ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಕೇರಳದ ಮಲಪ್ಪುರಂ ಜಿಲ್ಲೆಯ ವಲಂಚೇರಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಲಂಚೇರಿ ಮೂಲದ ಬಾಲಕೃಷ್ಣನ್ ಎಂಬವರ ಪುತ್ರಿ ದೇವಿಕಾ (14) ಸ್ವತಃ ಬೆಂಕಿ ಹಚ್ಚಿ ಜೀವ ಕಳೆದುಕೊಂಡಿದ್ದಾರೆ.
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ ಖಿನ್ನತೆಗೆ ಒಳಗಾಗಿದ್ದ ಬಾಲಕಿಯೂ ಈ ಹೆಜ್ಜೆ ಇಟ್ಟಿದ್ದಾರೆ ಎಂದು ವಿದ್ಯಾರ್ಥಿನಿಯ ಪೋಷಕರು ತಿಳಿದ್ದಾರೆ.
“ಮನೆಯಲ್ಲಿ ಟೆಲಿವಿಷನ್ ಕಾರ್ಯನಿರ್ವಹಿಸದ ಕಾರಣ ಮಗುವಿಗೆ ತೊಂದರೆಯಾಯಿತು. ಜೊತೆಗೆ, ಯಾವುದೇ ಸ್ಮಾರ್ಟ್‌ಫೋನ್ ಇರಲಿಲ್ಲ. ಇದರಿಂದಾಗಿ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆಂದು ಅವಳು ಹೆದರುತ್ತಿದ್ದಳು” ಎಂದು ಪೋಷಕರು ಹೇಳಿದ್ದಾರೆ.
ದಿನಗೂಲಿ ಕಾರ್ಮಿಕರಾಗಿರುವ ಬಾಲಕೃಷ್ಣನ್ ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು ಎನ್ನಲಾಗಿದೆ.
ಕುಟುಂಬವು ಸ್ಮಾರ್ಟ್‌ಫೋನ್ ಹೊಂದಿರಲಿಲ್ಲ ಹಾಗೂ ಅವರ ಟಿವಿಯೂ ಸ್ವಲ್ಪ ಸಮಯದ ಹಿಂದೆ ಹಾಳಾಗಿದ್ದು, ಆನ್‌ಲೈನ್ ತರಗತಿಗಳು ಪ್ರಾರಂಭವಾಗುವ ಮೊದಲು ಅದನ್ನು ದುರಸ್ತಿ ಮಾಡಲು ದೇವಿಕಾ ತನ್ನ ತಂದೆಯನ್ನು ಕೇಳಿಕೊಂಡಿದ್ದರು. ಆದರೆ ಆರ್ಥಿಕ ಪರಿಸ್ಥಿತಿಯೂ ಸರಿಯಿಲ್ಲದ ಕಾರಣದಿಂದ ಕುಟುಂಬಕ್ಕೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ದೇವಿಕಾ ಮನೆಯಿಂದ ದೊರೆತ ಆತ್ಮಹತ್ಯಾ ಪತ್ರದಲ್ಲಿ ತಪ್ಪಿಹೋದ ತರಗತಿಗಳು ಹಾಗೂ ಅವರ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸೋಮವಾರ ಸಂಜೆ 6 ಗಂಟೆಗೆ ತನ್ನ ಮನೆಯ ಸಮೀಪದ ನಿರ್ಜನ ತೋಟದಲ್ಲಿ ವಿದ್ಯಾರ್ಥಿನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಮಧ್ಯೆ ಕೇರಳದ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಒಂದರಿಂದ ಹನ್ನೆರಡನೇ ತರಗತಿಯ ವಿಶೇಷ ಅವಧಿಗಳು ಕೈಟ್ ವಿಕ್ಟರ್ಸ್ ಚಾನೆಲ್ ಮತ್ತು ಇಂಟರ್ನೆಟ್ ಮೂಲಕ ಪ್ರಸಾರವಾಗುತ್ತವೆ.
ಆದರೆ ಈ ಹೊಸ ವ್ಯವಸ್ಥೆಯ ಬಗ್ಗೆ ಮತ್ತು ಟಿವಿ ಅಥವಾ ಇಂಟರ್ನೆಟ್ ಇಲ್ಲದ ವಿದ್ಯಾರ್ಥಿಗಳು ತರಗತಿಗಳಿಗೆ ಹೇಗೆ ಹಾಜರಾಗುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಓದಿ: ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ: ಇವಾನ್


