Homeಮುಖಪುಟಕೇಂದ್ರ ಸಂಪುಟ ಪುನರ್ರಚನೆ: ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

ಕೇಂದ್ರ ಸಂಪುಟ ಪುನರ್ರಚನೆ: ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಎರಡು ವರ್ಷಗಳ ನಂತರ ಸಂಪುಟ ಪುನರ್ರಚನೆ ಕಸರತ್ತಿಗೆ ಕೈಹಾಕಿದೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು 20 ಕ್ಕೂ ಹೆಚ್ಚು ಸಂಸದರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಕೆಲವು ನಾಯಕರು ಅಂತಿಮ ಕ್ಷಣದವರೆಗೂ ಮಂತ್ರಿ ಸ್ಥಾನದ ಲಾಭಿಯನ್ನು ಮುಂದುವರೆಸಿದ್ದರೆ, ಇನ್ನು ಅನೇಕರು RSS ಮುಖಂಡರ ಮನೆಗಳಿಗೆ ಸುತ್ತು ಹಾಕುತ್ತಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ ಮುಂತಾದ ರಾಜ್ಯಗಳಿಗೆ ಹೆಚ್ಚಿನ ಮಂತ್ರಿ ಸ್ಥಾನಗಳು ಸಿಗುವ ಸಾಧ್ಯತೆಗಳಿವೆ. ಉತ್ತರಾಖಂಡದಲ್ಲಿ 45 ವರ್ಷದ ಪುಷ್ಕರ್ ಸಿಂಗ್ ಧಾಮಿಯವರನ್ನು ಮುಖ್ಯಮಂತ್ರಿ ಮಾಡಿರುವ ಬಿಜೆಪಿ, ಕೇಂದ್ರ ಸಚಿವ ಸಂಪೂಟದಲ್ಲೂ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎಂಬ ನಿರೀಕ್ಷೆ ಬಿಜೆಪಿ ಪಾಳಯದಲ್ಲಿ ಗರಿಗೆದರಿದೆ.

ಯಾರಿಗೆ ಮಂತ್ರಿ ಸ್ಥಾನ ಸಿಗಬಹದು? ಯಾವ ರಾಜ್ಯಕ್ಕೆ ಬಿಜೆಪಿ ಪ್ರಾಧಾನ್ಯತೆ ಸಿಗಲಿದೆ? ಕರ್ನಾಟಕದ ಬಿಜೆಪಿ ಸಂಸದರಿಗೂ ಮಂತ್ರಿಯಾಗುವ ಅವಕಾಶ ಇದೆಯೇ? ಇಲ್ಲಿದೆ ಸಂಪೂರ್ಣ ವಿವರ..

ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಜ್ಯೋತಿರಾದಿತ್ಯ ಸಿಂಧ್ಯಾಗೆ ಸ್ಥಾನ ಸಾಧ್ಯತೆ

ಕರ್ನಾಟಕ ಸೇರಿದಂತೆ ದೇಶದ ಅನೇಕ ಸಂಸದರು ಮತ್ತು ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಜ್ಯೋತಿರಾದಿತ್ಯ ಸಿಂಧ್ಯ ಈಗಾಗಲೇ ದೆಹಲಿಯನ್ನು ತಲುಪಿದ್ದು ನರೇಂದ್ರ ಮೋದಿ ಸಚಿವ ಸಂಪುಟವನ್ನು ಸೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಮೂಲಕ ಮತ್ತೊಮ್ಮೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ಕಾರಣಕ್ಕೆ ಪ್ರತಿಫಲವಾಗಿ ಬಿಜೆಪಿ ಕೆಂದ್ರದಲ್ಲಿ ಮಂತ್ರಿ ಸ್ಥಾನವನ್ನು ಕೊಡಲಿದೆ ಎಂದು ಹೇಳಲಾಗುತ್ತಿದ್ದು ಈ ಸುದ್ದಿಯ ಬೆನ್ನಲ್ಲೇ ಸಿಂಧ್ಯ ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಹ ಕೈಗೊಂಡಿದ್ದಾರೆ.

