ಹಿಂದೂ ರಾಷ್ಟ್ರದ ಪ್ರತಿಪಾದಕರು ಆರಂಭಿಸಿರುವ ಹಲವಾರು ಸೂಕ್ಷ್ಮ ಸೋಷಿಯಲ್ ಇಂಜಿನಿಯರಿಂಗ್ ಕಾರ್ಯಕ್ರಮಗಳಲ್ಲಿ ಒಂದೆಂದರೆ, ಸಂಸ್ಕೃತವನ್ನು ಮತ್ತೆ ಚಲಾವಣೆಗೆ ತರುವುದು. ಯಹೂದಿಗಳು ಹೀಬ್ರೂ ಭಾಷೆಯನ್ನು ಮರಳಿ ಜೀವಂತಗೊಳಿಸಬಹುದಾದರೆ, ಹಿಂದೂಗಳು ಮತ್ತೆ ಸಂಸ್ಕೃತವನ್ನು ಜೀವಂತಗೊಳಿಸಲು ಯಾಕೆ ಸಾಧ್ಯವಿಲ್ಲ ಎಂದು ಅವರು ಹೇಳುವುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಹೀಬ್ರೂ ಭಾಷೆಯ ಪುನರುತ್ಥಾನದ ಮುಂಚೂಣಿಯಲ್ಲಿದ್ದ, 19ನೇ ಶತಮಾನದ ಕೊನೆಯ ಭಾಗದಲ್ಲಿ ಆ ಅಭಿಯಾನದ ನಾಯಕತ್ವ ವಹಿಸಿದ್ದ ಎಲೈಝರ್ ಬೆನ್-ಯಹೂದ ಎಂಬವರು ಅವರಿಗೆ ಸ್ಫೂರ್ತಿ. ಆದರೆ, ಅವರಿಗೆ ಕಾಣದ ಅಂಶವೆಂದರೆ, ಹೀಬ್ರೂ ಪುನರುತ್ಥಾನ ಚಳವಳಿ ಹುಟ್ಟಿಕೊಂಡಾಗ ಯುರೋಪಿನಲ್ಲಿ ಯಹೂದಿ ವಿರೋಧಿ ಭಾವನೆ (ಸೆಮೆಟಿಕ ವಿರೋಧಿ) ವ್ಯಾಪಕವಾಗಿತ್ತು ಎಂಬುದು. ಪುನರುತ್ಥಾನದ ಪ್ರಯತ್ನಗಳು ಆರಂಭವಾಗುವ ಹೊತ್ತಿಗೆ ಹೀಬ್ರೂ ಭಾಷೆಯು ಇತಿಹಾಸದಲ್ಲಿ ತನ್ನ ಓಟವನ್ನು ಮುಗಿಸಿತ್ತು ಮತ್ತು ಬಹಳ ಹಿಂದೆಯೇ ಮರೆವಿಗೆ ಸರಿದಿತ್ತು. ಗ್ರೀಕ್, ಲ್ಯಾಟಿನ್, ಅರೇಬಿಕ್, ತಮಿಳು ಮತ್ತು ಹೀಬ್ರೂವಿನಂತೆಯೇ ಸಂಸ್ಕೃತ ಕೂಡಾ ಅತ್ಯಂತ ದೀರ್ಘಾಯುಷ್ಯ ಹೊಂದಿದ್ದ ಭಾಷೆ. ಪ್ರಾಚೀನ ಜಗತ್ತಿನಲ್ಲಿ ಈ ಭಾಷೆಗಳು ಬಹುತೇಕ ಒಂದೇ ಕಾಲದಲ್ಲಿ ಹುಟ್ಟಿಬಂದವುಗಳು. ಅರೇಬಿಕ್, ಗ್ರೀಕ್ ಮತ್ತು ತಮಿಳು ಇನ್ನೂ ಜೀವಂತವಾಗಿ ಉಳಿದಿದ್ದರೆ, ಲ್ಯಾಟಿನ್ ಮತ್ತು ಸಂಸ್ಕೃತ ಅವನತಿ ಹೊಂದುತ್ತಾ, ಹಲವಾರು ಆಧುನಿಕ ಭಾಷೆಗಳಾಗಿ ಕವಲೊಡೆದವು. ತಮ್ಮ ಪುಣ್ಯಭೂಮಿ- ಅಂದರೆ ಧಾರ್ಮಿಕ ಪರಂಪರೆಯ ಭೂಮಿಯನ್ನು ಮರಳಿ ಪಡೆಯುವ ಬಯಕೆಯು ಯಹೂದಿಗಳ ವಿಷಯದಲ್ಲಿ ಸ್ವಲ್ಪಮಟ್ಟಿನ ಸಮರ್ಥನೆಯನ್ನು ಹೊಂದಿತ್ತು. ಯಾಕೆಂದರೆ, ಅವರು ಐತಿಹಾಸಿಕವಾಗಿ ದೀರ್ಘಕಾಲದ ತನಕ ಗಡಿಪಾರಾದಂತೆ ಅಲೆದಾಡುತ್ತಿದ್ದವರು. ಲ್ಯಾಟಿನ್ ಮಾತನಾಡುವವರ ವಿಷಯದಲ್ಲಿ ಅದು ಹಾಗಿರಲಿಲ್ಲ. ಆದುದರಿಂದ ಲ್ಯಾಟಿನ್ ಪುನರುತ್ಥಾನದ ಕುರಿತು ಇದೇ ರೀತಿಯ ಬಯಕೆ ಅಥವಾ ಸೆಳೆತ ಇರಲಿಲ್ಲ. ಲ್ಯಾಟಿನ್ ಭಾಷೆಯ ಅವನತಿಯ ನಂತರದಲ್ಲಿ ಲ್ಯಾಟಿನ್ ಜಗತ್ತು ಹಲವಾರು ಆಧುನಿಕ ಭಾಷೆಗಳು ಹುಟ್ಟಿ ಅರಳುವುದಕ್ಕೆ ಸಾಕ್ಷಿಯಾಯಿತು ಮತ್ತು ವಿಜ್ಞಾನ ಮತ್ತು ಉದ್ಯಮಶೀಲತೆಯ ಮೂಲಕ ಉಳಿದ ಜಗತ್ತಿನ ನಾಯಕತ್ವ ವಹಿಸಿತು. ಹೀಬ್ರೂ ಪುನರುತ್ಥಾನದ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾ, ಭಾರತದಲ್ಲಿ ಅದನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಧೋರಣೆಗಳಿಗೆ ಮೂಲವನ್ನಾಗಿಸಿಕೊಳ್ಳುವುದು ಐತಿಹಾಸಿಕ ಸಂದರ್ಭವನ್ನು ದಾರಿತಪ್ಪಿಸುತ್ತದೆ, ಮತ್ತು ಇದು ಪ್ರತಿಗಾಮಿತ್ವದ ಕಡೆಗೆ ಸಾಗುವುದಕ್ಕೆ ಸಮನಾಗಿರುತ್ತದೆ.
