ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟ 4 ವರ್ಷಗಳ ನಂತರ ಕೇಂದ್ರ ಸರ್ಕಾರವು ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿದೆ. ಭಾರತೀಯ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ದಿನಾಂಕಗಳನ್ನು ಪ್ರಕಟಿಸುವ ಮುನ್ನವೇ ಅಧಿಸೂಚನೆ ಹೊರಬಿದ್ದಿದೆ. ಪ್ರತಿಪಕ್ಷಗಳು ಇದು ಬಿಜೆಪಿಯ ಬಿಜೆಪಿಯ ವಿಭಜನಾ ರಾಜಕೀಯದ ಭಾಗ ಎಂದು ಕಿಡಿಕಾರಿದ್ದು, ದೇಶದಾದ್ಯಂತ ಸಿಎಎ ಜಾರಿಗೆ ವಿರೋಧ ವ್ಯಕ್ತವಾಗುತ್ತಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್, ಕೇಂದ್ರ ಬಿಜೆಪಿ ಸರ್ಕಾರದ ವಿಭಜಕ ಕಾರ್ಯಸೂಚಿಯು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸ್ತ್ರಗೊಳಿಸಿದೆ, CAA ಜಾರಿಗೊಳಿಸುವ ಮೂಲಕ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ತಾರತಮ್ಯದ ಸಾಧನವಾಗಿ ಪರಿವರ್ತಿಸಿದೆ. ಮುಸ್ಲಿಮರು ಮತ್ತು ಶ್ರೀಲಂಕಾ ತಮಿಳರಿಗೆ ದ್ರೋಹ ಮಾಡುವ ಮೂಲಕ ಅವರು ವಿಭಜನೆಯ ಬೀಜಗಳನ್ನು ಬಿತ್ತಿದ್ದಾರೆ ಎಂದು ಹೇಳಿದ್ದಾರೆ.
ಡಿಎಂಕೆಯಂತಹ ಪ್ರಜಾಸತ್ತಾತ್ಮಕ ಶಕ್ತಿಗಳ ತೀವ್ರ ವಿರೋಧದ ಹೊರತಾಗಿಯೂ, ಸಿಎಎನ್ನು ಬಿಜೆಪಿಯು ಎಡಿಎಂಕೆಯಂತಹ ಪಕ್ಷಗಳ ಬೆಂಬಲದೊಂದಿಗೆ ಅಂಗೀಕರಿಸಿತ್ತು. ಆದರೆ ಜನರ ತೀವ್ರ ವಿರೋಧಕ್ಕೆ ಹೆದರಿ ಬಿಜೆಪಿ ಈ ಕಾಯ್ದೆಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿತ್ತು.
2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ, ನಮ್ಮ ರಾಷ್ಟ್ರದ ಏಕತೆಯನ್ನು ಕಾಪಾಡಲು, ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತತೆಯ ಆದರ್ಶವನ್ನು ರಕ್ಷಿಸಲು ಸಿಎಎನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ನಾವು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ್ದೇವೆ. ಈಗ, ಚುನಾವಣೆಗಳು ಸಮೀಪಿಸುತ್ತಿರುವಂತೆ, ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಿನಿಕತನದಿಂದ ಪುನರುತ್ಥಾನಗೊಳಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಮುಳುಗುತ್ತಿರುವ ಹಡಗನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.
ಆದರೆ ಈ ವಿಭಜಕ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಬಿಚ್ಚಿಟ್ಟ ಬಿಜೆಪಿಯನ್ನು ಮತ್ತು ಅದನ್ನು ನಾಚಿಕೆಯಿಲ್ಲದೆ ಬೆಂಬಲಿಸಿದ ಅವರ ಬೆನ್ನುಮೂಳೆಯಿಲ್ಲದ ಎಡಿಎಂಕೆಯನ್ನು ಭಾರತದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಏನಿದು ಸಿಎಎ:
ಮೋದಿ ಸರ್ಕಾರವು ಅಂಗೀಕರಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಕಾಯ್ದೆಯು ಡಿಸೆಂಬರ್ 31, 2014ರೊಳಗೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. CAA ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದ್ದು, ಆ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲ, ಆದ್ದರಿಂದ ಈ ಅಸಂವಿಧಾನಿಕ ಕಾಯ್ದೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ಸರ್ಕಾರ ನಿನ್ನೆ ಅಧಿಸೂಚನೆ ಹೊರಡಿಸಿದೆ. ಪೌರತ್ವ ಕಾಯ್ದೆಯು ಧರ್ಮ ಆಧಾರದಲ್ಲಿ ಪೌರತ್ವ ನೀಡುತ್ತದೆ ಎಂದು ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳ ನಡೆದಿತ್ತು. ಗೊಂದಲಗಳ ನಡುವೆ ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಇದನ್ನು ಅಂಗೀಕರಿಸಲಾಗಿತ್ತು. ದೇಶದಾದ್ಯಂತ ನಡೆದ ಗಲಭೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ದೇಶದ ವಿರೋಧ ಪಕ್ಷಗಳು ಮತ್ತು ಬಿಜೆಪಿಯೇತರ ರಾಜ್ಯಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.
Union BJP Government's divisive agenda has weaponised the Citizenship Act, turning it from a beacon of humanity to a tool of discrimination based on religion and race through the enactment of #CAA. By betraying Muslims and Sri Lankan Tamils, they sowed seeds of division.
Despite… pic.twitter.com/mbraX6SW10
— M.K.Stalin (@mkstalin) March 11, 2024
ಇದನ್ನು ಓದಿ: ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಪರಿಶೀಲನೆಗೆ ಸುಪ್ರೀಂಕೋರ್ಟ್ ಸಮ್ಮತಿ