ಉಜ್ಜಯನಿಯ ಮಹಾಕಾಲ ದೇವಸ್ಥಾನದಲ್ಲಿ ಜ್ಯೋತಿರಾದಿತ್ಯ ಸಿಂಧ್ಯ ವಿಶೇಷ ಪೂಜೆ

ಅಸ್ಸಾಂ ಚುನಾವಣೆಯ ನಂತರ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದ ಸರ್ಬನಂದ್ ಸೋನೆವಾಲ ಅವರಿಗೂ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್‌ನಲ್ಲಿ ಸಚಿವರಾಗುವ ಅವಕಾಶ ಒದಗಿ ಬಂದಿದೆ ಎಂದು ಹೇಳಲಾಗುತ್ತಿದ್ದು ಅವರು ಕೂಡ ಗುವಾಹಟಿಯಿಂದ ದೆಹಲಿಗೆ ತೆರಳಿದ್ದಾರೆ.

ಮಾಜಿ ಸಚಿವ ರಾಮ್‌ವಿಲಾಸ್‌ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯವೆದ್ದಿರುವ ಎಲ್‌ಜೆಪಿಯ ಪಶುಪತಿ ಪರಸ್‌ ಅವರೂ ಕೆಂದ್ರ ಸಚಿವ ಸಂಪುಟದ ಭಾಗವಾಗಬಹುದು. ದೆಹಲಿಯಲ್ಲಿ ಹೊಸ ಕುರ್ತಾ ಖರೀದಿಯಲ್ಲಿ ತೊಡಗಿದ್ದ ಪಾರಸ್‌ ಅವರನ್ನು ಮಂತ್ರಿಯಾಗಿವ ವಿಷಯವನ್ನು ಕೇಳಿದಾಗ ಅದೆಲ್ಲ ಪಕ್ಷದ ರಹಸ್ಯ ಬಹಿರಂಗಗೊಳಿಸಾಗುವುದಿಲ್ಲ ಎಂದು ನಾಜೂಕಿನ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಪರಸ್‌ ಅವರಿಗೆ ಗೃಹಮಂತ್ರಿ ಅಮಿತ್ ಶಾ ಕರೆ ಮಾಡಿ ದೆಹಲಿಗೆ ಆಹ್ವಾನಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕೇಂದ್ರ ಮಂತ್ರಿ ತಾರಾಚಂದ್ ಗೆಹ್ಲೋಟ್‌ ಅವರನ್ನು ಕರ್ನಾಟಕ ರಾಜ್ಯಪಾಲರನ್ನಾಗಿ ನೇಮಿಸಿದ್ದರಿಂದ ಅವರಿಂದ ತೆರವಾದ ಒಂದು ಹೆಚ್ಚುವರಿ ಮಂತ್ರಿ ಸ್ಥಾನ ಸೃಷ್ಟಿಯಾಗಿದೆ. ಗೆಹ್ಲೋಟ್ ಅವರ ರಾಜ್ಯಸಭೆ ಅವಧಿ ಮೇ 2024ರ ವರೆಗೆ ಇದ್ದು ರಾಜ್ಯಪಾಲರಾಗಿ ನೇಮಕಗೊಂಡ ಪರಿಣಾಮ ರಾಜ್ಯಸಭೆ ಸ್ಥಾನ ಕೂಡ ತೆರವಾಗಲಿದೆ. ಇತ್ತೀಚೆಗಷ್ಟೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಜಿತಿನ್ ಪ್ರಸಾದ್ ಅವರು ಈ ಸ್ಥಾನವನ್ನು ತುಂಬಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿದೆ. 2022 ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಪ್ರಾತಿನಿಧ್ಯವನ್ನು ನೀಡುವ ಸಾಧ್ಯತೆ ಇದೆ ಎಂದು ಉತ್ತರಪ್ರದೇಶದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಬಿಜೆಪಿಯ ಬ್ರಾಹ್ಮಣ ನಾಯಕರು ಮುನಿಸಿಕೊಂಡಿದ್ದು ಪಕ್ಷದಲ್ಲಿ ಆಂತರಿಕ ಭಿನ್ನಮತ ಕೂಡ ತಲೆದೋರಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಭದ್ರ ಮತಬ್ಯಾಂಕ್‌ ಆದ ಬ್ರಾಹ್ಮಣ ಸಮುದಾಯದ ಅಸಮಾಧಾನವನ್ನು ತಣ್ಣಗಾಗಿಸಲು ಜಿತಿನ್ ಪ್ರಸಾದ್‌ ಅವರಿಗೆ ಕೇಂದ್ರದಲ್ಲಿ ಮಂತ್ರಿಸ್ಥಾನ ಲಭಿಸಿದರೂ ಆಶ್ಚರ್ಯವಿಲ್ಲ.

