ಜಮ್ಮು ಕಾಶ್ಮೀರವನ್ನು ಒಡೆದು ಎರಡು ಕೇಂದ್ರಾಡಳಿತಗಳಾಗಿ ಮಾಡಿದ ಸಂಸ್ಥಾಪನಾ ದಿನವನ್ನು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ”ಕಪ್ಪು ದಿನ” ಎಂದು ಕರೆದಿದ್ದು, ಕೇಂದ್ರದ ಬಿಜೆಪಿ ಸರ್ಕಾರದ ಈ ನಿರ್ಧಾರವು ರಾಜ್ಯದ ಜನರ ಹಕ್ಕು ನಿರಾಕರಣೆಯ ದಿನವಾಗಿದೆ ಎಂದು ಅವರು ಹೇಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಆಡಳಿತವು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಐದನೇ ಸಂಸ್ಥಾಪನಾ ದಿನವನ್ನು ಗುರುವಾರ ಆಚರಿಸಿದ್ದಾರೆ.
“ಕೇಂದ್ರಾಡಳಿತ ಪ್ರದೇಶ ಸಂಸ್ಥಾಪನಾ ದಿನವು ಜಮ್ಮು ಕಾಶ್ಮೀರದ ಜನರಿಗೆ ‘ಕಪ್ಪು ದಿನ’ವಾಗಿದ್ದು, ಏಕೆಂದರೆ ಇದು ಅಭಿವೃದ್ಧಿಯಲ್ಲ, ಹಕ್ಕು ನಿರಾಕರಣೆಯನ್ನು ಸೂಚಿಸುತ್ತದೆ” ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಅವರು ಕೂಡಾ ಕೂಡಾ ದಿನವನ್ನು ”ಕಪ್ಪು ದಿನ” ಎಂದು ಕರೆದಿದ್ದು, ಜನರು ಈ ದಿನವನ್ನು ಆಚರಿಸುತ್ತಾರೆ ಎಂದು ನಿರೀಕ್ಷಿಸುವುದು, ಅತೀಯಾದ ನಿರೀಕ್ಷೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಚರಣೆ ಬಗ್ಗ ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, “ಜುಮ್ಮು ಕಾಶ್ಮೀರದ ಜನರಿಗೆ ಮತ್ತು ವಿಶೇಷವಾಗಿ ಪಿಡಿಪಿಗೆ ಇಂದು ಕರಾಳ ದಿನವಾಗಿದೆ. ರಾಜ್ಯದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸದವರೆಗೆ ನಾವು ಇದನ್ನು ಕರಾಳ ದಿನವಾಗಿ ನೋಡುತ್ತೇವೆ ಎಂದು ನಾನು ಲೆಫ್ಟಿನೆಂಟ್ ಗವರ್ನರ್‌ಗೆ ಹೇಳಲು ಬಯಸುತ್ತೇನೆ” ಎಂದು ಪುಲ್ವಾಮಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
“ಗೌರವದಿಂದ ಶಾಂತಿ ಸ್ಥಾಪಿಸಲು ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ತನ್ನ ಹೋರಾಟವನ್ನು ಪಕ್ಷ ಮುಂದುವರಿಸಲಿದೆ. ಹೊಸದಾಗಿ ಚುನಾಯಿತರಾದ ಸರ್ಕಾರವು ಎಲ್ಲಾ ಜನರನ್ನು ಜೊತೆಗೆ ಕರೆದುಕೊಂಡು ಹೋಗುತ್ತದೆ ಮತ್ತು ಪ್ರಸ್ತುತ ಪರಿಸ್ಥಿತಿಯಿಂದ ರಾಜ್ಯವನ್ನು ಜೊತೆಗೆ ಕರೆದು ಹೋರಾಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 31 ಜಮ್ಮು ಕಾಶ್ಮೀರದ ಜನರಿಗೆ ಸಂಭ್ರಮದ ದಿನವಲ್ಲ ಎಂದು ಮುಫ್ತಿ ಹೇಳಿದ್ದಾರೆ. “ಕೇಂದ್ರಾಡಳಿತ ಪ್ರದೇಶದ ‘ಸ್ಥಾಪನಾ ದಿನ’ ಎಂದು ಕರೆಯಲ್ಪಡುವ ಈ ದಿನವನ್ನು ಪಕ್ಷವು ದೃಢವಾಗಿ ತಿರಸ್ಕರಿಸುತ್ತದೆ. ಇದು ರಾಜ್ಯದ ಜನರ ಇಚ್ಛೆ, ಅಸ್ಮಿತೆ ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾಗಿದೆ” ಎಂದು ಅವರು ಹೇಳಿದ್ದಾರೆ.
