ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ-ನರೇಗಾ)ಯನ್ನು ‘ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ’ ಎಂದು ಮರುನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಶುಕ್ರವಾರ (ಡಿಸೆಂಬರ್ 12) ಅನುಮೋದನೆ ನೀಡಿದೆ.
ಸರ್ಕಾರ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಒದಗಿಸುವ ಖಾತರಿಯುಕ್ತ ಉದ್ಯೋಗವನ್ನು ಪ್ರಸ್ತುತದ 100 ದಿನಗಳಿಂದ 125 ದಿನಗಳಿಗೆ ಏರಿಸಲು ನಿರ್ಧರಿಸಿದೆ. ಜೊತೆಗೆ, ಈ ಯೋಜನೆಯಡಿ ಕನಿಷ್ಠ ಕೂಲಿಯನ್ನು ದಿನಕ್ಕೆ 240 ರೂಪಾಯಿಗೆ ಮರುಪರಿಷ್ಕರಣೆ ಮಾಡಲು ಉದ್ದೇಶಿಸಿದೆ. ಈ ವಿಸ್ತರಿತ ಯೋಜನೆಯನ್ನು ಜಾರಿಗೆ ತರುವ ಸಲುವಾಗಿ ಹೆಚ್ಚುವರಿ ಬಜೆಟ್ ಅನುದಾನ ಒದಗಿಸಲು ತೀರ್ಮಾನಿಸಿದೆ.
ನರೇಗಾ ಯೋಜನೆಯಡಿ ಬಾಕಿ ಉಳಿದಿರುವ ರಾಜ್ಯದ ಪಾಲು ಸುಮಾರು 51,627 ಕೋಟಿ ರೂಪಾಯಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವ ನಡುವೆ ಯೋಜನೆಯಲ್ಲಿ ಬದಲಾವಣೆಗಳನ್ನು ತರಲು ಕೇಂದ್ರ ಮುಂದಾಗಿದೆ.
ನರೇಗಾ ಹಣ ತಡೆಹಿಡಿದಿರುವುದರಿಂದ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೂಲಿ ಕೊಡುವುದೇ ನಿಂತುಹೋಗಿದೆ ಮತ್ತು ಚಾಲ್ತಿಯಲ್ಲಿರುವ ಅನೇಕ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿಕೊಂಡಿದೆ. ರಾಜಕೀಯ ದ್ವೇಷದಿಂದ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದೆ.
ನರೇಗಾ ಯೋಜನೆಯ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ, ಮಾರ್ಚ್ 9, 2022 ರಿಂದ ಪಶ್ಚಿಮ ಬಂಗಾಳದಲ್ಲಿ ಯೋಜನೆಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಿದೆ. ಬಾಕಿ ಪಾವತಿಸುವಂತೆ ಒತ್ತಾಯಿಸಿ ಪಶ್ಚಿಮ ಬಂಗಾಳ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ.
ಆಗಸ್ಟ್ 1,2025ರಿಂದ ಪಶ್ಚಿಮ ಬಂಗಾಳದಲ್ಲಿ ನರೇಗಾ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಜೂನ್ 18,2025ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಕ್ಟೋಬರ್ 27, 2025ರಂದು ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ರಾಜ್ಯದಲ್ಲಿ ಯೋಜನೆಯ ಅನುಷ್ಠಾನಕ್ಕೆ ‘ವಿಶೇಷ ಷರತ್ತುಗಳನ್ನು’ ವಿಧಿಸುವ ಅಧಿಕಾರವನ್ನು ಹೈಕೋರ್ಟ್ ಕೇಂದ್ರಕ್ಕೆ ಬಿಟ್ಟಿತ್ತು.