ಟಿಎಂಸಿಯಿಂದ ಬಿಜೆಪಿ ಸೇರಿರುವ ಪಶ್ಚಿಮ ಬಂಗಾಳದ ಹಿರಿಯ ರಾಜಕಾರಣಿ ದಿನೇಶ್ ತ್ರಿವೇದಿ ಅವರು ಕೂಡ ಬ್ರಾಹ್ಮಣರ ಕೋಟಾದಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿ ಇದ್ದಾರೆ.

ಇದನ್ನೂ ಓದಿ: Explainer: ಬಿಜೆಪಿಯು ಉತ್ತರಾಖಂಡ ಸಿಎಂ ಬದಲಿಸಿದ್ದು ಮಮತಾ ಬ್ಯಾನರ್ಜಿಯನ್ನು ಕೆಳಗಿಳಿಸಲೇ?

ಅನುಪ್ರಿಯಾ ಪಟೇಲ್ (ಅಪ್ನಾ ದಳ), ಪಂಕಜ್ ಚೌಧರಿ, ರೀಟಾ ಬಹುಗುಣ ಜೋಶಿ, ರಾಮ್‌ಶಂಕರ್ ಕ್ಯಾಥೇರಿಯಾ, ವರುಣ್ ಗಾಂಧಿ, ಲಲ್ಲನ್ ಸಿಂಗ್ ಮತ್ತು ರಾಹುಲ್ ಕಸ್ವಾನ್ ಮಂತ್ರಿ ಸ್ಥಾನವನ್ನು ಖಚಿತಪಡಿಸಿಕೊಂಡು ದೆಹಲಿಯಲ್ಲಿ ನಡೆಯುವ ಪ್ರಮಾಣವಚನಕ್ಕೆ ಸಿದ್ಧರಾಗಿದ್ದಾರೆಂದು ರಾಷ್ಟ್ರೀಯ ಸುದ್ದಿವಾಹಿನಿ ವರದಿ ಮಾಡಿದೆ.

ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಹಿರಿಯ ಸಹುದ್ಯೋಗಿಗಳೊಂದಿಗೆ ಇಂದು ಸಂಜೆ 5 ಗಂಟೆಗೆ ನಡೆಸಲು ಉದ್ಧೇಶಿಸಿದ್ದ ಮಹತ್ವದ ಸಭೆ ಅಂತಿಮ ಕ್ಷಣಗಳಲ್ಲಿ ರದ್ದುಗೊಂಡಿದೆ. ಸಭೆ ರದ್ದಾಗಿರುವುದು ಮಂತ್ರಿ ಮಂಡಲ ವಿಸ್ತರಣೆಯ ಸ್ಪಷ್ಟ ಸೂಚನೆಯಾಗಿದ್ದು ಈಗಾಗಲೇ ಪ್ರಧಾನಿಯವರು ಸಂಪುಟ ಸೇರಲಿರುವವರ ಪಟ್ಟಿಯನ್ನು ಅಂತಿಮಗೊಳಿಸಿದಂತಿದೆ. 2 ದಿನದಲ್ಲಿ ಸಚಿವ ಸಂಪುಟದ ಪುನರ್ರಚನೆ ನಿಶ್ಚಿತ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: 12 ಬಿಜೆಪಿ ಶಾಸಕರ ಅಮಾನತಿಗೆ ಕೌಂಟರ್ ಅಸೆಂಬ್ಲಿ ನಡೆಸಿ ವಿಪಕ್ಷಗಳ ಆಕ್ರೋಶ

ಕರ್ನಾಟಕ ಸಂಸದರಲ್ಲೂ ಚಿಗುರಿದ ಕನಸು – ಹಿರಿಯ ಸಚಿವರಿಗೆ ಆತಂಕ

ಕರ್ನಾಟಕದ ಕೆಲವು ಸಂಸದರು ತಮಗೂ ದೆಹಲಿಗೆ ಕರೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಬಿಜೆಪಿ ಹೊಸ ಮುಖಗಳಿಗೆ ಮಣೆಹಾಕುವ ಸಾಧ್ಯತೆಯಿರುವದರಿಂದ ಇದುವರೆಗೆ ಸಚಿವರಾಗಿರದ ಕೆಲವು ಬಿಜೆಪಿ ಸಂಸದರು ತಮ್ಮದೇ ಲೆಕ್ಕಾಚರದಲ್ಲಿ ತೊಡಗಿದ್ದರೆ, ಕೆಲವರು ಹಿರಿಯ ಆರ್‌ಎಸ್‌ಎಸ್‌ ನಾಯಕರ ಮೂಲಕ ಲಾಬಿ ನಡೆಸಲು ಮುಂದಾಗಿದ್ದಾರೆ. ಕರ್ನಾಟಕದ ಕೋಟಾದಿಂದ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು ಇರುವ 2 ಸ್ಥಾನಗಳಿಗೆ 8 ಜನರು ಲಾಬಿ ನಡೆಸುತ್ತಿರುವುದು ತಿಳಿದು ಬಂದಿದೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಕೊಪ್ಪಳ ಸಂಸದ ಕರಡಿ‌ ಸಂಗಣ್ಣ, ಗುಲ್ಬರ್ಗ ಸಂಸದ ಉಮೇಶ್ ಜಾಧವ್, ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್, ಬೀದರ್ ಸಂಸದ ಭಗವಂತ ಖೂಬಾ, ಬಾಗಲಕೋಟೆ ಸಂಸದ ಪಿ.ಸಿ. ಗದ್ದೀಗೌಡರ್, ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳು.

ಕರ್ನಾಟಕದಿಂದ ಸಂಭವನೀಯ ಮಂತ್ರಿಗಳ ಪಟ್ಟಿಯಲ್ಲಿ ಮೊದಲು ಕೇಳಿ ಬಂದ ಹೆಸರು ಶಿವಮೊಗ್ಗ ಸಂಸದ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ  ಬಿ.ವೈ ರಾಘವೇಂದ್ರ ಅವರದು. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದ್ದು ಒಂದು ವೇಳೆ ಯಡಿಯೂರಪ್ಪನವರ ಬದಲಾವಣೆ ಮಾಡುವುದಾರೆ ಪುತ್ರ ರಾಘವೇಂದ್ರ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ರಾಜ್ಯ ಬಿಜೆಪಿಯ ಮೂಲಗಳು ಸುದ್ದಿ ಹರಿಬಿಟ್ಟಿವೆ.

ಕೇಂದ್ರ ಸರ್ಕಾರದಲ್ಲಿ ಬಹು ದೀರ್ಘಾವಧಿಯಿಂದ ಮಂತ್ರಿಯಾಗಿರುವ  ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಅವರ ಕಾರ್ಯ ವೈಖರಿ ಕುರಿತು ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದಾರೆ. ರಸಗೊಬ್ಬರದ ಬೆಲೆ ಏರಿಕೆ, ಆಕ್ಸಿಜನ್ ಮತ್ತು ಔಷಧದ ಕೊರತೆ ನಿರ್ವಹಣೆ ಸೇರಿದಂತೆ ಸದಾನಂದ ಗೌಡರು ತಮ್ಮ ಇಲಾಖೆಯ ನಿರ್ವಹಣೆಯ ವೈಫಲ್ಯದ ಕುರಿತು ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದ್ದು ಒಂದು ವೇಳೆ ಸದಾನಂದ ಗೌಡ ಅವರನ್ನು ಕೈಬಿಟ್ಟರೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಬಿಜೆಪಿಯ 12 ಶಾಸಕರನ್ನು ಸದನದಿಂದ ಒಂದು ವರ್ಷ ಅಮಾನತು ಮಾಡಿದ ಸ್ಪೀಕರ್‌

ದಲಿತ ಎಡಗೈ ಸಮಯದಾಯದ ರಮೇಶ್ ಜಿಗಜಿಣಗಿ ಸ್ಥಾನ ತುಂಬಲು ತಮ್ಮನ್ನು ಪರಿಗಣಿಸಬಹುದೆಂದು ಎ. ನಾರಾಯಣಸ್ವಾಮಿ ಅವರ ಲೆಕ್ಕಾಚಾರವಾಗಿದೆ. ಪುದುಚೇರಿಯಲ್ಲಿ ಎನ್ಡಿಎ ಗೆಲುವಿಗೆ ಕಾರ್ಯತಂತ್ರ ರೂಪಿಸಿದ ಕಾರಣಕ್ಕೆ ತನಗೆ ಸಚಿವ ಸ್ಥಾನ ನೀಡಬಹುದೆಂಬುದು ರಾಜೀವ್ ಚಂದ್ರಶೇಖರ್ ಅವರ ನಿರೀಕ್ಷೆ.