ಸಂಸ್ಕೃತದ ಕುರಿತು ಹಿಂದೂ ರಾಷ್ಟ್ರದ ಪ್ರತಿಪಾದಕರು ಸಮರ್ಥಿಸಲಾಗದ ಹಲವಾರು ದಾವೆಗಳನ್ನು ಮಾಡುತ್ತಿದ್ದಾರೆ. ಇವುಗಳಲ್ಲಿ ಒಂದೆಂದರೆ, ಅದು ಆಧುನಿಕ ವಿಜ್ಞಾನದ ಬೆಳವಣಿಗೆಗಳನ್ನು ಮುಂಗಾಣುವ ಎಲ್ಲಾ ಜ್ಞಾನವನ್ನು ಹೊಂದಿದೆ ಎಂಬುದು. ಈ ಭಾಷೆಯ ಬೌದ್ಧಿಕ ಸಾಧನೆಗಳ ಹೊರತಾಗಿಯೂ, ಈ ದಾವೆಯು ಪರಿಶೀಲನೆಯ ಪರೀಕ್ಷೆಯ ಎದುರು ಗಟ್ಟಿಯಾಗಿ ನಿಲ್ಲುವುದಿಲ್ಲ. ಒಂದು ಭಾಷೆಯನ್ನು ಜನರು ತಮ್ಮ ಕೆಲಸದಲ್ಲಿ, ತಮ್ಮ ವ್ಯಾಪಾರದಲ್ಲಿ, ತಮ್ಮ ಬೌದ್ಧಿಕ ವಿನಿಮಯಗಳಲ್ಲಿ, ತಮ್ಮ ಸಾಮಾಜಿಕ ಕೊಡುಕೊಳ್ಳುವಿಕೆಯಲ್ಲಿ ಬಳಸುತ್ತಾ ಇದ್ದರೆ, ಅದು ಪ್ರಸ್ತುತವಾಗಿ ಉಳಿಯುತ್ತದೆ. 121 ಕೋಟಿ ಜನರಲ್ಲಿ ಸಂಸ್ಕೃತ ಮಾತನಾಡುವ 24,000+ ಜನರು ಮಾತ್ರವೇ ಇದ್ದರು ಎಂದು 2011ರ ಜನಗಣತಿಯು ತೋರಿಸುತ್ತದೆ. 2021ರ ಜನಗಣತಿಯು ವಿಳಂಬವಾಗಿರುವುದರಿಂದ ಸಂಸ್ಕೃತ ಮಾತನಾಡುವ ಜನರ ಸಂಖ್ಯೆ ನಾಟಕೀಯವಾಗಿ ಹೆಚ್ಚಿದೆಯೇ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚಲಾವಣೆಯಲ್ಲಿರುವ, ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿರುವ ಅನಾಮಧೇಯ ಮನವಿಯೊಂದು ಎಲ್ಲಾ ಹಿಂದೂಗಳು ತಮ್ಮ ಮಾತೃಭಾಷೆ ಸಂಸ್ಕೃತ ಎಂದು ಹೇಳಿಕೊಳ್ಳಬೇಕು; ಇಲ್ಲದಿದ್ದರೆ, ಸಾರ್ವಜನಿಕ ಅನುದಾನವು ವಿದೇಶಿ ಭಾಷೆಗಳ (ಪರ್ಶಿಯನ್ ಮತ್ತು ಅರೇಬಿಕ್ ಎಂದು ಓದಿಕೊಳ್ಳಿ) ಪಾಲಾಗುತ್ತದೆ ಎಂದು ತಿಳಿಸುತ್ತದೆ. ಹೀಗಿದ್ದರೂ ಭಾರತದ ಜನಸಂಖ್ಯೆಯಲ್ಲಿ ಸಂಸ್ಕೃತವನ್ನು ಸಮರ್ಥವಾಗಿ ಬಳಸಬಲ್ಲ ಜನರ ಸಂಖ್ಯೆಯು ತೀರಾ ನಗಣ್ಯ ಎಂದು ಹೇಳಲು ಯಾರಿಗೂ ಯಾವುದೇ ಜನಗಣತಿ ಬೇಕಾಗಿಲ್ಲ.
