ಇಂದು ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಡೆಯುವುದು ಬಹುತೇಕ ಖಚಿತಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರೊಂದಿಗೆ ಬೆಳಗ್ಗೆ ನಿಗದಿ ಪಡಿಸಿದ್ದ ಸಭೆ ರದ್ದಾಗಿದ್ದು ಸಂಜೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ನೂತನ ಸಚಿವರ ಹೆಸರು ಘೋಷಣೆಯಾಗಲಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಈ ಸಂಬಂಧ ಯಾವುದೇ ಅಧಿಕೃತ ಪ್ರಕಟಣೆ ಹೊರಬರದಿದ್ದರೂ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ, ಭಿವಾಂಡಿ ಲೋಕಸಭಾ ಸಂಸದ ಕಪಿಲ್ ಪಾಟೀಲ್, ಬಿಜೆಪಿಯ ಉತ್ತರ ಪ್ರದೇಶದ ಮಿತ್ರ ಅನುಪ್ರಿಯಾ ಪಟೇಲ್, ಜ್ಯೋತಿರಾದಿತ್ಯ ಸಿಂಧಿಯಾ, ಉತ್ತರಾಖಂಡ್ ಸಂಸದ ಅಜಯ್ ಭಟ್ ಪ್ರಧಾನಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕ್ಯಾಬಿನೆಟ್ ವಿಸ್ತರಣೆಗೂ ಮುನ್ನ ನರೇಂದ್ರ ಮೋದಿಯವರ ಅಧಿಕೃತ ನಿವಾಸಕ್ಕೆ ಆಗಮಿಸಿ ಚರ್ಚಿಸಿದ್ದಾರೆ.
ಸರ್ಬಾನಂದ ಸೋನೊವಾಲ್, ಭೂಪೇಂದರ್ ಯಾದವ್, ಅನುರಾಗ್ ಠಾಕೂರ್, ಮೀನಾಕ್ಷಿ ಲೆಖಿ, ಶೋಭಾ ಕರಂದ್ಲಾಜೆ, ಸುನೀತಾ ದುಗ್ಗ, ಪ್ರೀತಮ್ ಮುಂಡೆ, ಜಿ ಕಿಶನ್ ರೆಡ್ಡಿ, ಆರ್‌ಸಿಪಿ ಸಿಂಗ್ ಮತ್ತು ಸಂತನು ಠಾಕೂರ್ ಸಹ ನಂಬರ್ 7, ಲೋಕ ಕಲ್ಯಾಣ್ ಮಾರ್ಗದ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸಕ್ಕೆ ಇಂದು ಭೇಟಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರಲಿರುವ 13 ನೂತನ ಸಚಿವರು ದೆಹಲಿಗೆ ಆಗಮಿಸಿದ್ದು ಪ್ರಧಾನಿಗಳ ಕರೆಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಈ ಸಾರಿ ಆದಷ್ಟು ಯುವ ಸಂಸದರಿಗೆ ಮತ್ತು ಹೊಸ ಮುಖಗಳಿಗೆ ಸಚಿವ ಸ್ಥಾನವನ್ನು ನೀಡಲಾಗುತ್ತಿದ್ದು ವರುಣ್ ಗಾಂಧಿ, ಜ್ಯೋತಿರಾದಿತ್ಯ ಸಿಂಧಿಯಾ, ಅನುಪ್ರೀಯ ಪಟೇಲ್ ಮುಂತಾದ ಯುವ ಸಂಸದರು ಮೋದಿ ಸಂಪಟುವನ್ನು ಸೇರುವುದು ಖಚಿತವಾಗಿದೆ.
ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಗೊಳಿಸಲು ಹೊಸದಾಗಿ ಸಹಕಾರಿ ಇಲಾಖೆಯನ್ನು ಆರಂಭಿಸಿ ಕೇಂದ್ರ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ. ಸಾಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನು, ಆಡಳಿತ ಮತ್ತು ನೀತಿ ನಿರುಪಣೆಗೆ ಸಂಬಂಧಿಸಿದ ಕೆಲಸವನ್ನು ಹೊಸ ಇಲಾಖೆ ನೋಡಿಕೊಳ್ಳಲಿದೆ.
ಇದನ್ನೂ ಓದಿ: ಕೇಂದ್ರ ಸಂಪುಟ ಪುನರ್ರಚನೆ: ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?


