ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿನ ಅಸ್ಪೃಶ್ಯತೆ ಆಚರಣೆ ಖಂಡಿಸಿ ನಡೆದ ಬೃಹತ್ ‘ಉಳ್ಳೇರಹಳ್ಳಿ ಚಲೋ’ ಹೋರಾಟ ಯಶಸ್ವಿಯಾಯಿತು. ಯಾವ ಗುಜ್ಜಕೋಲು ಮುಟ್ಟಿದ್ದಕ್ಕಾಗಿ ದಂಡ ವಿಧಿಸಲಾಗಿತ್ತೊ ಅದೇ ಗುಜ್ಜಕೋಲನ್ನು ತಂದು ದೇವಾಲಯದ ಧ್ವಜಕ್ಕೆ ಕಟ್ಟುವ ಮೂಲಕ ಪ್ರತಿರೋಧ ದಾಖಲಿಸಲಾಗಿದೆ.
ದೇವಾಲಯ ಪ್ರವೇಶಕ್ಕಾಗಿ ಅಲ್ಲ, ಬದಲಿಗೆ ಘನತೆ ಮತ್ತು ಸ್ವಾಭಿಮಾನಕ್ಕಾಗಿ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ನಡೆದ ಹೋರಾಟದಲ್ಲಿ ಜೈಭೀಮ್ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಕೋಲಾರದ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಬಾಲಕನಿಗೆ ದಂಡ ವಿಧಿಸಿದ್ದನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸಾವಿರಾರು ಜನ 'ಉಳ್ಳೇರಹಳ್ಳಿ' ಚಲೋ ನಡೆಸಿದರು.#JaiBhim #Untouchability #Casteism pic.twitter.com/KjuFB8x3HY
— Yallappa K G (@Yallappa_yuvraj) September 25, 2022
ಜಿಲ್ಲೆಯ 5 ಸಾವಿರಕ್ಕೂ ಹೆಚ್ಚು ದಲಿತ ಹೋರಾಟಗಾರರು ಸೇರಿ ಟೇಕಲ್ ರೈಲು ನಿಲ್ದಾಣದಿಂದ ಮೆರವಣಿಗೆ ಆರಂಭಿಸಿ ಉಳ್ಳೇರಹಳ್ಳಿಯ ಸಂತ್ರಸ್ತ ದಲಿತ ಕುಟುಂಬವನ್ನು ಭೇಟಿ ಮಾಡಲಾಯಿತು. ದಾರಿಯುದ್ದಕ್ಕೂ ಜೈ ಭೀಮ್ ಘೋಷಣೆ ಮೊಳಗಿಸಿದ ಕಾರ್ಯಕರ್ತರು ಜಾತಿಪದ್ದತಿ, ಆಸ್ಪೃಶ್ಯತೆ ವಿರುದ್ಧ ಕಿಡಿಕಾರಿದರು. ಆನಂತರ ಭೂತಮ್ಮನ ದೇವಾಲಯ ಎದುರು ಜಮಾವಣೆಗೊಂಡ ಹೋರಾಟಗಾರರು ಘೋಷಣೆ ಮೊಳಗಿಸಿ ಮುತ್ತಿಗೆ ಹಾಕಿದರು.
ಆನಂತರ ದೇವಾಲಯ ಪ್ರವೇಶಿಸಿದ ದಲಿತ ಮುಖಂಡರು ಗುಜ್ಜಕೋಲು ತಂದು ದೇವಾಲಯದ ಧ್ವಜಕ್ಕೆ ಕಟ್ಟಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು.
ಇಂದಿಗೂ ಜಾರಿಯಲ್ಲಿರುವ ಅಸ್ಫೃಶ್ಯತೆ ಮತ್ತು ಜಾತಿಪದ್ದತಿಯನ್ನು ತೊಡೆದುಹಾಕಲು ದೀರ್ಘ ಹೋರಾಟ ಮಾಡಬೇಕಿದೆ. ಅದರೊಟ್ಟಿಗೆ ದಲಿತರೊಳಗೆ ಇರುವ ಜಾತಿಪದ್ದತಿಯನ್ನು ಸಹ ತೊಡೆದುಹಾಕಬೇಕು. ಎಲ್ಲಿಯೇ ಜಾತಿ ದೌರ್ಜನ್ಯ ಅನ್ಯಾಯ ನಡೆದರೂ ಸಹ ದಲಿತರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೋರಾಟಗಾರರು ಕರೆ ನೀಡಿದರು.
ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಸಮುದಾಯದ ಜನರಿಗೂ ಪ್ರವೇಶವಿದೆ ಎಂಬು ಬೋರ್ಡ್ ಹಾಕುವುದನ್ನು ಕಡ್ಡಾಯ ಮಾಡಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಸ್ಪೃಶ್ಯತೆಯ ವಿರುದ್ಧ ಅರಿವು ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಜಾಪರಿವರ್ತನ ವೇದಿಕೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸೇವಾ ಸಮಿತಿ, ದಲಿತ ಹಕ್ಕುಗಳ ಸಮಿತಿ ಸೇರಿದಂತೆ ಹತ್ತಾರು ಸಂಘಟನೆಗಳು ಜೊತೆಗೂಡಿದ್ದವು. ಪಿಚ್ಚಳ್ಳಿ ಶ್ರೀನಿವಾಸ್, ವಿಜಯ್ ಕುಮಾರ್, ಬಿ.ಗೋಪಾಲ್, ಸಂದೇಶ್, ನಾರಾಯಣಸ್ವಾಮಿ, ಡಾ.ಅರಿವು ಶಿವಪ್ಪ, ಆಂಜಿನಪ್ಪ, ಎ.ಕೆ ವೆಂಕಟೇಶ್, ಹೆಬ್ಬಾಲೆ ವೆಂಕಟೇಶ್, ಮುನಿಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ; ದಲಿತ ಬಾಲಕ ದೇವರು ಮುಟ್ಟಿದ ಪ್ರಕರಣ: ಮನೆಯಲ್ಲಿ ದೇವರ ಫೋಟೋ ಇದ್ದ ಜಾಗದಲ್ಲಿ ಈಗ ಅಂಬೇಡ್ಕರ್ ಭಾವಚಿತ್ರ