ಜೂನ್ 18ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜುಲೈ 31ರಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ರಜಾ ಅವಧಿಯ ಅರ್ಜಿ ಸಲ್ಲಿಸಿತ್ತು. ಆದರೆ, ಅದರ ಮರುದಿನ ಆಗಸ್ಟ್ 1ರಂದು ಯೋಜನೆ ಪುನರಾರಂಭಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಆಗಸ್ಟ್ 2025ರಿಂದ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸುವಾಗ, ಯಾವುದೇ ಅಕ್ರಮಗಳು ಸಂಭವಿಸದಂತೆ ನೋಡಿಕೊಳ್ಳಲು ದೇಶದ ಇತರ ರಾಜ್ಯಗಳಲ್ಲಿ ಇರುವಂತೆ ವಿಶೇಷ ಷರತ್ತುಗಳು, ನಿರ್ಬಂಧಗಳು ಮತ್ತು ನಿಯಮಗಳು ಇತ್ಯಾದಿಗಳನ್ನು ವಿಧಿಸಲು ಕೇಂದ್ರ ಸರ್ಕಾರ ಸಂಪೂರ್ಣ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾದ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಶ್ಚಿಮ ಬಂಗಾಳದಲ್ಲಿ ವಿಶೇಷ ಷರತ್ತುಗಳೊಂದಿಗೆ ನರೇಗಾ ಯೋಜನೆಯನ್ನು ಪುನರಾರಂಭಿಸಲು ಮುಂದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ನವೆಂಬರ್‌ನಲ್ಲಿ ವರದಿ ಮಾಡಿತ್ತು.
ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸದ ಕಾರಣ 2005ರ ನರೇಗಾ ಕಾಯ್ದೆಯ ಸೆಕ್ಷನ್ 27 ಅನ್ನು ಅನ್ವಯಿಸಿ ಕೇಂದ್ರ ಸರ್ಕಾರ ಮಾರ್ಚ್ 9, 2022ರಿಂದ ಪಶ್ಚಿಮ ಬಂಗಾಳಕ್ಕೆ ಯೋಜನೆಯ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿದೆ. ಅಂದಿನಿಂದ, ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಯೋಜನೆಯನ್ನು ಸ್ಥಗಿತಗೊಳಿಸುವ ಮೊದಲು, 2014-15 ಮತ್ತು 2021-22 ರ ನಡುವೆ ಪಶ್ಚಿಮ ಬಂಗಾಳದ 51 ಲಕ್ಷದಿಂದ 80 ಲಕ್ಷ ಕುಟುಂಬಗಳು ವಾರ್ಷಿಕವಾಗಿ ಯೋಜನೆಯ ಲಾಭ ಪಡೆಯುತ್ತಿದ್ದವು.
2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿರುವ ನರೇಗಾ ಕಾಯ್ದೆ ಭಾರತದ ಅತಿದೊಡ್ಡ ಸಾಮಾಜಿಕ ಭದ್ರತಾ ಕ್ರಮಗಳಲ್ಲಿ ಒಂದಾಗಿದೆ. ಗ್ರಾಮೀಣ ಕುಟುಂಬಗಳಿಗೆ ‘ಕೆಲಸದ ಹಕ್ಕನ್ನು’ ಖಾತರಿಪಡಿಸುವ ಉದ್ದೇಶದಿಂದ ರಚಿತವಾದ ಈ ಕಾನೂನು, ವಿಶೇಷ ಕೌಶಲ್ಯಗಳಿಲ್ಲದ ಜನರಿಗೆ ಕೆಲಸದ ಖಾತರಿ ಒದಗಿಸುತ್ತದೆ.
ಪ್ರಸ್ತುತ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ಸಿಗುತ್ತಿದೆ ಮತ್ತು ಕೂಲಿ ದರಗಳು ರಾಜ್ಯ ಸರ್ಕಾರಗಳು ಪ್ರಕಟಿಸುವ ಅಧಿಸೂಚನೆಗಳ ಅನುಸಾರ ಇದೆ. ಆದರೆ ಹೋರಾಟಗಾರರು ಮತ್ತು ಸಂಘಟನೆಗಳು ದೀರ್ಘಕಾಲದಿಂದಲೂ ಈ ಯೋಜನೆಯ ಕೊರತೆಗಳನ್ನು ಎತ್ತಿತೋರಿಸುತ್ತಲೇ ಬಂದಿದ್ದಾರೆ. ಕೂಲಿ ಅತ್ಯಂತ ಕಡಿಮೆ ಇರುವುದು, ಕೂಲಿ ಪಾವತಿಯಲ್ಲಿ ತಿಂಗಳುಗಳ ಕಾಲ ತಡವಾಗುವುದು, ಹಾಗೂ ಯೋಜನೆಗೆ ತೀವ್ರ ಹಣಕಾಸಿನ ಕೊರತೆ, ಇವೆಲ್ಲವೂ ಈ ಯೋಜನೆಯ ದೊಡ್ಡ ತೊಡಕುಗಳು.
