ಮಹಿಳೆಯೊಬ್ಬರ ಮನೆಗೆ ನುಗ್ಗಿ ಅವರನ್ನು ಚುಡಾಯಿಸಿದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದ ಕೇರಳದ ಕಾರ್ಮಿಕರೊಬ್ಬರು ಕಸ್ಟಡಿಯಲ್ಲಿ ಸಾವನ್ನಪ್ಪಿದ (ಲಾಕ್ ಅಪ್ ಡೆತ್) ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಭಾನುವಾರ (ನ. 10) ನಡೆದಿದೆ.
ಮೃತರನ್ನು ಕೇರಳದ ಕೊಲ್ಲಂ ಮೂಲದ ಬಿಜು ಮೋಹನ್ (42) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕೇವಲ ಮೂರು ದಿನಗಳ ಹಿಂದೆಯಷ್ಟೇ ಇಲ್ಲಿಗೆ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಬಿಜು ಶನಿವಾರ (ನ.9) ರಾತ್ರಿ ಮದ್ಯ ಕುಡಿದು ಚೇರ್ಕಾಡಿ ಗ್ರಾಮದ ಸೂರೆಬೆಟ್ಟಿನಲ್ಲಿ ಮಹಿಳೆಯೊಬ್ಬರ ಮನೆಗ ನುಗ್ಗಿ, ಅವರನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಹೋದ ಪೊಲೀಸರು, ಬಿಜು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ಲಾಕ್ ಅಪ್‌ನಲ್ಲಿದ್ದ ಅವರು, ಮುಂಜಾನೆ 3.45ರ ಸುಮಾರಿಗೆ ಗೋಡೆಗೆ ತಲೆ ಬಡಿದುಕೊಂಡಿರುವುದು ಪೊಲೀಸರು ಗಮನಕ್ಕೆ ಬಂದಿದೆ. ಪೊಲೀಸರು ತಕ್ಷಣ ಅವರನ್ನು ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಬಿಜು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಉಡುಪಿ ಎಸ್ಪಿ ಡಾ.ಕೆ ಅರುಣ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬಿಜು ಅವರ ಸಾವಿನ ಕುರಿತು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಅವರು ಕೊಲ್ಲಂನಿಂದ ಬರುತ್ತಿದ್ದಾರೆ. ಕುಟುಂಬಸ್ಥರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಿಜು ಅವರದ್ದು ಲಾಕ್ ಅಪ್ ಡೆತ್ ಆಗಿರುವುದರಿಂದ ಕಾನೂನು ಪ್ರಕಾರ ಸಿಐಡಿ ತನಿಖೆ ನಡೆಯಲಿದೆ. ಮರಣೋತ್ತರ ಪರೀಕ್ಷೆಯನ್ನು ಎರಡು ತಂಡಗಳು ನೆರವೇರಿಸಲಿದ್ದು, ಅದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ : ವಿರೋಧ ಲೆಕ್ಕಿಸದೆ ದೇಗುಲ ಪ್ರವೇಶಿಸಿದ ದಲಿತರು; ದೇವರನ್ನೇ ಹೊರತಂದ ಸವರ್ಣೀಯರು


