ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿರುವ ಕೊಚ್ಚಿನ್ ಶಿಪ್ ಯಾರ್ಡ್‌ನ ಇಬ್ಬರು ನೌಕರರನ್ನು ಉಡುಪಿ ಪೊಲೀಸರು ಗುರುವಾರ (ನವೆಂಬರ್ 20) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯ ರೋಹಿತ್ ಮತ್ತು ಸಂತ್ರಿ ಬಂಧಿತ ಆರೋಪಿಗಳು. ಇವರು ಸುಷ್ಮಾ ಮೆರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಒಪ್ಪಂದದ ಮೇಲೆ ಕೆಲಸ ಮಾಡುತ್ತಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಈ ಇಬ್ಬರು ಆರೋಪಿಗಳು ಕಳೆದ 18 ತಿಂಗಳಿಗೂ ಹೆಚ್ಚು ಸಮಯದಿಂದ ಶಿಪ್‌ಯಾರ್ಡ್ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಮಾಹಿತಿಗಳಲ್ಲಿ ಭಾರತೀಯ ನೌಕಾಪಡೆಗಾಗಿ ಮತ್ತು ಖಾಸಗಿ ಗ್ರಾಹಕರಿಗಾಗಿ ನಿರ್ಮಿಸಲಾದ ಹಡಗುಗಳ ವಿವರಗಳು ಸೇರಿವೆ. ಈ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳಿಗೆ ಕಳುಹಿಸಿ, ಬದಲಾಗಿ ಹಣ ಪಡೆದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ಔಪಚಾರಿಕ ದೂರು ದಾಖಲಿಸಿದ ನಂತರ ಆರೋಪಿಗಳ ಬಂಧನವಾಗಿದೆ. ಪೊಲೀಸರು ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳು ರವಾನಿಸಿದ ಮಾಹಿತಿಯು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
ಬಂಧಿತರ ಹಿಂದೆ ದೊಡ್ಡ ಜಾಲವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಕೂಡ ತನಿಖೆಯ ಭಾಗವಾಗುವ ಸಾಧ್ಯತೆ ಇದೆ. ತನಿಖೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.


