಾಕ್ಕೊಟ್ಟ ಹಸ್ರು ಚಡ್ಡಿ ಅದೆ ದೊಗಳೆ ಬಿಳಿ ಶರ್ಟ್ ಹಾಕ್ಕೊಂಡೆ. ಈಗ ತ್ಯಾಪೆ ಚಡ್ಡಿ ಪಿಟ್ಟಾಗಿ ದೊಗಳೆ ಅಂಗಿ ಒಳಗೆ ಮುಚ್ಚೋಗಿತ್ತು.

ನಮ್ಮಕ್ಕನ ಮಗಳು ನನ್ ಜೊತೆನೆ ಓದ್ತಿದ್ಳು. ಅವಳತ್ರ ಹೋಗಿ “ಅವ್ವ ಹೊಸ ಚಡ್ಡಿ ತಂದೈತೆ ನೋಡು” ಅಂತ ಮುಂದೆಯಿಂದ ಅಂಗಿ ಮೇಲೆತ್ತಿ ತೋರ್ಸಿದೆ. ಅವಳು ನನ್ ಹಿಂದೆ ಬಂದು ನೋಡಿ “ತ್ಯಾಪೆ ಆಕಯ್ತೆ ಮತ್ತೆ” ಅಂದ್ಲು. ನಮ್ಮವ್ವ ಮೇಲೆ ಸಿಟ್ಟ ಬಂದು ಏನೂ ಮಾತಾಡ್ದೆ ಸುಮ್ಮನೆ ಸ್ಕೂಲಿಗೆ ಹೊರಟೆ.

ಊರ್ ಮುಂದೆ ನಡೆದುಕೊಂಡು ಹೋಗುವಾಗ ಹಳ್ಳಿ ಮರದ್ ಕಟ್ಟೆ ಮೇಲೆ ಕೂತಿರೋರು ನೋಡ್ಲಿ ಅಂತ ಅಂಗಿ ಕೆಳಗಿನ ಎರಡು ಗುಂಡಿ ಬಿಚ್ಚಿ ಗಂಟ್ ಕಟ್ಟಿ, ಅಂಗಿನ ಹಿಂದಿನ ಬದಿಂದ ಕುಂಡಿ ಮುಚ್ಕಂಡೆ.

ದಿನ ಮಾತಾಡ್ತಿದ್ದೋರು ಅವತ್ತು ಏನು ಮಾತಾಡ್ದೆ ನಾನು ಹೊಗೋದ್ನೆ, ಕತ್ತು ತಿರಿಕ್ಯಂಡು ನನ್ನನ್ನೆ ಗಮನ್‌ಸ್ತಿದ್ರು.

ದಿನ ಬೆಲ್ ಹೊಡ್‌ದ್ಮೇಲೆ ಹೋಗ್ತಿದ್ದವನು, ಇವತ್ತು ಬೆಲ್‌ಗಿಂತ ಮುಕ್ಕಾಲಗಂಟೆ ಮುಂಚೆನೇ ಹೋಗಿದ್ದೆ; ಅಂಗಿನ ಮ್ಯಾಗ ಕಟ್ಟಿ ಸ್ಕೂಲಲ್ಲಿ ಎಲ್ಲಾರಿಗೂ ನನ್ ಚಡ್ಡಿ ತೋರ್ಸಬೇಕು ಅಂತ. ಸ್ಕೂಲ್ ಹತ್ರ ಬಂದೋನೆ ಅಂಗಿ ಮೇಲಿನ ಗುಂಡಿ ಬಿಚ್ಚಿ ಎರಡೂ ಕೈಲಿ ಭುಜದತ್ರ ಅಂಗಿ ಹಿಡಿದು ಹಿಂದೆ ಹಾಕ್ಕೊಂಡು, ನಾಕೆಜ್ಜೆ ನಡೆದೆ. ತಕ್ಷಣ ಅಂಗಿ ಕೆಳಗ್ ಬಂದು ಚಡ್ಡಿ ಮುಚ್ಚೋಗ್ತಿತ್ತು. ಸ್ಕೂಲ್ ಮೈದಾನದಲ್ಲಿ ಆಟ ಆಡೋ ಹುಡುಗ್ರತ್ರ ನಿಂತು ಹಿಂಗ್ ಮಾಡ್ತಾನೆ ಇದ್ದೆ.

ಅಂತೂ ಆಟ ಆಡೋ ಕ್ಲಾಸ್ ಹುಡುಗ್ರು ಗಮನ ನನ್ ಚಡ್ಡಿ ಕಡೆ ಬರೋ ಹಾಗೆ ಮಾಡ್ದೆ.

ಶಿವಸ್ವಾಮಿ ಅನ್ನೋ ಅಯ್ಯನೋರು ಹುಡುಗ ಆಟ ಆಡೋದು ನಿಲ್ಸಿ ನನ್ ಚಡ್ಡಿನೆ ದಿಟ್ಟಿಸಿ ನೋಡ್ತಿದ್ದ. ನನಗೆ ಭಯ ಶುರುವಾಗಿ ಎದೆ ಡವ ಡವ ಹೊಡ್ಕೊಂತಿತ್ತು.

