ಉಭಯ ದೇಶಗಳ ಸಂಘರ್ಷದಲ್ಲಿ ರಷ್ಯಾ ಸೇನೆ ಪರ ಹೋರಾಡುತ್ತಿದ್ದ ಭಾರತೀಯ ಪ್ರಜೆಯನ್ನು ಸೆರೆಹಿಡಿದಿರುವುದಾಗಿ ಉಕ್ರೇನ್ ಮಂಗಳವಾರ (ಅ.7) ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಉಕ್ರೇನ್ ಸಶಸ್ತ್ರ ಪಡೆಗಳ 63ನೇ ಯಾಂತ್ರಿಕೃತ ಬ್ರಿಗೇಡ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಗುಜರಾತ್‌ನ ಮೋರ್ಬಿ ನಿವಾಸಿ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಅವರು ಮಾತನಾಡುವ ವಿಡಿಯೋ ಬಿಡುಗಡೆ ಮಾಡಿದೆ.
ಹುಸೇನ್ ಅವರು ರಷ್ಯಾದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಹೋಗಿದ್ದರು ಎಂದು ವರದಿಗಳು ಹೇಳಿವೆ.
ಉಕ್ರೇನ್ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ರಷ್ಯನ್ ಭಾಷೆಯಲ್ಲಿ ಮಾತನಾಡಿರುವ ಹುಸೇನ್, “ನಾನು ಅಧ್ಯಯನ ನಿಮಿತ್ತ ರಷ್ಯಾಗೆ ಹೋಗಿದ್ದೆ. ಅಲ್ಲಿ ಮಾದಕ ವಸ್ತು ಸಂಬಂಧಿತ ಆರೋಪದಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ನನಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅದರಿಂದ ತಪ್ಪಿಸಿಕೊಳ್ಳಲು ಬಯಸಿದರೆ ರಷ್ಯಾ ಸೇನೆ ಪರ ಹೋರಾಡುವ ಒಪ್ಪಂದಕ್ಕೆ ಸಹಿ ಹಾಕಲು ನನಗೆ ಹೇಳಲಾಯಿತು. ನನಗೆ ಜೈಲ್ಲಿನಲ್ಲಿ ಇರಲು ಇಷ್ಟ ಇರಲಿಲ್ಲ. ಆದ್ದರಿಂದ ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ” ಎಂದು ಹೇಳಿದ್ದಾರೆ.
“16 ದಿನಗಳ ತರಬೇತಿಯ ನಂತರ ಅಕ್ಟೋಬರ್ 1ರಂದು ಮೊದಲ ಬಾರಿಗೆ ನನ್ನನ್ನು ಸೇನೆ ಜೊತೆ ಹೋರಾಡಲು ಕಳುಹಿಸಿದರು. ಮೂರು ದಿನಗಳ ಕಾಲ ನಾನು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೆ. ನನ್ನ ಕಮಾಂಡರ್ ಜೊತೆಗಿನ ವಾಗ್ವಾದದ ನಂತರ ಉಕ್ರೇನ್ ಸೇನೆಗೆ ಶರಣಾದೆ” ಎಂದು ಹುಸೇನ್ ತಿಳಿಸಿದ್ದಾರೆ.
“ನಾನು ರಷ್ಯಾ ಸೇನೆ ಪರ ಹೋರಾಡಲು ಬಂದಿದ್ದ ವೇಳೆ ಎರಡರಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಉಕ್ರೇನ್ ಸೇನೆಯ ಜಾಗವನ್ನು ಕಂಡೆ. ತಕ್ಷಣ ನಾನು ರೈಫಲ್ ಕೆಳಗಿಟ್ಟು ನಾನು ಹೋರಾಡಲು ಬಯಸುವುದಿಲ್ಲ ಎಂದು ಹೇಳಿದೆ. ನನಗೆ ಸಹಾಯ ಬೇಕು. ನಾನು ರಷ್ಯಾಕ್ಕೆ ಹಿಂತಿರುಗಲು ಬಯಸುವುದಿಲ್ಲಎಂದೆ” ಎಂದು ಹುಸೇನ್ ವಿಡಿಯೋದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಭಾರತೀಯ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಷ್ಯಾ ಸೇನೆಗೆ ಇತ್ತೀಚೆಗೆ ನೇಮಕ ಮಾಡಿಕೊಂಡಿರುವ 27 ಭಾರತೀಯ ಪ್ರಜೆಗಳನ್ನು ತಕ್ಷಣ ಬಿಡುಗಡೆ ಮಾಡಿ ತಾಯ್ನಾಡಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾಗಿ ಸೆಪ್ಟೆಂಬರ್‌ನಲ್ಲಿ ಭಾರತ ಸರ್ಕಾರ ಹೇಳಿಕೊಂಡಿತ್ತು. ಇದಾಗಿ ಕೆಲ ದಿನಗಳಲ್ಲಿ ವಿದ್ಯಾರ್ಥಿಯ ಶರಣಾಗತಿ ಸುದ್ದಿ ಬಂದಿದೆ.
