Homeಬಹುಜನ ಭಾರತಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ಭಾರತದ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಈಗಿನಷ್ಟು ಟೀಕೆ ಟಿಪ್ಪಣಿಗೆ ಗುರಿಯಾಗಿರುವಷ್ಟು ಕಳೆದ ಎಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಹಿಂದೆಂದೂ ಆಗಿರಲಿಲ್ಲ.

- Advertisement -
- Advertisement -

ಮೊನ್ನೆ ಆಗಸ್ಟ್ 31ರಂದು ರಾಜಸ್ತಾನದಲ್ಲಿನ ಅದಾನಿ ವಿದ್ಯುಚ್ಛಕ್ತಿ ಉತ್ಪಾದನಾ ಸ್ಥಾವರಕ್ಕೆ 8000 ಕೋಟಿ ರುಪಾಯಿಯ ಪರಿಹಾರ ನೀಡುವಂತೆ ಸುಪ್ರೀಮ್ ಕೋರ್ಟು ಆದೇಶ ನೀಡಿತು. ಸಂಬಂಧಪಟ್ಟ ನ್ಯಾಯಪೀಠದ ನೇತೃತ್ವ ವಹಿಸಿದ್ದವರು ನ್ಯಾಯಮೂರ್ತಿ ಅರುಣ್ ಮಿಶ್ರ.

ವಿದ್ಯುಚ್ಛಕ್ತಿ ದರಗಳ ಏರಿಕೆಯ ಮುಖಾಂತರ ಸಾವಿರಾರು ಕೋಟಿ ರುಪಾಯಿಗಳ ಈ ಮೊತ್ತವನ್ನು ಚುಕ್ತಾ ಮಾಡುವವರು ರಾಜಸ್ತಾನದ ಜೈಪುರ, ಜೋಧಪುರ ಹಾಗೂ ಅಜ್ಮೇರಿನ ಜನಸಾಮಾನ್ಯರು.

ಮಿಶ್ರ ಅವರು ಸೆಪ್ಟಂಬರ್ ಎರಡರಂದು ನಿವೃತ್ತಿ ಹೊಂದಿದರು. ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ನ್ಯಾಯಪೀಠಗಳು 2019ರ ಆರಂಭದಿಂದ ಮೊನ್ನೆಯ ತನಕ ಅದಾನಿ ಗ್ರೂಪ್ ಪರವಾಗಿ ತೀರ್ಪು ನೀಡಿ ಏಳನೆಯ ಖಟ್ಲೆ ಇದಾಗಿತ್ತು.

ಭಾರತದ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಈಗಿನಷ್ಟು ಟೀಕೆ ಟಿಪ್ಪಣಿಗೆ ಗುರಿಯಾಗಿರುವಷ್ಟು ಕಳೆದ ಎಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ಹಿಂದೆಂದೂ ಆಗಿರಲಿಲ್ಲ. ಆಳುವವರಿಗೆ ಮುಳ್ಳೆನಿಸುವ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳದೆ ಬದಿಗೆ ಸರಿಸುವುದೇ ಅಲ್ಲದೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಹೊರಬಿದ್ದ ತೀರ್ಪುಗಳೇ ಪ್ರಶ್ನಾರ್ಹ ಎನಿಸಿವೆ.

2018ರ ಜನವರಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದು ಇದೇ ಅಂಶವನ್ನು. ಸುಪ್ರೀಮ್ ಕೋರ್ಟ್ ಆಡಳಿತ ಕೊಳೆತಿದ್ದು, ದೇಶದಲ್ಲಿ ಜನತಂತ್ರ ಉಳಿಯಬೇಕೆಂದಿದ್ದರೆ ಅದನ್ನು ಸರಿಪಡಿಸಬೇಕು ಎಂದು ಹೇಳಿಕೆ ನೀಡಿದ್ದರು.

ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಯಾವ್ಯಾವ ನ್ಯಾಯಮೂರ್ತಿಗೆ ಯಾವ್ಯಾವ ಕೇಸುಗಳನ್ನು ವಿಚಾರಣೆಗೆ ಒಪ್ಪಿಸಬೇಕೆಂಬ ತೀರ್ಮಾನದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂಬ ಅಪಾದನೆಯನ್ನು ಈ ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದರು. ನ್ಯಾಯಾಲಯದ ಘನತೆ ಮಣ್ಣುಪಾಲಾಗುತ್ತದೆಂಬ ಕಾರಣದಿಂದ ವಿವರಗಳನ್ನು ಬಹಿರಂಗಗೊಳಿಸುತ್ತಿಲ್ಲ ಎಂದೂ ಸಾರಿದ್ದರು. ಈ ನಾಲ್ವರ ಪೈಕಿ ಒಬ್ಬರಾದ ರಂಜನ್ ಗೊಗೋಯ್ ಮುಖ್ಯ ನ್ಯಾಯಮೂರ್ತಿಯ ಹುದ್ದೆ ಏರಿದರು. ಆದರೆ ಅವರು ಮಿಶ್ರ ಅವರನ್ನೂ ಮೀರಿಸಿದ್ದು ಬಲು ದೊಡ್ಡ ವಿಡಂಬನೆ. ಗೊಗೋಯ್ ಮೇಲಿನ ಆಪಾದನೆಗಳು ದೀಪಕ್ ಮಿಶ್ರ ವಿರುದ್ಧ ಮಾಡಿದ್ದ ಆಪಾದನೆಗಳಿಗಿಂತ ಹೀನ ಸ್ವರೂಪದವು!

’ಅಧಿಕೃತ ತುರ್ತುಪರಿಸ್ಥಿತಿಯನ್ನು ಕೂಡ ಘೋಷಿಸದೆ ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತದ ಜನತಂತ್ರವನ್ನು ಹೇಗೆ ನಾಶ ಮಾಡಲಾಯಿತು ಎಂಬುದನ್ನು ಭವಿಷ್ಯತ್ತಿನಲ್ಲಿ ಇತಿಹಾಸಕಾರರು ಹೊರಳಿ ನೋಡಲಿದ್ದಾರೆ. ಆಗ ಅವರು ಈ ವಿನಾಶದಲ್ಲಿ ಸುಪ್ರೀಮ್ ಕೋರ್ಟಿನ, ಅದರಲ್ಲೂ ವಿಶೇಷವಾಗಿ ಕಳೆದ ನಾಲ್ವರು ಮುಖ್ಯನ್ಯಾಯಮೂರ್ತಿಗಳ ಪಾತ್ರವನ್ನು ರೇಖಾಂಕಿತಗೊಳಿಸಿ ಗುರುತಿಸುವರು. ತಮ್ಮ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ಕದ ಬಡಿಯುವ ನಾಗರಿಕರ ಪಾಲಿಗೆ ಸುಪ್ರೀಮ್ ಕೋರ್ಟನ್ನು ಲಾಕ್ ಡೌನ್ ಸ್ಥಿತಿಯಲ್ಲಿ ಇರಿಸಿ ಅವರಿಗೆ ನ್ಯಾಯವನ್ನು ನಿರಾಕರಿಸಿರುವ ಮುಖ್ಯ ನ್ಯಾಯಮೂರ್ತಿಯವರು ನಾಗಪುರದ ರಾಜಭವನದಲ್ಲಿ ಬಿಜೆಪಿ ನಾಯಕರೊಬ್ಬರ ಒಡೆತನದ 50 ಲಕ್ಷ ರು ಬೆಲೆ ಬಾಳುವ ಮೋಟರ್ ಸೈಕಲ್ಲನ್ನು ಏರಿ ಕುಳಿತಿದ್ದಾರೆ. ಮಾಸ್ಕ್ ಮತ್ತು ಹೆಲ್ಮೆಟ್ ಕೂಡ ಧರಿಸಿಲ್ಲ ಎಂಬ ಎರಡು ಟ್ವೀಟ್‌ಗಳಿಗಾಗಿ ಜನಪರ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರನ್ನು ಶಿಕ್ಷಿಸಲಾಗಿದೆ. ಶಿಕ್ಷಿಸಿದ್ದು ಕೂಡ ಅರುಣ್ ಮಿಶ್ರ ನೇತೃತ್ವದ ನ್ಯಾಯಪೀಠವೇ.

ಭೂಷಣ್ ಅವರ ಒಂದು ಟ್ವೀಟ್ ಸುಪ್ರೀಮ್ ಕೋರ್ಟಿನ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳನ್ನು ಕಟಕಟೆಯಲ್ಲಿ ನಿಲ್ಲಿಸುತ್ತದೆ. ಈ ನಾಲ್ವರ ಇಂಗಿತವರಿತು ಕಾರ್ಯನಿರ್ವಹಿಸಿದವರು ಎಂಬ ಅಭಿದಾನ ಅರುಣ್ ಮಿಶ್ರ ಅವರ ಸುತ್ತ ಸುತ್ತುವುದು ಕಂಡುಬರುತ್ತದೆ.


ಇದನ್ನೂ ಓದಿ: ಪ್ರಧಾನಿ ಮೋದಿ ಹೊಗಳಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ವರ್ತನೆಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಖಂಡನೆ.


ನ್ಯಾಯವಾದಿಯಾಗಿದ್ದ ಅರುಣ್ ಮಿಶ್ರ ಅವರನ್ನು 1999ರಲ್ಲಿ ಮಧ್ಯಪ್ರದೇಶದ ಹೈಕೋರ್ಟಿಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗುತ್ತದೆ. 2014ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುತ್ತಾರೆ.

ಅತಿ ಸೂಕ್ಷ್ಮಸ್ವರೂಪದ ಹಲವು ಪ್ರಕರಣಗಳನ್ನು ಮಿಶ್ರ ನೇತೃತ್ವದ ನ್ಯಾಯಪೀಠ ನಡೆಸುತ್ತದೆ. ಇಂತಿಂತಹ ವ್ಯಾಜ್ಯ-ಪ್ರಕರಣ-ಮೊಕದ್ದಮೆಯನ್ನು ಇಂತಿಂತಹ ನ್ಯಾಯಪೀಠವೇ ನಡೆಸಬೇಕೆಂದು ಅವುಗಳನ್ನು ಹಂಚಿಕೊಡುವ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳದು ಎಂಬುದನ್ನು ಇಲ್ಲಿ ಮತ್ತೊಮ್ಮೆ ನೆನೆಯುವುದು ಸೂಕ್ತ. 2015 ರಲ್ಲಿ ಗುಜರಾತಿನ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರ ಪ್ರಕರಣ ಮಿಶ್ರ ಅವರ ನ್ಯಾಯಪೀಠದ ಮುಂದೆ ಬರುತ್ತದೆ. ಅಂದಿನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು. ಗುಜರಾತ್ ಕೋಮುದಂಗೆಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂತಾದವರ ಪಾತ್ರವಿತ್ತೆಂದು ಆಪಾದಿಸಿದ್ದವರು ಭಟ್. ಅವರೀಗ ಜೈಲಿನಲ್ಲಿದ್ದಾರೆ. ತಮ್ಮ ಮೇಲೆ ಸಲ್ಲಿಸಲಾಗಿರುವ ಎಫ್.ಐ.ಆರ್‌ಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸುವಂತೆ ಭಟ್ ಸುಪ್ರೀಮ್ ಕೋರ್ಟ್ ಮೊರೆ ಹೋಗಿರುತ್ತಾರೆ. ನ್ಯಾಯಮೂರ್ತಿ ಮಿಶ್ರ ಅವರು ಈ ಮನವಿಯನ್ನು ತಳ್ಳಿಹಾಕಿ ತೀರ್ಪು ನೀಡುತ್ತಾರೆ.

ಗುಜರಾತ್ ಮತ್ತು ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಶಿವರಾಜಸಿಂಗ್ ಚೌಹಾಣ್ ಅವರಿಗೆ ನಿಧಿ ಸಂದಾಯವಾಗಿದೆ ಎಂದು ಸೂಚಿಸುವ ಕಾಗದಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಯಾಕೆ ಮುಚ್ಚಿಟ್ಟಿದೆ ಎಂಬುದಾಗಿ ಪ್ರಶ್ನಿಸಲಾದ ಸಹಾರಾ-ಬಿರ್ಲಾ ಡೈರಿಗಳ ಪ್ರಕರಣದ ವಿಚಾರಣೆಯೂ ಮಿಶ್ರ ಅವರ ಮುಂದೆ ಬರುತ್ತದೆ. ಪ್ರಶ್ನೆಯನ್ನು ಬದಿಗೊತ್ತಿ ತೀರ್ಪು ನೀಡಲಾಗುತ್ತದೆ.

ಗುಜರಾತಿನ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಅವರ ಕೊಲೆ ಪ್ರಕರಣವನ್ನು ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮರುತನಿಖೆ ನಡೆಸಬೇಕೆಂಬ ಪ್ರಶಾಂತ್ ಭೂಷಣ್ ಅವರ ಮನವಿಯನ್ನೂ ಮಿಶ್ರ ನ್ಯಾಯಪೀಠ ತಿರಸ್ಕರಿಸುತ್ತದೆ. ಅಷ್ಟೇ ಅಲ್ಲದೆ ಅರ್ಜಿದಾರರಿಗೆ 50 ಸಾವಿರ ರುಪಾಯಿಗಳ ದಂಡ ವಿಧಿಸುತ್ತದೆ.

ಸೊಹ್ರಾಬುದ್ದೀನ್ ಶೇಖ್ ಹುಸಿ ಎನ್ಕೌಂಟರ್ ಹತ್ಯೆ ಕುರಿತು ಅಮಿತ್ ಶಾ ಅವರ ಮೇಲಿನ ಆಪಾದನೆಗಳ ವಿಚಾರಣೆ ನಡೆಸುತ್ತಿದ್ದ ಅಧೀನ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ನಿಗೂಢ ಮರಣದ ಪ್ರಕರಣವನ್ನು ಸ್ವತಂತ್ರ ತನಿಖೆಗೆ ವಹಿಸುವಂತೆ ಅರ್ಜಿಗಳನ್ನು ಸಲ್ಲಿಸಲಾಗಿರುತ್ತದೆ. 2018ರ ಜನವರಿ 11ರಂದು ಈ ಅರ್ಜಿಗಳು ವಿಚಾರಣೆಗೆ ಬಂದಿರುತ್ತವೆ. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಈ ಅರ್ಜಿಗಳ ವಿಚಾರಣೆಯನ್ನು ಅರುಣ್ ಮಿಶ್ರ ನ್ಯಾಯಪೀಠಕ್ಕೆ ಒಪ್ಪಿಸಿರುತ್ತಾರೆ. ಮರುದಿನ ಈ ಅರ್ಜಿಗಳ ವಿಚಾರಣೆ ನಡೆಯಬೇಕಿರುತ್ತದೆ. ಈ ಹಂತದಲ್ಲೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸುತ್ತಾರೆ. ದೇಶದ ಮೇಲೆ ಮತ್ತು ಸುಪ್ರೀಮ್ ಕೋರ್ಟ್ ಮೇಲೆ ದೂರಗಾಮಿ ಸಾಧಕ ಬಾಧಕಗಳನ್ನು ಹೊಂದಿದ ಕೇಸುಗಳನ್ನು ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಕಾರ್ಯಕಾರಣ ನೀಡದೆ ತಮಗೆ ಬೇಕಾದ ನ್ಯಾಯಪೀಠಗಳಿಗೆ ಒಪ್ಪಿಸುತ್ತಾರೆ ಎಂಬ ಆಪಾದನೆಯನ್ನೂ ಈ ನಾಲ್ವರು ನ್ಯಾಯಮೂರ್ತಿಗಳು ಅಂದು ಮಾಡಿದ್ದರು. ಲೋಯಾ ಕೇಸನ್ನು ಅರುಣ್ ಮಿಶ್ರ ಪೀಠಕ್ಕೆ ಒಪ್ಪಿಸಿದ್ದೇ ಈ ಟೀಕೆಯ ಹಿಂದಿನ ಪ್ರಚೋದನೆ ಎಂದು ವ್ಯಾಖ್ಯಾನಿಸಲಾಗಿತ್ತು. ಈ ಆಪಾದನೆಯ ಹಿನ್ನೆಲೆಯಲ್ಲಿ ಲೋಯಾ ಕೇಸನ್ನು ತಮ್ಮ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಿಕೊಂಡರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ. ಸ್ವತಂತ್ರ ತನಿಖೆಯ ಅಹವಾಲನ್ನು ತಳ್ಳಿಹಾಕಿದರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿದ್ದ ನ್ಯಾಯಮೂರ್ತಿ ಗೊಗೋಯ್ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ. ತಮ್ಮ ಮೇಲೆ ಬಂದ ಲೈಂಗಿಕ ಕಿರುಕುಳದ ಆಪಾದನೆಯ ಮೊಕದ್ದಮೆಯ ವಿಚಾರಣೆಗೆ ಅವರು ನೆಚ್ಚುವುದು ಈ ಹಿಂದೆ ತಾವು ಗುರಿಯಿಟ್ಟಿದ್ದ ಅರುಣ್ ಮಿಶ್ರ ಅವರನ್ನೇ.

ಅದಾನಿ ಕಂಪನಿಗಳಿಗೆ ಸಂಬಂಧಿಸಿದ ನಾಲ್ಕು ಕೇಸುಗಳನ್ನು ಅರುಣ್ ಮಿಶ್ರ ನ್ಯಾಯಪೀಠಕ್ಕೇ ಒಪ್ಪಿಸಿರುವ ಕುರಿತು ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ 2009ರ ಆಗಸ್ಟ್ ತಿಂಗಳಲ್ಲೇ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು ದೂರಿದ್ದರು.

ವನ್ಯಜೀವಿ ಸಂರಕ್ಷಣೆಯ ಹೆಸರಿನಲ್ಲಿ 18 ಲಕ್ಷ ಜನರನ್ನು ಅಡವಿಗಳಿಂದ ಒಕ್ಕಲೆಬ್ಬಿಸುವ ಆದೇಶವೊಂದನ್ನು ಮಿಶ್ರ ನೇತೃತ್ವದ ನ್ಯಾಯಪೀಠ 2019ರ ಜನವರಿಯಲ್ಲಿ ನೀಡಿತ್ತು. ಹಾಹಾಕಾರದ ಹಿನ್ನೆಲೆಯಲ್ಲಿ ಈ ಆದೇಶವನ್ನು ತಡೆಹಿಡಿಯಬೇಕಾಯಿತು. ರೇಲ್ವೆ ಹಳಿಗಳ ಇಬ್ಬದಿಯಲ್ಲಿರುವ ೪೮ ಸಾವಿರ ಕೊಳೆಗೇರಿ ವಸತಿಗಳನ್ನು ಕಾಲಮಿತಿಯೊಳಗಾಗಿ ಖಾಲಿ ಮಾಡಿಸುವಂತೆಯೂ ಈ ಕೆಲಸದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಸಲ್ಲದು ಎಂಬ ಆದೇಶವನ್ನೂ ಮಿಶ್ರ ಹೊರಡಿಸಿದ್ದರು.

ಇಂತಹ ನಿದರ್ಶನಗಳು ಇನ್ನೂ ಹಲವಾರು. ಈ ಪೈಕಿ ಕಟ್ಟಕಡೆಯವು ಅದಾನಿ ಕಂಪನಿಗೆ ಎಂಟು ಸಾವಿರ ಕೋಟಿ ರುಪಾಯಿಯ ಪರಿಹಾರ ಮತ್ತು ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆಂದು ನೀಡಿದ ಆದೇಶಗಳು.

ಅರುಣ್ ಮಿಶ್ರ ಅವರು ಪ್ರಧಾನಿ ಮೋದಿಯವರನ್ನು Versatile Genius (ಬಹುಮಖ ಮೇಧಾವಿ) ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಹೊಗಳಿದ್ದರು. ನ್ಯಾಯಪೀಠದಲ್ಲಿ ಕುಳಿತವರು ಬಹಿರಂಗವಾಗಿ ಇಂತಹ ಟಿಪ್ಪಣಿಗಳನ್ನು ಮಾಡುವುದು ಸರ್ವಥಾ ಸಲ್ಲದು.

ಇತಿಹಾಸ ಎಲ್ಲರಿಗಿಂತ ದೊಡ್ಡ ನ್ಯಾಯಾಧೀಶ. ಅದರ ಮುಂದೆ ಅತಿರಥ ಮಹಾರಥರೂ ಕಾಲಾನುಕ್ರಮದಲ್ಲಿ ಕೈಕಟ್ಟಿ ಕಟಕಟೆಯಲ್ಲಿ ನಿಲ್ಲಬೇಕಾದೀತು – ಸಜೀವವಾಗಿ ಇಲ್ಲವೇ ಮರಣೋತ್ತರವಾಗಿ..


ಇದನ್ನೂ ಓದಿ; ನಿವೃತ್ತಿಯಾದ ನ್ಯಾಯಮೂರ್ತಿ ಅರುಣ್ ಮಿಶ್ರಾರವರ 5 ವಿವಾದಿತ ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...