ಪುರಾತನ ಭಾಷೆಯಾದ ಸಂಸ್ಕೃತ ಮತ್ತು ಇನ್ನೂ ಜೀವಿಸುತ್ತಿರುವ ಭಾಷೆಯಾದ ತಮಿಳು ಉಜ್ವಲವಾದ ಇತಿಹಾಸ ಹೊಂದಿರುವ ಕುರಿತು ಸಂಶಯವಿಲ್ಲ. ಹೊಸ ಮತ್ತು ಸಂಯುಕ್ತ ಪದಗಳನ್ನು ಹುಟ್ಟುಹಾಕುವ ತನ್ನ ಭಾಷಿಕ ಸಾಮರ್ಥ್ಯದಿಂದಾಗಿ ಸಂಸ್ಕೃತವು ಹೇಗೋ ಬದುಕಿ ಉಳಿಯಲು ಶಕ್ತವಾಗಿತ್ತು. ಒಂದು ಪದದ ಮುಂದೆ ಮತ್ತು ಹಿಂದೆ ಒಂದು ಅಕ್ಷರವನ್ನು ಜೋಡಿಸುವುದರ ಮೂಲಕ, ಅಂದರೆ ವಿಭಕ್ತಿ ಮತ್ತು ಪೂರ್ವ ವಿಭಕ್ತಿಗಳ ಮೂಲಕ ಸಮಾನಾರ್ಥಕ ಮತ್ತು ವಿರೋಧಾತ್ಮಕ ಪದಗಳನ್ನು ಹುಟ್ಟುಹಾಕುವ ಅಸಾಧಾರಣವಾದ ಸರಳತೆಯನ್ನು ಅದು ಹೊಂದಿತ್ತು. ಸಂಸ್ಕೃತದಲ್ಲಿ ಒಂದು ಪದಕ್ಕೆ ಕೇವಲ ’ಅ’ ಅಥವಾ ’ನ’ ಅಥವಾ ’ಅನ್’ ಎಂಬ ಧ್ವನಿಯನ್ನು ಸೇರಿಸುವುದರಿಂದಲೇ ಲೆಕ್ಕವಿಲ್ಲದಷ್ಟು ವಿರೋಧಪದಗಳನ್ನು ಮತ್ತು ಲಾಕ್ಷಣಿಕ ಅರ್ಥಗಳನ್ನು ಸೃಷ್ಟಿಸಬಹುದು. ಸಂಸ್ಕೃತದ ಈ ಉತ್ಪಾದನಾ ಸಾಮರ್ಥ್ಯವೇ ಅದನ್ನು ದೀರ್ಘಕಾಲ ಬದುಕಿ ಭೌಗೋಳಿಕವಾಗಿ ಸುಲಭವಾಗಿ ಹರಡುವುದಕ್ಕೆ ಕಾರಣವಾಯಿತು. ಹಾಗಿದ್ದರೂ, ಹರಡುವಿಕೆಯು ಸಂಪೂರ್ಣವಾಗಿ ಅದರ ಭಾಷಾ ಸಂರಚನೆಯ ಕಾರಣದಿಂದ ಆಗಿರಲಿಲ್ಲ. ಪ್ರಾಚೀನ ಇತಿಹಾಸದಲ್ಲಿ ತಿರುವು ನೀಡಿದ ಅಂಶಗಳೆಂದರೆ, ತಾಮ್ರದ ಬಳಕೆ, ಕುದುರೆಗಳನ್ನು ಪಳಗಿಸಲು ಕಲಿತದ್ದು, ಚಕ್ರಗಳಿಂದ ಓಡುವ ಗಾಡಿಗಳ ಸಹಾಯದಿಂದ ಪ್ರಾಚೀನ ಯುರೇಷಿಯನ್ ಸ್ಟೆಪ್ಪಿ ಹುಲ್ಲುಗಾವಲುಗಳ ಜನರು ದಕ್ಷಿಣ ಮತ್ತು ಪಶ್ಚಿಮಕ್ಕೆ ವಲಸೆಹೋಗಲು ಸಾಧ್ಯಮಾಡಿದ್ದು; ಈ ಪ್ರಕ್ರಿಯೆಯಲ್ಲಿ ’ಪ್ರೊಟೋ-ಇಂಡೋ-ಯುರೋಪಿಯನ್’ ಎಂದು ಕರೆಯಲಾಗುವಂತದ್ದು ಇಂಡೋ-ಯುರೋಪಿಯನ್, ಇಂಡೋ-ಇರಾನಿಯನ್ ಮತ್ತು ಇಂಡಿಕ್ ಭಾಷಾ ಗುಂಪುಗಳಾಗಿ ಕವಲೊಡೆಯಿತು. ಇಂಡಿಕ್ ಎಂಬುದಕ್ಕೆ ನಂತರ ಸಂಸ್ಕೃತ ಎಂದು ಹೆಸರಾಯಿತು. ಅದರ ಅತ್ಯಂತ ಹಳೆಯ ರೂಪವು ’ಅವೆಸ್ತಾ’ದ ಭಾಷೆಗೆ ಸಂಬಂಧಿಯಾಗಿದೆ. ಅವೆಸ್ತಾದಲ್ಲಿ ಬಳಸಲಾಗಿರುವ ಇಂದ್ರ, ಮಿತ್ರ, ವರುಣ, ಹೋಮ ಮುಂತಾದ ಕನಿಷ್ಟ 380 ಶಬ್ದಗಳು ಋಗ್ವೇದದಲ್ಲಿಯೂ ಕಂಡುಬರುತ್ತವೆ. ಪುರಾತನ ಭಾಷೆಗಳ ಹರಡುವಿಕೆಯು ಕ್ರಿಸ್ತಪೂರ್ವ ಎರಡನೇ ಸಹಸ್ರಮಾನದ ಹೊತ್ತಿಗೆ ಪ್ರಪಂಚದಲ್ಲಿ ಆಗುತ್ತಿದ್ದ ಭೌತಿಕ ಬದಲಾವಣೆಗಳ ಪರಿಣಾಮವಾಗಿ ಆಯಿತು. ಪಶ್ಚಿಮ ಮತ್ತು ದಕ್ಷಿಣ ಏಷ್ಯಾದಲ್ಲಿ ರಾಜಪ್ರಭುತ್ವಗಳ ಅತ್ಯಂತ ಹಳೆಯ ರೂಪವು ಹುಟ್ಟಿಬರುತ್ತಿದ್ದ ಕಾಲಘಟ್ಟ ಇದಾಗಿತ್ತು.
ಸಂಸ್ಕೃತವು ಬರುವ ಮೊದಲು ಭಾರತದಲ್ಲಿ ಮಾತನಾಡಲಾಗುತ್ತಿದ್ದ ಭಾಷೆಗಳು ನಂತರ ಅದರೊಂದಿಗೆ ನಿರಂತರವಾಗಿ ಒಡನಾಡಿದವು. ಈ ಒಡನಾಟದಿಂದ ಪ್ರಾಕೃತದ ಹೊಸರೂಪವಲ್ಲದೇ ಆಪಭ್ರಂಶ ಇತ್ಯಾದಿ ವಿಧಗಳು ಹುಟ್ಟಿಕೊಂಡವು. ಈ ಒಡನಾಟವು ಕ್ರಿ.ಶ ಎರಡನೇ ಶತಮಾನದವರೆಗೂ ಮುಂದುವರಿಯುತ್ತಾ ಬಂತು. ಸಂಸ್ಕೃತ ಅವನತಿ ಹೊಂದಿ, ಆಧುನಿಕ ಭಾರತೀಯ ಭಾಷೆಗಳಿಗೆ ದಾರಿ ಮಾಡಿಕೊಟ್ಟಿತು. ಹತ್ತನೇ ಶತಮಾನದ ಹೊತ್ತಿಗೆ ಸಂಸ್ಕೃತವನ್ನು ಬಳಸುತ್ತಿದ್ದ ಬರಹಗಾರರು ಪ್ರಜ್ಞಾಪೂರ್ವಕವಾಗಿ ದ್ವಿಭಾಷಾ ಮಾದರಿಯನ್ನು ಬಳಸುವುದನ್ನು ನಾವು ಕಾಣಬಹುದು. ಒಂಬತ್ತು/ಹತ್ತನೇ ಶತಮಾನದ ರಾಜಶೇಖರನು ತನ್ನ ಕಾಲ್ಪನಿಕ ನಾಟಕಗಳನ್ನು ಮಹಾರಾಷ್ಟ್ರ-ಪ್ರಾಕೃತದ ಹಳೆಯ ರೂಪದಲ್ಲಿ ಬರೆದ. ಆದರೆ, ಅವನ ಇತರ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ. ಹನ್ನೊಂದನೇ ಶತಮಾನದ ನಂತರದಲ್ಲಿ ಭಾರತವು ಸಂಸ್ಕೃತವನ್ನು ಬಲ್ಲ, ಆದರೆ, ಬರವಣಿಗೆಗೆ ತಮ್ಮ ಸ್ವಂತ ಭಾಷೆಯನ್ನು ಬಳಸಿದ ಬರಹಗಾರರನ್ನು ಹೊಂದಿತ್ತು.
