ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಕರೆತಂದ ವಿಮಾನಗಳು ಅಮೃತಸರದಲ್ಲಿ ಇಳಿಯಲು ಅವಕಾಶ ನೀಡುವ ಕೇಂದ್ರದ ನಿರ್ಧಾರವನ್ನು ಟೀಕಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಖಂಡಿಸಿದ್ದಾರೆ. “ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಳಪೆಯಾಗಿದೆ, ಮುಖ್ಯಮಂತ್ರಿಯನ್ನೇ ಮದ್ಯ ಪರೀಕ್ಷೆಗೆ ಒಳಪಡಿಸಬೇಕು” ಎಂದು ಬಿಟ್ಟು ಟೀಕಿಸಿದ್ದಾರೆ.
“ವಲಸೆ ವಿಮಾನಗಳ ಲ್ಯಾಂಡಿಂಗ್ ಸೈಟ್ ಆಗಿ ಅಮೃತಸರವನ್ನು ಕೇಂದ್ರ ಆಯ್ಕೆ ಮಾಡಿರುವುದು ಪಂಜಾಬ್ ಅನ್ನು ದೂಷಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಎರಡು ದಿನಗಳ ಅಮೆರಿಕ ಭೇಟಿಯನ್ನು ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಉಡುಗೊರೆಯೇ” ಎಂದು ಮಾನ್ ಪ್ರಶ್ನಿಸಿದ್ದಾರೆ.
116 ಅಕ್ರಮ ಭಾರತೀಯ ವಲಸಿಗರ ಎರಡನೇ ಬ್ಯಾಚ್ ಅನ್ನು ಹೊತ್ತ ಯುಎಸ್ ಮಿಲಿಟರಿ ವಿಮಾನವು ಶನಿವಾರ ರಾತ್ರಿ ಪಂಜಾಬ್ ನಗರದಲ್ಲಿ ಇಳಿಯುವ ಕೆಲವೇ ಗಂಟೆಗಳ ಮೊದಲು ಮುಖ್ಯಮಂತ್ರಿಯವರ ಹೇಳಿಕೆಗಳು ಬಂದಿವೆ.
ಫೆಬ್ರವರಿ 5 ರಂದು ಅಮೃತಸರದಲ್ಲಿ ಬಂದಿಳಿದ ಮೊದಲ ಗಡೀಪಾರು ವಿಮಾನವನ್ನು ಅಹಮದಾಬಾದ್‌ಗೆ ಏಕೆ ನಿರ್ದೇಶಿಸಲಿಲ್ಲ ಎಂದು ಅವರು ಪ್ರಶ್ನಿಸಿದರು. ಏಕೆಂದರೆ, ಹೆಚ್ಚಿನ ಗಡೀಪಾರುದಾರರು ಗುಜರಾತ್‌ನವರಾಗಿದ್ದರೆ.
ಮಾನ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, “ಇನ್ನೂ ಸಾವಿರಾರು ಜನರನ್ನು ಗಡೀಪಾರು ಮಾಡಲಾಗುತ್ತದೆ. ಪಂಜಾಬ್‌ನಲ್ಲಿ ವಿಮಾನ ಇಳಿದರೆ, ಅದು ನಮ್ಮ ರಾಜ್ಯವನ್ನು ಹೇಗೆ ದೂಷಿಸುತ್ತದೆ” ಎಂದು ಅವರು ಪ್ರಶ್ನಿಸಿದ್ದಾರೆ.
“ಮಾನ್ ಇಂದು ಅಕ್ರಮ ವಲಸಿಗರನ್ನು (ಗಡೀಪಾರು ಮಾಡಿದವರನ್ನು) ಸ್ವೀಕರಿಸಲು ಬರುವುದಿಲ್ಲ. ಅವರು ಇಲ್ಲಿದೆ ಬಂದರೆ ಮದ್ಯದ ಪರೀಕ್ಷೆಗೆ ಒಳಪಡಿಸಬೇಕು” ಎಂದು ಬಿಟ್ಟು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಆಮ್ ಆದ್ಮಿ ಪಕ್ಷದ ನಾಯಕ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು. ಏಜೆಂಟ್‌ಗಳು ತಿಂಗಳುಗಟ್ಟಲೆ ವ್ಯಕ್ತಿಗಳನ್ನು ವಂಚಿಸಿ ಅಕ್ರಮ “ಡಂಕಿ ಮಾರ್ಗಗಳ” ಮೂಲಕ ಅಮೆರಿಕಕ್ಕೆ ಕರೆದೊಯ್ದಿದ್ದಾರೆ.
ಗಡೀಪಾರು ಮಾಡಿದವರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸಬೇಕು, ಅವರನ್ನು ಅಮೆರಿಕಕ್ಕೆ ಕರೆದೊಯ್ಯಲು ಟ್ರಾವೆಲ್ ಏಜೆಂಟ್‌ಗಳಿಗೆ ನೀಡಿದ ಬೃಹತ್ ಮೊತ್ತದ ಹಣವನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸಚಿವ ಬಿಟ್ಟು ಅವರು ಮಾನ್ ಅವರನ್ನು ಒತ್ತಾಯಿಸಿದರು.
ಈ ಮಧ್ಯೆ, ಕೇಂದ್ರವು ಪಿತೂರಿಯ ಭಾಗವಾಗಿ ಪಂಜಾಬ್ ಅನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂಬ ಮಾನ್ ಅವರ ಆರೋಪಗಳನ್ನು ಕೇಂದ್ರ ಸಚಿವರು ತಳ್ಳಿಹಾಕಿದರು.
“ಅರವಿಂದ್ ಕೇಜ್ರಿವಾಲ್ ಅವರ ಆದೇಶದ ಮೇರೆಗೆ ಮಾನ್ ಪ್ರಧಾನಿಯವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ಬಳಿ ದೃಢವಾದ ಮಾಹಿತಿ ಇದೆ” ಎಂದು ಅವರು ಯಾವುದೇ ವಿವರಗಳನ್ನು ನೀಡದೆ ಹೇಳಿದರು.
ಮಾನ್ ಅವರ ಹೇಳಿಕೆಗಳನ್ನು ಟೀಕಿಸಿದ ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಬಜ್ವಾ, ಮುಖ್ಯಮಂತ್ರಿ ಮತ್ತು ಅವರ ಎಎಪಿ ನೇತೃತ್ವದ ಸರ್ಕಾರವು ಕಳೆದ ಮೂರು ವರ್ಷಗಳಿಂದ ಮಾನವ ಕಳ್ಳಸಾಗಣೆಯನ್ನು ಪರಿಹರಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
157 ಗಡೀಪಾರುಗೊಂಡವರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ಅಮೃತಸರದಲ್ಲಿ ಇಳಿಯುವ ನಿರೀಕ್ಷೆಯಿದೆ. ಆದರೆ, ಆಗಮನದ ಸಮಯದ ಬಗ್ಗೆ ತಕ್ಷಣದ ಮಾಹಿತಿ ಇಲ್ಲ.
ಇದನ್ನೂ ಓದಿ; ಪ್ರಧಾನಿ ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ ವೆಬ್‌ಸೈಟ್ ನಿರ್ಬಂಧ; ಕೇಂದ್ರ ಸರ್ಕಾರದ ನಡೆ ಖಂಡಿಸಿದ ಸ್ಟಾಲಿನ್


