ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಶನಿವಾರ (ಆ.2) ಆದೇಶಿಸಿದೆ.
ಅಲ್ಲದೆ, ಸಂತ್ರಸ್ತೆಗೆ ರೂಪಾಯಿ 11 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಆದೇಶಿಸಿದೆ ಎಂದು barandbench.com ವರದಿ ಮಾಡಿದೆ.
ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಪ್ರಜ್ವಲ್‌ಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ದೋಷಿ ಎಂದು ಶುಕ್ರವಾರ (ಆ.1) ನ್ಯಾಯಾಧೀಶರು ಘೋಷಿಸಿದ್ದರು.
ಶಿಕ್ಷೆ ವಿಧಿಸುವಿಕೆಯ ವಿಚಾರಣೆಯ ಸಮಯದಲ್ಲಿ ಪ್ರಜ್ವಲ್ ಅವರು ತಮ್ಮ ವಿರುದ್ಧದ ಆರೋಪಗಳ ಸಮಯ ಮತ್ತು ಉದ್ದೇಶವನ್ನು ಪ್ರಶ್ನಿಸಿದ್ದಾರೆ ಎಂದು barandbench.com ವರದಿ ಹೇಳಿದೆ.
“ನಾನು ಸಂಸದನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನನ್ನ ವಿರುದ್ದ ಯಾವುದೇ ಆರೋಪಗಳು ಇರಲಿಲ್ಲ. ಚುನಾವಣೆಯ ಸಮಯದಲ್ಲೇ ಏಕೆ ಎಲ್ಲಾ ಆರೋಪಗಳು ಒಮ್ಮೆಲೆ ಹೊರಹೊಮ್ಮಿತು?” ಎಂದು ಕೇಳಿದ್ದಾರೆ. ಆದಾಗ್ಯೂ, ನ್ಯಾಯಾಲಯದ ತೀರ್ಪನ್ನು ಗೌರವಿಸುವುದಾಗಿ ಹೇಳಿದ್ದಾರೆ ಎಂದಿದೆ.
ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಬಿ.ಎನ್ ಜಗದೀಶ್ ಅವರು, ಪ್ರಜ್ವಲ್ ರೇವಣ್ಣ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಾದ ಮಂಡಿಸಿದ್ದಾರೆ. “ಅಪರಾಧದ ವ್ಯಾಖ್ಯಾನ ಮತ್ತು ಉದ್ದೇಶವನ್ನು ಪರಿಗಣಿಸಬೇಕು. ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಎಸ್‌ಪಿಪಿ ನ್ಯಾಯಾಲಯವನ್ನು ಕೋರಿದ್ದಾರೆ.
ಆದರೆ, ಪ್ರಜ್ವಲ್ ಪರ ಹಾಜರಾದ ಹಿರಿಯ ವಕೀಲೆ ನಳಿನಾ ಮಾಯೇಗೌಡ, “ಪ್ರಜ್ವಲ್ ಒಬ್ಬ ಯುವ ವ್ಯಕ್ತಿಯಾಗಿದ್ದು, ಹಲವಾರು ವರ್ಷಗಳಿಂದ ದತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ವಾದಿಸಿದ್ದಾರೆ. “ಈ ಒಳ್ಳೆಯ ಕಾರ್ಯಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಈ ಗೌರವಾನ್ವಿತ ನ್ಯಾಯಾಲಯವು ಪರಿಗಣಿಸಬೇಕು” ಎಂದು ಕೋರಿದ್ದಾರೆ.
ಈ ಆರೋಪಗಳಿಂದ ಅಥವಾ ಕಾನೂನು ಪ್ರಕ್ರಿಯೆಗಳಿಂದ ಅವರ ಹೆಸರು ಮತ್ತು ಖ್ಯಾತಿಗೆ ತೀವ್ರ ಕಳಂಕ ಉಂಟಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಪ್ರಜ್ವಲ್ ಕೂಡ, ತಾನು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಕಡಿಮೆ ಸಮಯದಲ್ಲಿ ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಹೋಗಿರುವುದೇ ನಾನು ಮಾಡಿರುವ ದೊಡ್ಡ ತಪ್ಪು ಅಥವಾ ಅದುವೇ ನನಗಾದ ದೊಡ್ಡ ನಷ್ಟ ಎಂದಿದ್ದಾರೆ.