ಯುವಜನರನ್ನು ಉದ್ಯೋಗದ ಆಮಿಷವೊಡ್ಡಿ ರಷ್ಯಾಗೆ ಕಳುಹಿಸಿ, ಅಲ್ಲಿ ಶಸ್ತ್ರಾಸ್ತ ಕೊಟ್ಟು ಯುದ್ದ ಭೂಮಿಗೆ ಕಳುಹಿಸುವ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಕನಿಷ್ಠ 15 ಭಾರತೀಯರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿ ಅವರನ್ನು ರಷ್ಯಾ ಮಿಲಿಟರಿಯೊಂದಿಗೆ ಹೋರಾಡಲು ಒತ್ತಾಯಿಸಲಾಗುತ್ತಿದೆ ಎಂದು ಸೆಪ್ಟೆಂಬರ್‌ನಲ್ಲಿ ದಿ ಹಿಂದೂ ಪತ್ರಿಕೆ ವರದಿ ಮಾಡಿತ್ತು.
ವಿದ್ಯಾರ್ಥಿ ಉಕ್ರೇನ್ ಸೇನೆಗೆ ವಿದ್ಯಾರ್ಥಿ ಶರಣಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಣಧೀರ್ ಜೈಸ್ವಾಲ್, “ಆಮಿಷಗಳಿಗೆ ಬಲಿಯಾಗಿ ರಷ್ಯಾದ ಸೇನೆಗೆ ಸೇರುವುದು ಅಪಾಯಕಾರಿ” ಎಂದಿದ್ದಾರೆ.
ರಷ್ಯಾದ ಸಶಸ್ತ್ರ ಪಡೆಗಳಲ್ಲಿ 127 ಭಾರತೀಯ ನಾಗರಿಕರಿದ್ದರು. ಅವರಲ್ಲಿ 98 ಜನರನ್ನು ಮಿಲಿಟರಿಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಉಭಯ ರಾಷ್ಟ್ರಗಳ ಸರ್ಕಾರಗಳ ನಡುವಿನ ಮಾತುಕತೆಯ ಪರಿಣಾಮವಾಗಿ ಅವರು ಭಾರತಕ್ಕೆ ಮರಳಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಜುಲೈನಲ್ಲಿ ರಾಜ್ಯಸಭೆಗೆ ತಿಳಿಸಿತ್ತು.
ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಪ್ರಕಾರ, ರಷ್ಯಾದ ರಕ್ಷಣಾ ಸಚಿವಾಲಯವು 2024 ರ ಏಪ್ರಿಲ್‌ನಿಂದ ಭಾರತೀಯರನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಆದರೆ, ಸೈನಿಕ ಸೇವೆಗೆ ಸಂಬಂಧಿಸಿದ ಕಾಂಟ್ರಾಕ್ಟ್‌ಗಳು ಹಲವಾರು ಭಾರತೀಯರ ಬಿಡುಗಡೆಯನ್ನು ವಿಳಂಬಗೊಳಿಸಿವೆ.
ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಪ್ರಾರಂಭಿಸಿದ್ದು, ಈಗಲೂ ನಡೆಯುತ್ತಿದೆ. ಇದು ಎರಡನೇ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ನಡೆಯುತ್ತಿರುವ ಅತ್ಯಂತ ಮಾರಕ ಸಂಘರ್ಷವಾಗಿದೆ.
ಮೇರಿ ಬ್ರಂಕೋವ್, ಫ್ರೆಡ್ ರಾಮ್ಸ್‌ಡೆಲ್, ಶಿಮೊನ್ ಸಕಾಗುಚಿ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