ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಘ್ರವೇ ಸಚಿವ ಸಂಪುಟ ವಿಸ್ತರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮತ್ತು ಸಂಘಪರಿವಾರದ ಮೂಲಗಳನ್ನು ಉಲ್ಲೇಖಿಸಿ ದಿವೈರ್.ಕಾಂ ವರದಿ ಮಾಡಿದೆ.
ಆಗಸ್ಟ್ 4 ರಿಂದ ಶುಭ ದಿನಗಳು ಆರಂಭವಾಗಲಿವೆ. ಇದು ಸಚಿವ ಸಂಪುಟ ವಿಸ್ತರಣೆಗೆ ಸೂಕ್ತವಾದ ಸಮಯವಾಗಿದೆ. ಪಕ್ಷದ ಸಾಂಸ್ಥಿಕ ಮಟ್ಟದಲ್ಲಿಯೂ ಕೆಲವು ಬದಲಾವಣೆಗಲಿವೆ. ಕೆಲವರನ್ನು ಪಕ್ಷದ ಸಂಘಟನೆಗೆ ಕಳಿಸಿದರೆ, ಕೆಲವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಾಧ್ಯತೆ ಹೆಚ್ಚಾಗಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕೆಲವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಯಾರಿ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಕಮಲನಾಥ್ ಸರ್ಕಾರದ ವಿರುದ್ಧ ಬಂಡೆದ್ದು ಬಿಜೆಪಿ ಸೇರಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಜ್ಯೋತಿರಾದಿತ್ಯ ಅವರ ಬೆಂಬಲಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ನಿಂತಿದ್ದಾರೆ ಎಂದು ಹೇಳಲಾಗಿದೆ.
ರಾಜಸ್ಥಾನದ ಮೂವರಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ಪುತ್ರನ ವಿರುದ್ಧ ವಿಜಯ ಸಾಧಿಸಿದ್ದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲಾಗಿತ್ತು. ಇವರ ಜೊತೆಗೆ ಕೈಲಾಶ್ ಚೌಧರಿ, ಅರ್ಜುನ್ ರಾಮ್ ಮೇಘವಾಲ್ ಅವರಿಗೂ ಸಚಿವ ಸ್ಥಾನ ಭಾಗ್ಯ ದೊರೆತಿತ್ತು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ಸಂದರ್ಭದಲ್ಲಿ ರಾಜಸ್ಥಾನದಿಂದ ಒಬ್ಬ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಗೆಹ್ಲೋಟ್ ಸರ್ಕಾರವನ್ನು ಉರುಳಿಸುವ ಸಂಚಿನ ಆರೋಪದಲ್ಲಿ ಸಿಲುಕಿರುವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಭೂಪೇಂದ್ರ ಯಾದವ್, ಅನಿಲ್ ಜೈನ್, ಅನಿಲ್ ಬಲೂನಿ ಅವರನ್ನು ಸಂಘಟನೆಯಿಂದ ಕೈಬಿಟ್ಟು ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯತೆಯ ಬಗ್ಗೆ ವರದಿ ಹೇಳಿದೆ.
ಇದೇ ವೇಳೆ ಈಶಾನ್ಯ ರಾಜ್ಯಗಳ ಜವಾಬ್ದಾರಿ ಹೊತ್ತಿರುವ ರಾಮ್ ಮಾಧವ್ ಅವರನ್ನು ಆ ಹುದ್ದೆಯಿಂದ ತೆಗೆದು, ಹೊಸ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.
ರಾಮ್ ಮಾಧವ್ ಪಕ್ಷ ಸಂಘಟನೆ ಬಿಟ್ಟು ಅವರದೇ ಸಂಘಟನೆ ಇಂಡಿಯಾ ಫೌಂಡೇಶನ್‌ಗೆ ಲಾಭ ಮಾಡಿಕೊಳ್ಳುವತ್ತ ಚಿತ್ತಹರಿಸಿದ್ದಾರೆ. ಹಾಗಾಗಿ ಅವರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಯಂಗ್ ಇಂಡಿಯಾ ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ: ಪ್ರಧಾನಿ ಮೋದಿ