“ನಾನು ಪ್ರತಿಭಾನ್ವಿತ ವಿದ್ಯಾರ್ಥಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ನಾನು ರಾಜಕೀಯದಲ್ಲಿ ಬೇಗನೆ ಬೆಳೆದೆ, ಇದೇ ನನಗೆ ಮುಳುವಾಯಿತು. ಆದಾಗ್ಯೂ, ನ್ಯಾಯಾಲಯದ ತೀರ್ಪಿಗೆ ನಾನು ತಲೆಬಾಗುತ್ತೇನೆ” ಎಂದು ಹೇಳಿದ್ದಾರೆ.
ರೇವಣ್ಣ ಕುಟುಂಬಕ್ಕೆ ಸೇರಿದ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯ ಮೇಲೆ ಪ್ರಜ್ವಲ್ ರೇವಣ್ಣ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣ ಇದಾಗಿದೆ. 2021ರ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪ್ರಜ್ವಲ್ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದರು ಎನ್ನಲಾಗಿದೆ.
ಪ್ರಜ್ವಲ್ ನನ್ನ ಮೇಲಿನ ದೌರ್ಜನ್ಯದ ದೃಶ್ಯಗಳನ್ನು ರೆಕಾರ್ಡ್ ಮಾಡಿ, ಅವುಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ನಾನು ದೌರ್ಜನ್ಯದ ಬಗ್ಗೆ ಮಾತನಾಡಿರಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದರು.
ದೌರ್ಜನ್ಯಕ್ಕೊಳಗಾದ ಬಳಿಕ ಮಹಿಳೆ ಪ್ರಜ್ವಲ್ ಮನೆಯ ಕೆಲಸವನ್ನು ತೊರೆದಿದ್ದರು. ಪ್ರಜ್ವಲ್‌ಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ ದೃಶ್ಯಗಳು ಸೋರಿಕೆಯಾದ ವರದಿಗಳು ಹೊರಬರುವವರೆಗೂ ಆಕೆ ಮೌನವಾಗಿದ್ದರು.
ವರದಿಗಳ ಪ್ರಕಾರ, ಹಲವಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ 2,900ಕ್ಕೂ ಹೆಚ್ಚು ವೀಡಿಯೊಗಳು ಸಾಮಾಜಿಕ ಮಾಧ್ಯಮ ಸೇರಿದಂತೆ ಆನ್‌ಲೈನ್‌ನಲ್ಲಿ ಪ್ರಸಾರವಾಗಿವೆ.
ಆ ಬಳಿಕ ಕಳೆದ ವರ್ಷ ಸಂತ್ರಸ್ತೆ ಮನೆ ಕೆಲಸದಾಕೆ ಮೊದಲ ದೂರು ದಾಖಲಿಸಿದ್ದರು. ನಂತರ ಪ್ರಜ್ವಲ್ ವಿರುದ್ದ ಲೈಂಗಿಕ ದೌರ್ಜನ್ಯದ ನಾಲ್ಕು ಪ್ರಕರಣಗಳು ದಾಖಲಾಯಿತು.
2024ರ ಲೋಕಸಭಾ ಚುನಾವಣೆಯ ನಂತರ, ಸಾರ್ವಜನಿಕರ ಆಕ್ರೋಶದ ನಡುವೆಯೇ ಪ್ರಜ್ವಲ್ ಜರ್ಮನಿಗೆ ಪಲಾಯನ ಮಾಡಿದ್ದರು. ಮೇ 31, 2024ರಂದು ಭಾರತಕ್ಕೆ ಹಿಂದಿರುಗಿದ ನಂತರ ಅವರನ್ನು ಬಂಧಿಸಲಾಯಿತು ಮತ್ತು ಅಂದಿನಿಂದ ಜೈಲಿನಲ್ಲಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ, ವಿಚಾರಣಾ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಈ ಕೆಳಗಿನ ನಿಬಂಧನೆಗಳ ಅಡಿಯಲ್ಲಿ ವಿವಿಧ ಕ್ರಿಮಿನಲ್ ಆರೋಪಗಳನ್ನು ಹೊರಿಸಿತ್ತು:
ಸೆಕ್ಷನ್ 376(2)(k) (ಪ್ರಬಲ ಸ್ಥಾನ ಅಥವಾ ನಿಯಂತ್ರಣ ಸ್ಥಾನದಲ್ಲಿರುವ ವ್ಯಕ್ತಿಯಿಂದ ಮಹಿಳೆಯ ಮೇಲೆ ಅತ್ಯಾಚಾರ), ಸೆಕ್ಷನ್ 376(2)(n)(ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), ಸೆಕ್ಷನ್ 354A (ನೈತಿಕತೆಯನ್ನು ಮೀರಿದ ಕೃತ್ಯ), ಸೆಕ್ಷನ್ 354B (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), ಸೆಕ್ಷನ್ 354C (ಕಾಮಾಸಕ್ತಿಯಿಂದ ಗುಟ್ಟಾಗಿ ನೋಡುವುದು), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 201 (ಅಪರಾಧದ ಸಾಕ್ಷ್ಯಗಳು ಕಣ್ಮರೆಯಾಗಲು ಕಾರಣವಾಗುವುದು)
ಹೆಚ್ಚುವರಿಯಾಗಿ, ಪ್ರಜ್ವಲ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2008 ರ ಸೆಕ್ಷನ್ 66E ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದು ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸುವ ಕೃತ್ಯಗಳಿಗೆ ಶಿಕ್ಷಿ ವಿಧಿಸುತ್ತದೆ. ಉದಾಹರಣೆಗೆ: ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರಗಳನ್ನು ಪ್ರಸಾರ ಮಾಡುವುದು.