ರಾಜ್ಯದ ಮೇಲೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಹೇರುವುದು ಪ್ರಗತಿಪರ ಹೆಜ್ಜೆಯಲ್ಲ, ಬದಲಿಗೆ ಅನ್ಯಾಯವಾಗಿದ್ದು, ಹಕ್ಕುಗಳನ್ನು ರದ್ದುಪಡಿಸುವ ಕ್ರಮ ಎಂದು ಮುಫ್ತಿ ಒತ್ತಿ ಹೇಳಿದ್ದಾರೆ.
“ಐತಿಹಾಸಿಕ ಮಹತ್ವವಿರುವ ನಮ್ಮ ಸ್ವಾಯತ್ತ ರಾಜ್ಯವನ್ನು ಅದರ ಜನರ ಒಪ್ಪಿಗೆಯಿಲ್ಲದೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುವುದು ಅಭಿವೃದ್ಧಿಯ ಸಂಕೇತವಲ್ಲ, ಬದಲಾಗಿ ನಮ್ಮ ರಾಜ್ಯತ್ವ ಮತ್ತು ವಿಶೇಷ ಸ್ಥಾನಮಾನದ ಅಸ್ಪಷ್ಟ ಅಳಿಸುವಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.
ರಾಜ್ಯದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಕೇಂದ್ರಾಡಳಿತದ ಸಂಸ್ಥಾಪನಾ ದಿನವನ್ನು ಆಚರಿಸಿದ್ದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಆಡಳಿತವನ್ನು ಟೀಕಿಸಿದ್ದು, ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.
ಬಹಳ ಮುಖ್ಯವಾಗಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ಹಾಜರಾಗದೆ ಬಹಿಷ್ಕರಿಸಿದ್ದವು. ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜಾದ್ ಗನಿ ಲೋನ್ ಮತ್ತು ಸಿಪಿಐ(ಎಂ) ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ ಅವರು ಲೆಫ್ಟಿನೆಂಟ್ ಗವರ್ನರ್ ಅವರನ್ನು ಟೀಕಿಸಿದ್ದು, “ಜನರು ಆಡಳಿತದ ವಿರುದ್ಧ ಸ್ಪಷ್ಟವಾಗಿ ಮತ ಚಲಾಯಿಸಿದರೂ, ಅವರು ಕಾರ್ಯಕ್ರಮ ನಡೆಸಿದ್ದಾರೆ” ಎಂದು ಹೇಳಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಮೀದ್ ಕರ್ರಾ ಸುದ್ದಿಗಾರರೊಂದಿಗೆ ಮಾತನಾಡಿ, “ಜಮ್ಮು ಕಾಶ್ಮೀರದ ಜನರಿಗೆ ಇದು ಕರಾಳ ದಿನವಾಗಿದೆ. ಜನರು ಇದನ್ನು ಆಚರಿಸುತ್ತಾರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ಅತಿಯಾದ ನಿರೀಕ್ಷೆಯಾಗಿದೆ” ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಆಡಳಿತ ಆಯೋಜಿಸಿದ್ದ ಕೇಂದ್ರಾಡಳಿತ ಪ್ರದೇಶದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಏಕೆ ಹಾಜರಾಗಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸಾಂವಿಧಾನಿಕ ಸಂರಚನೆಯನ್ನು ಅಪಹಾಸ್ಯ ಮಾಡಿ ಆಚರಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ. ಇದು ಕೇವಲ ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ. ಈ ಅಪಹಾಸ್ಯದಿಂದ ಎಲ್ಲಾ ಜನರು ಬಾಧಿತರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮ ಮಂದಿರದ ಮೂರ್ತಿಯ ಶಿಲ್ಪಿಗೂ ರಾಜ್ಯೋತ್ಸವ ಪ್ರಶಸ್ತಿ!
ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮ ಮಂದಿರದ ಮೂರ್ತಿಯ ಶಿಲ್ಪಿಗೂ ರಾಜ್ಯೋತ್ಸವ ಪ್ರಶಸ್ತಿ!


