ಉನ್ನತ ಅಧಿಕಾರದ ಹುದ್ದೆಗೇರಿದ ಠಾಕ್ರೆ ಕುಟುಂಬದ ಮೊದಲಿಗರಾದ ಉದ್ಧವ್ ಠಾಕ್ರೆ ಮಹಾರಾಷ್ಟ್ರದ 19ನೇ ಸಿಎಂ ಆಗಿ ಇಂದು ಸಂಜೆ 6.44ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಅಲ್ಲಿಗೆ ಇಂದಿನಿಂದ ಠಾಕ್ರೆ ಸರ್ಕಾರ್ ಶುರುವಾಗಲಿದ್ದು ಅವರ ಸಚಿವ ಸಂಪುಟದಲ್ಲಿ ಎನ್‌ಸಿಪಿ ಮುಖಂಡರಾದ ಛಗನ್ ಭುಜ್ಬಾಲ್, ಜಯಂತ್ ಪಾಟೀಲ್ ಶಿವಸೇನೆಯ ಏಕ್‌ನಾಥ್ ಸಿಂಧೆ ಮತ್ತು ಸುಭಾಶ್ ದೇಸಾಯಿ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಬಾಲಾಸಾಹೇಬ್ ಥೋರತ್, ಹಾಗೂ ನಿತಿನ್ ರಾವತ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರ ವಿಕಾಸ್ ಅಘಾಡಿ ಹೆಸರಿನಲ್ಲಿ ಸರ್ಕಾರ ರಚನೆಯಾಗಲಿದ್ದು ಉಪಮುಖ್ಯಮಂತ್ರಿಗಳು ಯಾರಾಗಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. 9000 ಚದರ ಅಡಿಗಳ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಅದೇ ಜಾಗದಲ್ಲಿ ದಿವಂಗತ ಬಾಳ್ ಠಾಕ್ರೆಯವರು 1966 ರಲ್ಲಿ ಶಿವಸೇನೆ ಸ್ಥಾಪಿಸಿದ್ದರು. ಮತ್ತು ಅವರ ಸಮಾಧಿ ಕೂಡ ಅಲ್ಲಿಯೇ ಇದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಸಮಾರಂಭರಲ್ಲಿ ಭಾಗವಹಿಸಿ ಉದ್ಧವ್ ಠಾಕ್ರೆಯ ಕೈಕುಲುಕಿ ಶುಭಾಶಯ ತಿಳಿಸಿದ್ದಾರೆ. ಇದು ಒಂದು ವಾರದಿಂದ ನಡೆದ ಕಹಿ ಘಟನೆಗಳನ್ನು ಒಂದಷ್ಟು ಕಡಿಮೆ ಮಾಡಿತ್ತು.
ಎನ್‌ಸಿಪಿಯ ಛಗನ್ ಭುಜ್ಬಾಲ್ ಜ್ಯೋತಿ ಬಾ ಫುಲೆ, ಶಾಹು ಮಹರಾಜ್, ಅಂಬೇಡ್ಕರ್ ಮತ್ತು ಸಾವಿತ್ರಿ ಬಾಯಿ ಫುಲೆಯ ಹೆಸರಿನಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್; ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್; ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಧ್ಯಪ್ರದೇಶದ ಸಿಎಂ ಕಮಲ್ ನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉದ್ಧವ್ ಠಾಕ್ರೆ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಕ್ಕಾಗಿ ರಾಹುಲ್ ಗಾಂಧಿ ಗುರುವಾರ ವಿಷಾದ ವ್ಯಕ್ತಪಡಿಸಿದ್ದಾರೆ. “ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕಾರಣವಾದ ಘಟನೆಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪೂರ್ವನಿದರ್ಶನವನ್ನು ನೀಡಿವೆ. ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಬಿಜೆಪಿಯ ಪ್ರಯತ್ನವನ್ನು ಸೋಲಿಸಲು ಮಹಾರಾಷ್ಟ್ರ ವಿಕಾಸ್ ಅಘಾಡಿ ಒಗ್ಗೂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಮಹಾರಾಷ್ಟ್ರದ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಮೈತ್ರಿ ಸರ್ಕಾರ ಅವರಿಗೆ ಸ್ಥಿರ, ಜಾತ್ಯತೀತ ಮತ್ತು ಬಡವರ ಪರವಾದ ಸರ್ಕಾರವನ್ನು ಒದಗಿಸುತ್ತದೆ ಎಂದು ನನಗೆ ವಿಶ್ವಾಸವಿದೆ ” ಎಂಬ ರಾಹುಲ್ ಗಾಂಧಿಯವರ ಪತ್ರವನ್ನು ಓದಲಾಗಿದೆ.