ಈ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಗಸ್ಟ್ 2024 ರಲ್ಲಿ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಜ್ವಲ್ ರೇವಣ್ಣ ಅವರು ಪ್ರಕರಣದಿಂದ ತಮ್ಮನ್ನು ಬಿಡುಗಡೆ ಮಾಡಲು ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ವಾದಿಸಿದ್ದರು.
ಪ್ರಜ್ವಲ್ ಅವರ ವಿರುದ್ಧ ಮಾಡಲಾದ ಗಂಭೀರ ಆರೋಪಗಳು ಸತ್ಯಕ್ಕೆ ದೂರವಾದವು ಮತ್ತು ಅವರ ಖ್ಯಾತಿಗೆ ಕಳಂಕ ತರುವ ಪ್ರಯತ್ನಗಳ ಭಾಗವಾಗಿದೆ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು.
2021ರಲ್ಲಿ ಮೊದಲ ಬಾರಿಗೆ ದೌರ್ಜನ್ಯ ನಡೆದಿತ್ತು ಎಂದು ಹೇಳಲಾಗುತ್ತಿರುವಾಗ, ಆಪಾದಿತ ಅತ್ಯಾಚಾರ ಘಟನೆಯ ಬಗ್ಗೆ ದೂರು ನೀಡುವಾಗ ವಿಳಂಬ ಏಕಾಯಿತು ಎಂದು ಪ್ರಜ್ವಲ್ ಪ್ರಶ್ನಿಸಿದ್ದರು.
ಪ್ರಜ್ವಲ್ ವಿರುದ್ಧ ನಾಲ್ಕು ಸಂಪುಟಗಳ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ವಿಧಿವಿಜ್ಞಾನ ವಿಶ್ಲೇಷಣೆಯ ನಂತರ ಲೈಂಗಿಕ ದೌರ್ಜನ್ಯದ ವೀಡಿಯೊಗಳು ಅಧಿಕೃತವೆಂದು ಕಂಡುಬಂದಿದೆ ಎಂದು ಎಸ್‌ಐಟಿ ಪ್ರತಿಪಾದಿಸಿತ್ತು.
ಏಪ್ರಿಲ್ 3ರಂದು, ವಿಚಾರಣಾ ನ್ಯಾಯಾಲಯವು ಪ್ರಜ್ವಲ್ ಅವರ ವಿರುದ್ಧ ಆರೋಪಗಳನ್ನು ರೂಪಿಸಲು ಮತ್ತು ವಿಚಾರಣೆ ನಡೆಸಲು ಸಾಕಷ್ಟು ಪುರಾವೆಗಳಿವೆ ಎಂದು ಕಂಡುಕೊಂಡು ಅವರ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಿತ್ತು.
ಅಪರಾಧವನ್ನು ವರದಿ ಮಾಡುವಲ್ಲಿನ ವಿಳಂಬ ಮತ್ತು ಆಪಾದಿತ ಹಲ್ಲೆಯ ದೃಶ್ಯಗಳನ್ನು ರೆಕಾರ್ಡ್ ಮಾಡಲಾದ ಮೂಲ ಸಾಧನವನ್ನು ಮರುಪಡೆಯಲು ವಿಫಲವಾದಂತಹ ಸಮಸ್ಯೆಗಳನ್ನು ಪ್ರಾಸಿಕ್ಯೂಷನ್ ವಿವರಿಸಬೇಕಾಗಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಆದಾಗ್ಯೂ, ಇವು ವಿಚಾರಣೆಯ ಸಮಯದಲ್ಲಿ ಪರಿಶೀಲಿಸಬಹುದಾದ ಅಂಶಗಳಾಗಿವೆ. ಬಿಡುಗಡೆ ಅರ್ಜಿಯನ್ನು ಪರಿಗಣಿಸುವಾಗ ಅಲ್ಲ ಎಂದು ನ್ಯಾಯಾಲಯ ಹೇಳಿತ್ತು.
