ಇಂದೋರ್ (ಮಧ್ಯಪ್ರದೇಶ): ಇಲ್ಲಿನ ರಾಜೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದತ್ತ್‌ನಗರದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ಗೋಶಾಲೆಯನ್ನು ತೆರವುಗೊಳಿಸಿದ ಮುನ್ಸಿಪಲ್ ಅಧಿಕಾರಿಗಳ ತಂಡ ಮತ್ತು ಭಜರಂಗದಳದ ಸದಸ್ಯರ ನಡುವೆ ಭಾರೀ ವಾಗ್ವಾದವು ಘರ್ಷಣೆಗೆ ಕಾರಣವಾಯಿತು. ನಂತರ ನಡೆದ ಹಿಂಸಾಚಾರದಲ್ಲಿ ಸುಮಾರು ಪುರಸಭೆಯ 20 ವಾಹನಗಳನ್ನು ಧ್ವಂಸಗೊಳಿಸಲಾಗಿರುವ ಘಟನೆ ಬುಧವಾರ ವರದಿಯಾಗಿದೆ.
ಮುನ್ಸಿಪಲ್ ಕಾರ್ಪೊರೇಷನ್ ತಂಡವು ಪೊಲೀಸ್ ಸಿಬ್ಬಂದಿಯೊಂದಿಗೆ ಇಂದೋರ್‌ನ ಜನನಿಬಿಡ ಪ್ರದೇಶದ ಸ್ಥಳಕ್ಕೆ ಆಗಮಿಸಿ, ಆಕ್ರಮ ಗೋಶಾಲೆಗಳನ್ನು ಕೆಡವಿದ ನಂತರ ಈ ಘಟನೆಯು ನಡೆದಿದೆ. ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣದ ದೂರುಗಳ ಆಧಾರದ ಮೇರೆಗೆ ಮುನ್ಸಿಪಲ್ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೆ ನಿರ್ಮಿಸಿದ ಗೋಶಾಲೆಗಳ ಧ್ವಂಸಕ್ಕೆ ಮುಂದಾಯಿತು ಎಂದು ವರದಿ ಹೇಳಿದೆ.
ತೆರವುಗೊಳಿಸಿದ್ದನ್ನು ವಿರೋಧಿಸಿ ಭಜರಂಗದಳದ ಸದಸ್ಯರು ಸ್ಥಳದಲ್ಲಿ ಜಮಾಯಿಸಿದಾಗ ಉದ್ವಿಗ್ನತೆ ಉಂಟಾಯಿತು. ಹಸುಗಳ ರಕ್ಷಣೆಗಾಗಿ ಘೋಷಣೆಗಳನ್ನು ಕೂಗುತ್ತಾ ಮತ್ತು ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದ್ದಾರೆಂದು ಗುಂಪು ಆರೋಪಿಸಿದಾಗ ಹಿಂಸಾಚಾರಕ್ಕೆ ತಿರುಗಿತು. ದೊಣ್ಣೆ ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತವಾಗಿದ್ದ ಗುಂಪು ಪುರಸಭೆಯ ವಾಹನಗಳನ್ನು ಗುರಿಯಾಗಿಸಿ ಅವುಗಳ ಗಾಜುಗಳನ್ನು ಒಡೆದು ಹಾಕಿ, ಉಪಕರಣಗಳನ್ನು ಹಾನಿಗೊಳಿಸಿ, ಸ್ಥಳದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹೆಸರು ಹೇಳಲಿಚ್ಛಿಸದ ಪ್ರದೇಶದ ನಿವಾಸಿಯೊಬ್ಬರು, ಬಜರಂಗದಳದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಾಹನಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಇದು ಭಯ ಹುಟ್ಟಿಸುವಂತಿತ್ತು. ಗೋಶಾಲೆಯು ಈಗ ತಿಂಗಳಿನಿಂದ ವಿವಾದಾತ್ಮಕ ವಿಷಯವಾಗಿದೆ ಎಂದಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಲತಾ ಅಗರವಾಲ್, ನಾವು ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆವು ಮತ್ತು 9 ಗಂಟೆಗೆ ಅದನ್ನು ಪೂರ್ಣಗೊಳಿಸಿದವು. ಈ ಪ್ರದೇಶದಿಂದ ಹೊರಡುವಾಗ, ಬಜರಂಗದಳದ ಸದಸ್ಯರು ಮತ್ತು ನಮ್ಮ ನೌಕರರ ನಡುವೆ ವಾಗ್ವಾದ ಉಂಟಾಗಿ ವಾಹನಗಳಿಗೆ ಹಾನಿ ಮತ್ತು ನಮ್ಮ ಕೆಲವು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಮುನ್ಸಿಪಲ್ ಕಾರ್ಪೊರೇಷನ್ ದ್ವಾರಕಾ ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂದಿನ ಕ್ರಮಕ್ಕಾಗಿ ಪಾಲಿಕೆ ಆಯುಕ್ತ ಶಿವಂ ವರ್ಮಾ ಮತ್ತು ಮೇಯರ್ ಪುಷ್ಯಮಿತ್ರ ಭಾರ್ಗವ ಅವರಿಗೆ ಸಂಪೂರ್ಣ ವಿಷಯ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಬಜರಂಗದಳವು ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿದೆ. ಗೋವುಗಳನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದೆ ಮತ್ತು ಪುರಸಭೆಯ ಅಧಿಕಾರಿಗಳು ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ಅದು ಆರೋಪಿಸಿದೆ. ಸ್ಥಳೀಯ ಬಜರಂಗದಳ ನಾಯಕ ಅನಿಲ್ ತಿವಾರಿ ಮಾತನಾಡಿ, ಗೋಶಾಲೆಯು ಪವಿತ್ರ ಸ್ಥಳವಾಗಿದೆ. ಇದನ್ನು ಕೆಡವುವ ಬದಲು ನಗರಸಭೆಯು ಪರ್ಯಾಯ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಘರ್ಷಣೆಯು ಸ್ಥಳೀಯ ಆಡಳಿತದ ವಿಷಯದಲ್ಲಿ ರಾಜಕೀಯ ಅಥವಾ ಧಾರ್ಮಿಕ ಗುಂಪುಗಳ ಒಳಗೊಳ್ಳುವಿಕೆಯ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಶಾಂತಿ ಕಾಪಾಡಲು ಮತ್ತು ಇಂತಹ ಘಟನೆಗಳು ನಗರದಲ್ಲಿ ದೈನಂದಿನ ಜೀವನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯು ಧಾರ್ಮಿಕ ಭಾವನೆಗಳನ್ನು ಸಮತೋಲನಗೊಳಿಸುವುದಕ್ಕೆ ಮತ್ತು ನಗರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯ ಜಾರಿಗೆ ಒಂದು ಸವಾಲಾಗಿದೆ.
ಸಾಂತಾ ಕ್ಲಾಸ್ ಬಟ್ಟೆ ತೆಗೆಸಿ ಜೈಶ್ರೀರಾಮ್ ಘೋಷಣೆ ಹೇಳಿಸಿದ ಬಿಜೆಪಿ ಪರ ಸಂಘಟನೆಯ ದುಷ್ಕರ್ಮಿಗಳು