ನರೇಗಾ ಯೋಜನೆಯ ಕೂಲಿಯನ್ನು ಪ್ರತಿ ರಾಜ್ಯದ ಕನಿಷ್ಠ ಕೂಲಿಗೆ (statutory minimum wage) ಸಮನಾಗಿ ಹೆಚ್ಚಿಸಬೇಕು. ಸರ್ಕಾರ ಈಗ ಪ್ರಸ್ತಾವಿಸಿರುವ ದಿನಕ್ಕೆ 240 ರೂಪಾಯಿ ಕೂಲಿ ಕೂಡ ಹಲವು ರಾಜ್ಯಗಳಲ್ಲಿ ಕಾನೂನುಬದ್ಧವಾಗಿ ನಿಗದಿಪಡಿಸಿರುವ ಕನಿಷ್ಠ ಕೂಲಿಗಿಂತ ಕಡಿಮೆ ಇದೆ. ಇದರಿಂದಾಗಿ ಗ್ರಾಮೀಣ ಕಾರ್ಮಿಕರಿಗೆ ರಾಜ್ಯದ ಇತರ ಕಾರ್ಮಿಕರಿಗಿಂತ ಕಡಿಮೆ ಕೂಲಿ ಕೊಡುವುದು ಕಾನೂನಿನ ಮಟ್ಟದಲ್ಲೇ ಸ್ಥಿರೀಕರಣಗೊಂಡಂತಾಗುತ್ತದೆ. ಈ ಮೂಲಕ ‘ಕೂಲಿ ತಾರತಮ್ಯವನ್ನು ಸಾಂಸ್ಥಿಕಗೊಳಿಸಲಾಗುತ್ತಿದೆ (institutionalising wage discrimination)ಎಂದು ಹೋರಾಟಗಾರರು ಹೇಳುತ್ತಿದ್ದಾರೆ.
ಹಣಕಾಸು ವರ್ಷದ ಮಧ್ಯದಲ್ಲಿ ಯೋಜನೆಯ ಹಣ ನಿಯಮಿತವಾಗಿ ಖಾಲಿಯಾಗುವುದರಿಂದ, ರಾಜ್ಯಗಳು ಕೆಲಸ ನಿಲ್ಲಿಸುವ ಅಥವಾ ವೇತನ ವಿಳಂಬ ಮಾಡುವ ಪರಿಸ್ಥಿತಿಯಿದೆ. ಹಾಗಾಗಿ ಯೋಜನೆಯ ಬಜೆಟ್ ಹೆಚ್ಚಿಸಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಇದರ ಜೊತೆಗೆ ಆಧಾರ್-ಸಂಬಂಧಿತ ಪಾವತಿ ಅಡೆತಡೆಗಳನ್ನು ಪರಿಹರಿಸಬೇಕು ಎಂಬ ಮತ್ತೊಂದು ಬೇಡಿಕೆಯೂ ಇದೆ. ಜನವರಿ 1, 2024 ರಿಂದ ಆಧಾರ್ ಆಧರಿತ ಪಾವತಿ ವ್ಯವಸ್ಥೆ( ಎಬಿಪಿಎಸ್) ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದರಿಂದ ಕಾರ್ಮಿಕರ ಕೂಲಿ ಪಾವತಿಯಲ್ಲಿ ಇನ್ನಷ್ಟು ಅಡೆತಡೆಗಳು ಎದುರಾಗುತ್ತಿವೆ ಎಂಬ ವರದಿಗಳಿವೆ.