ದೂರುದಾರರ ಸಾಕ್ಷ್ಯವು ಪ್ರಕರಣವನ್ನು ವಿಚಾರಣೆಗೆ ಮುಂದುವರಿಸಲು ಸಾಕಷ್ಟು ವಿಶ್ವಾಸಾರ್ಹವಾಗಿ ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿತ್ತು.
ಎಸ್‌ಐಟಿ ‘ಪೊಲೀಸ್ ಠಾಣೆ’ ಅಲ್ಲದ ಕಾರಣ ಆರೋಪಪಟ್ಟಿ ಸಲ್ಲಿಸುವ ಅಧಿಕಾರ ಹೊಂದಿಲ್ಲ ಎಂಬ ಪ್ರಜ್ವಲ್ ಅವರ ವಾದವನ್ನು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿತ್ತು.
ಅಂದಿನಿಂದ ಇಂದಿನವರೆಗೆ ಏನೇನಾಯ್ತು?
ಏಪ್ರಿಲ್ 2024: ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ವಿಡಿಯೊಗಳಿರುವ ಪೆನ್ ಡ್ರೈವ್ ಹಾಸನದ ತುಂಬೆಲ್ಲಾ ಹರಿದಾಡಿತು.
20ನೇ ಏಪ್ರಿಲ್ 2024: ಚುನಾವಣೆ ಸಂದರ್ಭದಲ್ಲೇ ಪ್ರಜ್ವಲ್ ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಲು ಪೆನ್ ಡ್ರೈವ್ ಹಂಚಲಾಗುತ್ತಿದೆ ಎಂದು ಆರೋಪಿಸಿ ಚುನಾವಣಾ ಏಜೆಂಟ್ ಒಬ್ಬರು ಎಫ್‌ಐಆರ್ ದಾಖಲಿಸಿದ್ದರು
26ನೇ ಏಪ್ರಿಲ್ 2024: ಲೋಕಸಭಾ ಚುಣಾವಣೆ ಪೂರ್ಣಗೊಂಡ ಬಳಿಕ, ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಜ್ವಲ್ ವಿದೇಶ ಪ್ರಯಾಣ
27ನೇ ಏಪ್ರಿಲ್ 2024: ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ ರಾಜ್ಯ ಸರ್ಕಾರ
30ನೇ ಏಪ್ರಿಲ್ 2024: ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಜೆಡಿಎಸ್
2ನೇ ಮೇ 2024: ಪ್ರಜ್ವಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು ದಾಖಲು. ರೇವಣ್ಣ ಹೆಸರು ಉಲ್ಲೇಖ.
3ನೇ ಮೇ 2024: ಅಪಹರಣಕ್ಕೊಳಗಾಗಿದ್ದ ದೂರರಾರರನ್ನು ಮೈಸೂರು ಬಳಿಯ ಫಾರ್ಮ್‌ಹೌಸ್ ಬಳಿ ರಕ್ಷಣೆ
4ನೇ ಮೇ 2024: ಅಪಹರಣ ಪ್ರಕರಣದಲ್ಲಿ ರೇವಣ್ಣ ಬಂಧನ
7ನೇ ಮೇ 2024: ಎಸ್‌ಐಟಿ ಎದುರು ಹಾಜರಾಗುವಂತೆ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ
31ನೇ ಮೇ 2024: ಭಾರತಕ್ಕೆ ಬಂದ ಪ್ರಜ್ವಲ್, ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಎಸ್‌ಐಟಿ ತಂಡದಿಂದ ಬಂಧನ
8ನೇ ಸೆಪ್ಟೆಂಬರ್ 2024: ಪ್ರಜ್ವಲ್ ವಿರುದ್ಧ ದೋಷಾರೋಪ ಸಲ್ಲಿಸಿದ ಎಸ್‌ಐಟಿ
2ನೇ ಮೇ 2025: ವಿಚಾರಣೆ ಆರಂಭಿಸಿದ ನ್ಯಾಯಾಲಯ
18ನೇ ಜುಲೈ 2025: ವಿಚಾರಣೆ ಪೂರ್ಣ
1ನೇ ಆಗಸ್ಟ್ 2025: ಪ್ರಜ್ವಲ್ ದೋಷಿ ಎಂದು ಸಾಬೀತು.