ಅವನು ನನ್ ಹತ್ರಕ್ಕೆ ನಡ್ಕಂಡು ಬರ್ತಿದ್ದ; ನೋಡಿ ಜೀವ ಮಿಳ್ ಅನ್ನಾಂಗಾತು. ಏನ್ ಮಾಡ್ಬೇಕು ಅಂತ ತೋಚದೆ ಅವನನ್ನೆ ನೋಡ್ತಾ ನಿಂತ್ಕಂಡೆ.

ಎಲ್ಲ ಹುಡುಗುರ್ನು ಶಿವಸ್ವಾಮಿ ನನ್ ಹತ್ರ ಕರದ, ಜೂಟಾಟ ಆಡೋದ್ ನಿಲ್ಸಿ ಎಲ್ಲ ನನ್ ಕಡೆ ಬರ್ತಿದ್ರು.

ನಾನು ನಿಂತಿದ್ದವನು ಕುಕ್ರುಗಾಲಲ್ಲಿ ಕುಂತು, ಮಂಡಿ ಮ್ಯಾಲೆ ಬ್ಯಾಗ್ ಹಾಕ್ಕೊಂಡು ಚಡ್ಡಿ ಕಾಣದಂಗೆ ಅಂಗಿ ಮುಚ್ಕೊಂಡೆ. ಎಲ್ಲಾರೂ ನನ್ ಸುತ್ತ ನಿಂತು ತಿರ್ಗ್ತಾತಿರ್ಗ್ತಾ, ಬಗ್ಗಿಬಗ್ಗಿ ನೋಡಿ, “ಹೋಹೋ ಚಡ್ಡಿ ಹಾಕ್ಕೊಂಡು ಬಂದಿಯಾ ಇವತ್ತು ತೋರ್ಸು ತೋರ್ಸು” ಅಂತ ನನ್ನ ಎಳ್ದಾಡಿದ್ರು.

ಶಿವಸ್ವಾಮಿ ನನ್ನ ಭುಜದಮೇಲೆ ಹರ್ದೋದ ಅಂಗಿ ಹಿಡ್ದು ಮೇಲೆತ್ತಿ ಎಳ್ದ. ಅಂಗಿ ಅರ್ದುದ್ ಜಾಗದಲ್ಲೆ ಮತ್ತೆ ಜಾಸ್ತಿ ಅರ್ದು, ಅವ್ವ ಚಡ್ಡಿ ಹಾಕ್ಕೊಟ್ಟಿದ್ದ ತ್ಯಾಪೆ ಕಾಣಿಸಿ ಎಲ್ರು “ಹೊಸದಲ್ಲ ಇದು ತ್ಯಾಪೆ ತ್ಯಾಪೆ” ಅಂತ ಆಡಿಕೊಂಡು ನಗ್ತಿದ್ರು.

ನನ್ಗೂ ಅವ್ರು ನಗು ಮುಖ ನೋಡಿ ಭಯ ಕಡಿಮೆ ಆಗಿ ನಗ್ತಾ ನಿಂತಿದ್ದೆ.

“ಇದು ನನ್ನ ಚಡ್ಡಿ” ಅಂತ ಶಿವಸ್ವಾಮಿ ಎಲ್ಲಿ ಹುಡುಗರ ಮುಂದೆ ಹೇಳಿ ನನ್ ಮರ್ಯಾದಿ ಕಳಿತಾನೋ ಅನ್ನೊ ಭಯ ನನ್ಗಿತ್ತು.

ಆದರೆ ಅವರೆಲ್ಲ ತ್ಯಾಪೆ ತ್ಯಾಪೆ ಅಂತ ನಕ್ಕಾಗ, ನನ್ಗೇನು ಅವರ ನಗು ಹೊಸ್ದಾಗಿ ಇರ್ಲಿಲ್ಲ.

ಈ ಅವಮಾನ ದಿನ ಇದ್ದಿದ್ದೆ ಅಂತ ಅನಿಸಿ ನಾನು ಅವರೊಳಗೆ ಸೇರಿ ನಕ್ಕು ಕುಣಿದೆ.

ಆಗ ಸ್ಕೂಲಿನ ಬೆಲ್ ಹೊಡಿತು.

ಕೆ. ಚಂದ್ರಶೇಖರ
ನಟ, ಗಾಯಕ ಮತ್ತು ನಿರ್ದೇಶಕ. ಪಂಚಮಪದ, ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ಮುಂತಾದ ನಾಟಕಗಳಲ್ಲಿ ನಟಿಸಿ ಗಮನ ಸೆಳೆದಿರುವ ಚಂದ್ರು ಕಥಾ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...