ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕುರಿತ ಅವಹೇಳನಕಾರಿ ಕಾರ್ಟೂನ್ ಫಾರ್ವಡ್ ಮಾಡಿದ್ದಾರೆಂದು ಆರೋಪಿಸಿ ಮುಂಬೈನ ಕಂಡಿವಲಿ ನಿವಾಸಿಯಾದ ನಿವೃತ್ತ ನೌಕಾದಳ ಅಧಿಕಾರಿ ಮದನ್ ಶರ್ಮಾ(65) ಎಂಬುವವರ ಮೇಲೆ ಶಿವಸೇನೆ ಕಾರ್ಯಕರ್ತರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಈ ಕುರಿತು ಮದನ್ ಶರ್ಮಾರವರು ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಶಿವಸೇನೆಯ ಕಂಡಿವಲಿ ಶಾಖಾ ಪ್ರಮುಖ್ ಕಮಲೇಶ್ ಕದಮ್ ಸೇರಿದಂತೆ ಇತರ ಆರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಹಲ್ಲೆ ನಡೆಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 65 ವರ್ಷದ ಹಿರಿಯರ ಮೇಲಿನ ಹಲ್ಲೆಯನ್ನು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಚಿತ್ರನಟಿ ಸ್ವರ ಭಾಸ್ಕರ್ ಸೇರಿದಂತೆ ಹಲವರು ಟೀಕಿಸಿದ್ದಾರೆ.
ಘಟನೆಯ ವಿವರ:
ಮುಂಬೈನ ಕಂಡಿವಲಿ ನಿವಾಸಿಯಾದ ನಿವೃತ್ತ ನೌಕಾದಳ ಅಧಿಕಾರಿ ಮದನ್ ಶರ್ಮಾ(65) ತಮಗೆ ವಾಟ್ಸಾಪ್ ನಲ್ಲಿ ಬಂದಿದ್ದ (NCP ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕಾಲಿಗೆ ಬೀಳುತ್ತಿರುವ) ಚಿತ್ರವೊಂದನ್ನು ತಾವು ವಾಸಿಸುತ್ತಿರುವ ಹೌಸಿಂಗ್ ಸೊಸೈಟಿ ವಾಟ್ಸಾಪಿಗೆ ಫಾರ್ವಡ್ ಮಾಡಿದ್ದರು. ಅದು ಶಿವ ಸೇನಾ ಕಾರ್ಯಕರ್ತರ ಗಮನಕ್ಕೆ ಬಂದಿದ್ದು, ಕಂಡಿವಲಿ ಶಾಖಾ ಪ್ರಮುಖ್ ಕಮಲೇಶ್ ಕದಮ್ ಮದನ್ ಶರ್ಮಾರವರಿಗೆ ಫೋನ್ ಮಾಡಿ ತಮ್ಮ ಹೆಸರು ಮತ್ತು ವಿಳಾಸ ಕೇಳಿದ್ದಾರೆ. ನಂತರ ಅವರ ನಿವಾಸದ ಎದುರು ಬಂದು ಸ್ವಲ್ಪ ಮಾತನಾಡುವುದಿದೆ, ಹೊರಗೆ ಬನ್ನಿ ಎಂದು ಮದನ್ ಶರ್ಮಾರನ್ನು ಕರೆಸಿಕೊಂಡು ಹಲ್ಲೆ ನಡೆಸಲಾಗಿದೆ. ಹಲ್ಲೆಯಲ್ಲಿ ಶರ್ಮಾರವರ ಎರಡೂ ಕಣ್ಣುಗಳಿಗೆ ಹಾನಿಯಾಗಿದೆ.
ವೈರಲ್ ಆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪಾರ್ಟ್ ಮೆಂಟ್ ಗೇಟಿನಿಂದ ಒಳಕ್ಕೆ ಮದನ್ ಶರ್ಮಾ ಓಡಿ ಬರುತ್ತಾರೆ. ಹಿಂದಿನಿಂದ 8-10 ಜನ ನುಗ್ಗಿಬಂದು ಅವರನ್ನು ಹಿಡಿದು ಥಳಿಸುವ ಮತ್ತು ಹೊರಕ್ಕೆ ಎಳೆದೊಯ್ಯುವುದನ್ನು ನೋಡಬಹುದಾಗಿದೆ.
अभिनेत्री कंगना राणावत के कार्यालय की तोड़फोड़ करके अपनी मर्दानगी दिखाने वाले सत्ताधारी शिवसेना ने अब सत्ता के मद में एक बुजुर्ग भूतपूर्व नौसेना अधिकारी मदन शर्मा को मारपीट करते हुए उनकी आंख को जबरदस्त चोट पहुंचाई है। मुख्यमंत्री घरबैठे तानाशाही चला रहे है। pic.twitter.com/qF2NVcIN55
— Atul Bhatkhalkar (@BhatkhalkarA) September 11, 2020
ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮದನ್ ಶರ್ಮಾ “ಅದನ್ನು ಏಕೆ ಷೇರ್ ಮಾಡಿದೆ ಎಂದು ಕೇಳಿದರು. ನಾನು ನನಗೆ ಬಂದಿದ್ದ ಕಾರ್ಟೂನ್ ಒಂದನ್ನು ವಾಟ್ಸಾಪ್ ನಲ್ಲಿ ಷೇರ್ ಮಾಡಿದೆ ಅಷ್ಟೆ ಎಂದೆ. ಆದರೂ ನನ್ನ ಮಾತನ್ನು ಕೇಳದೆ ಕ್ರೂರವಾಗಿ ಥಳಿಸಿದರು. ಸ್ವಲ್ಪ ಸಮಯದ ನಂತರ ತಪ್ಪಿಸಿಕೊಂಡು ಮನೆಗೆ ಬಂದೆ” ಎಂದಿದ್ದಾರೆ.
ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ಮೇಲೆ ಉದ್ಧವ್ ಠಾಕ್ರೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
The attack on an elderly gentleman by the #ShivSena for a joke on @CMOMaharashtra @OfficeofUT is shocking, shameful & utterly condemnable. Violence of this kind has no place in a civilised democracy & you cannot claim good governance if basic law & order isn’t maintained. Shame!
— Swara Bhasker (@ReallySwara) September 11, 2020
ಸಿಎಂ ಉದ್ಧವ್ ಠಾಕ್ರೆಯವರ ಬಗೆಗಿನ ಜೋಕ್ ಫಾರ್ವಡ್ ಮಾಡಿದ್ದಕ್ಕೆ 65 ವರ್ಷದ ಹಿರಿಯರ ಮೇಲಿನ ಶಿವಸೈನಿಕರ ಹಲ್ಲೆ ಖಂಡನೀಯ. ನಾಗರೀಕ ಸಮಾಜದಲ್ಲಿ ಇಂತಹ ಹಿಂಸೆಗೆ ಅವಕಾಶವಿಲ್ಲವೆಂದು ನಟಿ ಸ್ವರ ಭಾಸ್ಕರ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ


