ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಕೇರಳ ಮೂಲದ ಸ್ವತಂತ್ರ ಪತ್ರಕರ್ತ ರೆಜಾಝ್ ಎಂ ಶೀಬಾ ಸೈದಿಕ್ ವಿರುದ್ಧದ ಪ್ರಕರಣಗಳ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಹಿಸಿಕೊಂಡಿದೆ.
ಸೈದಿಕ್ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 38 ಮತ್ತು 39 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗುರುವಾರ (ಮೇ 15) ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಹಾರಾಷ್ಟ್ರ ಎಟಿಎಸ್ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ತಿಳಿಸಿದೆ.
ಹಿಝ್ಬುಲ್ ಮುಜಾಹಿದ್ದೀನ್, ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್), ಮತ್ತು ಸಿಪಿಐ (ಮಾವೋವಾದಿ) ಸೇರಿದಂತೆ ನಿಷೇಧಿತ ಸಂಘಟನೆಗಳೊಂದಿಗೆ ಸೈದಿಕ್ ಅವರಿಗೆ ಸಂಪರ್ಕವಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀಕ್ಷ್ಣ ವರದಿ ಮಾಡುವಿಕೆಗೆ ಹೆಸರುವಾಸಿಯಾದ ಮತ್ತು ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಡಿಎಸ್ಎ) ನೊಂದಿಗೆ ಸಂಬಂಧ ಹೊಂದಿರುವ ಸೈದಿಕ್ ಅವರನ್ನು ಮೇ 7 ರಂದು ನಾಗ್ಪುರದ ಲಕಡ್ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ನಂತರ ಬಂಧಿಸಲಾಗಿದೆ.
ಸೈದಿಕ್ ಭಾರತೀಯ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಮತ್ತು ಕಾನೂನುಬಾಹಿರ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಎಫ್‌ಐಆರ್‌ನಲ್ಲಿ ಅವರನ್ನು ಸಿಪಿಐ (ಮಾವೋವಾದಿ) ನ ಶಂಕಿತ ಸದಸ್ಯ ಎಂಬುವುದಾಗಿ ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಸೈದಿಕ್ ಬಂದೂಕುಗಳನ್ನು ಬಳಸುತ್ತಿದ್ದರು ಎಂದು ತೋರಿಸುವ ಫೋಟೋ ಪುರಾವೆ ತಮ್ಮ ಬಳಿ ಇವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸೈದಿಕ್ ಈಗ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 149 (ಸರ್ಕಾರದ ವಿರುದ್ಧ ಯುದ್ಧ ಮಾಡಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು), ಸೆಕ್ಷನ್ 192 (ಗಲಭೆಯನ್ನು ಪ್ರಚೋದಿಸುವ ಉದ್ದೇಶದಿಂದ ಪ್ರಚೋದನೆ) ಮತ್ತು ಸೆಕ್ಷನ್ 353 ರ ವಿವಿಧ ಸಬ್ ಕ್ಲಾಸ್‌ಗಳಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚುವರಿಯಾಗಿ, ಅವರ ವಿರುದ್ಧ ಮಾಹಿತಿ ಮತ್ತು ಗುಪ್ತಚರ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆ ಮುಂದುವರಿಸಲು ಸೈದಿಕ್ ಅವರನ್ನು ಪ್ರಾಸಿಕ್ಯೂಷನ್ 10 ದಿನಗಳ ಪೊಲೀಸ್ ಕಸ್ಟಡಿಗೆ ಕೋರಿತ್ತು. ಆದರೆ, ಮೇ 11 ರಂದು ಕೇರಳದಿಂದ ಸಂಗ್ರಹಿಸಲಾದ ಸಾಕ್ಷ್ಯಗಳಿಗೆ ಸಂಬಂಧಿಸಿದ ವಶಪಡಿಸಿಕೊಂಡ ದಾಖಲೆಗಳು ಮತ್ತು ಪಂಚನಾಮವನ್ನು ಸಲ್ಲಿಸಲು ವಿಫಲವಾದ ಮಹಾರಾಷ್ಟ್ರ ಪೊಲೀಸರನ್ನು ನ್ಯಾಯಾಲಯ ಟೀಕಿಸಿತ್ತು. ಎನ್‌ಐಎ ನ್ಯಾಯಾಲಯ ಮೇ 18 ರವರೆಗೆ ಕಸ್ಟಡಿಗೆ ನೀಡಿದೆ.
ಕೇರಳ ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಪದವಿ ಪಡೆದಿರುವ ರೆಜಾಝ್, ಮಕ್ತೂಬ್ ಮತ್ತು ಕೌಂಟರ್ ಕರೆಂಟ್ಸ್‌ನಂತಹ ಸ್ವತಂತ್ರ ಮಾಧ್ಯಮಗಳಿಗೆ ಕೆಲಸ ಮಾಡುತ್ತಿದ್ದರು. ಅವರ ವರದಿಗಳು ಪೊಲೀಸ್ ದೌರ್ಜನ್ಯ, ವ್ಯವಸ್ಥಿತ ತಾರತಮ್ಯ ಮತ್ತು ಭಾರತದಲ್ಲಿನ ಕೈದಿಗಳ ದುಃಸ್ಥಿತಿಯ ಮೇಲೆ ಕೇಂದ್ರೀಕರಿಸುತ್ತಿದ್ದವು.
ಪ್ರಸ್ತು ಮಹಾರಾಷ್ಟ್ರ ಎಟಿಎಸ್ ಪ್ರಕರಣದ ತನಿಖೆ ವಹಿಸಿಕೊಂಡಿದೆ. ಆರಂಭದಲ್ಲಿ ನಾಗ್ಪುರ ಪೊಲೀಸರು ತನಿಖೆ ಕೈಗೊಂಡು ಕೇರಳದಲ್ಲಿರುವ ರೆಜಾಝ್ ಮನೆಯಲ್ಲಿ ಶೋಧ ನಡೆಸಿದ್ದರು.
ಗುಜರಾತ್| ಪ್ರಮುಖ ದಿನಪತ್ರಿಕೆ ಮಾಲೀಕರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ


