ಏಕರೂಪ ನಾಗರಿಕ ಸಂಹಿತೆ ಜಾರಿ ಸರ್ಕಾರದ ಕಾರ್ಯಸೂಚಿಯ ಭಾಗವಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಗಳವಾರ ಹೇಳಿದ್ದು, ಎನ್‌ಡಿಎ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದರೂ ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಪ್ರಸ್ತಾವಿತ ಕಾಯ್ದೆ ಜಾರಿಗೆ ನೂತನ ಸರಕಾರ ಕೂಡ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿ, ಪದೋನ್ನತಿ ಮತ್ತು ವರ್ಗಾವಣೆ ಕುರಿತ ಅನುಸರಿಸಬೇಕಾದ ಪ್ರಕ್ರಿಯೆ ಕುರಿತು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಸಚಿವಾಲಯದಲ್ಲಿನ ಪ್ರಮುಖ ಹುದ್ದೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರ್ಜುನ್ ರಾಮ್ ಮೇಘವಾಲ್, ಸುಪ್ರೀಂಕೋರ್ಟ್, ಹೈಕೋರ್ಟ್ ಅಥವಾ ನಮ್ಮ ಸಚಿವಾಲಯ ಅಥವಾ ಅಧೀನ ನ್ಯಾಯಾಲಯಗಳಲ್ಲಿ ಎಲ್ಲೆಲ್ಲಿ ಹುದ್ದೆಗಳು ಖಾಲಿಯಿದ್ದರೂ, ನಾವು ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಪ್ರಯತ್ನಿಸುತ್ತೇವೆ. ಏಕಕಾಲಕ್ಕೆ ಚುನಾವಣೆ ವಿಚಾರವಾಗಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಅದರ ಬಗ್ಗೆ ನಾವು ನಂತರ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಉನ್ನತ, ಕೆಳ ಮತ್ತು ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿ ಖಾಲಿ ಹುದ್ದೆಗಳ ಸಮಸ್ಯೆಗಳನ್ನು ಪರಿಹರಿಸುವುದು ಮೇಘವಾಲ್ ಅವರ ಮುಂದಿರುವ ಪ್ರಮುಖ ಸವಾಲುಗಳಾಗಿವೆ.
ಸರ್ಕಾರವು ಸಂಸತ್ತಿನೊಂದಿಗೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ಐದು ಕೋಟಿಗೂ ಹೆಚ್ಚು ಪ್ರಕರಣಗಳು ನ್ಯಾಯಾಲಯಗಳಾದ್ಯಂತ ಬಾಕಿ ಉಳಿದಿವೆ. ಕೆಳ ನ್ಯಾಯಾಲಯಗಳು, 25 ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಒಟ್ಟು 5 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.
ಪ್ರಕರಣಗಳು ವಿಲೇವಾರಿ ವಿಳಂಬಕ್ಕೆ ವಿವಿಧ ಕಾರಣಗಳಿವೆ, ಇವುಗಳಲ್ಲಿ ನ್ಯಾಯಾಂಗದಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇರುವುದು ಕೂಡ ಒಂದು ಕಾರಣವಾಗಿದೆ.
ಏಕರೂಪ ನಾಗರಿಕ ಸಂಹಿತೆ:
ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮ ಜಾರಿಗೆ ತರುವುದು. ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ.
ಏಕರೂಪ ಎನ್ನುವುದು ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ಆಧಾರದ ಮೇಲೆ ಭಾರತೀಯ ಗಣರಾಜ್ಯವನ್ನು ಬಲಪಡಿಸುವ ಸಾಂವಿಧಾನಿಕ ಬದ್ಧತೆಯನ್ನು ಸೋಲಿಸುತ್ತದೆ.
2019ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಆಶ್ವಾಸನೆ ನೀಡಿತ್ತು. ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಬಿಜೆಪಿ ಹೇಳಿತ್ತು. ಒಂದು ವೇಳೆ ಈ ಕಾಯ್ದೆ ಜಾರಿಗೆ ಬಂದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರುವುದಿಲ್ಲ. ವೈಯಕ್ತಿಕ ಕಾನೂನು, ಸಿವಿಲ್ ಕಾನೂನುಗಳು ರದ್ದುಗೊಳ್ಳುತ್ತದೆ. ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾನೂನು ಹೀಗೆ ಆಯಾ ಧರ್ಮಕ್ಕೆ ಅವರದ್ದೇ ಆದ ಕಾನೂನು ಇದೆ. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ ಸೇರಿದಂತೆ ಹಲವು ಕಾನೂನುಗಳು ಹಿಂದೂಗಳಿಗೆ ಒಂದು ರೀತಿ ಇದ್ದರೆ, ಮುಸ್ಲಿಮರಿಗೆ ಮತ್ತೊಂದು ರೀತಿ ಇದೆ. ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ಬಂದರೆ ಇದು ಬದಲಾಗುತ್ತದೆ.
ಸಂವಿಧಾನದ ಆರ್ಟಿಕಲ್ 25 ಹಾಗೂ 28ರ ಅಡಿ ದೇಶದ ಯಾವುದೇ ಪ್ರಜೆಗೆ ತನ್ನ ಧಾರ್ಮಿಕ ಆಚರಣೆಗಳನ್ನು ಪಾಲಿಸಲು ಸಂವಿಧಾನ ಅವಕಾಶ ನೀಡುತ್ತೆ. ಒಂದು ವೇಳೆ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಜಾರಿ ಮಾಡಿದರೆ ವೈವಿಧ್ಯತೆಗೆ ಧಕ್ಕೆ ಬರಲಿದೆ.
ಇದನ್ನು ಓದಿ: ಮಹರಾಷ್ಟ್ರ: ಶಿಂಧೆ, ಅಜಿತ್ ಬಣದ 40 ಶಾಸಕರು ಘರ್ ವಾಪ್ಸಿ?