ಲಿಂಗಾಯತ ಮತ್ತು ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಸಕ್ರೀಯ ಎನ್ನುವ ಕಾರಣಕ್ಕೆ ಶಿವಕುಮಾರ್ ಉದಾಸಿಗೆ ಅವಕಾಶ ಸಿಗಬಹುದು. ತಮ್ಮ ವಿರುದ್ಧ ಬಂಡಾಯ ಎದ್ದಿರುವ ಪಂಚಮಸಾಲಿಗಳನ್ನು ವಿಶ್ವಾಸಕ್ಕೆ ಪಡೆಯಲು ಕರಡಿ ಸಂಗಣ್ಣ ಅವರ ಪರವಾಗಿ ಸಿಎಂ ಯಡಿಯೂರಪ್ಪ ಲಾಭಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಿರಿಯ ನಾಯಕ, ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಾರಣಕ್ಕೆ ಉಮೇಶ್ ಜಾಧವ್ ಅವರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕೆನಿಸಿದರೆ ಪಿ.ಸಿ. ಮೋಹನ್ ಗೆ ಅವಕಾಶ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲಿಂಗಾಯತ, ಹಿರಿತನ, ಉತ್ತರ ಕರ್ನಾಟಕದವರು ಎಂಬ ಕಾರಣಗಳಿಂದ ಪಿ.ಸಿ. ಗದ್ದೀಗೌಡರ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನರೇಂದ್ರ  ಮೋದಿ ನೇತೃತ್ವದ ಬಿಜೆಪಿ ಉನ್ನತ ಸಮಿತಿ ಮಂತ್ರಿಗಳ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದ್ದು ಕರ್ನಾಟಕದಿಂದ ಯಾರ ಹೆಸರು ಪಟ್ಟಿಯಲ್ಲಿ ಇದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಹಿರಿತನಕ್ಕೊ ಅಥವಾ ಹೊಸತನಕ್ಕೊ, ಜಾತಿ ಲೆಕ್ಕಾಚರಕ್ಕೊ ಅಥವಾ ಸಂಘಟನೆ ಮತ್ತು ಚುನಾವಣೆಗಳಲ್ಲಿನ ಪ್ರದರ್ಶನದ ಆಧಾರದಲ್ಲಿಯೊ ಯಾವ ಮಾನದಂಡದಲ್ಲಿ ಸಚಿವ ಸ್ಥಾನಗಳನ್ನು ನೀಡಲಾಗುತ್ತದೆ ಎಂಬುದು ಕುತೂಹಲದ ಸಂಗತಿ.  81 ಜನರ ಕೇಂದ್ರ ಸಂಪುಟದಲ್ಲಿ ಒಟ್ಟೂ 28 ಸಚಿವ ಸ್ಥಾನಗಳು ಖಾಲಿ ಉಳಿದಿದ್ದು ಬಿಜೆಪಿ ಎಷ್ಟು ಸ್ಥಾನಗಳನ್ನು ಭರ್ತಿ ಮಾಡುತ್ತದೆ ಎಂಬ ಪ್ರಶ್ನೆಗೆ ಬಹುಶಃ ನಾಳೆಯಷ್ಟರ ಹೊತ್ತಿಗೆ ತೆರೆ ಬೀಳಬಹುದು.

ರಾಜೇಶ್ ಹೆಬ್ಬಾರ್‌


ಇದನ್ನೂ ಓದಿ: ರಾಜ್ಯದ ಹೊಸ ರಾಜ್ಯಪಾಲರಾಗಿ ಒಕ್ಕೂಟ ಸರ್ಕಾರದ ಸಚಿವ ತಾವರ್‌ಚಂದ್ ಗೆಹ್ಲೋಟ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...