ಹದಿನಾರನೇ ಶತಮಾನದ ಹೊತ್ತಿಗೆ ಮರಾಠಿ ಕವಿ ಏಕನಾಥ ಸಂಸ್ಕೃತಕ್ಕೆ ಎದುರಾಗಿ ನಿಂತು, “ಸಂಸ್ಕೃತವನ್ನು ದೇವರು ಸೃಷ್ಟಿಸಿದ್ದಾದರೆ, ಮರಾಠಿಯನ್ನು ಕಳ್ಳರು ಸೃಷ್ಟಿಸಿದ್ದೆ?” ಎಂದು ಕೇಳುತ್ತಾನೆ. ಜೀವನದ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಂಸ್ಕೃತವು ಆಧಿಪತ್ಯ ನಡೆಸುತ್ತಿದ್ದ ಇಡೀ ಪ್ರದೇಶಗಳಲ್ಲಿ ಇಂತದ್ದು ನಡೆಯುತ್ತಿತ್ತು. ಹನ್ನೊಂದನೇ ಶತಮಾನದ ತನಕ ಸಂಸ್ಕೃತವು ಎಲ್ಲಾ ವೈಭವವನ್ನು ಅನುಭವಿಸಿತ್ತು. ನಂತರದಲ್ಲಿ ಆದರ ಸ್ಥಾನವನ್ನು ಅಸ್ಸಾಮಿಯಾ, ಬಾಂಗ್ಲಾ, ಮರಾಠಿ, ಗುಜರಾತಿ, ಕಾಶ್ಮೀರಿ, ಒಡಿಯಾ ಮತ್ತು ಈಗಿನ ಹಿಂದಿಯ ಹಳೆಯ ರೂಪಗಳು- ಮುಂತಾದ ಆಧುನಿಕ ಭಾಷೆಗಳು ಪಡೆದುಕೊಂಡವು.
ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಂತೆ ಸಂಸ್ಕೃತವೂ ಮಹಾನ್ ಭಾಷೆಯಾಗಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಸಂಸ್ಕೃತದ ಮಹಾನ್ ಪರಂಪರೆಯ ಬಗ್ಗೆ ಹೆಮ್ಮೆಪಡುವುದಕ್ಕೆ ಕಾರಣಗಳಿವೆ. ಆದರೆ, ಮಿತಿಮೀರಿದ ಹೆಮ್ಮೆಯು, ಅದರಲ್ಲೂ ಸಂಸ್ಕೃತವು ವರ್ಣ ವ್ಯವಸ್ಥೆಯ ಗುಣಲಕ್ಷಣಗಳಲ್ಲಿ ಒಂದಾದ ಕಾರಣದಿಂದ ಸಮಾಜದ ಬಹುದೊಡ್ಡ ಜನವಿಭಾಗವನ್ನು ಶಿಕ್ಷಣದಿಂದ ವಂಚಿತಗೊಳಿಸಿತು ಎಂಬುದನ್ನು ಕಾಣದೇಹೋದಾಗ- ಅದು ’ಅವಿವೇಕ’ವಾಗಿ ಅವಸಾನವಾಗಬಹುದು. ಅಸಮಾನತೆ ಮತ್ತು ಅವಕಾಶವಂಚನೆಯ ಇತಿಹಾಸವೂ ಆ ಪರಂಪರೆಯ ಭಾಗವಾಗಿದೆ. ಜ್ಞಾನದ ಮೇಲೆ ಬಿಗಿಹಿಡಿತವನ್ನು ಸಾಧ್ಯಮಾಡಿದ ಒಂದು ಸಾಮಾಜಿಕ ವ್ಯವಸ್ಥೆಯು ಸಂಸ್ಕೃತದ ಉಗಮಕ್ಕೆ ಮುಂಚೆ ಭಾರತೀಯ ಸಮಾಜದ ಅಗತ್ಯ ಲಕ್ಷಣವಾಗಿರಲಿಲ್ಲ. ಸಂಸ್ಕೃತದ ಶಾಸ್ತ್ರಬರಹಗಳಲ್ಲಿ ಹುಟ್ಟಿಕೊಂಡ ಅಶುದ್ಧದ ಕಲ್ಪನೆಗಳ ಕಾರಣದಿಂದ ಉಪಯೋಗಕರ ಜ್ಞಾನವನ್ನು ಉತ್ಪಾದಿಸುವ ಭಾರತದ ಸಾಮರ್ಥ್ಯಕ್ಕೆ ಆಳವಾದ ಗಾಯ ಉಂಟಾಯಿತು. ಶ್ರಮ, ಕುಶಲಕಲೆ ಮತ್ತು ಕೌಶಲಗಳೊಂದಿಗೆ ಸಂಬಂಧ ಹೊಂದಿರುವ ಸಮಾಜದ ಜನವಿಭಾಗಗಳಿಗೆ ಜ್ಞಾನದ ವ್ಯವಹಾರಗಳಲ್ಲಿ ಅರ್ಹವಾಗಿ ಸಿಗಬೇಕಾದ ಸ್ಥಾನವನ್ನು ನಿರಾಕರಿಸಲಾಯಿತು ಮತ್ತು ಅವರನ್ನು ಕೀಳು ಮನುಷ್ಯರಂತೆ ನಡೆಸಿಕೊಳ್ಳಲಾಯಿತು. ಪರಿಣಾಮವಾಗಿ ಸಂಸ್ಕೃತದ ಜ್ಞಾನಭಂಡಾರವು ’ಗತಕಾಲದ ಜ್ಞಾನ’ದ ಮೇಲೆ ಅತಿಯಾದ ಗೀಳಿಗೆ ಒತ್ತು ನೀಡುವಂತಾಯಿತು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಜ್ಞಾನಭಂಡಾರದ ಮರುಸಂಸ್ಕರಣೆಗೆ ತಾಳಮೇಳವಿಲ್ಲದಷ್ಟು ಅತಿಯಾದ ಪ್ರಮಾಣದಲ್ಲಿ ಬೌದ್ಧಿಕ ಶಕ್ತಿಯನ್ನು ಧಾರೆಯೆರೆಯಿತು. ಗಮನಾರ್ಹ ಪ್ರಮಾಣದ ಹುಸಿ ಹೆಮ್ಮೆಯ ಜೊತೆಗೆ, ಗತಕಾಲದ ಬಗ್ಗೆ ಕನವರಿಕೆಯು ಕೇವಲ ’ಅಸತ್ಯ’ಗಳನ್ನು ಮಾತ್ರವೇ ಅಲ್ಲದೇ, ’ಅತಾರ್ಕಿಕ’ವಾದಗಳನ್ನು ಹುಟ್ಟುಹಾಕುತ್ತದೆ. ಈ ಅಸ್ಪಷ್ಟತಾವಾದವು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ತಳವೂರಿರುವ ಸಮಾನತೆಯ ಕಲ್ಪನೆಯನ್ನೇ ಸಂಪೂರ್ಣವಾಗಿ ನಾಶ ಮಾಡಬಹುದು. ಸಂಸ್ಕೃತದ ಆಕ್ರಮಣಕಾರಿ ಪ್ರಚಾರವು ಮೂಲತಃ ಒಂದು ಭಾಷಿಕವಾದ ಯೋಜನೆಯಾಗಿರದೆ, ಸಾಮಾಜಿಕ ಇಂಜಿನಿಯರಿಂಗ್ ಯೋಜನೆಯಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳುವುದು ತುಂಬಾ ಅಗತ್ಯ.
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.
ಇದನ್ನೂ ಓದಿ: ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?